ಬೆಳಗ್ಗೆ ಖರೀದಿಸಿ, ಮಧ್ಯಾಹ್ನ ಮಾರೋದು ಹೂಡಿಕೆ ಅಲ್ಲ: ಮನಿ9 ಸಮಿಟ್ನಲ್ಲಿ ಎನ್ಎಸ್ಇ ಸಿಇಒ ಆಶೀಶ್ ಚೌಹಾಣ್ ಕಿವಿಮಾತು
NSE CEO Ashish Kumar Chauhan speaks at Money9 Financial Freedom Summit 2025: ಕಿರು ಅವಧಿಗೆ ಹೂಡಿಕೆ ಯಾವತ್ತೂ ಇರಬಾರದು. ದೀರ್ಘಾವಧಿ ಹೂಡಿಕೆ ಮಾಡಬೇಕು ಎಂದು ಯುವಜನರಿಗೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸಿಇಒ ಆಶೀಶ್ ಚೌಹಾಣ್ ತಿಳಿಹೇಳಿದ್ದಾರೆ. ಇಂಟ್ರಾಡೇ ಟ್ರೇಡಿಂಗ್ ಮತ್ತು ಎಫ್ ಅಂಡ್ ಒ ಟ್ರೇಡಿಂಗ್ಗಳಿಂದ ದೂರ ಇರುವಂತೆ ಅವರು ಪರೋಕ್ಷವಾಗಿ ಮನವಿ ಮಾಡಿದ್ದಾರೆ. ಟಿವಿ9 ನೆಟ್ವರ್ಕ್ ಆಯೋಜಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮುಂಬೈ, ಮಾರ್ಚ್ 5: ಭಾರತದ ಯುವಕರು ತಂತ್ರಜ್ಞಾನ ಅಳವಡಿಕೆಯಲ್ಲಿ ಪ್ರಾಜ್ಞರಾಗಿದ್ದಾರೆ. ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಯುವಶಕ್ತಿ ದೊಡ್ಡ ವರದಾನವಾಗಿದೆ ಎಂದು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಸಿಇಒ ಮತ್ತು ಎಂಡಿ ಆಶೀಶ್ ಕುಮಾರ್ ಚೌಹಾಣ್ ಹೇಳಿದ್ದಾರೆ. ಮೂರನೇ ಮನಿ9 ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆಯಲ್ಲಿ (Money9 Financial Freedom Summit 2025) ಭಾರತೀಯ ಆರ್ಥಿಕತೆಯಲ್ಲಿ ರೀಟೇಲ್ ಹೂಡಿಕೆದಾರರ ಪಾತ್ರದ ಕುರಿತ ಸೆಷನ್ವೊಂದರಲ್ಲಿ ಮಾತನಾಡುತ್ತಿದ್ದ ಅವರು, ಭಾರತದ ಯುವಜನರಿಗೆ ಹೂಡಿಕೆಯ ಕುರಿತು ಅರಿವು ಮೂಡಿಸಲು ಯತ್ನಿಸಿದರು.
‘ಲಾಭದಾಸೆಗೆ ಷೇರುಗಳನ್ನು ಬೆಳಗ್ಗೆ ಖರೀದಿಸಿ, ಮಧ್ಯಾಹ್ನ ಮಾರಲು ಯತ್ನಿಸಬೇಡಿ. ಅದನ್ನು ಹೂಡಿಕೆ ಅನ್ನೋದಿಲ್ಲ. ಈ ಟಿಪ್ಸ್ಗಳನ್ನು (ಷೇರು ಖರೀದಿಗೆ) ನಂಬ ಬೇಡಿ. ವಾಟ್ಸಾಪ್ ಸಲಹೆಗಳನ್ನೂ ನಂಬ ಬೇಡಿ’ ಎಂದು ಎನ್ಎಸ್ಇ ಸಿಇಒ ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರ ಬಹಳ ಬೇಗ ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಲಿದೆ: ಸಿಎಂ ದೇವೇಂದ್ರ ಫಡ್ನವಿಸ್
‘ಭಾರತದ ಷೇರು ಮಾರುಕಟ್ಟೆಯಲ್ಲಿ 11 ಕೋಟಿಗೂ ಅಧಿಕ ಹೂಡಿಕೆದಾರರಿದ್ದಾರೆ. ಹಲವು ದೇಶಗಳ ಜನಸಂಖ್ಯೆಗಿಂತ ಹೆಚ್ಚು ಹೂಡಿಕೆದಾರರು ಭಾರತದಲ್ಲಿದ್ದಾರೆ. ಇದು ಆರಂಭ ಮಾತ್ರ. ಹದಿನೈದು ವರ್ಷದಲ್ಲಿ ಭಾರತದಲ್ಲಿ ಹೂಡಿಕೆದಾರರ ಸಂಖ್ಯೆ 50-70 ಕೋಟಿಗೆ ಏರಲು ಸಾಧ್ಯ’ ಎಂದು ಆಶೀಶ್ ಕುಮಾರ್ ಚೌಹಾಣ್ ತಿಳಿಸಿದರು.
12,000 ಡಾಲರ್ ತಲಾದಾಯ ಇರುವ ಚೀನಾದಲ್ಲಿ ಷೇರು ಮಾರುಕಟ್ಟೆ ಕುಸಿದಾಗ ಸರ್ಕಾರವೇ ಖರೀದಿ ಮಾಡುತ್ತದೆ. ಕೇವಲ 3,000 ಡಾಲರ್ ತಲಾದಾಯ ಇರುವ ಭಾರತದಲ್ಲಿ ಬಡವರೇ ಮಾರುಕಟ್ಟೆ ಬೆಳೆಸುತ್ತಿದ್ದಾರೆ ಎಂದು ಎನ್ಎಸ್ಇ ಮುಖ್ಯಸ್ಥರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಹೊಸ ವಿಶ್ವ ಶ್ರೇಣಿಯಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್
11 ಕೋಟಿ ನೊಂದಾಯಿತ ಹೂಡಿಕೆದಾರರು
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನೊಂದಾಯಿಸುತ್ತಿರುವ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕಳೆದ ಐದು ತಿಂಗಳಲ್ಲಿ ಬರೋಬ್ಬರಿ 1 ಕೋಟಿ ಹೊಸ ಹೂಡಿಕೆದಾರರು ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಎನ್ಎಸ್ಇನಲ್ಲಿ ನೊಂದಾಯಿತ ಅನನ್ಯ ಹೂಡಿಕೆದಾರರ ಸಂಖ್ಯೆ 11 ಕೋಟಿ ಗಡಿ ಮುಟ್ಟಿದೆ. ಪ್ರತೀ ದಿನವೂ ಕಡಿಮೆ ಎಂದರೂ 47,000 ದಿಂದ 73,000 ವರೆಗೆ ಹೊಸ ಹೂಡಿಕೆದಾರರು ನೊಂದಾಯಿಸಿಕೊಳ್ಳುತ್ತಿದ್ದಾರೆ. ಎನ್ಎಸ್ಇನಲ್ಲಿ ನೊಂದಾಯಿತವಾದ ಒಟ್ಟು ಟ್ರೇಡಿಂಗ್ ಅಕೌಂಟ್ಗಳ ಸಂಖ್ಯೆ 21 ಕೋಟಿ ತಲುಪಿರುವುದು ಇನ್ನೊಂದು ಮೈಲಿಗಲ್ಲು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Wed, 5 March 25