ಭವಿಷ್ಯದ ಬಗ್ಗೆ ಬಹಳಷ್ಟು ಜನರು ಯೋಚಿಸುವುದೇ ಇಲ್ಲ. ಮನೆ ಕಟ್ಟಿ, ಮಕ್ಕಳ ಶಿಕ್ಷಣ ಪೂರ್ಣಗೊಳಿಸಿದರೆ ಸಾಕು ಎಂಬ ಆಲೋಚನೆ ಇರುತ್ತದೆ. ಇದು ಮಾಡಲೂ ಭವಿಷ್ಯದ ಪ್ಲಾನಿಂಗ್ ಮುಖ್ಯ. ಅಚ್ಚರಿ ಎಂದರೆ ಹೆಚ್ಚಿನ ಜನರು ಭವಿಷ್ಯದ ವೆಚ್ಚವನ್ನು ಇವತ್ತಿನ ಹಣದ ಮೌಲ್ಯದಿಂದಲೇ ಅಂದಾಜಿಸುವುದುಂಟು. ಅಂದರೆ, ಇವತ್ತು ನಿಮ್ಮ ತಿಂಗಳ ಜೀವನ ವೆಚ್ಚ 30,000 ರೂ ಇದ್ದರೆ, ಮುಂದೆ ಹತ್ತು ವರ್ಷದ ಬಳಿಕವೂ ಹೆಚ್ಚೂಕಡಿಮೆ ಇಷ್ಟೇ ಇರಬಹುದು ಎನ್ನುವ ವಿಶ್ವಾಸದಲ್ಲಿ ಲೆಕ್ಕಾಚಾರ ಹಾಕಿರುತ್ತೇವೆ. ವಾಸ್ತವದಲ್ಲಿ ಪರಿಸ್ಥಿತಿ ಇದಕ್ಕೆ ಭಿನ್ನವಾಗಿರುತ್ತದೆ.
ಹತ್ತು ವರ್ಷದ ಹಿಂದೆ ಮನೆ ಬಾಡಿಗೆ ಎಷ್ಟು ಇತ್ತು, ತಿಂಗಳ ಸಾಮಾನು ಎಷ್ಟು ಹಣಕ್ಕೆ ಸಾಕಾಗುತ್ತಿತ್ತು, ಪೆಟ್ರೋಲ್ ವೆಚ್ಚ ಎಷ್ಟಿತ್ತು, ಇವೆಲ್ಲವೂ ಈಗ ಎಷ್ಟಿದೆ ಎಂದು ಯೋಚಿಸಿ ನೋಡಿ. ಜೀವನ ವೆಚ್ಚ ಹತ್ತು ವರ್ಷದಲ್ಲಿ ಗಣನೀಯವಾಗಿ ಹೆಚ್ಚಿರುತ್ತದೆ. ಈ ಏರಿಕೆಯನ್ನೇ ಹಣದುಬ್ಬರ ಎನ್ನುವುದು. ಹಣದುಬ್ಬರ ಯಾವುದೋ ಆರ್ಥಿಕ ದರ ಎಂದು ಉಪೇಕ್ಷಿಸುವಂತಿಲ್ಲ. ಅದು ಬೆಲೆ ಏರಿಕೆಯ ದರ. ಈ ಹಣದುಬ್ಬರವನ್ನೂ ಸಾಮಾನ್ಯೀಕರಿಸಲು ಆಗುವುದಿಲ್ಲ. ಒಂದೊಂದು ವಸ್ತು, ಸೇವೆಯ ಮೌಲ್ಯ ಏರಿಕೆ ಬೇರೆಯೇ ವೇಗ ಹೊಂದಿರಬಹುದು.
ಇದನ್ನೂ ಓದಿ: ಎನ್ಪಿಎಸ್ ಸ್ಕೀಮ್ ಮೂಲಕ ತಿಂಗಳಿಗೆ 1 ಲಕ್ಷ ರೂ ಪಿಂಚಣಿ ಪಡೆಯುವುದು ಹೇಗೆ?
ನೀವು ಮದುವೆಯಾಗಿದ್ದರೆ ಮಗು ಅಥವಾ ಮಕ್ಕಳ ಪಾಲನೆ ಖರ್ಚು ಇರುತ್ತದೆ. ಅವರ ಓದು ಇತ್ಯಾದಿ ಭವಿಷ್ಯದ ವೆಚ್ಚವನ್ನು ಗಮನದಲ್ಲಿರಿಸಿಕೊಳ್ಳಬೇಕು. ಮನೆ ಮಾಡುವುದಿದ್ದರೆ ಭವಿಷ್ಯದಲ್ಲಿ ಅದಕ್ಕೆ ವೆಚ್ಚ ಎಷ್ಟು ಎಂದು ಅಂದಾಜಿಸಬೇಕು. ಮನೆ ಕಟ್ಟಲು ಇವತ್ತಿದ್ದ ಖರ್ಚು ಹತ್ತು ವರ್ಷದ ಬಳಿಕ ಸಾಕಾಗುವುದಿಲ್ಲ. ಉನ್ನತ ಶಿಕ್ಷಣದ ವೆಚ್ಚವೂ ಅಧಿಕ ಆಗುತ್ತದೆ. ಮನೆ ಬಾಡಿಗೆ ವರ್ಷಕ್ಕೆ ಶೇ. 5ರಿಂದ 8ರಷ್ಟು ಹೆಚ್ಚಬಹುದು. ಶಿಕ್ಷಣ ವೆಚ್ಚ ವರ್ಷಕ್ಕೆ ಶೇ. 10ರಷ್ಟು ಹೆಚ್ಚುತ್ತಾ ಹೋಗಬಹುದು. ಇವೆಲ್ಲಾ ಅಂಶಗಳನ್ನು ಪರಿಗಣಿಸಿ ಭವಿಷ್ಯದಲ್ಲಿ ಎಷ್ಟು ಹಣ ಬೇಕಾಗಬಹುದು ಎಂದು ಸ್ಥೂಲ ಲೆಕ್ಕಾಚಾರ ಹಾಕುವುದು ಉತ್ತಮ. ಅದಕ್ಕೆ ಒಂದು ಸೂತ್ರ ಈ ಕೆಳಕಂಡಂತಿದೆ.
ಎಫ್ = ಪಿ x (1 + ಆರ್/100)^ಎನ್
ಇಲ್ಲಿ ಎಫ್ ಎಂದರೆ ಫ್ಯೂಚರ್ ವ್ಯಾಲ್ಯೂ, ಅಂದರೆ ಭವಿಷ್ಯದ ಮೌಲ್ಯ
ಪಿ ಎಂದರೆ ಪ್ರೆಸೆಂಟ್ ವ್ಯಾಲ್ಯೂ, ಅಂದರೆ ಈಗಿನ ಮೌಲ್ಯ
ಆರ್ ಎಂದರೆ ವಾರ್ಷಿಕ ಹಣದುಬ್ಬರ
ಎನ್ ಎಂದರೆ ನಿಮ್ಮ ಗುರಿಗೆ ಬಾಕಿ ಇರುವ ವರ್ಷಗಳು
ಉದಾಹರಣೆಯಾಗಿ ಶಿಕ್ಷಣ ವೆಚ್ಚವನ್ನು ಪರಿಗಣಿಸಬಹುದು. ಇವತ್ತು ಎಂಜಿನಿಯರಿಂಗ್ ಶಿಕ್ಷಣ ಪಡೆಯಲು 10 ಲಕ್ಷ ರೂ ವೆಚ್ಚವಾಗುತ್ತದೆ ಎಂದಿಟ್ಟುಕೊಳ್ಳಿ. ಈ ವೆಚ್ಚ ವರ್ಷಕ್ಕೆ ಶೇ. 10ರಷ್ಟು ಹೆಚ್ಚಾಗುತ್ತಾ ಹೋಗಬಹುದು. ಈ ವೇಗದಲ್ಲಿ ಹೋದರೆ 15 ವರ್ಷದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಎಷ್ಟಾಗಬಹುದು? ಮೇಲಿನ ಸೂತ್ರ ಅಳವಡಿಸಿ…
ಎಫ್ = ಪಿ x (1 + ಆರ್/100)^ಎನ್
ಎಫ್ = 10,00,000 x (1 + 10/100)^15
ಇಲ್ಲಿ ಉತ್ತರ ಸುಮಾರು 44 ಲಕ್ಷ ರೂ ಬರುತ್ತದೆ. ಅಂದರೆ ಇವತ್ತು ಶಿಕ್ಷಣಕ್ಕೆ ಆಗುವ ವೆಚ್ಚ ಹದಿನೈದು ವರ್ಷದ ಬಳಿಕ ನಾಲ್ಕು ಪಟ್ಟು ಹೆಚ್ಚಾಗಬಹುದು. ನೀವು 10ರಿಂದ 15 ವರ್ಷದಲ್ಲಿ ಶಿಕ್ಷಣಕ್ಕಾಗಿಯೇ ಅಷ್ಟೊಂದು ಪ್ರಮಾಣದ ಹಣವನ್ನು ಹೊಂದಿಸಬೇಕಾಗುತ್ತದೆ.
ಇದನ್ನೂ ಓದಿ: ಆಭರಣಕ್ಕೆ ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಲೆಕ್ಕಾಚಾರ ಹೇಗಿರುತ್ತೆ? ಒಡವೆ ಖರೀದಿಸುವ ಮುನ್ನ ಈ ಸಂಗತಿ ತಿಳಿದಿರಿ
ಇಂಥ ಅಂಶಗಳನ್ನು ಪರಿಗಣಿಸಿ ನೀವು ಹಣಕಾಸು ಯೋಜನೆ ಅಥವಾ ಫೈನಾನ್ಷಿಯಲ್ ಪ್ಲಾನಿಂಗ್ ಮಾಡಬೇಕಾಗುತ್ತದೆ. ನಿವೃತ್ತಿ ನಂತರ ಜೀವನಕ್ಕೂ ಇದೇ ರೀತಿ ವಾಸ್ತುವ ರೀತಿಯಲ್ಲಿ ಪ್ಲಾನಿಂಗ್ ನಡೆಸುವುದು ಅವಶ್ಯಕ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ