ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಎಲ್ಲರ ಅಗತ್ಯತೆಗಳೂ ಬೇಕಾದ ರೀತಿಯ ಇನ್ಷೂರೆನ್ಸ್ ಪ್ಲಾನ್ ಅಥವಾ ಪಾಲಿಸಿಗಳಿವೆ. ನಿಮಗೆ ಒಟ್ಟಿಗೆ ಹಣ ಕೈಸೇರುವಂತಹ ಸ್ಕೀಮ್ಗಳಿಂದ ಹಿಡಿದು ವಿವಿಧ ಮಟ್ಟದ ಪಿಂಚಣಿಗಳು ಕೊಡುವಂತಹ ಸ್ಕೀಮ್ಗಳಿವೆ. ಎಲ್ಐಸಿಯ ಲೈಫ್ ಇನ್ಷೂರೆನ್ಸ್ ಪಾಲಿಸಿದಾರರಿಗೆ ಫೇವರಿಟ್ ಎನಿಸಿರುವ ಸ್ಕೀಮ್ಗಳಲ್ಲಿ ಬಿಮಾ ರತ್ನ ಪ್ಲಾನ್ (LIC Bima Ratna Plan) ಕೂಡ ಒಂದು. ನಿಯಮಿತ ಅವಧಿಯಲ್ಲಿ ಕಂತಿನ ರೀತಿ ಹಣ ರಿಟರ್ನ್ ಕೊಡುತ್ತದೆ. ಪಾಲಿಸಿದಾರ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಅಗತ್ಯ ಹಣಕಾಸು ನೆರವು ಒದಗಿಸುತ್ತದೆ.
ಎಲ್ಐಸಿ ಬಿಮಾ ರತ್ನ ಪ್ಲಾನ್ ನಾನ್–ಲಿಂಕ್ಡ್, ನಾನ್–ಪಾರ್ಟಿಸಿಪೇಟಿಂಗ್ ಆಗಿರುವ ವೈಯಕ್ತಿಕ ಪಾಲಿಸಿಯಾಗಿದೆ. ನಾನ್ ಲಿಂಕ್ಡ್ ಮತ್ತು ನಾನ್ ಪಾರ್ಟಿಸಿಪೇಟಿಂಗ್ (Non-linked and Non-participating) ಎಂದರೆ ಈ ಯೋಜನೆಯು ಎಲ್ಐಸಿಯ ಇತರ ಷೇರುಹೂಡಿಕೆ ಇತ್ಯಾದಿಯ ಮೇಲೆ ಅವಲಂಬಿತವಾಗಿರುವುದಿಲ್ಲ. ಪಾಲಿಸಿಯಲ್ಲಿ ತಿಳಿಸಲಾಗಿರುವಂತೆ ನಿಶ್ಚಿತ ಬಡ್ಡಿ, ನಿಶ್ಚಿತ ರಿಟರ್ನ್ ಸಿಗುತ್ತದೆ. ಎಲ್ಐಸಿ ಪಾಲಿಸಿಯನ್ನು ಆನ್ಲೈನ್ನಲ್ಲಿ ಕೊಳ್ಳಲು ಆಗುವುದಿಲ್ಲ ಎನ್ನುವುದೊಂದೇ ಸಮಸ್ಯೆ. ಎಲ್ಐಸಿ ಏಜೆಂಟ್ಗಳ ಮೂಲಕ ಪಾಲಿಸಿ ಪಡೆಯಬಹುದು. ಅಥವಾ ಎಲ್ಐಸಿ ಸರ್ವಿಸ್ ಸೆಂಟರ್ಗಳು (ಸಿಎಸ್ಸಿ), ಇನ್ಷೂರೆನ್ಸ್ ಮಾರ್ಕೆಟಿಂಗ್ ಸಂಸ್ಥೆಗಳು, ಕಾರ್ಪೊರೇಟ್ ಏಜೆಂಟ್ಸ್ ಇತ್ಯಾದಿ ಬಳಿ ಇನ್ಷೂರೆನ್ಸ್ ಪಾಲಿಸಿ ಪಡೆಯಬಹುದು.
ವಿಮಾ ರತ್ನ ಪಾಲಿಸಿಯಲ್ಲಿ ಸಿಗುವ ಮೂಲ ಮೊತ್ತ ಅಥವಾ ಕನಿಷ್ಠ ಮೊತ್ತ 5 ಲಕ್ಷ ರೂ ಇದೆ. ಈ ಬೇಸಿಕ್ ಸಮ್ನ ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ನೀವು ಹೆಚ್ಚು ಪ್ರೀಮಿಯಮ್ ಕಟ್ಟಿದಷ್ಟೂ ರಿಟರ್ನ್ಸ್ ಹೆಚ್ಚು ಸಿಗುತ್ತದೆ. ಈ ಪಾಲಿಸಿಯ ಅವಧಿ 15, 20 ಅಥವಾ 25 ವರ್ಷ ಇರುತ್ತದೆ. ಪಾಲಿಸಿ ಖರೀದಿಸಲು ಕನಿಷ್ಠ ವಯಸ್ಸು 5 ವರ್ಷವಾದರೆ ಗರಿಷ್ಠ ವಯಸ್ಸು 55 ವರ್ಷ ಎಂದು ನಿಗದಿ ಮಾಡಲಾಗಿದೆ.
ಪಾಲಿಸಿ ಮೆಚ್ಯೂರಿಟಿ ಆಗುವಾಗ ಪಾಲಿಸಿದಾರನ ವಯಸ್ಸು 70 ವರ್ಷ ದಾಟಿರಬಾರದು. ಆ ರೀತಿಯಾಗಿ ಪಾಲಿಸಿ ಖರೀದಿಸುವಾಗ ವಯಸ್ಸವನ್ನು ಗಣಿಸಲಾಗುತ್ತದೆ. ಉದಾಹರಣೆಗೆ ನೀವು 55 ವರ್ಷ ವಯಸ್ಸಿನಲ್ಲಿ ಪಾಲಿಸಿ ಖರೀದಿಸಲು ಹೊರಟರೆ 15 ವರ್ಷ ಅವಧಿಯ ಪಾಲಿಸಿಯ ಆಯ್ಕೆ ಮಾತ್ರ ಇರುತ್ತದೆ. 25 ವರ್ಷ ಅವಧಿಯ ಪಾಲಿಸಿ ಬೇಕೆಂದರೆ ನಿಮಗೆ ವಯಸ್ಸು 45 ವರ್ಷ ಮೀರಿರಬಾರದು.
ಇದನ್ನೂ ಓದಿ: FD Rates: ಬಜಾಜ್ ಫೈನಾನ್ಸ್ನಲ್ಲಿ ಠೇವಣಿಗಳಿಗೆ ಶೇ. 8.20ರವರೆಗೆ ಬಡ್ಡಿ; ಇಲ್ಲಿದೆ ವಿವರ
ಇಲ್ಲಿ ಬಿಮಾ ರತ್ನ ಪಾಲಿಸಿಯಲ್ಲಿ 15 ವರ್ಷ ಅವಧಿಯ ಪ್ಲಾನ್ ತೆಗೆದುಕೊಂಡರೆ ನೀವು 12 ವರ್ಷದವರೆಗೆ ಪ್ರೀಮಿಯಮ್ ಕಟ್ಟಬೇಕಾಗುತ್ತದೆ. 13 ಮತ್ತು 14ನೇ ವರ್ಷದ ಕೊನೆಯಲ್ಲಿ ಅಶೂರ್ ಮಾಡಲಾದ ನಿಶ್ಚಿತ ಬೇಸಿಕ್ ಮೊತ್ತವನ್ನು ಕೊಡಲಾಗುತ್ತದೆ. ಪಾಲಿಸಿ ಮೆಚ್ಯೂರ್ ಆದಾಗ ಇತರ ಎಲ್ಲಾ ಹಣ ಸಂದಾಯ ಆಗುತ್ತದೆ.
20 ವರ್ಷದ ಪಾಲಿಸಿಯಲ್ಲಿ ನೀವು 16 ವರ್ಷಗಳವರೆಗೆ ಪ್ರೀಮಿಯಮ್ ಪಾವತಿಸಬೇಕು. 25 ವರ್ಷದ್ದಾದರೆ 20 ವರ್ಷಗಳವರೆಗೆ ಕಟ್ಟಬೇಕು. ತಿಂಗಳಿಗೊಮ್ಮೆ ಅಥವಾ ನಾಲ್ಕು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಪ್ರೀಮಿಯಮ್ ಕಟ್ಟುವಂತೆ ನೀವು ಆಯ್ಕೆ ಮಾಡಿಕೊಳ್ಳಬಹುದು.
ನೀವು ಮಧ್ಯದಲ್ಲಿ ಪಾಲಿಸಿ ರದ್ದು ಮಾಡುವ ಅವಕಾಶ ಇರುತ್ತದೆ. ಆದರೆ, ಕನಿಷ್ಠ 2 ವರ್ಷವಾದರೂ ನೀವು ಪ್ರೀಮಿಯಮ್ ಕಟ್ಟಿರಬೇಕು. ನೀವು ಪಾಲಿಸಿ ರದ್ದು ಮಾಡಿಕೊಂಡರೆ ಆವರೆಗೆ ನೀವು ಪಾವತಿಸಿದ ಪ್ರೀಮಿಯಮ್ಗಿಂತ ತುಸು ಹೆಚ್ಚು ಮೊತ್ತ ನಿಮಗೆ ಸಿಗುತ್ತದೆ. ಇನ್ನು, ಎರಡು ವರ್ಷ ಪ್ರೀಮಿಯಮ್ ಕಟ್ಟಿದ ಬಳಿಕ ನೀವು ಸಾಲ ಕೂಡ ಪಡೆಯಬಹುದು. ಈ ಸಾಲದ ಮೊತ್ತವು ನೀವು ಕಟ್ಟಿರುವ ಪ್ರೀಮಿಯಮ್ ಮೊತ್ತವನ್ನು ಆಧರಿಸಿರುತ್ತದೆ.
ಪಾಲಿಸಿಯ ಒಂದು ಉದಾಹರಣೆ
ಎಲ್ಐಸಿ ಬಿಮಾ ರತ್ನ ಪ್ಲಾನ್ನಲ್ಲಿ ನೀವು ಬೇಸಿಕ್ ಸಮ್ ಅಶೂರ್ಡ್ 10 ಲಕ್ಷ ರೂ ಇರುವ ಮತ್ತು 20 ವರ್ಷ ಅವಧಿಯ ಪಾಲಿಸಿ ಖರೀದಿಸಿರುತ್ತೀರಿ. ವರ್ಷಕ್ಕೊಮ್ಮೆ 50 ಸಾವಿರ ರೂ ಕಂತುಗಳಂತೆ 16 ವರ್ಷ ನೀವು ಕಟ್ಟುತ್ತೀರಿ.
ಇದನ್ನೂ ಓದಿ: Grow Money: ಎಫ್ಡಿ, ಇನ್ಷೂರೆನ್ಸ್ಗಿಂತ ಇವು ಎಷ್ಟೋ ಬೆಟರ್; ಹೆಚ್ಚು ರಿಸ್ಕ್ ಇಲ್ಲದ ಉತ್ತಮ ಹೂಡಿಕೆಗಳಿವು
ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ (ನೀವು) ಮೃತಪಟ್ಟರೆ ನಾಮಿನಿ ಅಥವಾ ನಾಮಿನಿಗಳಿಗೆ ಬೇಸಿಕ್ ಸಮ್ ಅಶೂರ್ಡ್ ಮೊತ್ತವಾದ 10 ಲಕ್ಷ ರೂ ಸಹಾಯ ಸಿಗುತ್ತದೆ. ಜೊತೆಗೆ 3.5 ಲಕ್ಷ ರೂನಷ್ಟು ಹೆಚ್ಚುವರಿ ಮೊತ್ತವೂ ಸಿಗುತ್ತದೆ. ವರ್ಷಕ್ಕೆ ನೀವು ಕಟ್ಟುವ ಪ್ರೀಮಿಯಮ್ನ ಏಳು ಪಟ್ಟು ಹಣ ಇದಾಗಿರುತ್ತದೆ.
ಒಂದು ವೇಳೆ ಪಾಲಿಸಿದಾರ ಬದುಕಿದ್ದರೆ ಪಾಲಿಸಿ ಮೆಚ್ಯೂರ್ ಆಗುವ ವರ್ಷಕ್ಕೆ ಹಿಂದಿನ ಎರಡು ವರ್ಷಗಳಿಂದ 2.5 ಲಕ್ಷ ರೂಗಳ ಎರಡು ಕಂತುಗಳ ಹಣ ರಿಟರ್ನ್ ಬರುತ್ತದೆ. 20 ವರ್ಷದ ಅವಧಿಯದ್ದಾದರೆ 18ನೇ ಮತ್ತು 19ನೇ ವರ್ಷದಲ್ಲಿ ಈ ಹಣ ಸಿಗುತ್ತದೆ. ಮೆಚ್ಯೂರ್ ಆದ ಬಳಿಕ 5 ಲಕ್ಷ ರೂ ಸಿಗುತ್ತದೆ. ಜೊತೆಗೆ ಹೆಚ್ಚುವರಿ ಮೊತ್ತವೂ ಸೇರಿ ಬರುತ್ತದೆ.
Published On - 10:54 am, Thu, 9 March 23