ಪೋಸ್ಟ್ ಆಫೀಸ್ ಟಿಡಿ ಸ್ಕೀಮ್​ನಲ್ಲಿ 1 ಲಕ್ಷ ರೂ ಹೂಡಿಕೆಗೆ 5 ವರ್ಷದಲ್ಲಿ ಸಿಗುವ ರಿಟರ್ನ್ಸ್ ಇಷ್ಟು…

Post Office Time Deposit Scheme: ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳಲ್ಲಿ ಟೈಮ್ ಡೆಪಾಸಿಟ್ ಸ್ಕೀಮ್ ಒಂದು. ಈ ಟೈಮ್ ಡೆಪಾಸಿಟ್ ಸ್ಕೀಮ್​ನಲ್ಲಿ 1, 2, 3 ಮತ್ತು 5 ವರ್ಷ ಅವಧಿಯ ಠೇವಣಿ ಪ್ಲಾನ್​ಗಳಿವೆ. ಇದರಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. 1 ಲಕ್ಷ ರೂ ಅನ್ನು 5 ವರ್ಷದ ಪ್ಲಾನ್​ನಲ್ಲಿ ಹೂಡಿಕೆ ಮಾಡಿದರೆ 1,44,995 ರೂ ನಿರೀಕ್ಷಿಸಬಹುದು.

ಪೋಸ್ಟ್ ಆಫೀಸ್ ಟಿಡಿ ಸ್ಕೀಮ್​ನಲ್ಲಿ 1 ಲಕ್ಷ ರೂ ಹೂಡಿಕೆಗೆ 5 ವರ್ಷದಲ್ಲಿ ಸಿಗುವ ರಿಟರ್ನ್ಸ್ ಇಷ್ಟು...
ಪೋಸ್ಟ್ ಆಫೀಸ್

Updated on: Dec 16, 2025 | 5:15 PM

ಅಂಚೆ ಕಚೇರಿಯಲ್ಲಿ ವಿವಿಧ ರೀತಿಯ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿವೆ. ಸುಕನ್ಯಾ ಸಮೃದ್ದಿ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಕಿಸಾನ್ ವಿಕಾಸ್ ಪತ್ರ, ರಾಷ್ಟ್ರೀಯ ಉಳಿತಾಯ ಪತ್ರ ಇತ್ಯಾದಿ ಯೋಜನೆಗಳಿವೆ. ಆವರ್ತನ ಠೇವಣಿ, ನಿಶ್ಚಿತ ಠೇವಣಿ ಪ್ಲಾನ್​ಗಳೂ ಇವೆ. ವಿವಿಧ ಅವಧಿಗಳಿಗೆ ಡೆಪಾಸಿಟ್ ಪ್ಲಾನ್​ಗಳಿವೆ. ಇದು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (Post Office Time Deposit) ಪ್ಲಾನ್.

ಬ್ಯಾಂಕ್ ಎಫ್​ಡಿ ರೀತಿಯ ಠೇವಣಿ ಸ್ಕೀಮ್ ಆಗಿರುವ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್​ನಲ್ಲಿ 1, 2, 3 ಮತ್ತು 5 ವರ್ಷದ ಅವಧಿಯ ಪ್ಲಾನ್​ಗಳಿವೆ. ಒಂದು ವರ್ಷಕ್ಕೆ ಕಡಿಮೆ ವಾರ್ಷಿಕ ಬಡ್ಡಿ ಸಿಗುತ್ತದೆ. ಐದು ವರ್ಷದ ಡೆಪಾಸಿಟ್​ಗೆ ಅತಿಹೆಚ್ಚು ಬಡ್ಡಿ ಸಿಗುತ್ತದೆ.

ಪ್ರಸಕ್ತ ಕ್ವಾರ್ಟರ್​ನಲ್ಲಿ 1 ವರ್ಷದ ಟೈಮ್ ಡೆಪಾಸಿಟ್​ಗೆ ಶೇ. 6.9 ಬಡ್ಡಿ ಇದೆ. ಎರಡು ವರ್ಷದ ಠೇವಣಿಗೆ ಶೇ. 7 ಬಡ್ಡಿ ಇದ್ದರೆ, 3 ಮತ್ತು 5 ವರ್ಷದ ಠೇವಣಿಗಳೆರಡಕ್ಕೂ ಶೇ. 7.5 ಬಡ್ಡಿ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಎಫ್​ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ

5 ವರ್ಷದ ಪೋಸ್ಟ್ ಆಫೀಸ್ ಟಿಡಿ ಪ್ಲಾನ್​ನಲ್ಲಿ ಲಕ್ಷ ರೂ ಹೂಡಿಕೆ ಮಾಡಿದರೆ?

ಪೋಸ್ಟ್ ಆಫೀಸ್​ನ ಐದು ವರ್ಷದ ಟೈಮ್ ಡೆಪಾಸಿಟ್ ಪ್ಲಾನ್​ನಲ್ಲಿ ಇವತ್ತು ನೀವು ಒಂದು ಲಕ್ಷ ರೂ ಹೂಡಿಕೆ ಮಾಡಿದರೆ, ಐದು ವರ್ಷದ ನಂತರ ಹೂಡಿಕೆ ಮೌಲ್ಯ 1,44,995 ರೂ ಆಗುತ್ತದೆ. ಸದ್ಯ ಇರುವ ಶೇ. 7.5 ವಾರ್ಷಿಕ ಬಡ್ಡಿ ಲೆಕ್ಕಾಚಾರದಲ್ಲಿ ಈ ಅಂದಾಜು ಮಾಡಲಾಗಿದೆ.

ಸರ್ಕಾರವು ಪ್ರತೀ ಕ್ವಾರ್ಟರ್​ಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಿಸುತ್ತದೆ. ಕಳೆದ ಕೆಲ ಕ್ವಾರ್ಟರ್​ಗಳಿಂದ ಟಿಡಿ ಡೆಪಾಸಿಟ್​ಗಳಿಗೆ ಬಡ್ಡಿ ದರ ಬದಲಾಗಿಲ್ಲ. ಇದೇ ದರ ಮುಂದುವರಿದರೆ ಐದು ವರ್ಷದಲ್ಲಿ ಮೇಲೆ ತಿಳಿಸಿದಷ್ಟು ರಿಟರ್ನ್ ಅನ್ನು ನಿರೀಕ್ಷಿಸಬಹುದು. ಬಡ್ಡಿಯಲ್ಲಿ ವ್ಯತ್ಯಯವಾದರೆ, ಅಂತಿಮ ಮೌಲ್ಯದಲ್ಲೂ ಅನುಗುಣವಾಗಿ ವ್ಯತ್ಯಯವಾಗಬಹುದು.

ಇದನ್ನೂ ಓದಿ: ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳಿವು…

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್​ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಗರಿಷ್ಠಕ್ಕೆ ಮಿತಿ ಇಲ್ಲ. ಇದರಲ್ಲಿ ಹೂಡಿಕೆ ಮಾಡುವ ಎಲ್ಲಾ ಹಣಕ್ಕೂ ಸರ್ಕಾರದ ಖಾತ್ರಿ ಇರುತ್ತದೆ. ಹೀಗಾಗಿ, ಸುರಕ್ಷತೆ ಹಾಗೂ ಉತ್ತಮ ರಿಟರ್ನ್ಸ್ ಎರಡೂ ಪೋಸ್ಟ್ ಆಫೀಸ್ ಪ್ಲಾನ್​ಗಳಿಂದ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ