ಕಿಸಾನ್ ವಿಕಾಸ್ ಪತ್ರ ಸ್ಕೀಮ್; ನಿಮ್ಮ ಹಣ 10 ವರ್ಷದೊಳಗೆ ಡಬಲ್ ಆಗುತ್ತೆ; ಕೆವಿಪಿ ಪಡೆಯುವುದು ಹೇಗೆ?
Kisan Vikas Patra: ಕಿಸಾನ್ ವಿಕಾಸ್ ಪತ್ರ ವರ್ಷಕ್ಕೆ ಶೇ. 7.5ರಷ್ಟು ಬಡ್ಡಿ ಕೊಡುತ್ತದೆ. 115 ತಿಂಗಳಲ್ಲಿ ನಿಮ್ಮ ಹೂಡಿಕೆ ಡಬಲ್ ಆಗುತ್ತದೆ. ಅಂಚೆ ಕಚೇರಿ ರೂಪಿಸಿರುವ ಕೆಲ ಪ್ರಮುಖ ಯೋಜನೆಗಳಲ್ಲಿ ಕೆವಿಪಿಯೂ ಒಂದು. ಬಹಳ ಸುರಕ್ಷಿತ ಮತ್ತು ದೀರ್ಘಾವಧಿ ಹೂಡಿಕೆ. ಕಿಸಾನ್ ವಿಕಾಸ್ ಪತ್ರದಲ್ಲಿನ ಹೂಡಿಕೆಯ ಹಣಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲ. ಇದರಿಂದ ಬರುವ ಲಾಭಕ್ಕೆ ತೆರಿಗೆ ಅನ್ವಯ ಆಗುತ್ತದೆ.
ಅಂಚೆ ಕಚೇರಿಯಲ್ಲಿ ಸಿಗುವ ಕೆಲ ಪ್ರಮುಖ ಹೂಡಿಕೆ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ (Kisan Vikas Patra) ಒಂದು. ಈ ಸ್ಕೀಮ್ನಲ್ಲಿ ವರ್ಷಕ್ಕೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ವರ್ಷಕ್ಕೊಮ್ಮೆ ಬಡ್ಡಿ ಕೂಡುತ್ತಾ ಹೋಗುತ್ತದೆ. ಈ ಲೆಕ್ಕದಲ್ಲಿ ಕಿಸಾನ್ ವಿಕಾಸ್ ಪತ್ರದಲ್ಲಿ ನಿಮ್ಮ ಹೂಡಿಕೆಯು 115 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂದರೆ ಇದೇ ಬಡ್ಡಿದರ ಇದ್ದರೆ ಒಂಬತ್ತು ವರ್ಷ ಏಳು ತಿಂಗಳಲ್ಲಿ ಹಣ ಡಬಲ್ ಆಗುತ್ತದೆ. ಇವತ್ತು ನೀವು ಕಿಸಾನ್ ವಿಕಾಸ್ ಪತ್ರದಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ 10 ವರ್ಷದ ಒಳಗೆ ಆ ಹಣ ಎರಡು ಲಕ್ಷ ರೂ ಆಗಿರುತ್ತದೆ.
ಕಿಸಾನ್ ವಿಕಾಸ್ ಪತ್ರ ದೀರ್ಘಾವಧಿ ಹೂಡಿಕೆ ಬಯಸುವ ಜನರಿಗೆ ಬಹಳ ಸುರಕ್ಷಿತ ಆಯ್ಕೆ. ಭಾರತೀಯ ಅಂಚೆ ಕಚೇರಿಯಿಂದ ಈ ಸ್ಕೀಮ್ ನಿಭಾಯಿಸಲಾಗುತ್ತದೆ. ಹಣ ಕಳೆದುಕೊಳ್ಳುವ ಭೀತಿ ಇರುವುದಿಲ್ಲ.
ಕಿಸಾನ್ ವಿಕಾಸ್ ಪತ್ರ ಯೋಜನೆ ಪಡೆಯುವುದು ಹೇಗೆ?
ಯಾವುದೇ ಭಾರತೀ ಪ್ರಜೆ ಕೂಡ ಕಿಸಾನ್ ವಿಕಾಸ್ ಪತ್ರ ಪಡೆಯಬಹುದು. ಜಂಟಿಯಾಗಿಯೂ ಅಕೌಂಟ್ ತೆರೆಯಬಹುದು. ಜಂಟಿಯಾದರೆ ಗರಿಷ್ಠ ಮೂರು ಮಂದಿ ಸೇರಿ ಒಂದು ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ವ್ಯಕ್ತಿಯ ಹೆಸರಿನಲ್ಲಿ ಈ ಸ್ಕೀಮ್ ಪಡೆಯಬಹುದು. ಒಬ್ಬ ಅರ್ಹ ವ್ಯಕ್ತಿ ಎಷ್ಟು ಖಾತೆ ಬೇಕಾದರೂ ತೆರೆಯಬಹುದು. ಅಂದರೆ ಒಂದಕ್ಕಿಂತ ಹೆಚ್ಚು ಕಿಸಾನ್ ವಿಕಾಸ್ ಪತ್ರ ಪಡೆಯಬಹುದು. ಬಾರಿ ಬಾರಿ ಹೂಡಿಕೆ ಮಾಡಬಹುದು.
ಇದನ್ನೂ ಓದಿ: How to: ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಕ್ರಮಗಳೇನು? ಹೂಡಿಕೆ ಮಾಡುವ ಮುನ್ನ ತಿಳಿದಿರಬೇಕಾದ ವಿಚಾರಗಳಿವು…
ಕಿಸಾನ್ ವಿಕಾಸ್ ಪತ್ರ ಮೆಚ್ಯೂರಿಟಿಗೆ ಮುನ್ನ ಹಣ ಹಿಂಪಡೆಯಬಹುದೇ?
- ಕಿಸಾನ್ ವಿಕಾಸ್ ಪತ್ರ 115 ತಿಂಗಳಿಗೆ ಮೆಚ್ಯೂರ್ ಆಗುತ್ತದೆ. ಅಂದರೆ ಅದು ಮೆಚ್ಯೂರ್ ಆದಾಗ ನಿಮ್ಮ ಹಣ ಖಾತ್ರಿಯಾಗಿ ದ್ವಿಗುಣಗೊಂಡಿರುತ್ತದೆ.
- ಒಂದು ವೇಳೆ ನೀವು ಪ್ರೀಮೆಚ್ಯೂರ್ ಆಗಿ, ಅಂದರೆ ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯಲು ಸಾಕಷ್ಟು ನಿರ್ಬಂಧಗಳಿವೆ. ಕೆಲ ಷರತ್ತುಗಳು ಅನ್ವಯ ಆಗಬೇಕು.
- ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿ 2 ವರ್ಷ 6 ತಿಂಗಳ ಬಳಿಕ ಹಿಂಪಡೆಯಬಹುದು.
- ಹೂಡಿಕೆ ಮಾಡಿದ ವ್ಯಕ್ತಿ ಸಾವನ್ನಪ್ಪಿದರೆ ನಾಮಿನಿಯಾದವರು ಹಣ ಹಿಂಪಡೆಯಬಹುದು.
ಕಿಸಾನ್ ವಿಕಾಸ್ ಪತ್ರವನ್ನು ವರ್ಗಾಯಿಸಲು ಸಾಧ್ಯವೇ?
- ಖಾತೆದಾರ ಸಾವನ್ನಪ್ಪಿದರೆ ವಾರಸುದಾರ ಅಥವಾ ನಾಮಿನಿಗೆ ಕೆವಿಪಿಯನ್ನು ವರ್ಗಾಯಿಸಬಹುದು.
- ಕೋರ್ಟ್ನಿಂದ ಆದೇಶ ಬಂದರೆ ವರ್ಗಾಯಿಸಬಹುದು.
- ನಿರ್ದಿಷ್ಟ ಪ್ರಾಧಿಕಾರಕ್ಕೆ ಕಿಸಾನ್ ವಿಕಾಸ್ ಪತ್ರ ಅಡ ಇಟ್ಟಾಗ ಅದನ್ನು ಇನ್ನೊಬ್ಬರಿಗೆ ಟ್ರಾನ್ಸ್ಫರ್ ಮಾಡಬಹುದು.
ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?
ಕಿಸಾನ್ ವಿಕಾಸ್ ಪತ್ರದಲ್ಲಿ ತೆರಿಗೆ ವಿನಾಯಿತಿ ಇದೆಯೇ?
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ವ್ಯಾಪ್ತಿಗೆ ಕಿಸಾನ್ ವಿಕಾಸ್ ಪತ್ರದ ಹೂಡಿಕೆಗಳು ಬರುವುದಿಲ್ಲ. ಇದರಲ್ಲಿನ ಹೂಡಿಕೆಯಿಂದ ಸಿಗುವ ರಿಟರ್ನ್ಗಳ ಮೇಲೆ ತೆರಿಗೆ ಅನ್ವಯ ಆಗುತ್ತದೆ. ನಿಮ್ಮ ಆದಾಯ ಮಟ್ಟಕ್ಕೆ ಅನುಗುಣವಾಗಿ ತೆರಿಗೆ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ