ಇವತ್ತಿನ ದಿನಮಾನದಲ್ಲಿ ಅತ್ಯುತ್ತಮ ಹೂಡಿಕೆ ಮಾರ್ಗಗಳಲ್ಲಿ ಮ್ಯೂಚುವಲ್ ಫಂಡ್ (Mutual Fund) ಒಂದು. ಬಹುತೇಕ ಷೇರುಮಾರುಕಟ್ಟೆಗೆ ಜೋಡಿತವಾಗಿರುವ ಮ್ಯೂಚುವಲ್ ಫಂಡ್ಗಳು ಒಂದು ರೀತಿಯಲ್ಲಿ ರಿಸ್ಕ್ ಹೌದು, ಹಾಗೆಯೇ ಲಾಭಕಾರಿಯೂ ಹೌದು. ಷೇರುಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಕೋಟ್ಯಾಧಿಪತಿಗಳಾಗಿರುವ ಅನೇಕರನ್ನು ನೋಡಿದ್ದೇವೆ. ಹಾಗೆಯೇ, ಕೋಟಿ ಕೋಟಿ ಹಣ ಕಳೆದುಕೊಂಡವರೂ ಅನೇಕರಿದ್ದಾರೆ. ಅನುಭವಿಗಳಾಗಿದ್ದರೆ ಮತ್ತು ಮಾರುಕಟ್ಟೆಯ ಲಯ ಅರಿಯಬಲ್ಲವರಾಗಿದ್ದರೆ ವೈಯಕ್ತಿಕವಾಗಿ ಷೇರುಗಳ ಮೇಲೆ ಹೂಡಿಕೆ ಮಾಡಬಹುದು. ಇಲ್ಲದಿದ್ದರೆ ಮ್ಯೂಚುವಲ್ ಫಂಡ್ ಮಾರ್ಗ ಹಿಡಿಯಬಹುದು.
ಮ್ಯೂಚುವಲ್ ಫಂಡ್ಗಳನ್ನು ವೃತ್ತಿಪರರು ನಿಭಾಯಿಸುತ್ತಾರೆ. ವಿವಿಧ ಸ್ತರದ ಕಂಪನಿಗಳ ಷೇರುಗಳ ಮೇಲೆ ಮ್ಯೂಚುವಲ್ ಫಂಡ್ನ ಹಣ ಹೂಡಿಕೆ ಆಗಿರುತ್ತದೆ. ಅಂದರೆ ನಾವು ಮ್ಯೂಚುವಲ್ ಫಂಡ್ಗೆ ಹಾಕುವ ಹಣ ವಿವಿಧ ಷೇರುಗಳಲ್ಲಿ ಇನ್ವೆಸ್ಟ್ ಆಗಿರುತ್ತದೆ. ಮ್ಯೂಚುವಲ್ ಫಂಡ್ ನಿರ್ವಾಹಕರು ಹೂಡಿಕೆಯನ್ನು ಅಲ್ಲಿಂದಿಲ್ಲಿಗೆ ಬದಲಿಸಬಹುದು. ಒಟ್ಟಾರೆ ಲಾಭದ ಗುರಿ ಮಾತ್ರ ಇರುತ್ತದೆ. ಅಲ್ಪಾವಧಿಯಲ್ಲಿ ಹೆಚ್ಚು ಲಾಭ ಗಳಿಸುವವರಿಗೆ ಮ್ಯೂಚುವಲ್ ಫಂಡ್ ಹೇಳಿ ಮಾಡಿಸಿದ್ದಲ್ಲ. ದೀರ್ಘಾವಧಿ ದೃಷ್ಟಿಯಿಂದ ಇವು ಬಹಳ ಲಾಭಕಾರಿ ಎನಿಸುತ್ತವೆ.
ಎಲ್ಲಾ ಮ್ಯೂಚುವಲ್ ಫಂಡ್ಗಳು ಒಂದೇ ತೆರನಾಗಿ ಫಲ ಕೊಡುವುದಿಲ್ಲ ಎಂಬುದು ಗೊತ್ತಿರಲಿ. ಅನೇಕ ಬಾರಿ ಭರ್ಜರಿ ಲಾಭ ಕೊಡುವುದು ಇರಲಿ, ನಷ್ಟವೇ ತಂದುಕೊಡಬಹುದು. ಎಷ್ಟೆಂದರೂ ಷೇರುಪೇಟೆ ವ್ಯವಹಾರವಲ್ಲವೇ!!
ಅಲ್ಪಾವಧಿಗೆ ಗಮನಿಸಿದರೆ ಯಾವುದೇ ಮ್ಯೂಚುವಲ್ ಫಂಡ್ನಲ್ಲಾದರೂ ಏರಿಳಿತಗಳು ಇದ್ದೇ ಇರುತ್ತವೆ. ಲಾಂಗ್–ಕ್ಯಾಪ್ ಕಂಪನಿ ಅಥವಾ ದೊಡ್ಡ ಷೇರುಮೊತ್ತದ ಕಂಪನಿಯ ಷೇರಿಗಿಂತ ಸ್ಮಾಲ್ ಕ್ಯಾಪ್ ಷೇರುಗಳ ಬೆಲೆ ಬಹಳ ವ್ಯತ್ಯಯ ಕಾಣುತ್ತದೆ. ಸ್ಮಾಲ್ ಕ್ಯಾಪ್ ಕಂಪನಿಗಳ ಷೇರು ಹೆಚ್ಚು ಲಾಭ ತಂದುಕೊಡಬಲ್ಲವಾದರೂ ರಿಸ್ಕ್ ಸಾಧ್ಯತೆ ಹೆಚ್ಚಿರುತ್ತದೆ.
ಮ್ಯೂಚುವಲ್ ಫಂಡ್ನ ಹಿಂದಿನ ಪ್ರತಿಫಲಗಳೇನು ಎಂಬುದನ್ನು ತಿಳಿದಿರಿ. ಆ ಮ್ಯೂಚುವಲ್ ಫಂಡ್ ಹಿಂದಿನ ಕೆಲ ವರ್ಷ ಸರಿಯಾದ ಲಾಭ ಕೊಟ್ಟಿದೆಯಾ ನೋಡಿ. ಇಲ್ಲದಿದ್ದರೆ ಕಾರಣ ಏನೆಂದು ತಿಳಿದುಕೊಳ್ಳಿ. ಅದೇ ಸೆಕ್ಟರ್ನ ಇತರ ಮ್ಯೂಚುವಲ್ ಫಂಡ್ ಎಷ್ಟು ಲಾಭ ತಂದಿವೆ ಎಂದು ಹೋಲಿಸಿ ನೋಡಿ.
ಇದನ್ನೂ ಓದಿ: No Credit Card: ಕ್ರೆಡಿಟ್ ಕಾರ್ಡ್ ಬಳಸಿ ಇನ್ಷೂರೆನ್ಸ್ ಲೋನ್ ಹಣ ಕಟ್ಟುವಂತಿಲ್ಲ; ಯಾಕೆ ಈ ಹೊಸ ನಿಯಮ?
ಕೆಲ ಮ್ಯೂಚುವಲ್ ಫಂಡ್ಗಳು ಹಲವು ವರ್ಷ ಸತತವಾಗಿ ಒಳ್ಳೆಯ ರಿಟರ್ನ್ ಕೊಟ್ಟಿರುತ್ತವೆ. ಹಾಗಂತ ಈ ವರ್ಷವೂ, ಮುಂದಿನ ವರ್ಷಗಳೂ ಇದೇ ಟ್ರೆಂಡ್ ಇರುತ್ತದೆ ಎಂಬ ಖಾತ್ರಿ ಇರುವುದಿಲ್ಲ.
ಒಂದು ಮ್ಯೂಚುವಲ್ ಫಂಡ್ ಸತತ ಎರಡು ವರ್ಷ ಕಾಲ ನಿರೀಕ್ಷಿತ ಮಟ್ಟದಲ್ಲಿ ಲಾಭ ತಂದುಕೊಡುತ್ತಿಲ್ಲ ಎಂದರೆ ಅದರಿಂದ ಹೂಡಿಕೆ ಹಿಂಪಡೆಯುವುದು ಉತ್ತಮ ಎಂಬ ಸಾಮಾನ್ಯ ಸೂತ್ರ ಇದೆ. ಹಾಗಂತ, 2 ವರ್ಷ ಕಳಪೆ ಸಾಧನೆ ಮಾಡಿದ ಮ್ಯೂಚುವಲ್ ಫಂಡ್ ಭವಿಷ್ಯದಲ್ಲೂ ಅದೇ ಮಟ್ಟದಲ್ಲಿ ಮುಂದುವರಿಯುತ್ತದೆ ಎಂದಲ್ಲ. ಫಂಡ್ ಮ್ಯಾನೇಜರುಗಳು ಹೂಡಿಕೆ ಕಾರ್ಯತಂತ್ರವನ್ನು ಬದಲಿಸಿ ಹೆಚ್ಚಿನ ಲಾಭ ತರಲು ಯತ್ನಿಸಬಹುದು. ಹೀಗಾಗಿ, ಒಬ್ಬ ನುರಿತ ಇನ್ವೆಸ್ಟ್ಮೆಂಟ್ ಅಡ್ವೈಸರ್ನ ಸಲಹೆ ಪಡೆಯುವುದು ಉತ್ತಮ.