ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ

|

Updated on: Sep 06, 2023 | 2:21 PM

PPF vs Mutual Fund: ಹೂಡಿಕೆ ವಿಚಾರಕ್ಕೆ ಬಂದರೆ ನಿಮ್ಮ ಸ್ವಭಾವ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಆಯ್ಕೆಗಳು ನಿಂತಿರುತ್ತವೆ. ಇವತ್ತಿನ ಜನಪ್ರಿಯ ಹೂಡಿಕೆಯಂತ್ರಗಳಾದ ಪಿಪಿಎಫ್ ಮತ್ತು ಮ್ಯುಚುವಲ್ ಫಂಡ್ ಮಧ್ಯೆ ಯಾವುದನ್ನು ಆರಿಸಿಕೊಳ್ಳುವುದು ಎಂಬುದಕ್ಕೆ ಒಂದಷ್ಟು ಟಿಪ್ಸ್ ಇಲ್ಲಿದೆ. ನೀವು ಎಷ್ಟರಮಟ್ಟಕ್ಕೆ ರಿಸ್ಕ್ ತೆಗೆದುಕೊಳ್ಳಲು ಸಾಧ್ಯ ಎಂಬುದರ ಮೇಲೆ ಆಯ್ಕೆ ನಿಂತಿರುತ್ತದೆ.

ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ
ಮ್ಯುಚುವಲ್ ಫಂಡ್​
Follow us on

ಭಾರತದಲ್ಲಿ ಹೂಡಿಕೆಯತ್ತ ಆಕರ್ಷಿತರಾಗುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಜನಪ್ರಿಯ ಹೂಡಿಕೆ ಸಾಧನಗಳಲ್ಲಿ ಪಿಪಿಎಫ್, ಮ್ಯುಚುವಲ್ ಫಂಡ್​ಗಳು ಇವೆ. ಎರಡೂ ಕೂಡ ವಿಭಿನ್ನ ರೀತಿಯ ಹೂಡಿಕೆ ಯಂತ್ರಗಳೆನಿಸಿವೆ. ಇವೆರಡರಲ್ಲಿ ಯಾವುದು ಉತ್ತಮ ಎಂದು ಯಾರಾದರೂ ಕೇಳಿದರೆ ಖಚಿತವಾಗಿ ಉತ್ತರ ಕೊಡುವುದು ಕಷ್ಟವಾಗಬಹುದು. ಅವರವರ ಅವಶ್ಯಕತೆಗಳಿಗೆ ಮತ್ತು ಅಪಾಯ ಎದುರಿಸುವ ಸಾಮರ್ಥ್ಯಗಳ ಮೇಲೆ ಆಯ್ಕೆ ನಿಂತಿರುತ್ತದೆ. ಮ್ಯೂಚುವಲ್ ಫಂಡ್​ಗಳು (Mutual Funds) ಸಾಮಾನ್ಯವಾಗಿ ಷೇರು ಮಾರುಕಟ್ಟೆಯ ಬೆಳವಣಿಗೆಯ ಮೇಲೆ ಅವಲಂಬಿತವಾಗಿರುತ್ತದೆ. ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎಂಬುದು ಸರ್ಕಾರದ ಬೆಂಬಲ ಇರುವ ಹೂಡಿಕೆ ಸ್ಕೀಮ್ ಆಗಿದ್ದು, ನಿಶ್ಚಿತ ಆದಾಯ ಮತ್ತು ತೆರಿಗೆ ಅನುಕೂಲಗಳನ್ನು ಒದಗಿಸುತ್ತದೆ.

ಪಿಪಿಎಫ್​ನಿಂದ ಏನು ಅನುಕೂಲ

ಮೇಲೆ ತಿಳಿಸಿದಂತೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸರ್ಕಾರದ ಬೆಂಬಲ ಇರುವ ಹೂಡಿಕೆ ಸ್ಕೀಮ್. ಹೀಗಾಗಿ, ಇದರಲ್ಲಿ ರಿಸ್ಕ್ ಸಾಧ್ಯತೆ ತೀರಾ ನಗಣ್ಯ. ಇದರಲ್ಲಿನ ಹೂಡಿಕೆಗೆ ಸಿಗುವ ಬಡ್ಡಿದರ ಸದ್ಯ ಶೇ. 7.1 ಮಾತ್ರ. ಇದು ಕಡಿಮೆ ರಿಟರ್ನ್ ನೀಡಿದರೂ ನಿಮ್ಮ ಹೂಡಿಕೆ ನಿಶ್ಚಿತ ಮತ್ತು ಸುರಕ್ಷಿತವಾಗಿರುತ್ತದೆ.

ಶೇ. 7.1ರ ವಾರ್ಷಿಕ ಬಡ್ಡಿದರವೇನೂ ತೀರಾ ಕಡಿಮೆ ಅಲ್ಲ. ಹಲವು ಎಫ್​ಡಿ ಸ್ಕೀಮ್​ಗಳಿಗಿಂತ ತುಸು ಹೆಚ್ಚೇ ಬಡ್ಡಿ ಸಿಗುತ್ತದೆ. ಪಿಪಿಎಫ್​ನ ಲಾಕ್ ಇನ್ ಪೀರಿಯಡ್ 15 ವರ್ಷ ಇದ್ದು, ಅದಾದ ಬಳಿಕ ಪ್ರತೀ 5 ವರ್ಷಕ್ಕೊಮ್ಮೆ ಅವಧಿ ವಿಸ್ತರಿಸಬಹುದು. ಇದು ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದ ಯೋಜನೆ.

ಇದನ್ನೂ ಓದಿ: ಸಾವರಿನ್ ಗೋಲ್ಡ್ ಬಾಂಡ್; ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯಲು ಆರ್​ಬಿಐನಿಂದ ವೇಳಾಪಟ್ಟಿ ಬಿಡುಗಡೆ

ಹಾಗೆಯೇ, ಪಿಪಿಎಫ್ ಮೇಲಿನ ಹೂಡಿಕೆಗೆ ತೆರಿಗೆ ರಿಯಾಯಿತಿಗಳಿರುತ್ತವೆ. ಹೂಡಿಕೆ ಆಗಿ 6ನೇ ವರ್ಷದ ಬಳಿಕ ನಿಮಗೆ ಬೇಕೆಂದಲ್ಲಿ ಹೂಡಿಕೆಯಲ್ಲಿ ಒಂದಷ್ಟು ಭಾಗವನ್ನು ಹಿಂಪಡೆಯುವ ಅವಕಾಶ ಇರುತ್ತದೆ.

ಮ್ಯುಚುವಲ್ ಫಂಡ್​ಗಳಿಂದ ಲಾಭಗಳೇನು?

ಮ್ಯೂಚುವಲ್ ಫಂಡ್​ಗಳು ನಿಮ್ಮ ಹಣವನ್ನು ಷೇರು, ಬಾಂಡ್ ಇತ್ಯಾದಿ ವಿವಿಧೆಡೆ ಹೂಡಿಕೆ ಮಾಡಬಹುದು. ಷೇರುಗಳ ಮೇಲೆ ಹೆಚ್ಚು ಹೂಡಿಕೆಯಾದರೆ ಲಾಭದ ಸಾಧ್ಯತೆ ಹೆಚ್ಚು. ಹಾಗೆಯೇ ನಷ್ಟದ ಅಪಾಯವೂ ಹೆಚ್ಚಿರುತ್ತದೆ.

ಮ್ಯುಚುವಲ್ ಫಂಡ್​ನಲ್ಲಿ ನೀವು ಎಸ್​​ಐಪಿ ಅಥವಾ ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್ ಅನ್ನು ಪಡೆಯಬಹುದು. ಸಾಮಾನ್ಯವಾಗಿ ಮ್ಯುಚುವಲ್ ಫಂಡ್​ಗಳು ಎಫ್​ಡಿ, ಪಿಪಿಎಫ್ ಇತ್ಯಾದಿಗಿಂತ ಹೆಚ್ಚು ರಿಟರ್ನ್ ಕೊಡುತ್ತವೆ. ಶೇ. 10ರಿಂದ ಶೇ. 15ರಷ್ಟು ವಾರ್ಷಿಕ ದರದಲ್ಲಿ ಹೂಡಿಕೆ ಬೆಳೆಬಹುದು. ಕೆಲವೊಮ್ಮೆ ಶೇ. 30ಕ್ಕಿಂತಲೂ ಹೆಚ್ಚು ದರದಲ್ಲಿ ಮ್ಯುಚುವಲ್ ಫಂಡ್​ಗಳು ಲಾಭ ತರಬಹುದು.

ಇದನ್ನೂ ಓದಿ: ಫುಯೆಲ್ ಕ್ರೆಡಿಟ್ ಕಾರ್ಡ್​ನಿಂದ ಏನು ಪ್ರಯೋಜನ? ಸೂಕ್ತ ಎನಿಸುವ ಕಾರ್ಡ್​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

ನಿಮಗೆ ತೆರಿಗೆ ಲಾಭ ಬೇಕೆಂದರೆ ಇಎಲ್​ಎಸ್​ಎಸ್ ಮ್ಯುಚುವಲ್ ಫಂಡ್​ಗಳ ಮೊರೆ ಹೋಗಬಹುದು. ಇನ್ನು, ಮ್ಯುಚುವಲ್ ಫಂಡ್​ನಲ್ಲಿ ನಿಮ್ಮ ಹಣವನ್ನು ಯಾವಾಗ ಬೇಕಾದರೂ ಹಿಂಪಡೆಯಬಹುದು.

ಒಟ್ಟಾರೆಯಾಗಿ ನೀವು ಹೆಚ್ಚು ರಿಸ್ಕ್ ಬಯಸದೇ ಇದ್ದರೆ ಪಿಪಿಎಫ್ ಪಡೆಯಬಹುದು. ರಿಸ್ಕ್ ಇದ್ದರೂ ಪರವಾಗಿಲ್ಲ ಎಂದು ಧೈರ್ಯವಾಗಿದ್ದರೆ ಮ್ಯುಚುವಲ್ ಫಂಡ್ ಉತ್ತಮ ಆಯ್ಕೆ ಎನಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Tue, 5 September 23