ನಿಮಗೆ ಸಂಪಾದನೆ ಎಷ್ಟೇ ಇರಲಿ, ಹಣ ನಿರ್ವಹಣೆಗೆ ನೆನಪಿರಲಿ 3 ಬಕೆಟ್ ಫಾರ್ಮುಲಾ

|

Updated on: Sep 03, 2023 | 4:50 PM

3 Bucket Formula: ನಿಮ್ಮ ತಿಂಗಳ ಸಂಬಳದಲ್ಲಿ ಶೇ. 20ರಿಂದ 30ರಷ್ಟಾದರೂ ಹಣವನ್ನು ಉಳಿಸಬೇಕು. ಹೀಗೆ ಉಳಿದ ಹಣವನ್ನು ತುರ್ತು ಅಗತ್ಯ, ಕಿರು ಅವಧಿ ಮತ್ತು ದೀರ್ಘ ಅವಧಿ ಹೀಗೆ ಮೂರು ರೀತಿಯ ಉದ್ದೇಶಗಳಿಗೆ (ಬಕೆಟ್) ಹಂಚಿಕೆ ಮಾಡಬೇಕು. ದೀರ್ಘಾವಧಿಯ ವಿಭಾಗದ ಹಣವನ್ನು ಈಕ್ವಿಟಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬೇಕು. ಮೊದಲೆರಡು ಬಕೆಟ್​ಗಳ ಹಣವನ್ನು ಆರ್​​ಡಿ, ಎಫ್​ಡಿ, ಪಿಪಿಎಫ್ ಇತ್ಯಾದಿ ಕಡೆ ಹೂಡಿಕೆ ಮಾಡಬಹುದು.

ನಿಮಗೆ ಸಂಪಾದನೆ ಎಷ್ಟೇ ಇರಲಿ, ಹಣ ನಿರ್ವಹಣೆಗೆ ನೆನಪಿರಲಿ 3 ಬಕೆಟ್ ಫಾರ್ಮುಲಾ
ಹಣದ ಉಳಿತಾಯ
Follow us on

ಹಣದ ಸಂಪಾದನೆ (Earning Money) ಮಾಡುವುದಷ್ಟೇ ಮುಖ್ಯವಾದುದು ಹಣದ ಉಳಿತಾಯ. ನಮ್ಮ ಜೀವನ ಸುಗಮವಾಗಬೇಕಾದರೆ ಹಣದ ಸಂಪಾದನೆ ಬೇಕು, ಜೊತೆಗೆ ಸಂಪಾದಿಸಿದ ಹಣ ಉಳಿದು ಬೆಳೆಯಬೇಕು. ಇವುಗಳ ಮಧ್ಯೆ ನಮ್ಮ ಅತ್ಯಗತ್ಯ ಭೋಗಗಳೂ ಪೂರೈಕೆಯಾಗಬೇಕು. ಆ ರೀತಿ ಹಣ ನಿರ್ವಹಿಸುವ ಜಾಣ್ಮೆ ತಿಳಿದಿರುವವನ ಜೀವನ ಬಹಳ ಸುಗಮ. ನೀವು ಸಂಪಾದನೆಯ ಆರಂಭದಿಂದಲೂ ಹಣ ನಿರ್ವಹಣೆಯ ಮಹತ್ವ ಅರಿವಿದ್ದಿರಬೇಕು. ಹೆಚ್ಚಿನ ಹಣಕಾಸು ಸಲಹೆಗಾರರು ಹೇಳುವ ಪ್ರಕಾರ ನಿಮ್ಮ ಸಂಪಾದನೆ ಎಷ್ಟೇ ಇರಲಿ, ಶೇ. 30ರಷ್ಟು ಹಣವನ್ನು ಉಳಿಸಬೇಕು. ಅಂದರೆ ನಿಮ್ಮ ಎಲ್ಲಾ ತಿಂಗಳ ಖರ್ಚು ವೆಚ್ಚಗಳನ್ನು ಕಳೆದು ಶೇ. 30ರಷ್ಟು ಹಣ ಉಳಿತಾಯವಾಗಬೇಕು. ಇಷ್ಟು ಆಗದಿದ್ದರೆ ಕನಿಷ್ಠ 20ರಷ್ಟಾದರೂ ಉಳಿತಾಯ ಹಣ ಇರಬೇಕು. ಇದು ಬಹಳ ಮುಖ್ಯ.

ನಿಮಗೆ ಶೇ. 20ರಷ್ಟೂ ಹಣ ಉಳಿತಾಯ ಸಾಧ್ಯ ಆಗುತ್ತಿಲ್ಲ ಎಂದಲ್ಲಿ ಮೊದಲು ನಿಮ್ಮ ದೈನಂದಿನ ಖರ್ಚುವೆಚ್ಚಗಳ ಪಟ್ಟಿ ಪ್ರತೀ ದಿನ ಮಾಡಿಟ್ಟುಕೊಳ್ಳಿ. ತಿಂಗಳಲ್ಲಿ ಎಲ್ಲವನ್ನೂ ಕ್ರೋಢೀಕರಿಸಿ ಮಾಸ್ಟರ್ ಪಟ್ಟಿ ಮಾಡಿಕೊಳ್ಳಿ. ಯಾವ್ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂಬ ಚಿತ್ರಣ ನಿಮಗೆ ಸಿಗುತ್ತದೆ. ಅನಗತ್ಯ ಖರ್ಚುಗಳನ್ನು ಗುರುತಿಸಿ ಅದನ್ನು ಆದಷ್ಟೂ ತಪ್ಪಿಸಿ. ಈ ಮೂಲಕ ನೀವು ನಿಮ್ಮ ಸಂಪಾದನೆಯ ಶೇ. 30ರಷ್ಟು ಹಣ ಉಳಿಸಲು ಪ್ರಯತ್ನಿಸಿ.

ಇಷ್ಟಾದ ಬಳಿಕ ನೀವು 3 ಬಕೆಟ್ ಫಾರ್ಮುಲಾ ಬಳಸಿ. ಇದು ನಿಮ್ಮ ಉಳಿತಾಯ ಹಣವನ್ನು ಹೂಡಿಕೆಗೆ ಯಾವ ರೀತಿ ಉಪಯೋಗಿಸಬೇಕು ಎಂಬುದಕ್ಕೆ ದಾರಿದೀಪವಾಗಿರುತ್ತದೆ. ನಿಮ್ಮ ಉಳಿತಾಯ ಹಣವು ಈ 3 ಬಕೆಟ್​ಗಳಲ್ಲಿ ಹಂಚಿಕೆಯಾಗಬೇಕು.

ಇದನ್ನೂ ಓದಿ: ಗಳಿಸಿದ ಹಣ ನಿಲ್ಲುತ್ತಿಲ್ಲವಾ? ನಾವು ಮಾಡುವ ಪ್ರಮುಖ ಹಣಕಾಸು ತಪ್ಪುಗಳೇನು? ಇದಕ್ಕೆ ಪರಿಹಾರವೇನು? ಇಲ್ಲಿದೆ ಅಮೂಲ್ಯ ಮಾಹಿತಿ

ಉಳಿತಾಯ ಹಣದ ಬಕೆಟ್ 1: ಸುರಕ್ಷತೆ

ಈ ಮೊದಲ ಬಕೆಟ್ ನಿಮ್ಮ ತುರ್ತು ನಿಧಿಗೆಂದು ಇರುವುದು. ನಿಮ್ಮ ತಿಂಗಳ ಸಂಬಳ ಅಥವಾ ಆದಾಯದ ಶೇ. 5ರಷ್ಟು ಹಣವು ಈ ಮೊದಲ ಬಕೆಟ್​ಗೆ ಸಲ್ಲಬೇಕು. ತಿಂಗಳಿಗೆ ನಿಮಗೆ ಸಂಬಳವಾಗಿ 40,000 ರೂ ನಿಮ್ಮ ಕೈಗೆ ಬರುತ್ತಿದ್ದರೆ 2,000 ರೂ ಹಣವು ಮೊದಲ ಬಕೆಟ್​ಗೆ ಹೋಗಬೇಕು.

ನಿಮ್ಮ ಮಾಸಿಕ ಖರ್ಚಿನ ಆರು ಪಟ್ಟು ಹಣವು ಈ ಬಕೆಟ್​ನಲ್ಲಿ ಶೇಖರಣೆ ಆಗುವವರೆಗೂ ಹಣ ಇದಕ್ಕೆ ಹಾಕುತ್ತಾ ಹೋಗಿ. ಆ ಬಳಿಕ ಅದು ದೀರ್ಘಾವಧಿಯ ಮೂರನೇ ಬಕೆಟ್​ಗೆ ಸೇರಬೇಕು. ಇದರ ಹಣವನ್ನು ಆರ್​ಡಿಯಲ್ಲಿ ಹೂಡಬಹುದು. ನಿಮಗೆ ತುರ್ತಾಗಿ ಹಣ ಬೇಕೆಂದರೆ ಸುಲಭವಾಗಿ ಪಡೆಯಬಹುದು.

ಉಳಿತಾಯ ಹಣದ ಬಕೆಟ್ 2: ಕಿರು ಅವಧಿ ಗುರಿ

ಯಾವುದನ್ನಾದರೂ ಕೊಳ್ಳಬೇಕೆಂದುಕೊಂಡಿರುವುದೋ ಅಥವಾ ಇನ್ಯಾವುದಾದರೂ ಕಿರು ಮತ್ತು ಮಧ್ಯಮ ಅವಧಿಯ ಗುರಿಗೆ ಬಳಸುವ ಬಕೆಟ್. ಇದಕ್ಕೂ ಕೂಡ ಸಂಬಳದ ಶೇ. 5ರಷ್ಟು ಹಣವನ್ನು ಎತ್ತಿ ಇಡಿ. ಹೆಚ್ಚಿನ ಅಗತ್ಯ ಇದ್ದರೆ ಇನ್ನೂ ಹೆಚ್ಚಿನ ಮೊತ್ತವನ್ನು ಎತ್ತಿಡಬಹುದು.

ಇದನ್ನೂ ಓದಿ: ಗಂಡ ಆದಾಯ ಸರ್ಟಿಫಿಕೇಟ್ ಇಲ್ಲದೇ ಗೃಹಿಣಿಯರಿಗೆ ಇನ್ಷೂರೆನ್ಸ್ ಪಾಲಿಸಿ ಸಿಗುತ್ತಾ? ವಾಸ್ತವ ಸ್ಥಿತಿ ಏನಿದೆ?

ಉಳಿತಾಯ ಹಣದ ಬಕೆಟ್ 3: ದೀರ್ಘಾವಧಿ ಗುರಿ

ಇದು ಬಹಳ ಮುಖ್ಯ. ನಿಮ್ಮ ಭವಿಷ್ಯದ ಭದ್ರತೆ ಒದಗಿಸಲು ಈ ಮೂರನೇ ಬಕೆಟ್ ಬಹಳ ಮುಖ್ಯ. ನಿಮ್ಮ ಸಂಬಳದ ಶೇ. 10ರಷ್ಟು ಹಣವನ್ನು ಅಥವಾ ನಿಮ್ಮೆಲ್ಲಾ ಉಳಿತಾಯ ಹಣವನ್ನು ಈ ಮೂರನೇ ಬಕೆಟ್​ಗೆ ಬಳಸಿ. ಬಹಳ ವೇಗದಲ್ಲಿ ಹಣ ಬೆಳೆಸುವ ಸಾಧನಗಳತ್ತ ಹೂಡಿಕೆ ಮಾಡಿ. ಒಳ್ಳೆಯ ಈಕ್ವಿಟಿ ಫಂಡ್​ನಲ್ಲಿ ಎಸ್​ಐಪಿ ಆರಂಭಿಸಿ. ರಿಸ್ಕ್ ಕಡಿಮೆ ಮಾಡಲು ನಿಮ್ಮ ಹೂಡಿಕೆಯನ್ನು ಬೇರೆ ಬೇರೆ ವಲಯಗಳ ಈಕ್ವಿಟಿಗಳಲ್ಲಿ ತೊಡಗಿಸಿ. ಇದರಲ್ಲಿ ನಿಮ್ಮ ಹೂಡಿಕೆ ಅವಧಿ ಕನಿಷ್ಠ ಏಳೆಂಟು ವರ್ಷವಾದರೂ ಇರಬೇಕು.

ಒಮ್ಮೆಲೇ ಹೆಚ್ಚುವರಿ ಹಣ ಬಂದರೆ ಏನು ಮಾಡಬೇಕು?

ಕಂಪನಿ ವತಿಯಿಂದ ಬೋನಸ್ ಇತ್ಯಾದಿ ಲಂಪ್ಸಮ್ ಆಗಿ ಹಣ ಬಂದರೆ ಶೇ. 40ರಷ್ಟು ಹಣವನ್ನು ಮೂರನೇ ಬಕೆಟ್​ಗೆ ಸೇರಿಸುವುದು ಸರಿ ಕ್ರಮ. ಇನ್ನೆರಡು ಬಕೆಟ್​ಗಳಿಗೆ ತಲಾ 10 ಪ್ರತಿಶತದಷ್ಟು ಹಣ ಹೋಗಲಿ.

ಈ ರೀತಿ ಕ್ರಮಗಳು ನಿಮಗೆ ಹಣಕಾಸು ಶಿಸ್ತು ತರುತ್ತದೆ. ಒಂದು ವೇಳೆ ನಿಮಗೆ ಇನ್ನಷ್ಟು ಹಣ ಉಳಿತಾಯ ಸಾಧ್ಯವಾಗುತ್ತಿದ್ದಲ್ಲಿ ಹೆಚ್ಚೆಚ್ಚು ಹಣವನ್ನು ಈ ಮೂರು ಬಕೆಟ್​ಗಳಿಗೆ ಸೇರಿಸುತ್ತಾ ಹೋಗಿ. 20-25 ವರ್ಷದಲ್ಲಿ ನಿಮಗೇ ಅಚ್ಚರಿ ಎನಿಸುವ ರೀತಿಯಲ್ಲಿ ಹೂಡಿಕೆ ಬೆಳೆದಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ