AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಫ್​ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ

Important money myths: ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಹಣ ಹಾಗೂ ಹೂಡಿಕೆಯ ಮಹತ್ವದ ಕುರಿತು ಅರಿವು ಮೂಡಿಸುವುದು ಉತ್ತಮ. ಆದರೆ, ಮಕ್ಕಳಿಗೆ ಮಾದರಿ ಹಾಕಿಕೊಡಬೇಕಾದ ದೊಡ್ಡವರೇ ಹಣದ ವಿಚಾರದಲ್ಲಿ ದಡ್ಡತನ ತೋರುವುದುಂಟು. ಇವತ್ತು ಬಹಳಷ್ಟು ಜನರು ಹಣ ಹಾಗೂ ಹೂಡಿಕೆ ವಿಚಾರದಲ್ಲಿ ತಪ್ಪು ಕಲ್ಪನೆ ಮತ್ತು ಅಭಿಪ್​ರಾಯಗಳನ್ನು ಹೊಂದಿದ್ದಾರೆ.

ಎಫ್​ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 15, 2025 | 12:46 PM

Share

ನಮ್ಮ ಜೀವನ ನಿರ್ವಹಣೆಗೆ ಹಣ ಅತ್ಯವಶ್ಯಕ. ಬಹಳಷ್ಟು ಜನರು ಸಾಕಷ್ಟು ಹಣ ಸಂಪಾದಿಸುತ್ತಾರೆ. ಆದರೆ, ವರ್ಷಗಳು ಕಳೆದಂತೆ ಅವರಿಗಿರುವ ಸಂಪತ್ತು (wealth) ನಿರೀಕ್ಷಿಸಿದಷ್ಟು ಇರುವುದಿಲ್ಲ. ನಿವೃತ್ತಿ ಸಮಯ ಬಂದಾಗ, ಸೇವಿಂಗ್ಸ್ ಇಷ್ಟೆಯಾ ಇರುವುದು ಎಂದು ಪರಿತಪಿಸುತ್ತಾರೆ. ಇನ್ನೂ ಕೆಲವರು ನಿವೃತ್ತಿಯಷ್ಟರಲ್ಲಿ ಮೈತುಂಬ ಸಾಲ ಮಾಡಿಕೊಂಡು ಇದ್ದಬದ್ದ ಆಸ್ತಿ ಮಾರಿಕೊಳ್ಳುವ ಪರಿಸ್ಥಿತಿಗೆ ಬಂದಿರುತ್ತಾರೆ. ಹಾಗಾದರೆ, ಜನರು ಹಣಕಾಸು ವಿಚಾರವಾಗಿ ಎಲ್ಲಿ ತಪ್ಪೆಸಗುತ್ತಾರೆ? ಹಣದ ಬಗ್ಗೆ ಜನರಿಗೆ ಕೆಲ ಪೂರ್ವಾಗ್ರಹಪೀಡಿತವಾದ ಮತ್ತು ತಪ್ಪಾದ ಆಲೋಚನೆಗಳಿವೆ.

ಫಿಕ್ಸೆಡ್ ಡೆಪಾಸಿಟ್​ನಲ್ಲಿ ಹಣ ಇಟ್ಟರೆ ಸಾಕಾ?

ಈಗಲೂ ಕೂಡ ಹೆಚ್ಚಿನ ಜನರು ತಮ್ಮಲ್ಲಿರುವ ಸೇವಿಂಗ್ಸ್ ಹಣವನ್ನು ಫಿಕ್ಸೆಡ್ ಡೆಪಾಸಿಟ್​ಗಳಲ್ಲಿ ಇಡಲು ಹೋಗುತ್ತಾರೆ. ಎಫ್​ಡಿಗಳಲ್ಲಿ ಸುಮಾರು ಆರೇಳು ಪ್ರತಿಶತ ಬಡ್ಡಿ ಮಾತ್ರವೇ ಸಿಗುತ್ತದೆ. ಆದರೆ, ಹಣದುಬ್ಬರವೇ ಶೇ. 5ಕ್ಕಿಂತ ಹೆಚ್ಚಿರುವುದರಿಂದ ಎಫ್​ಡಿಯಿಂದ ಸಿಗುವ ರಿಟರ್ನ್​ನಲ್ಲಿ ಹೆಚ್ಚಿನ ಮೌಲ್ಯ ವರ್ಧನೆ ಆಗಿರುವುದಿಲ್ಲ. ತಮ್ಮ ಉಳಿತಾಯ ಹಣದಲ್ಲಿ ಒಂದು ಭಾಗವನ್ನು ಮಾತ್ರ ಎಫ್​ಡಿಗೆ ಹಾಕುವುದು ಉತ್ತಮ ಎನ್ನುವುದು ತಜ್ಞರ ಸಲಹೆ.

ಸಾಲ ಮಾಡಿ ಕೆಟ್ಟರೆ?

ಸಾಲವೆಂದರೆ ಕೆಲವರು ಮಾರುದೂರ ಹಾರುತ್ತಾರೆ. ಆದರೆ, ಸಾಲದಲ್ಲಿ ಒಳ್ಳೆಯ ಸಾಲ, ಕೆಟ್ಟ ಸಾಲ ಎಂದು ವರ್ಗೀಕರಿಸಬಹುದು. ಬಹಳ ಕಡಿಮೆ ಬಡ್ಡಿಗೆ ಸಿಗುವ ಗೋಲ್ಡ್ ಲೋನ್, ಹೋಮ್ ಲೋನ್​ಗಳು ಒಳ್ಳೆಯ ಸಾಲ. ಬಹಳ ಅಧಿಕ ಬಡ್ಡಿಗೆ ಸಿಗುವ ಸಾಲಗಳು ಕೆಟ್ಟ ಸಾಲ. ನೀವು ಸಾಲದಿಂದ ಯಾವುದಾದರೂ ಬ್ಯುಸಿನೆಸ್​ಗೆ ಉಪಯೋಗಿಸುತ್ತಿದ್ದೀರೆಂದರೆ ಅದು ಉತ್ತಮ ಸಾಲವೇ. ಅನಗತ್ಯ ಮತ್ತು ಲಕ್ಷುರಿ ವಸ್ತುವಿಗೆ ಸಾಲ ಮಾಡುತ್ತಿದ್ದರೆ ಅದು ಕೆಟ್ಟ ಸಾಲ.

ಇದನ್ನೂ ಓದಿ: Mutual Fund Charges: ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿಯಬೇಕಾದ ವಿವಿಧ ಶುಲ್ಕಗಳಿವು…

ಚಿನ್ನದ ಒಡವೆ ಖರೀದಿಸುವುದು ಹೂಡಿಕೆಯಾ?

ಕೆಲವರು ತಮ್ಮ ಉಳಿತಾಯ ಹಣದಲ್ಲಿ ಚಿನ್ನಾಭರಣದಲ್ಲಿ ಹೂಡಿಕೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಹೂಡಿಕೆಗೆ ಆಭರಣ ಖರೀದಿಸುವುದು ತಪ್ಪು. ಆಭರಣವನ್ನು ಇಷ್ಟಪಟ್ಟು ಧರಿಸುವಂತಿದ್ದರೆ ಮಾತ್ರ ಅದನ್ನು ಖರೀದಿಸಿ. ಹೂಡಿಕೆಗೆಂದು ಆಭರಣ ಖರೀದಿಸುವುದರಿಂದ ಫಲ ಸಿಗದು. ಮೇಕಿಂಗ್ ಚಾರ್ಜಸ್, ವೇಸ್ಟೇಜ್ ಚಾರ್ಜಸ್ ಇತ್ಯಾದಿ ಇರುತ್ತವೆ. ಮಾರುವಾಗಲೂ ಚಿನ್ನ ಪೋಲಾಗುತ್ತದೆ.

ಷೇರು ಮಾರುಕಟ್ಟೆ ಜೂಜಾಟವಾ?

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹಲವರು ಹಿಂಜರಿಯುತ್ತಾರೆ. ಅದರಲ್ಲಿ ಹಾಕಿದ ಹಣ ಯಾವಾಗ ಏರುತ್ತದೆ, ಯಾವಾಗ ಇಳಿಯುತ್ತದೆ ಗೊತ್ತಾಗುವುದಿಲ್ಲ. ಅದೊಂದು ರೀತಿ ಜೂಜಾಟ ಎಂದು ಇವರು ತಪ್ಪು ತಿಳಿದಿರುತ್ತಾರೆ. ಆದರೆ, ಹೂಡಿಕೆಗೆ ಮುನ್ನ ಒಂದಷ್ಟು ಸಾಮಾನ್ಯ ಜ್ಞಾನ ಪಡೆದರೆ ಯಾರು ಬೇಕಾದರೂ ಷೇರುಗಳಲ್ಲಿ ಹೂಡಿಕೆ ಮಾಡಬಹುದು.

ಇನ್ಷೂರೆನ್ಸ್ ಒಂದು ಹೂಡಿಕೆ ಮಾರ್ಗವಾ?

ಇನ್ಷೂರೆನ್ಸ್ ಅನ್ನು ಲೈಫ್ ಪ್ರೊಟೆಕ್ಷನ್ ಹಾಗೂ ಇನ್ವೆಸ್ಟ್​ಮೆಂಟ್ ಎರಡೂ ಉದ್ದೇಶಕ್ಕೆ ಬಳಸುವವರು ಇದ್ದಾರೆ. ಇದು ತಪ್ಪು. ಇನ್ಷೂರೆನ್ಸ್ ಮೂಲತಃ ನಿಮಗೆ ಲೈಫ್ ಪ್ರೊಟೆಕ್ಷನ್ ಕೊಡುವ ಉತ್ಪನ್ನ. ಟರ್ಮ್ ಲೈಫ್ ಇನ್ಷೂರೆನ್ಸ್ ಹೊಂದಿದ್ದರೆ ಸಾಕು. ಹೂಡಿಕೆಗೆ ಬೇರೆ ಉತ್ಪನ್ನಗಳನ್ನು ಅವಲೋಕಿಸುವುದು ಜಾಣತನ. ಇನ್ಷೂರೆನ್ಸ್​ನಲ್ಲಿ ನೀವು ಹಾಕಿದ ಹಣ ವಾರ್ಷಿಕವಾಗಿ ಬೆಳೆಯುವುದು ಶೇ. 4-5 ಮಾತ್ರವೇ. ಅದರಿಂದ ಹೆಚ್ಚೇನೂ ರಿಟರ್ನ್ ಸಿಗುವುದಿಲ್ಲ ಎಂಬುದು ತಿಳಿದಿರಲಿ.

ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆ ಪಡೆದ 8 ಕೋಟಿ ಜನರು; ಏನಿದು ಪಿಂಚಣಿ ಸ್ಕೀಮ್? ಎಷ್ಟು ಸಿಗುತ್ತೆ ಲಾಭ?

ಹಣ ಉಳಿತಾಯ ಮಾಡಿದರೆ ಸಾಕಾ?

ಶ್ರೀಮಂತರಾಗಲು ಮೂರು ಅಂಶಗಳಿವೆ. ಹಣ ಗಳಿಕೆ, ಹಣ ಉಳಿಸುವಿಕೆ ಮತ್ತು ಹಣ ಹೂಡಿಕೆ. ಈ ಮೂರೂ ಇದ್ದರೆ ಮಾತ್ರ ಶ್ರೀಮಂತಿಕೆ ಸಾಧಿಸಲು ಸಾಧ್ಯ. ಕೆಲವರು ಎಲ್ಲಾ ವೆಚ್ಚಗಳನ್ನು ಕಡಿತ ಮಾಡಿ ಹಣ ಉಳಿಸುವುದಕ್ಕೆ ಪ್ರಾಧಾನ್ಯತೆ ಕೊಡುತ್ತಾರೆ. ಹೀಗೆ ಉಳಿಸಿಟ್ಟ ಹಣವನ್ನು ಹಾಗೇ ಬಿಟ್ಟರೆ ಹಣದುಬ್ಬರ ಸವೆತಕ್ಕೆ ಒಳಗಾಗಿ ಅದರ ನಿಜ ಮೌಲ್ಯ ಕಡಿಮೆ ಆಗುತ್ತಾ ಹೋಗುತ್ತದೆ. ಹೀಗಾಗಿ, ಉಳಿಸಿದ ಹಣವನ್ನು ಉತ್ತಮವಾಗಿ ರಿಟರ್ನ್ ತರಬಲ್ಲ ಯಾವುದಾದರೂ ಹೂಡಿಕೆ ಉತ್ಪನ್ನಗಳಿಗೆ ವಿನಿಯೋಗಿಸುವುದು ಉತ್ತಮ.

ಮುಂದೆ ಹೂಡಿಕೆ ಮಾಡಿದರಾಯ್ತು ಎನ್ನುವಿರಾ?

ಬಹಳ ಜನರು ಹಣ ಹೂಡಿಕೆ ಮಾಡಲು ಮೀನಮೇಷ ಎಣಿಸುತ್ತಾರೆ. ತಮ್ಮಲ್ಲಿರುವ ತಾಪತ್ರಯ ನೀಗಿಸಿಕೊಂಡರೆ ಸಾಕಾಗಿದೆ, ಇನ್ನೆಲ್ಲಿ ಹೂಡಿಕೆ ಎಂದು ಪ್ರತೀ ವರ್ಷವೂ ಹೇಳುತ್ತಲೇ ಇರುತ್ತಾರೆ. ಯಾವತ್ತೂ ಅವರ ತಾಪತ್ರಯ ತಪ್ಪದು, ಹೂಡಿಕೆ ಆಗದು. ಹೀಗಿದ್ದಾಗ ಏನು ಮಾಡಬೇಕು? ಏನಾದರಾಗಲೀ ಸ್ವಲ್ಪವಾದರೂ ಮೊತ್ತವನ್ನು ಹೂಡಿಕೆ ಮಾಡಲು ಆರಂಭಿಸಿ. ನಂತರ, ಅದನ್ನು ಹೆಚ್ಚಿಸುತ್ತಾ ಹೋಗಬಹುದು. ನಿಮ್ಮ ಬೇರೆ ತಾಪತ್ರಯಗಳು ತನ್ನಂತಾನೆ ಸರಿದಾರಿಗೆ ಬರುತ್ತಾ ಹೋಗುತ್ತವೆ ನೋಡುತ್ತಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ