ನವದೆಹಲಿ, ಅಕ್ಟೋಬರ್ 29: ಲಕ್ಷುರಿ ಹೋಟೆಲ್ನಲ್ಲಿ ಒಂದು ರಾತ್ರಿ ಉಳಿಯಬೇಕಾದರೆ ಸಾವಿರಾರು ರೂ ತೆರಬೇಕು. ಮಾರಿಯಟ್ ರೆಸಾರ್ಟ್ನಲ್ಲಿ ಒಂದು ರಾತ್ರಿ ಸ್ಟೇ ಮಾಡಲು ಲಕ್ಷ ರೂ ಸಮೀಪದಷ್ಟು ಬೆಲೆ. ಅಲ್ಲಿ ಮಹಿಳೆಯೊಬ್ಬಳು ಮೂರು ದಿನ ಉಚಿತವಾಗಿ ಉಳಿದುಬಂದಿದ್ದಾಳೆ. ಇದ್ಯಾವುದೋ ಬಹುಮಾನದ ಭಾಗವಾಗಿ ಈಕೆ ಹೋಗಿದ್ದಲ್ಲ, ಅಥವಾ ವಂಚನೆ ಮಾಡಿ ಉಳಿದುಬಂದದ್ದಲ್ಲ. ಯಾವುದೇ ಅಕ್ರಮ ಇಲ್ಲದೆ ಈಕೆ ಉತ್ತರಾಖಂಡ್ನ ಮಾರಿಯಟ್ ರೆಸಾರ್ಟ್ನಲ್ಲಿ ಮೂರು ರಾತ್ರಿ ಸ್ಟೇ ಮಾಡಿ ಬಂದಿದ್ದಾಳೆ. ಈಕೆ ಪುಣೆಯ ಚಾರ್ಟರ್ಡ್ ಅಕೌಂಟೆಂಟ್ ಪ್ರೀತಿ ಜೈನ್. ಈಕೆ ರೆಸಾರ್ಟ್ನಲ್ಲಿ ಒಂದು ಪೈಸೆ ಖರ್ಚಿಲ್ಲದೆ ಉಚಿತವಾಗಿ ಉಳಿಯಲು ಸಾಧ್ಯವಾಗಿಸಿದ್ದು ಆಕೆಯ ಕ್ರೆಡಿಟ್ ಕಾರ್ಡ್.
ಹಲವು ಕ್ರೆಡಿಟ್ ಕಾರ್ಡ್ಗಳು ನಾನಾ ರೀತಿಯ ಆಫರ್ ನೀಡುತ್ತವೆ. ರಿವಾರ್ಡ್ ಪಾಯಿಂಟ್ಗಳು, ಕ್ಯಾಷ್ ಬ್ಯಾಕ್ಗಳನ್ನು ನೀಡುತ್ತವೆ. ಅವುಗಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದು ಅವರವರ ವಿವೇಚನೆ, ಸಮಯಪ್ರಜ್ಞೆಗೆ ಬಿಟ್ಟಿದ್ದು.
ಸಿಎ ಆಗಿರುವ ಪ್ರೀತಿ ಜೈನ್ ಅವರು ಅಮೆರಿಕನ್ ಎಕ್ಸ್ಪ್ರೆಸ್ ಪ್ಲಾಟಿನಂ ಕಾರ್ಡ್ ಹೊಂದಿದ್ದು, ಅದನ್ನು ಶಾಪಿಂಗ್ಗೆ ಬಳಸಿ 58,000 ರಿವಾರ್ಡ್ ಪಾಯಿಂಟ್ ಪಡೆದಿದ್ದಾಳೆ. ನಂತರ ಅದಕ್ಕೆ ಶೇ. 30ರಷ್ಟು ಬೋನಸ್ ಪಾಯಿಂಟ್ ಕೂಡ ಸೇರಿದೆ. ಅದೇ ವೇಳೆ, ಮಾರಿಯಟ್ನ ಗ್ಲೋಬಲ್ ಲಾಯಲ್ಟಿ ಸ್ಕೀಮ್ ಮೂಲಕ ಈ 75,000 ರಿವಾರ್ಡ್ ಪಾಯಿಂಟ್ಗಳನ್ನು ಮಾರಿಯಟ್ ಬಾನ್ವೋಯ್ ಪಾಯಿಂಟ್ ಆಗಿ ಪರಿವರ್ತಿಸಿಕೊಂಡಿದ್ದಾಳೆ.
ಈ ಅಂಕಗಳನ್ನು ಉಪಯೋಗಿಸಿ ಈಕೆ ಉತ್ತರಾಖಂಡ್ನ ಮಾರಿಯಟ್ ಲಕ್ಷುರಿ ಹೋಟೆಲ್ನಲ್ಲಿ ಸ್ಟೇ ಮಾಡುವ ಅವಕಾಶ ಸಿಕ್ಕಿದೆ. ಈಕೆಗೆ ಮೊದಲ ದಿನವೇ ಪ್ರೀಮಿಯರ್ ರೂಮ್ ಸಿಕ್ಕಿತು. ನಂತರ ಎರಡು ದಿನ ಎಕ್ಸಿಕ್ಯೂಟಿವ್ ಸೂಟ್ ದೊರಕಿತು. ಈ ಎಕ್ಸಿಕ್ಯೂಟಿವ್ ಸೂಟ್ ಒಂದು ರಾತ್ರಿಗೆ ಕನಿಷ್ಠ 90,000 ರೂ ಬೆಲೆ ಹೊಂದಿದೆ. ಈಕೆ 3 ರಾತ್ರಿ ಅಲ್ಲಿ ತಂಗಿದ್ದಾಳೆ. ಅದಕ್ಕೆ 3 ಲಕ್ಷ ರೂ ವೆಚ್ಚವಾಗುತ್ತದೆ. ರಿವಾರ್ಡ್ ಪಾಯಿಂಟ್ ದೆಸೆಯಿಂದ ಈಕೆಗೆ ಅವೆಲ್ಲವೂ ಉಚಿತವಾಗಿ ಸಿಕ್ಕಿದೆ. ಆದರೆ, 58,000 ರಿವಾರ್ಡ್ ಪಾಯಿಂಟ್ ಸಂಗ್ರಹಕ್ಕೆ ಈಕೆ ಸಿಕ್ಕಾಪಟ್ಟೆ ಶಾಪಿಂಗ್ ಮಾಡಿರಬಹುದು ಎಂದನಿಸಬಹುದು. ಆದರೆ, ಈಕೆ ನೀಡಿರುವ ಮಾಹಿತಿ ಪ್ರಕಾರ, ಅಷ್ಟು ರಿವಾರ್ಡ್ ಪಾಯಿಂಟ್ ಕಲೆಹಾಕಲು ಈಕೆ 4 ಲಕ್ಷ ರೂ ಮಾತ್ರವೇ ಆ ಕ್ರೆಡಿಟ್ ಕಾರ್ಡ್ನಿಂದ ಶಾಪಿಂಗ್ ಮಾಡಿರುವುದು.
ಇದನ್ನೂ ಓದಿ: ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಪ್ರೀತಿ ಜೈನ್ ತಮ್ಮ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಂತ ಈಕೆ ಬಳಸಿದ ಅಮೆರಿಕನ್ ಎಕ್ಸ್ಪ್ರೆಸ್ ಪ್ಲಾಟಿನಂ ಕಾರ್ಡ್ ಮಾತ್ರವೇ ಈ ಅವಕಾಶ ನೀಡುತ್ತದೆ ಎಂದಲ್ಲ, ಬೇರೆ ಹಲವು ಕ್ರೆಡಿಟ್ ಕಾರ್ಡ್ಗಳು ರಿವಾರ್ಡ್ ಪಾಯಿಂಟ್ಗಳನ್ನು ನೀಡುತ್ತವೆ. ಬೇರೆ ಬೇರೆ ಶಾಪಿಂಗ್ಗೆ ಡಿಸ್ಕೌಂಟ್ ಪಡೆಯುವುದು ಹೀಗೆ ವಿವಿಧ ರೀತಿಯಲ್ಲಿ ಇವು ಉಪಯುಕ್ತ ಎನಿಸುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ