Mutual Funds: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳ ನಡುವೆ ಏನು ವ್ಯತ್ಯಾಸ?

Difference between Multi Cap Funds, Flexi Cap Funds and Multi Asset Funds: ಮ್ಯೂಚುವಲ್ ಫಂಡ್​ಗಳಲ್ಲಿ ವೈವಿಧ್ಯತೆ ಇದೆ. ವಿವಿಧ ರೀತಿಯ ಫಂಡ್​ಗಳಲ್ಲಿ ಮಲ್ಟಿ ಕ್ಯಾಪ್, ಫ್ಲೆಕ್ಸಿ ಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳೂ ಇವೆ. ಮಲ್ಟಿಕ್ಯಾಪ್ ಫಂಡ್​ಗಳು ಎಲ್ಲಾ ರೀತಿಯ ಸ್ಟಾಕುಗಳಿಗೆ ಸಮಾನ ಆದ್ಯತೆ ಕೊಡುತ್ತವೆ. ಫ್ಲೆಕ್ಸಿ ಕ್ಯಾಪ್ ಫಂಡ್​ಗಳು ಸೂಕ್ತವೆನಿಸುವ ಸ್ಟಾಕ್​ಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಹೊಂದಿವೆ. ಮಲ್ಟಿ ಅಸೆಟ್ ಫಂಡ್​ಗಳು ಬೇರೆ ಬೇರೆ ರೀತಿಯ ಸ್ವತ್ತುಗಳ ಮೇಲೆ ಹೂಡಿಕೆ ಮಾಡಲು ಸ್ವತಂತ್ರವಿರುತ್ತವೆ.

Mutual Funds: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳ ನಡುವೆ ಏನು ವ್ಯತ್ಯಾಸ?
ಮ್ಯೂಚುವಲ್ ಫಂಡ್

Updated on: Jan 20, 2026 | 5:19 PM

ನವದೆಹಲಿ, ಜನವರಿ 20: ಷೇರು ಮಾರುಕಟ್ಟೆ (Stock Market) ಕಳೆದ ಒಂದು ವರ್ಷದಿಂದ ಸಿಕ್ಕಾಪಟ್ಟೆ ಅಲುಗಾಡುತ್ತಿದೆ. ಜಾಗತಿಕ ವಿದ್ಯಮಾನಗಳು ಬಜಾರನ್ನು ಕಂಗೆಡಿಸಿವೆ. ಇದೇ ವೇಳೆ ಗೊಂದಲಕ್ಕೊಳಗಾಗಿರುವ ಹೂಡಿಕೆದಾರರು, ಸುರಕ್ಷತೆಗೆ ಬೇರೆ ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಮಲ್ಟಿಕ್ಯಾಪ್ ಫಂಡ್​ಗಳು, ಫ್ಲೆಕ್ಸಿಕ್ಯಾಪ್ ಫಂಡ್​ಗಳು ಹಾಗೂ ಮಲ್ಟಿ ಅಸೆಟ್ ಫಂಡ್​ಗಳ ಜನಪ್ರಿಯತೆ ಹೆಚ್ಚುತ್ತಿದೆ. ಈ ಮೂರೂ ಫಂಡ್​ಗಳು ಮ್ಯೂಚುವಲ್ ಫಂಡ್​ನ (Mutual Funds) ಪ್ರಾಕಾರಗಳೇ ಆಗಿವೆ. ಆದರೆ, ಯಾವುದರಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂಬುದು ವ್ಯತ್ಯಾಸ ಇರುತ್ತದೆ.

ಮಲ್ಟಿಕ್ಯಾಪ್ ಫಂಡ್ ಎಂದರೇನು?

ಮಲ್ಟಿ ಕ್ಯಾಪ್ ಫಂಡ್ ಎಂದರೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಈ ಮೂರು ವಿಭಾಗಗಳಲ್ಲಿ ಕನಿಷ್ಠ ಶೇ. 25ರಷ್ಟು ಹೂಡಿಕೆ ಮಾಡಬೇಕು. ಅಂದರೆ ಮಲ್ಟಿಕ್ಯಾಪ್ ಮ್ಯೂಚುವಲ್ ಫಂಡ್​ಗಳು ಈಕ್ವಿಟಿಯಲ್ಲಿ ಕನಿಷ್ಠ 75ರಷ್ಟಾದರೂ ಹೂಡಿಕೆ ಮಾಡಬೇಕು.

ಇಲ್ಲಿ ಲಾರ್ಜ್ ಕ್ಯಾಪ್ ಎಂದರೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಷೇರುಗಳಲ್ಲಿ ಟಾಪ್-100 ಷೇರುಗಳನ್ನು ಲಾರ್ಜ್ ಕ್ಯಾಪ್ ಎನ್ನಲಾಗುತ್ತದೆ. 101ರಿಂದ 250ನೇ ಸ್ಥಾನದಲ್ಲಿರುವ ಷೇರುಗಳನ್ನು ಮಿಡ್​ಕ್ಯಾಪ್ ಎನ್ನಲಾಗುತ್ತದೆ. ಅದಕ್ಕಿಂತ ಕೆಳಗಿರುವಂಥವು ಸ್ಮಾಲ್ ಕ್ಯಾಪ್ ಎನಿಸುತ್ತವೆ. ಇಲ್ಲಿ ಮಲ್ಟಿಕ್ಯಾಪ್ ಫಂಡ್​ಗಳು ಲಾರ್ಜ್ ಕ್ಯಾಪ್ ಸ್ಟಾಕ್​ಗಳಲ್ಲಿ ಶೇ. 25ರಷ್ಟಾದರೂ ಹೂಡಿಕೆ ಮಾಡಬೇಕು. ಮಿಡ್​ಕ್ಯಾಪ್ ಹಾಗೂ ಸ್ಮಾಲ್​ಕ್ಯಾಪ್ ಸ್ಟಾಕ್​ಗಳ ಮೇಲೂ ತಲಾ ಶೇ. 25ರಷ್ಟಾದರೂ ಹೂಡಿಕೆ ಮಾಡಬೇಕು.

ಇದನ್ನೂ ಓದಿ: 1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ

ಫ್ಲೆಕ್ಸಿ ಕ್ಯಾಪ್ ಫಂಡ್​ಗಳೆಂದರೆ?

ಇಲ್ಲಿ ಮ್ಯೂಚುವಲ್ ಫಂಡ್​ಗಳು ಲಾರ್ಜ್ ಇರಲಿ, ಮಿಡ್ ಇರಲಿ, ಸ್ಮಾಲ್ ಇರಲಿ ಯಾವುದೇ ಸ್ಟಾಕ್​ನಲ್ಲಿ ಹೂಡಿಕೆ ಮಾಡಲು ಸ್ವತಂತ್ರವಾಗಿರುತ್ತವೆ. ಆದರೆ, ಈಕ್ವಿಟಿಗಳಲ್ಲಿ ಒಟ್ಟಾರೆ ಶೇ. 65ರಷ್ಟಾದರೂ ಹೂಡಿಕೆ ಮಾಡಬೇಕು. ಮಲ್ಟಿಕ್ಯಾಪ್​ಗೆ ಹೋಲಿಸಿದರೆ ಫ್ಲೆಕ್ಸಿ ಕ್ಯಾಪ್ ಫಂಡ್​ಗಳಲ್ಲಿ ಮ್ಯಾನೇಜರ್​ಗಳಿಗೆ ಹೆಚ್ಚು ಸ್ವಾತಂತ್ರ್ಯ ಇರುತ್ತದೆ.

ಮಲ್ಟಿ ಅಸೆಟ್ ಫಂಡ್​ಗಳೆಂದರೆ ಏನು?

ಮಲ್ಟಿ ಅಸೆಟ್ ಫಂಡ್​ಗಳು ಈಕ್ವಿಟಿಯೂ ಸೇರಿದಂತೆ ಬೇರೆ ಬೇರೆ ಅಸೆಟ್ ಕ್ಲಾಸ್​ಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿ, ಡೆಟ್, ಚಿನ್ನ, REITs (ರಿಯಲ್ ಎಸ್ಟೇಟ್ ಇನ್ವೆಸ್ಟ್​ಮೆಂಟ್ ಟ್ರಸ್ಟ್), InvITs (ಇನ್​ಫ್ರಾಸ್ಟ್ರಕ್ಚರ್ ಇನ್ವೆಸ್ಟ್​ಮೆಂಟ್ ಟ್ರಸ್ಟ್), ಅಂತಾರಾಷ್ಟ್ರೀಯ ಸ್ವತ್ತುಗಳು ಹೀಗೆ ಬೇರೆ ಬೇರೆ ರೀತಿಯ ಸ್ವತ್ತುಗಳ ಮೇಲೆ ಹೂಡಿಕೆ ಮಾಡಬಹುದು. ಕನಿಷ್ಠ ಮೂರು ಸ್ವತ್ತುಗಳಲ್ಲಿ ಒಂದೊಂದರಲ್ಲೂ ಕನಿಷ್ಠ ಶೇ. 10ರಷ್ಟಾದರೂ ಹೂಡಿಕೆ ಮಾಡಬೇಕು ಎನ್ನುವ ನಿಯಮ ಇರುತ್ತದೆ.

ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ

ಉದಾಹರಣೆಗೆ, ಈಕ್ವಿಟಿಗಳಲ್ಲಿ ಕನಿಷ್ಠ ಶೇ. 10, ಚಿನ್ನದ ಮೇಲೆ ಶೇ. 10, ಬಾಂಡ್​ಗಳ ಮೇಲೆ ಶೇ. 10 ಹೀಗೆ ಹೂಡಿಕೆಗಳನ್ನು ಹಂಚಬಹುದು. ಅನಿಶ್ಚಿತ ಸಂದರ್ಭಗಳಲ್ಲಿ ಸುರಕ್ಷಿತ ಹೂಡಿಕೆ ಬಯಸುವವರಿಗೆ ಮಲ್ಟಿ ಅಸೆಟ್ ಫಂಡ್ ಬಹಳ ಅನುಕೂಲ ಕೊಡುತ್ತದೆ.

ಫ್ಲೆಕ್ಸಿಕ್ಯಾಪ್ ಫಂಡ್​ಗಳು ಹಾಗೂ ಮಲ್ಟಿ ಅಸೆಟ್ ಫಂಡ್​ಗಳು ಬಹಳ ಜನಪ್ರಿಯತೆ ಪಡೆಯುತ್ತಿವೆ. ಎರಡೂ ರೀತಿಯ ಫಂಡ್​ಗಳು ಪ್ರಸಕ್ತ ಸಂದರ್ಭಗಳಿಗೆ ಹೇಳಿ ಮಾಡಿಸಿದ್ದಂತಿವೆ ಎನ್ನುವುದು ತಜ್ಞರ ಅನಿಸಿಕೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ