ನಮ್ಮ ಉಳಿತಾಯ ಹಣವನ್ನು ಹೂಡಿಕೆ ಮಾಡಲು ಇರುವ ಹಲವು ಆಯ್ಕೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಪ್ಲಾನ್ಗಳೂ (Fixed Deposits) ಇವೆ. ಅತಿಹೆಚ್ಚಿನ ಜನರ ಹೂಡಿಕೆ ಆಯ್ಕೆ ಎಫ್ಡಿಯೇ ಆಗಿದೆ. ಬ್ಯಾಂಕುಗಳ ಅತಿಹೆಚ್ಚು ಆದಾಯ ಮೂಲ ಇವೆ ನಿಶ್ಚಿತ ಠೇವಣಿಗಳೇ ಆಗಿವೆ. ಸ್ಕೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕು ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳನ್ನು ಇಡಬಹುದು. ಹಾಗೆಯೇ, ಕೆಲ ಆಯ್ದ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ಎಫ್ಡಿ ಯೋಜನೆಗಳಿಗೆ ಆರ್ಬಿಐ ಅವಕಾಶ ಕೊಟ್ಟಿದೆ. ಇಂಥ ಎಫ್ಡಿಯನ್ನು ಕಾರ್ಪೊರೇಟ್ ಎಫ್ಡಿ ಅಥವಾ ಕಂಪನಿ ಎಫ್ಡಿ (Corporate or Company FD) ಎನ್ನುವುದುಂಟು. ಆದರೆ, ಬ್ಯಾಂಕೆಂದರೆ ಜನರಿಗೆ ವಿಶೇಷ ನಂಬಿಕೆ ಉಂಟು. ಅದೇ ಕಾರ್ಪೊರೇಟ್ ಸಂಸ್ಥೆಯಲ್ಲಿ ಹಣ ಇರಿಸುವುದು ಕೆಲ ಮಂದಿಗೆ ಹಿಂಜರಿಕೆ ಆಗಬಹುದು. ಕಂಪನಿ ಎಫ್ಡಿ ಬಗ್ಗೆ ಅಷ್ಟು ಭಯದ ಅಗತ್ಯ ಇಲ್ಲ. ಆದರೆ, ಹೂಡಿಕೆ ಮಾಡುವ ಮುನ್ನ ಕೆಲವೊಂದಿಷ್ಟು ಸಂಗತಿಗಳನ್ನು ಗಮನದಲ್ಲಿರಿಸಿಕೊಂಡಿರುವುದು ಒಳ್ಳೆಯದು.
ನೀವು ಕಾರ್ಪೊರೇಟ್ ಎಫ್ಡಿ ಅಥವಾ ಕಂಪನಿ ಎಫ್ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ಆ ಕಂಪನಿಯ ಹಣಕಾಸು ಸ್ಥಿತಿಗತಿ ಹೇಗಿದೆ, ಗ್ರಾಹಕರೊಂದಿಗಿನ ಅದರ ವ್ಯವಹಾರ ಹೇಗಿದೆ ಎಂಬಿತ್ಯಾದಿ ಸಾಧ್ಯವಾದರೆ ತಿಳಿದಿರಿ. ಅದು ಸಾಧ್ಯವಾಗದೇ ಹೋದರೆ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಆ ಕಂಪನಿಗೆ ಎಷ್ಟು ಮೌಲ್ಯ ಅಥವಾ ರೇಟಿಂಗ್ ಕೊಟ್ಟಿದ್ದಾರೆ ಎಂಬುದನ್ನಾದರೂ ತಿಳಿದಿರಿ. ಹೆಚ್ಚು ರೇಟಿಂಗ್ ಇದ್ದರೆ ಆ ಕಂಪನಿ ಹೆಚ್ಚು ವಿಶ್ವಾಸಾರ್ಹ ಆಗಿರುತ್ತದೆ.
ವಿವಿಧ ಕಂಪನಿಗಳು ನಿಶ್ಚಿತ ಠೇವಣಿಗೆ ಎಷ್ಟು ಬಡ್ಡಿ ಆಫರ್ ಮಾಡುತ್ತವೆ ಎಂದು ತುಲನೆ ಮಾಡಿರಿ. ಉತ್ತಮ ರೇಟಿಂಗ್ ಹೊಂದಿರುವ ಕಂಪನಿಗಳ ಪೈಕಿ ಯಾವುದು ಹೆಚ್ಚು ಬಡ್ಡಿ ಆಫರ್ ಮಾಡುತ್ತದೋ ಆ ಕಂಪನಿಯ ನಿಶ್ಚಿತ ಠೇವಣಿಯನ್ನು ಆರಿಸಿಕೊಳ್ಳಿ.
ಹಾಗೆಯೇ, ತುರ್ತು ಅಗತ್ಯಬಿದ್ದು ಅವಧಿಗೆ ಮುನ್ನ ಠೇವಣಿಯನ್ನು ಹಿಂಪಡೆದುಕೊಂಡರೆ ಎಷ್ಟು ದಂಡ ವಿಧಿಸಲಾಗುತ್ತದೆ, ಠೇವಣಿ ಇದ್ದ ಅಷ್ಟೂ ಅವಧಿಗೆ ಎಷ್ಟು ಬಡ್ಡಿ ಕೊಡಲಾಗುತ್ತದೆ ಎಂಬಿತ್ಯಾದಿ ಅಂಶಗಳನ್ನೂ ತುಲನೆ ಮಾಡಿ ನೋಡಿ.
ಇದನ್ನೂ ಓದಿ: LIC Saral Pension: ಲಕ್ಷ ರೂ ಆದಾಯ ಬರುವಂತಾಗಬೇಕಾ? ಇಲ್ಲಿದೆ ಎಲ್ಐಸಿ ಸರಳ್ ಪೆನ್ಷನ್ ಪ್ಲಾನ್
ನಿಶ್ಚಿತ ಠೇವಣಿಗಳಿಂದ ನಿಮಗೆ ಸಿಗುವ ಬಡ್ಡಿ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಎಫ್ಡಿಯಿಂದ ಬರುವ ಲಾಭ ನೀವು ಲೆಕ್ಕ ಹಾಕಿದಷ್ಟಿರುವುದಿಲ್ಲ. ನಿಮ್ಮ ಆದಾಯ ತೆರಿಗೆ ಯಾವ ಸ್ಲ್ಯಾಬ್ನಲ್ಲಿ ಇದೆ ಎನ್ನುವುದರ ಮೇಲೆ ಎಫ್ಡಿ ಬಡ್ಡಿ ಹಣಕ್ಕೆ ತೆರಿಗೆ ಇರುತ್ತದೆ. ಉದಾಹರಣೆಗೆ, ನಿಮ್ಮ ಆದಾಯವು 10,00,000 ರೂ ಆಗಿದ್ದರೆ ನೀವು ಶೇ. 30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಎಫ್ಡಿಯಿಂದ ನಿಮಗೆ ಒಂದು ವರ್ಷದಲ್ಲಿ ಸಿಗುವ ಬಡ್ಡಿ ಹಣ 1 ಲಕ್ಷ ರೂ ಆಗಿದ್ದರೆ 30,000 ರೂ ಮತ್ತು ಶೇ. 0.4 ಸೆಸ್ ವಿಧಿಸಲಾಗುತ್ತದೆ. ಅಂದರೆ ಸುಮಾರು 31,000 ರೂ ಹಣವನ್ನು ಕಡಿತ ಮಾಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ