ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ ಬಡ್ಡಿ ಶೇ. 7.4; ಅಧಿಕ ಬಡ್ಡಿ ಜೊತೆಗೆ ತೆರಿಗೆ ಲಾಭವೂ ಇದೆ ಎಂಐಎಸ್ನಲ್ಲಿ
Post Office Monthly Income Scheme: ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ವರ್ಷಕ್ಕೆ ಶೇ. 7.4ರಷ್ಟು ಬಡ್ಡಿ ಸಿಗುತ್ತದೆ. ಈ ಖಾತೆಯಲ್ಲಿ ಇರಿಸುವ ಠೇವಣಿಗೆ ತಿಂಗಳಿಗೆ ಬಡ್ಡಿ ರೂಪದಲ್ಲಿ ಆದಾಯ ಪಡೆಯಬಹುದು. ಬೇರೆ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ನಿಂದ ಸಿಗುವ ಬಡ್ಡಿಹಣಕ್ಕೆ ಟಿಡಿಎಸ್ ಇರುತ್ತದೆ. ಆದರೆ, ಪೋಸ್ಟ್ ಆಫೀಸ್ ಎಂಐಎಸ್ ಖಾತೆಯಲ್ಲಿನ ಆದಾಯಕ್ಕೆ ಯಾವ ತೆರಿಗೆಯೂ ಅನ್ವಯ ಆಗುವುದಿಲ್ಲ.
ಠೇವಣಿ ಪ್ಲಾನ್ಗಳನ್ನು ಆರಂಭಿಸದೆ ಕೇವಲ ಉಳಿತಾಯ ಖಾತೆಗಳಲ್ಲಿ ಇರುವ ಹಣಕ್ಕೆ ವರ್ಷಕ್ಕೆ ಶೇ. 2.75ರಿಂದ ಶೇ. 4ರಷ್ಟು ಮಾತ್ರವೇ ಬಡ್ಡಿ ಸಿಗುತ್ತದೆ. ಬ್ಯಾಂಕ್ನಲ್ಲಿ ಅಥವಾ ಪೋಸ್ಟ್ ಆಫೀಸ್ನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆಯಬಹುದು. ಹೆಚ್ಚೆಂದರೆ 4 ಪ್ರತಿಶತದಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಹಾಗೆಯೇ ಉಳಿಸಿ ಇಟ್ಟ ಹಣಕ್ಕೆ ಹೆಚ್ಚು ಲಾಭ ಸಿಗದಂತಾಗುತ್ತದೆ. ಆದರೆ, ಪೋಸ್ಟ್ ಆಫೀಸ್ನಲ್ಲಿ ಮಾಸಿಕ ಆದಾಯ ಯೋಜನೆ (Post Office Monthly Income Scheme) ಅಡಿಯಲ್ಲಿ ನಿಮ್ಮ ಹಣಕ್ಕೆ ಶೇ. 7.4ರಷ್ಟು ಬಡ್ಡಿ ಸಿಗುತ್ತದೆ. ಸರ್ಕಾರದಿಂದ ಖಾತ್ರಿ ಇರುವ ಈ ಎಂಐಎಸ್ ಸ್ಕೀಮ್ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿದೆ. ನಿಶ್ಚಿತ ಠೇವಣಿಗಳಿಗೆ ಸಿಗುವಷ್ಟೆ ಬಡ್ಡಿ ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೂ ಸಿಗುತ್ತದೆ. ಉತ್ತಮ ಲಾಭದ ಜೊತೆಗೆ ಸುರಕ್ಷಿತ ಹೂಡಿಕೆಯೂ ಹೌದು.
ಒಂದು ಸಾವಿರ ರೂನ ಕನಿಷ್ಠ ಮೊತ್ತದೊಂದಿಗೆ ಪೋಸ್ಟ್ ಆಫೀಸ್ ಎಂಐಎಸ್ ಖಾತೆ ಆರಂಭಿಸಬಹುದು. ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ಹೀಗೆ ಹೂಡಿಕೆ ಮಾಡಬಹುದು. ಒಂದು ಖಾತೆಯಲ್ಲಿ 9 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು. ಜಂಟಿ ಖಾತೆಯಾದರೆ ಗರಿಷ್ಠ 15 ಲಕ್ಷ ರೂ ಹೂಡಿಕೆಗೆ ಅವಕಾಶ ಇದೆ.
ಪಿಒಎಂಐಎಸ್ ಮೆಚ್ಯೂರಿಟಿ ಯಾವಾಗ?
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಇರಿಸುವ ಠೇವಣಿಗೆ ಪ್ರತಿ ತಿಂಗಳು ಬಡ್ಡಿಹಣ ಸಿಗುತ್ತದೆ. ಈ ಸ್ಕೀಮ್ನಲ್ಲಿ ಲಾಕ್ ಇನ್ ಅವಧಿ 5 ವರ್ಷ ಇರುತ್ತದೆ. ಅಂದರೆ, ಐದು ವರ್ಷದವರೆಗೂ ಈ ಹೂಡಿಕೆ ಹಣವನ್ನು ಹಿಂಪಡೆಯುವಂತಿಲ್ಲ.
ಇದನ್ನೂ ಓದಿ: ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಮೂಲಕ ನಿಮ್ಮ ಉಳಿತಾಯ ಹಣಕ್ಕೆ ಭರ್ಜರಿ ಲಾಭ; 5 ಕೋಟಿ ಆದಾಯ ಹೇಗೆ?
ಒಂದು ವೇಳೆ ತುರ್ತು ಅಗತ್ಯ ಬಿದ್ದು ಹೂಡಿಕೆ ಹಣವನ್ನು ಹಿಂಪಡೆಯಬೇಕೆಂದರೆ ಒಂದು ವರ್ಷದ ಬಳಿಕ ಅವಕಾಶ ಇದೆ. ಆದರೆ, ಅದಕ್ಕೆ ದಂಡ ವಿಧಿಸಲಾಗುತ್ತದೆ. ಸ್ಕೀಮ್ ಆರಂಭಿಸಿ ಒಂದು ವರ್ಷವಾಗಿ, ಮೂರು ವರ್ಷದೊಳಗೆ ಅದನ್ನು ಹಿಂಪಡೆದರೆ ಶೇ. 2ರಷ್ಟು ಹಣವನ್ನು ದಂಡವಾಗಿ ನೀಡಬೇಕು. ಉದಾಹರಣೆಗೆ, ನೀವು 5 ಲಕ್ಷ ರೂ ಹಣವನ್ನು ಠೇವಣಿಯಾಗಿ ಇರಿಸಿದ್ದು ಅದನ್ನು ಮೂರು ವರ್ಷ ಒಳಗೆ ಹಿಂಪಡೆಯುವುದಾದರೆ 10,000 ರೂ ಹಣವನ್ನು ದಂಡವಾಗಿ ಕಟ್ಟಿಕೊಡಬೇಕು.
ಹಾಗೆಯೇ, ಮೂರು ವರ್ಷದ ಬಳಿಕ ಮತ್ತು ಐದು ವರ್ಷಕ್ಕೆ ಮುನ್ನ ಠೇವಣಿ ಹಿಂಪಡೆಯುವುದಾದರೆ ಶೇ. 1ರಷ್ಟು ಹಣವನ್ನು ದಂಡವಾಗಿ ನೀಡಬೇಕು.
ಪಿಒ ಎಂಐಎಸ್ ಸ್ಕೀಮ್ನಲ್ಲಿ ತೆರಿಗೆ ಲಾಭ
ನಿಶ್ಚಿತ ಠೇವಣಿಗಳಿಂದ ಸಿಗುವ ಬಡ್ಡಿ ಆದಾಯಕ್ಕೆ ಟಿಡಿಎಸ್ ಕಡಿತ ಇರುತ್ತದೆ. ಆದರೆ, ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಸಿಗುವ ಬಡ್ಡಿ ಆದಾಯಕ್ಕೆ ಯಾವ ಟಿಡಿಎಸ್ ಅನ್ವಯ ಆಗುವುದಿಲ್ಲ. ಹೀಗಾಗಿ, ಇದು ಎಂಐಎಸ್ನ ಒಂದು ಅನುಕೂಲ.
ಯಾರು ತೆರೆಯಬಹುದು ಎಂಐಎಸ್?
ಅಂಚೆ ಕಚೇರಿಯ ಎಂಐಎಸ್ ಖಾತೆಯನ್ನು ಎನ್ಆರ್ಐ ಹೊರತುಪಡಿಸಿ ಎಲ್ಲಾ ಭಾರತೀಯ ನಿವಾಸಿಗಳು ಆರಂಭಿಸಬಹುದು. 10 ವರ್ಷ ಹಾಗೂ ಮೇಲ್ಪಟ್ಟ ವಯಸ್ಸಿನ ಮಗುವಿನ ಹೆಸರಿನಲ್ಲೂ ಈ ಖಾತೆ ತೆರೆಯಬಹುದು. ಒಂದು ವೇಳೆ ಬಾಲಕ ಅಥವಾ ಬಾಲಕಿಯ ಹೆಸರಿನಲ್ಲಿ ಖಾತೆ ತೆರೆದರೆ ಆತ ಅಥವಾ ಆಕೆ ಅದನ್ನು ಹಿಂಪಡೆಯಬೇಕೆಂದರೆ 18 ವರ್ಷ ತುಂಬಬೇಕು.
ಇದನ್ನೂ ಓದಿ: ಇಪಿಎಫ್ನಿಂದ ಟ್ರಿಪಲ್ ತೆರಿಗೆ ಲಾಭಗಳು; ಉತ್ತಮ ಭವಿಷ್ಯಕ್ಕೆ ಆಧಾರವಾಗಬಲ್ಲುದು ಪಿಎಫ್
ಹೇಗೆ ತೆರೆಯುವುದು ಅಂಚೆ ಕಚೇರಿ ಎಂಐಎಸ್ ಖಾತೆ?
ಪೋಸ್ಟ್ ಆಫೀಸ್ನಲ್ಲಿ ನೀವು ಉಳಿತಾಯ ಖಾತೆ ಹೊಂದಿರಬೇಕು. ಬಳಿಕ ಎಂಐಎಸ್ ಖಾತೆ ತೆರೆಯಲು ಅರ್ಜಿ ಸಿಗುತ್ತದೆ. ಅದನ್ನು ಭರ್ತಿ ಮಾಡಬೇಕು. ಆಧಾರ್ ಕಾರ್ಡ್, ಫೋಟೋ ಇತ್ಯಾದಿಯನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ