ವಾಸಿಸಲು ನಮ್ಮ ಇಷ್ಟದ ನಮ್ಮದೇ ಆದ ಒಂದು ಸುಂದರ ಮನೆ (Home) ಇರಬೇಕೆಂಬುದು ಎಲ್ಲರ ಕನಸು. ಇದು ಇಡೀ ಜೀವಮಾನದ ಸಂಪಾದನೆಯನ್ನು ಬೇಡುವ ಕನಸು ಕೂಡ ಹೌದು. ಮನೆ ಪಡೆಯಲು ಈಗ ಸಾಕಷ್ಟು ಸಾಲಸೌಲಭ್ಯಗಳು (loans) ಸಿಗುತ್ತವೆ. ಆದರೆ, ಹೋಮ್ ಲೋನ್ಗಳ ಅವಧಿ ನಮ್ಮ ವೃತ್ತಿಜೀವನದ ಮುಕ್ಕಾಲು ಭಾಗವೇ ಆದೀತು. ಅವಧಿ ಮಾತ್ರವಲ್ಲ, ಬಡ್ಡಿ, ನಮ್ಮ ಉಳಿತಾಯ ಹಣ ಇವೆಲ್ಲ ಅಂಶಗಳನ್ನೂ ಗೃಹ ಸಾಲ ಪಡೆಯುವಾಗ ನಾವು ಗಮನಿಸಬೇಕು.
ಬಹಳಷ್ಟು ಜನರು ಜಂಟಿಯಾಗಿ ಗೃಹಸಾಲಗಳನ್ನು ಪಡೆಯುವುದನ್ನು ನೋಡಿದ್ದೇವೆ. ಗಂಡ ಹೆಂಡತಿ ಇಬ್ಬರೂ ಕೆಲಸದಲ್ಲಿದ್ದರೆ ಗೃಹಸಾಲ ಪಡೆಯುವುದು ಸುಲಭ ಮತ್ತು ಸಾಲದ ಮೊತ್ತ ಕೂಡ ಹೆಚ್ಚಿರುತ್ತದೆ.
ಹೆಚ್ಚು ಮೊತ್ತದ ಸಾಲ ಸಿಗುತ್ತದೆ: ಒಬ್ಬರೇ ಸಾಲ ಪಡೆಯುವುದಕ್ಕಿಂತ ಜಂಟಿಯಾಗಿ ಸಾಲ ಪಡೆದರೆ, ಅದರಲ್ಲೂ ಇಬ್ಬರೂ ಕೂಡ ಕೆಲಸ ಮಾಡುತ್ತಿರುವವರಾದರೆ ಹೆಚ್ಚಿನ ಮೊತ್ತದ ಸಾಲ ಪಡೆಯಬಹುದು.
ಸಾಲಕ್ಕೆ ಬೇಗನೇ ಅನುಮೋದನೆ ಸಿಗುತ್ತದೆ: ಜಂಟಿಯಾಗಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವವರಲ್ಲಿ ಒಬ್ಬರಿಗಾದರೂ ಒಳ್ಳೆಯ ಕ್ರೆಡಿಟ್ ಸ್ಕೋರ್ ಇದ್ದರೂ ಸಾಕು, ಸಾಲಕ್ಕೆ ಸುಲಭವಾಗಿ ಅನುಮೋದನೆ ಸಿಗುತ್ತದೆ.
ತೆರಿಗೆ ಲಾಭಗಳಿರುತ್ತವೆ: ಜಂಟಿಯಾಗಿ ಸಾಲ ಪಡೆಯುವ ಪ್ರತಿಯೊಬ್ಬರೂ ಕೂಡ ಪ್ರತ್ಯೇಕವಾಗಿ ತೆರಿಗೆ ಲಾಭ ಪಡೆಯಬಹುದು. ಐಟಿ ಸೆಕ್ಷನ್ 24 ಮತ್ತು 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬುದು.
ಬಡ್ಡಿದರ ಕಡಿಮೆ ಇರುತ್ತದೆ: ಜಂಟಿ ಗೃಹಸಾಲ ಪಡೆಲು ನಿಮ್ಮ ಜೊತೆ ಪತ್ನಿ ಅಥವಾ ತಾಯಿ ಇದ್ದರೆ ಸಾಲಕ್ಕೆ ಬಡ್ಡಿದರ ಕಡಿಮೆ ಆಗಬಹುದು. ಯಾಕೆಂದರೆ, ಮಹಿಳಾ ಗ್ರಾಹಕರಿಗೆ ಬಡ್ಡಿದರ ತುಸು ಕಡಿಮೆ ಇರುತ್ತದೆ.
ಸಾಲ ಸಿಗದಿರುವ ಸಾಧ್ಯತೆ: ಜಂಟಿ ಗೃಹಸಾಲಕ್ಕೆ ಇಬ್ಬರು ಅರ್ಜಿ ಸಲ್ಲಿಸಿದಾಗ ಒಬ್ಬರದ್ದು ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ಕೆಲ ಬ್ಯಾಂಕುಗಳು ಸುಲಭವಾಗಿ ಸಾಲ ಅನುಮೋದನೆ ಮಾಡುತ್ತವೆ. ಇನ್ನೂ ಕೆಲ ಬ್ಯಾಂಕುಗಳು ಇಬ್ಬರ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತವೆ. ಒಬ್ಬರದ್ದು ಕಡಿಮೆ ಸ್ಕೋರ್ ಇದ್ದರೂ ಕೂಡ ಅರ್ಜಿ ತಿರಸ್ಕರಿಸುವ ಸಾಧ್ಯತೆ ಇರುತ್ತದೆ.
ಒಬ್ಬರಿಗೆ ಹೊರೆ: ಸಾಲ ಪಡೆದ ಇಬ್ಬರಲ್ಲಿ ಒಬ್ಬರಿಗೆ ಹಣಕಾಸು ಸಂಕಷ್ಟ ಎದುರಾದಾಗ ಮತ್ತೊಬ್ಬರಿಗೆ ಹೊರೆ ಬೀಳುತ್ತದೆ. ಇದೆಲ್ಲವನ್ನೂ ಮೊದಲೇ ಅಂದಾಜು ಮಾಡಿ ಸಾಲ ಪಡೆಯಬೇಕಾಗುತ್ತದೆ.
ಆಸ್ತಿ ಮಾಲಕತ್ವದ ವಿವಾದ: ಇದು ಬಹಳ ಮುಖ್ಯ. ನೀವು ಜಂಟಿ ಗೃಹಸಾಲ ಪಡೆದು ಒಂದು ಆಸ್ತಿ ಖರೀದಿಸಿದ್ದರೆ, ಅದನ್ನು ಮಾರುವಾಗ ಕಾನೂನು ತೊಡಕು ಎದುರಾಗಬಹುದು. ನಿಮ್ಮೊಂದಿಗೆ ಸಾಲ ಪಡೆದವರು ಆಸ್ತಿ ಮಾರಲು ಆಕ್ಷೇಪಣೆ ಮಾಡಿದರೆ ಅದಕ್ಕೆ ಮಾನ್ಯತೆ ಸಿಗಬಹುದು.
ಒಟ್ಟಾರೆ, ಜಂಟಿಯಾಗಿ ಗೃಹಸಾಲ ಪಡೆಯುವುದರಿಂದ ಕೆಲ ಸಮಸ್ಯೆಗಳು ಇರಬಹುದಾದರೂ ಅನುಕೂಲತೆಗಳು ಹೆಚ್ಚಿರುತ್ತವೆ. ಸಾಲ ಪಡೆದಿರುವ ವ್ಯಕ್ತಿಗಳ ಮಧ್ಯೆ ಹೊಂದಾಣಿಕೆ, ಸ್ಪಷ್ಟತೆ ಇದ್ದರೆ ಸಮಸ್ಯೆ ಬರುವ ಸಾಧ್ಯತೆ ಬಹಳ ಕಡಿಮೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ