ನ್ಯಾಷನಲ್ ಪೆನ್ಷನ್ ಸ್ಕೀಮ್ ದಿನೇ ದಿನೇ ಜನಪ್ರಿಯವಾಗುತ್ತಿದೆ. ಸರ್ಕಾರಿ ಉದ್ಯೋಗಿಗಳಿಗೆ ಈ ಹಿಂದೆ ಇದ್ದ ಪಿಂಚಣಿ ವ್ಯವಸ್ಥೆಯ ಬದಲಾಗಿ ಹೊಸದಾಗಿ ನ್ಯಾಷನಲ್ ಪೆನ್ಷನ್ ಸ್ಕೀಮ್ ಅನ್ನು (National Pension System) ಜಾರಿಗೆ ತರಲಾಗಿತ್ತು. ಆದರೆ, ಈ ಯೋಜನೆಯನ್ನು ಈಗ ಎಲ್ಲರಿಗೂ ವಿಸ್ತರಿಸಲಾಗಿದೆ. ಭಾರತದ ಯಾವುದೇ ಪ್ರಜೆ ಈ ಎನ್ಪಿಎಸ್ ಅನ್ನು ಪಡೆಯಬಹುದಾಗಿದೆ. ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA) ಸಂಸ್ಥೆ ನ್ಯಾಷನಲ್ ಪೆನ್ಷಲ್ ಸಿಸ್ಟಂ ಅನ್ನು ನಿರ್ವಹಿಸುತ್ತದೆ. ಇದು ಮಾರುಕಟ್ಟೆ ಜೋಡಿತ ಸ್ಕೀಮ್ (Market Linked Scheme) ಆಗಿರುವುದರಿಂದ ದೀರ್ಘಾವಧಿಗೆ ಉತ್ತಮ ಲಾಭ ತರಬಲ್ಲುದು. ಹೀಗಾಗಿ, ಇದರ ಜನಪ್ರಿಯತೆ ಹೆಚ್ಚುತ್ತಿದೆ.
ನ್ಯಾಷನಲ್ ಪೆನ್ಷನ್ ಸಿಸ್ಟಂ ವಿವಿಧ ವರ್ಗದ ಜನರ ಅಗತ್ಯಗಳಿಗೆ ತಕ್ಕಂತೆ ವಿವಿಧ ಮಾದರಿಯ ಸ್ಕೀಮ್ ಹೊಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಒಂದು ಮಾಡೆಲ್, ಕಾರ್ಪೊರೇಟ್ ಕಂಪನಿಗಳಿಗೆ ಬೇರೊಂದು ಮಾಡಲ್, ಇತರ ಸಾಮಾನ್ಯರಿಗೆ ಬೇರಿನ್ನೊಂದು ಮಾದರಿಯ ಎನ್ಪಿಎಸ್ ಇದೆ.
ಎನ್ಪಿಎಸ್ನಲ್ಲಿ ಟಯರ್1 ಮತ್ತು ಟಯರ್2 ಎಂದು ಎರಡು ಭಾಗ ಇದೆ. ಟಯರ್ 1 ಖಾತೆಯು ಪೆನ್ಷನ್ ಅಕೌಂಟ್ ಆಗಿರುತ್ತದೆ. ಇದರಲ್ಲಿರುವ ಹಣವನ್ನು ಹಿಂಪಡೆಯಲು ನಿರ್ಬಂಧಗಳಿರುತ್ತವೆ. ಟಯರ್2 ಐಚ್ಛಿಕವಾಗಿದ್ದು, ಈ ಖಾತೆಯಲ್ಲಿ ತೊಡಗಿಸುವ ಹಣವನ್ನು ಸುಲಭವಾಗಿ ವಿತ್ಡ್ರಾ ಮಾಡಬಹುದು.
ಸರ್ಕಾರಿ ಉದ್ಯೋಗಿಗಳಿಗೆ ಇರುವ ಎನ್ಪಿಎಸ್ ಸ್ಕೀಮ್ ಪ್ರಕಾರ, ಉದ್ಯೋಗಿಯ ಸಂಬಳದ ಶೇ. 10ರಷ್ಟು ಹಣವನ್ನು ಎನ್ಪಿಎಸ್ ಖಾತೆಗೆ ಜಮೆ ಮಾಡಲಾಗುತ್ತದೆ. ಸಂಸ್ಥೆಯ ಕೊಡುಗೆ ಶೇ. 14ರಷ್ಟು ಇರಬೇಕು.
ಇನ್ನು, ಸರ್ವ ನಾಗರಿಕರ ಎನ್ಪಿಎಸ್ ಮಾದರಿಯಲ್ಲಿ, 18 ವರ್ಷದಿಂದ 70 ವರ್ಷದವರೆಗಿನ ವಯಸ್ಸಿನವರು ಯೋಜನೆ ಪಡೆಯಬಹುದು. ಯಾವುದೇ ಪೋಸ್ಟ್ ಆಫೀಸ್ನಲ್ಲಿ ಇದನ್ನು ಆರಂಭಿಸಬಹುದು. ಅಥವಾ ಆರ್ಬಿಐ ನಿಗದಿಪಡಿಸಿದ ಕೆಲ ಬ್ಯಾಂಕುಗಳಲ್ಲೂ ನ್ಯಾಷನಲ್ ಪೆನ್ಷನ್ ಸಿಸ್ಟಂನ ಖಾತೆ ಆರಂಭಿಸಬಹುದು. ನೀವು ಎನ್ಪಿಎಸ್ ಯೋಜನೆ ಆರಂಭಿಸಿದಾಗ ಪರ್ಮನೆಂಟ್ ರಿಟೈರ್ಮೆಂಟ್ ಅಕೌಂಟ್ ನಂಬರ್ (ಪಿಆರ್ಎಎನ್) ಕೊಡಲಾಗುತ್ತದೆ.
ಇದನ್ನೂ ಓದಿ: ಉದ್ಯೋಗಿ ಆಗದೇ ಬ್ಯಾಂಕ್ನಿಂದ ಆದಾಯ ಪಡೆಯುವ ಮಾರ್ಗಗಳು ಹೇಗೆ? ಸ್ವಯಂ ಉದ್ಯೋಗದ ಅವಕಾಶ ಬಳಸಿ
ನೀವು ಎಲ್ಲಿಯೇ ಎನ್ಪಿಎಸ್ ಮಾಡಿಸಿದರೂ, ಅದಕ್ಕೆ ಹಣವನ್ನು ಎಲ್ಲಿಂದ ಬೇಕಾದರೂ ತುಂಬಿಸಬಹುದು. ದೇಶದ ಯಾವುದೇ ಪೋಸ್ಟ್ ಆಫೀಸ್ ಶಾಖೆ, ಅಥವಾ ಯಾವುದೇ ಬ್ಯಾಂಕ್ ಕಚೇರಿಯಿಂದಲೂ ನೀವು ಹಣ ಪಾವತಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ