ಗಮನಿಸಿ… ಮಧ್ಯವರ್ತಿಗಳ ಮಾತು ನಂಬಿ ಐಟಿಆರ್ನಲ್ಲಿ ಸುಳ್ಳು ಕ್ಲೇಮ್ ಮಾಡಿದ್ರೆ ಸಿಕ್ಕಿಬೀಳ್ತೀರಿ
Income Tax Returns, update: ಐಟಿ ರಿಟರ್ನ್ ಫೈಲ್ ಮಾಡುವಾಗ ನೀವು ಸುಳ್ಳು ಮಾಹಿತಿ ನೀಡಿ ರೀಫಂಡ್ ಪಡೆಯಲು ಯತ್ನಿಸಿದರೆ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬೀಳಲಿದ್ದೀರಿ. ಈಗ ಅಥವಾ ಈ ಹಿಂದೆ ನೀವು ಇಂಥ ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ಇದೆ. ಕೂಡಲೆ ಪರಿಷ್ಕೃತ ರಿಟರ್ನ್ ಫೈಲ್ ಮಾಡಬಹುದು. ಒಂದು ವೇಳೆ ಇಲಾಖೆ ನಿಮ್ಮ ಪ್ರಕರಣ ಕೈಗೆತ್ತಿಕೊಂಡು ನೋಟೀಸ್ ನೀಡಿದರೆ ಆಗ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ನವದೆಹಲಿ, ಜುಲೈ 26: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಕೆಲವೇ ದಿನ ಬಾಕಿ ಇದೆ. ಜುಲೈ 31ಕ್ಕೆ ದಂಡ ರಹಿತವಾಗಿ ಐಟಿಆರ್ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈಗ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಪ್ರಕ್ರಿಯೆ ಕೂಡ ಸರಳಗೊಂಡಿದೆ. ನಿಮ್ಮ ಹೆಚ್ಚಿನ ಕ್ಲೇಮ್ಗಳನ್ನು ಸ್ವಯಂ ಆಗಿ ಡಿಕ್ಲೇರ್ ಮಾಡಿಕೊಂಡರೆ ಸಾಕು. ಎಲ್ಲದಕ್ಕೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ. ತೆರಿಗೆ ಪಾವತಿದಾರರ ಬಹುತೇಕ ಹಣಕಾಸು ಚಟುವಟಿಕೆಗಳ ವಿವರ ಆದಾಯ ತೆರಿಗೆ ಇಲಾಖೆಗೆ ಗೊತ್ತಿದ್ದೇ ಇರುತ್ತದೆ. ಟ್ಯಾಕ್ಸ್ ರಿಟರ್ನ್ ಫೈಲ್ನಲ್ಲಿರುವ ಮಾಹಿತಿಯಲ್ಲಿ ದೊಡ್ಡ ವ್ಯತ್ಯಾಸ ಇದ್ದರೆ ಅದು ಇಲಾಖೆ ಗಮನಕ್ಕೆ ಬರುತ್ತದೆ. ಅದಕ್ಕೆಂದೇ ಇಲಾಖೆ ಬಳಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ನೆರವು ಇರುತ್ತದೆ.
ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳ ಸಂಬಳದಲ್ಲಿ ಟಿಡಿಎಸ್ ಕಡಿತ ಮಾಡುತ್ತವೆ. ಈ ಟಿಡಿಎಸ್ ತೆರಿಗೆಯನ್ನು ಉಳಿಸಲು ಅಥವಾ ಐಟಿಆರ್ನಲ್ಲಿ ಈ ಟಿಡಿಎಸ್ ಹಣವನ್ನು ಕ್ಲೇಮ್ ಮಾಡಿ ರೀಫಂಡ್ ಪಡೆಯಲು ಉದ್ಯೋಗಿಗಳು ಕೆಲ ಟ್ಯಾಕ್ಸ್ ಕನ್ಸಲ್ಟೆಂಟ್ಸ್ ಅಥವಾ ಮಧ್ಯವರ್ತಿಗಳ ನೆರವು ಪಡೆಯುತ್ತಾರೆ. ಇಂಥ ಕೆಲ ಮಧ್ಯವರ್ತಿಗಳು ಪೂರ್ಣವಾಗಿ ರೀಫಂಡ್ ಕೊಡಿಸುವುದಾಗಿ ಹೇಳಿ ಬಾಡಿಗೆ, ಹೂಡಿಕೆ ಇತ್ಯಾದಿ ಸುಳ್ಳು ಮಾಹಿತಿಯನ್ನು ಫೈಲಿಂಗ್ ವೇಳೆ ನಮೂದಿಸುವುದುಂಟು. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಇಂಥ ಕೆಲಸ ಬಹಳ ಹೆಚ್ಚು ಇರುವುದು ಇಲಾಖೆ ಗಮನಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸ್ಯಾಲರಿ ಸ್ಲಿಪ್ನಲ್ಲಿರುವ ಎಚ್ಆರ್ಎ ಮತ್ತು ಅದರ ಟ್ಯಾಕ್ಸ್ ಸೇವಿಂಗ್ ವಿಧಾನ ತಿಳಿಯಿರಿ
ಕರ್ನಾಟಕವೂ ಸೇರಿದಂತೆ ಇತರ ಕೆಲ ರಾಜ್ಯಗಳಲ್ಲೂ ಇಂಥ ತೆರಿಗೆ ವಂಚನೆ ಪ್ರಕರಣಗಳು ಇರಬಹುದು ಎಂದು ಇಲಾಖೆ ಶಂಕಿಸಿದೆ. ಶೇ. 70ಕ್ಕಿಂತ ಹೆಚ್ಚು ಟಿಡಿಎಸ್ ಹಣವನ್ನು ಕ್ಲೇಮ್ ಮಾಡುವ ತೆರಿಗೆ ಪಾವತಿದಾರರ ಮೇಲೆ ಇಲಾಖೆ ನಿಗಾ ಇರಿಸಬಹುದು.
ಕಣ್ಣು ಬೀಳುವ ಮುನ್ನ ಅಪ್ಡೇಟ್ ರಿಟರ್ನ್ ಫೈಲ್ ಮಾಡಿ….
ನೀವು ಈ ವರ್ಷ ಫೈಲ್ ಮಾಡಿದ ರಿಟರ್ನ್ಸ್ನಲ್ಲಿ ಸುಳ್ಳು ಮಾಹಿತಿ ಮೂಲಕ ತೆರಿಗೆ ಹಣ ಕ್ಲೇಮ್ ಮಾಡಿದ್ದರೆ ಕೂಡಲೇ ಪರಿಷ್ಕೃತ ರಿಟರ್ನ್ ಸಲ್ಲಿಸಿರಿ. ಹಿಂದಿನ ಹಣಕಾಸು ವರ್ಷಗಳಲ್ಲೂ (2021-22 ಮತ್ತು 2022-23ರದ್ದು) ಇದೇ ತಪ್ಪು ಮಾಡಿದ್ದರೆ, ನೀವು ಮತ್ತೆ ಪರಿಷ್ಕೃತ ರಿಟರ್ನ್ ಸಲ್ಲಿಸಬಹುದು. ತೆರಿಗೆ ಮೊತ್ತದಲ್ಲಿ ವ್ಯತ್ಯಾಸ ಇದ್ದರೆ ಅದನ್ನು ಪಾವತಿಸಿ ಋಣಮುಕ್ತರಾಗಬಹುದು.
ಒಂದು ವೇಳೆ ನೀವು ಹಾಗೆ ಸುಮ್ಮನಾಗಿಬಿಟ್ಟರೆ ಸಂಕಷ್ಟಕ್ಕೆ ಸಿಲುಕುವ ಸಂಭವ ಇದ್ದೇ ಇದೆ. ಇಲಾಖೆ ಎಲ್ಲಾ ಅನುಮಾನಾಸ್ಪದ ರಿಟರ್ನ್ಸ್ಗಳ ಮೇಲೆ ನಿಗಾ ಇಟ್ಟಿದ್ದು, ನಿಮ್ಮ ಪ್ರಕರಣವನ್ನು ಕೈಗೆತ್ತಿಕೊಳ್ಳಲೂ ಬಹುದು. ಒಂದು ವೇಳೆ ಇಲಾಖೆ ನಿಮಗೆ ನೋಟೀಸ್ ಕೊಟ್ಟರೆ ನೀವು ಅಪ್ಡೇಟೆಡ್ ರಿಟರ್ನ್ ಫೈಲ್ ಮಾಡುವ ಅವಕಾಶ ಸಿಗುವುದಿಲ್ಲ. ಕಾನೂನು ಕ್ರಮಕ್ಕೆ ಸಿದ್ಧವಾಗಬೇಕಾಗುತ್ತದೆ.
ಇದನ್ನೂ ಓದಿ: ನೀವು ನಕಲಿ ರೆಂಟ್ ರೆಸಿಪ್ಟ್ ಸಲ್ಲಿಸಿದ್ರೆ ಸರ್ಕಾರಕ್ಕೆ ಗೊತ್ತಾಗುತ್ತೆ ಹುಷಾರ್..! ಇಲಾಖೆ ನೆರವಿಗೆ ಎಐ ಟೆಕ್ನಾಲಜಿ
ತಪ್ಪಾಗಿ ಮಾಹಿತಿ ನೀಡಿದರೆ ಏನು ಕ್ರಮ ಕಾದಿದೆ?
ನೀವು ಆದಾಯ ಸರಿಯಾಗಿ ತೋರಿಸದೇ ಹೋದಲ್ಲಿ ತೆರಿಗೆ ಬಾಕಿ ಮೊತ್ತದ ದುಪ್ಪಟ್ಟು ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೂ ಅವಕಾಶ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ