ಶ್ರೀಮಂತಿಕೆಯ ಮಾನದಂಡ ವ್ಯಕ್ತಿಯಿಂದ ವ್ಯಕ್ತಿಗೆ, ಸಮಾಜದಿಂದ ಸಮಾಜಕ್ಕೆ, ದೇಶದಿಂದ ದೇಶಕ್ಕೆ ಬದಲಾಗುತ್ತದೆ. ವರ್ಷಕ್ಕೆ 3 ಲಕ್ಷ ದುಡಿಯುವ ವ್ಯಕ್ತಿಯ ಕಣ್ಣಿಗೆ, ವರ್ಷಕ್ಕೆ 30 ಲಕ್ಷ ರೂ ಸಂಪಾದಿಸುವ ವ್ಯಕ್ತಿ ಶ್ರೀಮಂತ ಎನಿಸಬಹುದು. ಹೀಗೆ ಮಾನದಂಡಗಳು ಬದಲಾಗುತ್ತಿರುತ್ತವೆ. ಅದರೆ ದುಡಿಯದೇ ಬರುವ ಆದಾಯವು ಆರಾಮವಾಗಿ ಬದುಕುವಷ್ಟು ಪ್ರಮಾಣದಲ್ಲಿ ಇದ್ದರೆ, ಆ ವ್ಯಕ್ತಿ ಶ್ರೀಮಂತ ಎನಿಸುತ್ತಾನೆ.
ಒಂದು ಸಮೀಕ್ಷೆ ಪ್ರಕಾರ ಅಮೆರಿಕನ್ನರಿಗೆ 2.5 ಮಿಲಿಯನ್ ಡಾಲರ್ ಮೌಲ್ಯದ ನಿವ್ವಳ ಆಸ್ತಿ ಇದ್ದರೆ ಅದು ಶ್ರೀಮಂತಿಕೆಯಂತೆ. ಅಂದರೆ, ಸುಮಾರು 20 ಕೋಟಿ ರುಪಾಯಿ ಮೌಲ್ಯದ ಆಸ್ತಿ ಇರಬೇಕು. ಶೇ. 4ರಿಂದ 6ರಷ್ಟು ಹಣವನ್ನು ವಿತ್ಡ್ರಾ ಮಾಡುತ್ತಾ ಹೋದರೆ, ಆ ಹಣದಲ್ಲಿ ಆರಾಮವಾಗಿ ಬದುಕಬಹುದು ಎನ್ನುವುದು ಅಮೆರಿಕನ್ನರ ಅನಿಸಿಕೆ. ಈ ರೀತಿಯ ಪಾಸಿವ್ ಇನ್ಕಮ್ ಅಥವಾ ಕೆಲಸಕ್ಕೆ ಹೋಗದೇ ಸಿಗುವ ಆದಾಯದಿಂದ ಅಮೆರಿಕದ ಬಹುಭಾಗದಲ್ಲಿ ಎಲ್ಲಿ ಬೇಕಾದರೂ ಜೀವನ ನಡೆಸಬಹುದು ಎಂದನ್ನುತ್ತಾರಂತೆ ಅಮೆರಿಕನ್ನರು.
ಇಲ್ಲಿ ಆಸ್ತಿ ಎಂದರೆ ಷೇರು, ಸೇವಿಂಗ್ಸ್ ಹಣ ಇತ್ಯಾದಿ ಸೇರುತ್ತವೆ. ನಿವ್ವಳ ಆಸ್ತಿ ಎಂದರೆ ಸಾಲ ಇತ್ಯಾದಿ ಬಾಧ್ಯತೆಗಳನ್ನು ಕಳೆದು ಉಳಿಯುವ ಆಸ್ತಿಯಾಗಿರುತ್ತದೆ.
ಇದನ್ನೂ ಓದಿ: STP- ನಿಶ್ಚಿತವಾಗಿ ಸಂಪತ್ತು ಸೃಷ್ಟಿಸುವ ಏಕೈಕ ಮಾರ್ಗ ಈ ಎಸ್ಟಿಪಿ; ಏನಿದು ಫಾರ್ಮುಲಾ?
ಚಾರ್ಲ್ಸ್ ಶ್ವಾಬ್ ಮಾಡರ್ನ್ ವೆಲ್ತ್ ಸರ್ವೆ (Charles Schwab Modern Wealth Survey) ಇಂಥದ್ದೊಂದು ಸಮೀಕ್ಷೆ ನಡೆಸಿದೆ. ಕುತೂಹಲ ಎಂದರೆ ಶ್ರೀಮಂತಿಕೆ ಮಾನದಂಡದ ಬಗ್ಗೆ ಇರುವ ಅಭಿಪ್ರಾಯವು ವಿವಿಧ ತಲೆಮಾರುಗಳ ಜನರಲ್ಲಿ ವಿವಿಧ ರೀತಿ ಇದೆ. ಬೇಬಿ ಬೂಮರ್ಸ್ ಎಂದು ಕರೆಯಲಾಗುವ ತಲೆಮಾರಿನ ಜನರಿಗೆ ಶ್ರೀಮಂತ ಎನಿಸಿಕೊಳ್ಳಲು ಹೆಚ್ಚಿನ ಆಸ್ತಿವಂತರಾಗಿರಬೇಕಂತೆ. ಬೇಬಿ ಬೂಮರ್ಸ್ ಎಂದರೆ 60ರ ದಶಕಕ್ಕೆ ಮುಂಚೆ ಹುಟ್ಟಿದವರು.
ನಂತರ ತಲೆಮಾರಿನವರಲ್ಲಿ ಈ ಮಾನದಂಡ ಕ್ರಮೇಣವಾಗಿ ಇಳಿಮುಖವಾಗಿದೆ. ಜನರೇಶನ್ ಎಕ್ಸ್, ಮಿಲೇನಿಯಲ್ಸ್ ಮತ್ತು ಜನರೇಶನ್ ಝಡ್ ವರ್ಗದ ಜನರು ಶ್ರೀಮಂತಿಕೆಗೆ ಕಡಿಮೆ ನಿವ್ವಳ ಆಸ್ತಿ ಸಾಕೆಂದು ಪರಿಗಣಿಸುತ್ತಾರೆ. ಜನರೇಶನ್ ಎಕ್ಸ್ ಎಂದರೆ 60ರಿಂದ 70ರ ದಶಕದಲ್ಲಿ ಹುಟ್ಟಿದವರು. ಮಿಲ್ಲೇನಿಯಲ್ಸ್ ಎಂದರೆ 80 ಮತ್ತು 90ರ ದಶಕದಲ್ಲಿ ಹುಟ್ಟಿದವರು. ಜನರೇಶನ್ ಝಡ್ ಎಂದರೆ 2000ರ ನಂತರ ಹುಟ್ಟಿದವರು.
ಶ್ರೀಮಂತಿಕೆ ಇಲ್ಲದಿದ್ದರೂ ಪರವಾಗಿಲ್ಲ ಆರಾಮವಾಗಿ ಬದುಕಲು ಇಷ್ಟು ಆಸ್ತಿ ಇದ್ದರೆ ಸಾಕು ಎನ್ನುವ ಅಭಿಪ್ರಾಯವೂ ಈ ತಲೆಮಾರುಗಳ ಮಧ್ಯೆ ಭಿನ್ನ ಇದೆ. ಈ ಆರಾಮ ಆಸ್ತಿ 7.8 ಲಕ್ಷ ಡಾಲರ್ (ಸುಮಾರು ಆರೂವರೆ ಕೋಟಿ ರೂ) ಎಂದು ಬೇಬಿ ಬೂಮರ್ಸ್ ಭಾವಿಸುತ್ತಾರೆ. ಜನರೇಶನ್ ಎಕ್ಸ್ನವರಿಗೆ 8.73 ಲಕ್ಷ, ಮಿಲೇನಿಯಲ್ಗಳಿಗೆ 7.25 ಲಕ್ಷ, ಜನರೇಶನ್ ಝಡ್ನವರಿಗೆ 4.06 ಲಕ್ಷ ಡಾಲರ್ ಎಂಬುದು ಭಾವನೆ.
ಭಾರತದಲ್ಲಿ ಆರಾಮವಾಗಿ ರಿಟೈರ್ ಆಗಲು ಎಷ್ಟು ಹಣ ಬೇಕಾಗಬಹುದು? ಈ ಬಗ್ಗೆ ಯಾರಾದರೂ ಸಮೀಕ್ಷೆ ಮಾಡಬಹುದೇನೋ…
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ