Economic Survey: ಮೂರು ವರ್ಷದಲ್ಲೇ ಆರ್ಥಿಕತೆ ಕಡಿಮೆ ಬೆಳವಣಿಗೆ: ಎಕನಾಮಿಕ್ ಸರ್ವೆ ಅಂದಾಜು?
Budget Session From Today: ಇಂದಿನಿಂದ ಸಂಸತ್ನಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ನಲ್ಲಿ ಆರ್ಥಿಕ ಸಮೀಕ್ಷೆ ವರದಿಯನ್ನು ಮಂಡಿಸಲಿದ್ದಾರೆ. ನಾಳೆ ಬುಧವಾರ ಅವರು ಬಜೆಟ್ ಮಂಡಣೆ ಮಾಡಲಿದ್ದಾರೆ. ಇದೇ ವೇಳೆ ಮುಂಬರುವ ಹಣಕಾಸು ವರ್ಷದಲ್ಲಿ (2023-24) ಭಾರತದ ಆರ್ಥಿಕತೆಯ ಬೆಳವಣಿಗೆ ತುಸು ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿರುವುದು ತಿಳಿದು ಬಂದಿದೆ.
ಮುಂಬೈ: ಇಂದಿನಿಂದ ಸಂಸತ್ನಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ನಲ್ಲಿ ಆರ್ಥಿಕ ಸಮೀಕ್ಷೆ ವರದಿಯನ್ನು (Economic Survey Report 2023) ಮಂಡಿಸಲಿದ್ದಾರೆ. ನಾಳೆ ಬುಧವಾರ ಅವರು ಬಜೆಟ್ ಮಂಡಣೆ ಮಾಡಲಿದ್ದಾರೆ. ಇದೇ ವೇಳೆ ಮುಂಬರುವ ಹಣಕಾಸು ವರ್ಷದಲ್ಲಿ (2023-24) ಭಾರತದ ಆರ್ಥಿಕತೆಯ ಬೆಳವಣಿಗೆ ತುಸು ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿರುವುದು ತಿಳಿದು ಬಂದಿದೆ. ಅದರ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6ರಿಂದ ಶೇ. 6.8ರಷ್ಟು ಅಭಿವೃದ್ಧಿ ಸಾಧಿಸಬಹುದು ಎಂದು ಕೆಲ ಮಾಧ್ಯಮಗಳು ತಮ್ಮ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.
ಇದು ನಿಜವೇ ಆದಲ್ಲಿ ಕಳೆದ ಮೂರು ವರ್ಷದಲ್ಲೇ ಅತ್ಯಂತ ಕಡಿಮೆ ಬೆಳವಣಿಗೆಯನ್ನು ಭಾರತ ಕಾಣಲಿದೆ. ಆದರೆ ಜಾಗತಿಕವಾಗಿ ಇತರ ದೊಡ್ಡ ಆರ್ಥಿಕತೆಯ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವೆಂದು ಪರಿಗಣಿಸಬಹುದು.
ಭಾರತದಲ್ಲಿ ಹಣಕಾಸು ವರ್ಷ ಏಪ್ರಿಲ್ 1ರಿಂದ ಆರಂಭವಾಗಿ ಮುಂದಿನ ಮಾರ್ಚ್ 31ರವರೆಗೂ ಇರುತ್ತದೆ. ಕೇಂದ್ರ ಸರ್ಕಾರ ಪ್ರಸ್ತುತಪಡಿಸುವ ಬಜೆಟ್ ಇದೇ ಹಣಕಾಸು ವರ್ಷದ ಆಯವ್ಯಯ ಪತ್ರವಾಗಿರುತ್ತದೆ. ಇನ್ನು, ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರಮ್ ನೇತೃತ್ವದಲ್ಲಿ ಆರ್ಥಿಕ ಸಮೀಕ್ಷೆಯ ವರದಿ ಸಿದ್ಧವಾಗಿದೆ. ಇದು 2022-23 ಮತ್ತು 2023-24ರ ಹಣಕಾಸು ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜುಗಳನ್ನು ಮಾಡಿದೆ. ಅದರ ವರದಿಯನ್ನು ಇಂದು ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ನ ಜಂಟಿ ಅಧಿವೇಶನದ ವೇಳೆ ಪ್ರಸ್ತುಪಡಿಸಲಿದ್ದಾರೆ. ಸಂಜೆಯ ನಂತರ ಆರ್ಥಿಕ ಸಲಹೆಗಾರರು ಪತ್ರಿಕಾಗೋಷ್ಠಿ ನಡೆಸಿ ಸಮೀಕ್ಷಾ ವರದಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ.
ಏನಿದು ಆರ್ಥಿಕ ಸಮೀಕ್ಷೆ?
ಇದು ದೇಶಧ ಆರ್ಥಿಕತೆ ಬಗ್ಗೆ ಅಧಿಕೃತ ರಿಪೋರ್ಟ್ ಕಾರ್ಡ್ ಆಗಿರುತ್ತದೆ. ಎರಡು ಭಾಗಗಳಲ್ಲಿ ಸಿದ್ಧವಾಗಿರುವ ಈ ವರದಿಯು ಈಗಿನ ಆರ್ಥಿಕ ಪರಿಸ್ಥಿತಿ, ಭವಿಷ್ಯದ ಸ್ಥಿತಿ ಮತ್ತು ಆರ್ಥಿಕ ನೀತಿಗಳಲ್ಲಿನ ಬದಲಾವಣೆ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ. ಹಣದುಬ್ಬರ ಸ್ಥಿತಿ, ಫಾರೆಕ್ಸ್ ಮೀಸಲು, ವ್ಯಾಪಾರ ಅಂತರ (Trade Deficit) ಇತ್ಯಾದಿ ಬಗ್ಗೆ ಮಾಹಿತಿ ಮತ್ತು ಅಂದಾಜು ಮಾಡಲಾಗುತ್ತದೆ. ನಿಗದಿತ ಕಾಲಮಾನದಲ್ಲಿ ಯಾವ್ಯಾವ ವಲಯದಲ್ಲಿ ಯಾವ ರೀತಿಯ ಸುಧಾರಣೆಗಳನ್ನು ಕೈಗೊಳ್ಳಬೇಕೆಂದು ಸಲಹೆಗಳು ಇದರಲ್ಲಿ ಇರುತ್ತವೆ. ಕೇಂದ್ರದ ಬಜೆಟ್ ಯಾವ ರೀತಿ ಇರಲಿದೆ ಎಂಬುದಕ್ಕೆ ಈ ಆರ್ಥಿಕ ಸಮೀಕ್ಷೆಯೂ ಒಂದು ರೀತಿಯಲ್ಲಿ ದಿಗ್ಸೂಚಿಯಂತಿರುತ್ತದೆ.
ಹಾಗೆಯೇ, ಸಾಮಾಜಿಕ ಭದ್ರತೆ, ಬಡತನ, ಶಿಕ್ಷಣ, ಆರೋಗ್ಯ, ಮಾನವ ಅಭಿವೃದ್ಧಿ, ಹವಾಮಾನ ಇತ್ಯಾದಿ ನಿರ್ದಿಷ್ಟ ವಿಚಾರಗಳ ಬಗ್ಗೆ ವಿವರಗಳನ್ನು ವರದಿಯಲ್ಲಿ ಒಳಗೊಂಡಿರಲಾಗುತ್ತದೆ.
Published On - 7:46 am, Tue, 31 January 23