ತಿಂಗಳಿಗೆ 21,000-26,000 ರೂ ಹೂಡಿಕೆ; 10 ವರ್ಷದಲ್ಲಿ 50 ಲಕ್ಷ ರೂ ಗಳಿಕೆ
Mutual Fund SIP: ನೀವು ಹತ್ತು ವರ್ಷದಲ್ಲಿ 50 ಲಕ್ಷ ರೂ ಗಳಿಸಬೇಕೆಂದಿದ್ದರೆ ಪ್ರತೀ ತಿಂಗಳು ಎಷ್ಟು ಹೂಡಿಕೆ ಮಾಡಿದರೆ ಗುರಿ ಈಡೇರಲು ಸಾಧ್ಯ? ನಿಯಮಿತವಾಗಿ ಹೂಡಿಕೆ ಮಾಡಲು ಎಸ್ಐಪಿ ಅತ್ಯುತ್ತಮ ಮಾರ್ಗವಾಗಿದೆ. ಮ್ಯುಚುವಲ್ ಫಂಡ್ 10 ವರ್ಷದಲ್ಲಿ ಶೇ. 9ರ ಸಿಎಜಿಆರ್ನಲ್ಲಿ ಬೆಳೆಯುತ್ತದೆ ಎಂದರೆ ತಿಂಗಳಿಗೆ 26,000 ರೂ ಎಸ್ಐಪಿ ಮಾಡಬೇಕಾಗುತ್ತದೆ.

ಮನೆ ಖರೀದಿಸಲೋ, ನಿವೇಶನ ಹೊಂದಲೋ, ಮದುವೆ ಮಾಡಿಸಲೋ, ನಿವೃತ್ತಿಯಾಗಲೋ ಹೀಗೆ ನಾನಾ ಕಾರಣಗಳಿಗೆ ಭವಿಷ್ಯದಲ್ಲಿ ಹಣದ ಅಗತ್ಯ ಬೀಳುತ್ತದೆ. ಇಂಥ ಭವಿಷ್ಯದ ಖರ್ಚಿಗೆ ಹಣ ಹೊಂದಿಸಲು ಎಸ್ಐಪಿ ಬಹಳ ಸೂಕ್ತವಾದುದು. ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ಗಳಲ್ಲಿ ರೆಕರಿಂಗ್ ಡೆಪಾಸಿಟ್ ಪ್ಲಾನ್ಗಳನ್ನು (Post Office RD) ಬಳಸಬಹುದು. ಮ್ಯೂಚುವಲ್ ಫಂಡ್ ಎಸ್ಐಪಿಗಳನ್ನು (Mutual Fund) ಮಾಡಬಹುದು. ರಿಸ್ಕ್ರಹಿತ ಎಸ್ಐಪಿಯಿಂದ ಹಿಡಿದು ಅಧಿಕ ರಿಸ್ಕ್ ಇರುವ ಯೋಜನೆಗಳೂ ಬಹಳಷ್ಟಿವೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಪ್ಲಾನ್ ಆಯ್ದುಕೊಳ್ಳಬಹುದು.
ಏನಿದು ಎಸ್ಐಪಿ ಪ್ಲಾನ್?
ಎಸ್ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಪ್ರತೀ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋಗುವುದೇ ಎಸ್ಐಪಿ. ಬ್ಯಾಂಕ್ ಆರ್ಡಿಗಳಲ್ಲಿ ವರ್ಷಕ್ಕೆ ಶೇ. 6ರಿಂದ 6.50ರಷ್ಟು ಬಡ್ಡಿ ನಿರೀಕ್ಷಿಸಬಹುದು. ಪೋಸ್ಟ್ ಆಫೀಸ್ ಆರ್ಡಿಗಳಲ್ಲೂ ಇಷ್ಟೇ ನಿರೀಕ್ಷಿಸಬಹುದು. ಆದರೆ, ಹೆಚ್ಚಿನ ರಿಟರ್ನ್ ಬಯಸುತ್ತಿದ್ದರೆ ಮ್ಯೂಚುವಲ್ ಫಂಡ್ ಎಸ್ಐಪಿ ಆರಂಭಿಸಬಹುದು.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಅತಿಹೆಚ್ಚು ಫಿಕ್ಸೆಡ್ ಡೆಪಾಸಿಟ್ ರೇಟ್ ಕೊಡುವ ಬ್ಯಾಂಕುಗಳು
ಎಸ್ಐಪಿಗೆ ತಿಂಗಳಲ್ಲಿ ಎಷ್ಟು ಹೂಡಿಕೆ ಮಾಡಬೇಕು?
ನೀವು ಮುಂದಿನ 10 ವರ್ಷದಲ್ಲಿ 50 ಲಕ್ಷ ರೂ ಪಡೆಯುವ ಉದ್ದೇಶ ಇದ್ದರೆ ತಿಂಗಳಿಗೆ 21,000 ರೂನಿಂದ 26,000 ರೂವರೆಗೆ ಎಸ್ಐಪಿಯಲ್ಲಿ ಹೂಡಿಕೆ ಮಾಡಬಹುದು. ಗಮನಿಸಬೇಕಾದ ಸಂಗತಿ ಎಂದರೆ ಎಲ್ಲಾ ಮ್ಯುಚುವಲ್ ಫಂಡ್ಗಳೂ ಒಂದೇ ತೆರನಾದ ರಿಟರ್ನ್ಸ್ ಕೊಡುವುದಿಲ್ಲ. ಅತ್ಯುತ್ತಮ ಫಂಡ್ಗಳೂ ಕೂಡ ಕೆಲ ವರ್ಷ ನೆಗಟಿವ್ ರಿಟರ್ನ್ ಕೊಡಬಹುದು. ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್ಗಳು ಕನಿಷ್ಠ ಶೇ. 9 ಸಿಎಜಿಆರ್ ನೀಡಬಲ್ಲುವು.
10 ವರ್ಷದಲ್ಲಿ 50 ಲಕ್ಷ ರೂ ತಂದುಕೊಡಬಲ್ಲ ಎಸ್ಐಪಿಗಳು
- ಮ್ಯುಚುವಲ್ ಫಂಡ್ 10 ವರ್ಷದಲ್ಲಿ ಶೇ. 9 ಸಿಎಜಿಆರ್ನಲ್ಲಿ ಬೆಳೆದರೆ ಪ್ರತೀ ತಿಂಗಳು 25,838 ರೂ ಹಣವನ್ನು ಎಸ್ಐಪಿಯಲ್ಲಿ ಹೂಡಿಕೆ ಮಾಡಬೇಕು.
- ಫಂಡ್ ಶೇ. 10ರ ಸಿಎಜಿಆರ್ನಲ್ಲಿ ಬೆಳೆದರೆ 24,409 ರೂ ಎಸ್ಐಪಿ ಮಾಡಬೇಕು.
- ಶೇ. 11ರಷ್ಟು ವಾರ್ಷಿಕ ರಿಟರ್ನ್ ಬರುತ್ತದೆ ಎಂದು ಭಾವಿಸಿದರೆ, ಎಸ್ಐಪಿಯಲ್ಲಿ 23,042 ರೂ ಹೂಡಿಕೆ ಮಾಡಬೇಕು.
- ಶೇ. 12ರಷ್ಟು ಸಿಎಜಿಆರ್ ಇದ್ದಲ್ಲಿ 21,736 ರೂ ಅನ್ನು ಎಸ್ಐಪಿ ಮೂಲಕ ಹೂಡಿಕೆ ಮಾಡಬೇಕು.
ಇದನ್ನೂ ಓದಿ: ನಿಮ್ಮ ಸೇವಿಂಗ್ಸ್ ಅಕೌಂಟ್ ಮೇಲೆ ಐಟಿ ಕಣ್ಣು? ಈ ಟ್ರಾನ್ಸಾಕ್ಷನ್ಗಳನ್ನು ಮಾಡುವಾಗ ಹುಷಾರ್
ಡೆಟ್ ಮ್ಯೂಚುವಲ್ ಫಂಡ್ಗಳು ದೀರ್ಘಾವಧಿಯಲ್ಲಿ ಶೇ. 8ರಷ್ಟು ರಿಟರ್ನ್ ಕೊಟ್ಟಿರುವುದುಂಟು. ಈಕ್ವಿಟಿ ವಿಭಾಗದ ಮ್ಯುಚುವಲ್ ಫಂಡ್ಗಳು ದೀರ್ಘಾವಧಿಯಲ್ಲಿ ಶೇ. 10ರಿಂದ 15ರಷ್ಟು ವಾರ್ಷಿಕ ರಿಟರ್ನ್ ಕೊಟ್ಟಿವೆ. ಆದರೆ, ಕೆಲ ವರ್ಷಗಳಲ್ಲಿ ಇವು ನೆಗಟಿವ್ ರಿಟರ್ನ್ ಕೊಡುವ ಸಾಧ್ಯತೆ ಇರುವುದರಿಂದ ಎದೆಗುಂದಬಾರದು. ಹೀಗೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಬಯಸುವವರು ಈಕ್ವಿಟಿ ಫಂಡ್ಗಳಲ್ಲಿ ಎಸ್ಐಪಿ ಆರಂಭಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




