ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗುವುದು ಹೇಗೆ? ಆದಾಯ ಎಷ್ಟು? ಪರೀಕ್ಷೆ ಶುಲ್ಕ, ಕಮಿಷನ್ ಇತ್ಯಾದಿ ವಿವರ

Know how to become mutual fund distributor: ಭಾರತದಲ್ಲಿ 80 ಲಕ್ಷ ಕೋಟಿ ರೂ ಉದ್ಯಮವಾಗಿರುವ ಮ್ಯೂಚುವಲ್ ಫಂಡ್​ನಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಹಣ ಸಂಪಾದಿಸಲು ಅವಕಾಶ ಇದೆ. ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ಸ್ ನೀಡುವ ಸರ್ಟಿಫಿಕೇಟ್ ಎಕ್ಸಾಂ ಬರೆದು ಡಿಸ್ಟ್ರಿಬ್ಯೂಟರ್ ಆಗಬಹುದು. ಗ್ರಾಹಕರನ್ನು ಹಿಡಿದು ಮಾಡಿಸಲಾಗುವ ಹೂಡಿಕೆಗಳಿಂದ ಕಮಿಷನ್ ಮೂಲಕ ಹಣ ಸಂಪಾದಿಸಬಹುದು.

ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗುವುದು ಹೇಗೆ? ಆದಾಯ ಎಷ್ಟು? ಪರೀಕ್ಷೆ ಶುಲ್ಕ, ಕಮಿಷನ್ ಇತ್ಯಾದಿ ವಿವರ
ಮ್ಯೂಚುವಲ್ ಫಂಡ್

Updated on: Nov 25, 2025 | 4:12 PM

ಮ್ಯೂಚುವಲ್ ಫಂಡ್ ಉದ್ಯಮ (Mutual Fund) ಜಾಗತಿಕವಾಗಿ ಬಹಳ ದೊಡ್ಡದಿದೆ. ಭಾರತದಲ್ಲೂ ಇದು ಬೃಹತ್ ಉದ್ಯಮವಾಗಿದೆ. ಭಾರತದಲ್ಲಿ 45ಕ್ಕೂ ಹೆಚ್ಚು ಮ್ಯೂಚುವಲ್ ಫಂಡ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳಿವೆ. ಸುಮಾರು 3,000 ಫಂಡ್ ಸ್ಕೀಮ್​ಗಳಿವೆ. ಇವುಗಳಲ್ಲಿ ಹೂಡಿಕೆಯಾಗಿರುವ ಒಟ್ಟು ಆಸ್ತಿ (AUM- Asset Under Management) ಬರೋಬ್ಬರಿ 80 ಲಕ್ಷ ಕೋಟಿ ರೂ. ಈ ಉದ್ಯಮ ಬಹಳ ವೇಗದಲ್ಲಿ ಬೆಳೆಯುತ್ತಿದೆ. ಷೇರುಗಳಲ್ಲಿ ಹೂಡಿಕೆ ಮಾಡಲು ಬಯಸುವ ಜನರಿಗೆ ಮ್ಯೂಚುವಲ್ ಫಂಡ್​ಗಳು ಸುಲಭ ಮಾರ್ಗವಾಗಿವೆ.

ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಆಗಲು ಸಕಾಲ…

ಭಾರತದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳು (Mutual Fund Distributors) ಇದ್ದಾರೆ. 3,000ದಷ್ಟಿರುವ ಮ್ಯೂಚುವಲ್ ಫಂಡ್​ಗಳಲ್ಲಿ ಯಾರಿಗೆ ಯಾವುವು ಸೂಕ್ತ ಎಂದು ಹೇಳಲು ತಜ್ಞರ ಅವಶ್ಯಕತೆ ಇದೆ. ಸೂಕ್ತ ತರಬೇತಿ ಪಡೆದ ವ್ಯಕ್ತಿಗಳಿಗೆ ಬೇಡಿಕೆ ಇದ್ದೇ ಇದೆ. ಅಂತೆಯೇ, ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ಸ್ (NISM- National Institute of Securities Markets) ಸಂಸ್ಥೆ ವಿವಿಧ ತರಬೇತಿಗಳನ್ನು ನೀಡುತ್ತದೆ. ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಾಗಲು ಬಯಸುವವರಿಗೂ ಟ್ರೈನಿಂಗ್ ಪ್ರೋಗ್ರಾಮ್ ನೀಡುತ್ತದೆ.

ಮ್ಯುಚುವಲ್ ಫಂಡ್ ಡಿಸ್ಟ್ರಬ್ಯುಟರ್​ಗಳಿಗೆ ಎನ್​ಐಎಸ್​ಎಂ ವಿಎ (NISM-VA) ಹೆಸರಿನ ಪರೀಕ್ಷೆ ನೀಡಲಾಗುತ್ತದೆ. ಎನ್​ಐಎಸ್​ಎಂ ವೆಬ್​ಸೈಟ್​ನಲ್ಲಿ ಕೇವಲ 1,500 ಶುಲ್ಕ ನೀಡಿ ನೊಂದಾಯಿಸಿಕೊಳ್ಳಬಹುದು. ಇದೇ ಜಾಲದಲ್ಲಿ ಉಚಿತವಾಗಿ ಕೋರ್ಸ್ ಮೆಟೀರಿಯಲ್ ಸಿಗುತ್ತದೆ. ಇದನ್ನು ಓದಿ ನಿಗದಿತ ದಿನದಂದು ಪರೀಕ್ಷೆ ಬರೆಯಬೇಕಾಗುತ್ತದೆ.

ಇದನ್ನೂ ಓದಿ: ರಾಶಿ ರಾಶಿ ಮ್ಯುಚುವಲ್ ಫಂಡ್​ಗಳ ಮಧ್ಯೆ ಯಾವುದರಲ್ಲಿ ಹೂಡಿಕೆ ಮಾಡುವುದು?

ಮಲ್ಟಿ ಚಾಯ್ಸ್ ಫಾರ್ಮ್ಯಾಟ್​ನಲ್ಲಿ 100 ಪ್ರಶ್ನೆಗಳನ್ನು ನೀಡಲಾಗುತ್ತದೆ. ಸಮಯಾವಧಿ 2 ಗಂಟೆ ಇರುತ್ತದೆ. ಪಾಸಾಗಲು ಕನಿಷ್ಠ 50 ಅಂಕ ಇರುತ್ತದೆ. ಪಾಸಾದರೆ ಎನ್​ಐಎಸ್​ಎಂ ವಿಎ ಸರ್ಟಿಕೇಟ್ ಸಿಗುತ್ತದೆ. ಇದು 3 ವರ್ಷ ಸಿಂಧುವಾಗಿರುತ್ತದೆ. ಆ ಬಳಿಕ ಮತ್ತೊಮ್ಮೆ ಪರೀಕ್ಷೆ ಬರೆದು ಪಾಸಾಗಿ ಮತ್ತೆ ಹೊಸದಾಗಿ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ.

ಎನ್​ಐಎಸ್​ಎಂ ವಿಎ ಪರೀಕ್ಷೆ ಪಾಸಾದರೆ ಮುಂದೇನು?

ಎನ್​ಐಎಸ್​ಎಂ ಸರ್ಟಿಫಿಕೇಟ್ ಪಡೆದ ಬಳಿಕ ಭಾರತೀಯ ಮ್ಯುಚುವಲ್ ಫಂಡ್ ಸಂಸ್ಥೆಯ (ಎಎಂಎಫ್​ಐ) ಬಳಿ ಎಆರ್​ಎನ್​ಗೆ (ಎಎಂಎಫ್​ಐ ರಿಜಿಸ್ಟ್ರೇಶನ್ ನಂಬರ್) ಅಪ್ಲೈ ಮಾಡಬೇಕಾಗುತ್ತದೆ. ಎನ್​ಐಎಸ್​ಎಂ ಸರ್ಟಿಫಿಕೇಟ್, ಪ್ಯಾನ್, ಆಧಾರ್, ಕ್ಯಾನ್ಸಲ್ಡ್ ಚೆಕ್ ದಾಖಲೆಗಳು ಬೇಕಾಗುತ್ತವೆ.

ಎಆರ್​ಎನ್ ಪಡೆಯಲು 3,000 ರೂ ಆಗುತ್ತದೆ. ಇದೂ ಕೂಡ 3 ವರ್ಷ ವ್ಯಾಲಿಡಿಟಿ ಇರುತ್ತದೆ. 3 ವರ್ಷವಾದ ಬಳಿಕ ಮತ್ತೆ ಹೊಸದಾಗಿ ಎನ್​ಐಎಸ್​ಎಂ ಸರ್ಟಿಫಿಕೇಟ್ ಪಡೆದು ಮತ್ತೆ ಎಆರ್​ಎನ್​ಗೆ ಅಪ್ಲೈ ಮಾಡಬೇಕು.

ಇದನ್ನೂ ಓದಿ: ತಿಂಗಳಿಗೆ 21,000-26,000 ರೂ ಹೂಡಿಕೆ; 10 ವರ್ಷದಲ್ಲಿ 50 ಲಕ್ಷ ರೂ ಗಳಿಕೆ

ಮ್ಯೂಚುವಲ್ ಫಂಡ್ ಸಂಸ್ಥೆಗಳಲ್ಲಿ ನೊಂದಾಯಿಸಿ…

ಎಎಂಎಫ್​ಐನಿಂದ ಎಆರ್​ಎನ್ ನಂಬರ್ ಸಿಕ್ಕ ಬಳಿಕ ನೀವು ಯಾವುದಾದರೂ ಮ್ಯೂಚುವಲ್ ಫಂಡ್ ಎಎಂಸಿ ಜೊತೆ ನೊಂದಾಯಿಸಿಕೊಳ್ಳಬಹುದು. ಈ ಮೂಲಕ ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗಬಹುದು. ನೀವು ಆ ಎಎಂಸಿಗಳ ಫಂಡ್ ಸ್ಕೀಮ್​ಗಳನ್ನು ಮಾರಿ ಆದಾಯ ಗಳಿಸಬಹುದು. ಒಂದಕ್ಕಿಂತ ಹೆಚ್ಚು ಎಎಂಸಿಗಳಲ್ಲಿ ರಿಜಿಸ್ಟ್ರರ್ ಆಗಲು ಅವಕಾಶ ಇರುತ್ತದೆ.

ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗಿ ಆದಾಯ ಗಳಿಸುವುದು ಹೇಗೆ?

ಎಲ್​ಐಸಿ ಏಜೆಂಟ್​ಗಳ ರೀತಿಯಲ್ಲಿ ಮ್ಯೂಚುವಲ್ ಫಂಡ್ ವಿತರಕರೂ ವಿವಿಧ ಕಮಿಷನ್​ಗಳ ಮೂಲಕ ಆದಾಯ ಗಳಿಸಲು ಅವಕಾಶ ಇರುತ್ತದೆ. ಮ್ಯೂಚುವಲ್ ಫಂಡ್ ಸಂಸ್ಥೆಗಳು ತಮ್ಮ ಫಂಡ್ ಸ್ಕೀಮ್​ಗಳಿಗೆ ಗ್ರಾಹಕರಿಗೆ ನಿರ್ದಿಷ್ಟ ಶುಲ್ಕ ವಿಧಿಸುತ್ತದೆ. ಈ ಶುಲ್ಕದಲ್ಲಿ ಒಂದು ಭಾಗವು ಡಿಸ್ಟ್ರಿಬ್ಯೂಟರ್​ಗೆ ಸಂದಾಯವಾಗುತ್ತದೆ.

ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಿಗೆ ಅತಿಹೆಚ್ಚು ಆದಾಯ ಸಿಗುವುದು ಟ್ರೇಲ್ ಕಮಿಷನ್​ನಿಂದ. ಸಾಮಾನ್ಯವಾಗಿ ಅವರಿಗೆ ಶೇ. 0.10ರಿಂದ ಶೇ. 1.20ರವರೆಗೆ ಟ್ರೇಲ್ ಕಮಿಷನ್ ಸಿಗುತ್ತದೆ.

ಇದನ್ನೂ ಓದಿ: ಮುಂದಿನ ವರ್ಷ 5,000 ರೂ ಡಾಲರ್​ಗೆ ಏರಲಿದೆ ಚಿನ್ನದ ಬೆಲೆ; ಭಾರತದಲ್ಲಿ ಎಷ್ಟು ಹೆಚ್ಚಬಹುದು ಇದರ ಬೆಲೆ?

ಟ್ರೇಲ್ ಕಮಿಷನ್ ಎಂದರೆ ಡಿಸ್ಟ್ರಿಬ್ಯೂಟರ್ ಮೂಲಕ ಫಂಡ್​ಗಳಲ್ಲಿ ಒಬ್ಬ ಗ್ರಾಹಕ ಹೂಡಿಕೆ ಮಾಡಿದಾಗ, ಅವರ ಪ್ರತೀ ಪಾವತಿಯಲ್ಲೂ ಡಿಸ್ಟ್ರಿಬ್ಯೂಟರ್​ಗೆ ಕಮಿಷನ್ ಸಲ್ಲುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಈ ಕಮಿಷನ್ ಅತಿಹೆಚ್ಚು ಇರುತ್ತದೆ.

ಇದರ ಜೊತೆಗೆ, ಹೊಸದಾಗಿ ಹೂಡಿಕೆ ಮಾಡಿಸಿದಾಗ ಆ ಹೂಡಿಕೆಗೆ ಒಂದಷ್ಟು ಕಮಿಷನ್ ಅನ್ನು ಡಿಸ್ಟ್ರಿಬ್ಯೂಟರ್​ಗೆ ಕೊಡಲಾಗುತ್ತದೆ. ಒಟ್ಟಾರೆ, ಹೂಡಿಕೆದಾರರು ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋದಷ್ಟೂ ಹೊತ್ತು ಡಿಸ್ಟ್ರಿಬ್ಯೂಟರ್​ಗೆ ಟ್ರೇಲ್ ಕಮಿಷನ್ ಬರುತ್ತಲೇ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ