Repo Rate Hike: ರೆಪೊ ದರ ಹೆಚ್ಚಳದ ಬಳಿಕ ಎಷ್ಟು ದುಬಾರಿಯಾಗಲಿದೆ ಗೃಹ ಸಾಲದ ಇಎಂಐ? ಇಲ್ಲಿದೆ ಲೆಕ್ಕಾಚಾರ

| Updated By: ಗಣಪತಿ ಶರ್ಮ

Updated on: Dec 07, 2022 | 3:42 PM

ರೆಪೊ ದರ ಹೆಚ್ಚಳವು ಈಗಾಗಲೇ ಗೃಹ ಸಾಲ ಮರುಪಾವತಿ ಮಾಡುತ್ತಿರುವವರ ಇಎಂಐ ಮೇಲೂ ಪರಿಣಾಮ ಬೀರಲಿದೆ. ಅಸ್ತಿತ್ವದಲ್ಲಿರುವ ಗೃಹ ಸಾಲದ ಇಎಂಐ ಮೇಲೆ ರೆಪೊ ದರ ಹೆಚ್ಚಳ ಹೇಗೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ.

Repo Rate Hike: ರೆಪೊ ದರ ಹೆಚ್ಚಳದ ಬಳಿಕ ಎಷ್ಟು ದುಬಾರಿಯಾಗಲಿದೆ ಗೃಹ ಸಾಲದ ಇಎಂಐ? ಇಲ್ಲಿದೆ ಲೆಕ್ಕಾಚಾರ
ಸಾಂದರ್ಭಿಕ ಚಿತ್ರ
Follow us on

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಹಣಕಾಸು ನೀತಿ ಸಮಿತಿ (MPC) ರೆಪೊ ದರವನ್ನು (Repo Rate) 35 ಮೂಲಾಂಶ ಹೆಚ್ಚಿಸಿದ್ದು, ಶೇಕಡಾ 6.25ಕ್ಕೆ ನಿಗದಿಪಡಿಸಿದೆ. ಪರಿಷ್ಕೃತ ದರ ಇಂದಿನಿಂದಲೇ (ಡಿಸೆಂಬರ್ 7) ಅನ್ವಯವಾಗಲಿದ್ದು ಇದಕ್ಕೆ ಅನುಗುಣವಾಗಿ ವಾಹನ, ಗೃಹ ಹಾಗೂ ಇತರ ಸಾಲಗಳ ಬಡ್ಡಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್​ಬಿಐ ಹೇಳಿದೆ. ಪರಿಣಾಮವಾಗಿ ಗ್ರಾಹಕರ ಗೃಹ ಸಾಲದ ಇಎಂಐ ಮೊತ್ತ ತುಸು ಹೆಚ್ಚಾಗಲಿದೆ.

ರೆಪೊ ದರ ಹೆಚ್ಚಳವು ಇಎಂಐ ಮೇಲೆ ಪರಿಣಾಮ ಬೀರಲಿದ್ದು, ಕೈಗೆಟಕುವ ದರದಲ್ಲಿ ಮನೆ ಖರೀದಿಗೆ ಲಭ್ಯವಾಗುವುದಕ್ಕೆ ಅಡಚಣೆ ಉಂಟು ಮಾಡಲಿದೆ. ಈಗಾಗಲೇ ಗೃಹ ಸಾಲ ಮರುಪಾವತಿ ಮಾಡುತ್ತಿರುವವರ ಇಎಂಐ ಮೇಲೂ ಪರಿಣಾಮ ಬೀರಲಿದೆ. ಅಸ್ತಿತ್ವದಲ್ಲಿರುವ ಗೃಹ ಸಾಲದ ಇಎಂಐ ಮೇಲೆ ರೆಪೊ ದರ ಹೆಚ್ಚಳ ಹೇಗೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ.

ಇದನ್ನೂ ಓದಿ: RBI Repo Rate Hike: ಆರ್​ಬಿಐ ರೆಪೊ ದರ 35 ಮೂಲಾಂಶ ಹೆಚ್ಚಳ; ದುಬಾರಿಯಾಗಲಿದೆ ವಾಹನ, ಗೃಹ ಸಾಲದ ಇಎಂಐ

ಗ್ರಾಹಕರೊಬ್ಬರು 30 ಲಕ್ಷ ರೂ. ಗೃಹ ಸಾಲ ಪಡೆದುಕೊಂಡಿದ್ದಾರೆ ಎಂದಿಟ್ಟುಕೊಳ್ಳೋಣ. 20 ವರ್ಷಗಳ ಅವಧಿಗೆ ಶೇಕಡಾ 8.50ರ ಬಡ್ಡಿ ದರಕ್ಕೆ ಈ ಸಾಲ ಪಡೆಯಲಾಗಿದೆ ಎಂದುಕೊಂಡರೆ, ಅವರು ಸದ್ಯ 26,035 ರೂ. ಇಎಂಐ ಪಾವತಿ ಮಾಡುತ್ತಿದ್ದಾರೆ. ಇದೀಗ ರೆಪೊ ದರ ಹೆಚ್ಚಳದ ಪರಿಣಾಮ ಸಾಲದ ಬಡ್ಡಿಯಲ್ಲಿಯೂ ಅದೇ ಪ್ರಮಾಣದ ಹೆಚ್ಚಳವಾದರೆ ಬಡ್ಡಿ ಶೇಕಡಾ 8.85 ಆಗಲಿದೆ. ಇದರೊಂದಿಗೆ ಅವರ ಇಎಂಐ ಮೊತ್ತ 26,703 ಆಗಲಿದೆ. ಅಂದರೆ ಇಎಂಐಯಲ್ಲಿ 668 ರೂ. ಹೆಚ್ಚಳವಾಗಲಿದೆ. ಒಟ್ಟಾರೆಯಾಗಿ ಅವರು 20 ವರ್ಷಗಳ ಅವಧಿಯಲ್ಲಿ 1.60 ಲಕ್ಷ ರೂ. ಹೆಚ್ಚು ಪಾವತಿ ಮಾಡಬೇಕಾಗಿ ಬರುತ್ತದೆ ಎಂದು ಬ್ಯಾಂಕಿಂಗ್ ತಜ್ಞರು ತಿಳಿಸಿರುವುದಾಗಿ ‘ಔಟ್​​ಲುಕ್ ಇಂಡಿಯಾ’ ವರದಿ ಮಾಡಿದೆ.

ವಸತಿ ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿದೆ ದರ ಹೆಚ್ಚಳ

ರೆಪೊ ದರದಲ್ಲಿನ ಹೆಚ್ಚಳವು ನಿಸ್ಸಂದೇಹವಾಗಿ ಗೃಹ ಸಾಲದ ಬಡ್ಡಿದರಗಳನ್ನು ಹೆಚ್ಚಿಸಲಿದೆ. ಈಗಾಲೇ ನಾಲ್ಕು ಬಾರಿ ರೆಪೊ ದರ ಹೆಚ್ಚಳ ಮಾಡಿರುವುದು ಪ್ರಭಾವ ಬೀರಿದೆ. ಇದು ವಸತಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ ಎಂದು ರಿಯಲ್​ ಎಸ್ಟೇಟ್​ ತಜ್ಞರು ಹೇಳಿದ್ದಾರೆ. ಸದ್ಯ ಗೃಹ ಸಾಲದ ಬಡ್ಡಿ ದರ ಒಂದಂಕಿ ಮೀರಿಲ್ಲ. ಒಂದು ವೇಳೆ ಎರಡಂಕಿ ತಲುಪಿದಲ್ಲಿ ವಸತಿ ಮಾರಾಟ ಕ್ಷೇತ್ರದ ಮೇಲೆ ಒತ್ತಡ ಬೀಳಲಿದೆ ಎಂದು ಅನಾರಕ್ ಗ್ರೂಪ್​​ನ ಅಧ್ಯಕ್ಷ ಅನುಜ್ ಪುರಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ