T-bill SIP: ಸರ್ಕಾರದ ಟ್ರೆಷರಿ ಬಿಲ್​ಗಳಲ್ಲಿ ಎಸ್​ಐಪಿ ಮೂಲಕ ಹೂಡಿಕೆ; ಆರ್​ಬಿಐ ರಿಟೇಲ್ ಡೈರೆಕ್ಟ್​ನಲ್ಲಿ ಅವಕಾಶ

SIP in treasury bills: ಆರ್​ಬಿಐನ ರೀಟೇಲ್ ಡೈರೆಕ್ಟ್ ಪ್ಲಾಟ್​ಫಾರ್ಮ್​ನಲ್ಲಿ ಎಸ್​ಐಪಿ ಮೂಲಕ ಸರ್ಕಾರದ ಟ್ರೆಷರಿ ಬಿಲ್​ಗಳಲ್ಲಿ ಹೂಡಿಕೆ ಮಾಡಬಹುದು. ರೀಟೇಲ್ ಡೈರೆಕ್ಟ್ ಪ್ಲಾಟ್​ಫಾರ್ಮ್​ನಲ್ಲಿ ಟಿ ಬಿಲ್ ಮಾತ್ರವಲ್ಲ, ಬಾಂಡ್ ಇತ್ಯಾದಿ ಸರ್ಕಾರದ ಸೆಕ್ಯುರಿಟಿಗಳನ್ನು ಖರೀದಿಸಬಹುದು. ಟ್ರೆಷರಿ ಬಿಲ್​ಗಳು 14, 91, 182 ಮತ್ತು 364 ದಿನಗಳ ಮೆಚ್ಯುರಿಟಿ ಡೇಟ್ ಹೊಂದಿದ್ದು, ವಾರ್ಷಿಕ ಶೇ. 5.50ರ ಆಸುಪಾಸಿನಲ್ಲಿ ಲಾಭ ನೀಡುತ್ತವೆ.

T-bill SIP: ಸರ್ಕಾರದ ಟ್ರೆಷರಿ ಬಿಲ್​ಗಳಲ್ಲಿ ಎಸ್​ಐಪಿ ಮೂಲಕ ಹೂಡಿಕೆ; ಆರ್​ಬಿಐ ರಿಟೇಲ್ ಡೈರೆಕ್ಟ್​ನಲ್ಲಿ ಅವಕಾಶ
ಆರ್​ಬಿಐ ರೀಟೇಲ್ ಡೈರೆಕ್ಟ್

Updated on: Aug 06, 2025 | 2:33 PM

ನವದೆಹಲಿ, ಆಗಸ್ಟ್ 6: ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿಯು ಆಗಸ್ಟ್ ತಿಂಗಳ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಅವುಗಳ ಪೈಕಿ ಆರ್​ಬಿಐನ ರೀಟೇಲ್ ಡೈರೆಕ್ಟ್ ಪ್ಲಾಟ್​ಫಾರ್ಮ್ (RBI Retail Direct) ಅನ್ನು ಅಪ್​ಗ್ರೇಡ್ ಮಾಡಲಾಗಿರುವುದೂ ಒಂದು. ರೀಟೇಲ್ ಹೂಡಿಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಅಪ್​ಗ್ರೇಡ್ ಮಾಡಲಾಗಿದೆ. ಈ ಪ್ಲಾಟ್​ಫಾರ್ಮ್​ನಲ್ಲಿ ರೀಟೇಲ್ ಹೂಡಿಕೆದಾರರು ಎಸ್​ಐಪಿ ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಮೂಲಕ ಟ್ರೆಷರಿ ಬಿಲ್​ಗಳಲ್ಲಿ ಹೂಡಿಕೆ ಮಾಡಬಹುದು.

ಏನಿದು ಟ್ರೆಷರಿ ಬಿಲ್ ಅಥವಾ ಟಿ-ಬಿಲ್?

ಸರ್ಕಾರಿ ಬಾಂಡ್ ಅಥವಾ ಸಾಲಪತ್ರದ ರೀತಿ ಟ್ರೆಷರಿ ಬಿಲ್ ಕೂಡ ಸರ್ಕಾರದ ಒಂದು ಬಗೆಯ ಸಾಲಪತ್ರ. ಸರ್ಕಾರಕ್ಕೆ ಕಿರು ಅವಧಿಗೆ ಸಾಲದ ಅವಶ್ಯಕತೆ ಇದ್ದಾಗ ಸಾರ್ವಜನಿಕವಾಗಿ ಹಣ ಸಂಗ್ರಹಿಸಲು ಟ್ರೆಷರಿ ಬಿಲ್​ಗಳನ್ನು ನೀಡುತ್ತದೆ. ಯಾರು ಬೇಕಾದರೂ ಈ ಟಿ-ಬಿಲ್​ಗಳನ್ನು ಖರೀದಿಸಬಹುದು.

ಟ್ರೆಷರಿ ಬಿಲ್​ಗಳು ಸಾಮಾನ್ಯವಾಗಿ ನಾಲ್ಕು ಮೆಚ್ಯುರಿಟಿ ದಿನಾಂಕಗಳನ್ನು ಹೊಂದಿರುತ್ತವೆ. 14 ದಿನ, 91 ದಿನ, 182 ದಿನ ಹಾಗೂ 364 ದಿನಗಳ ಮೆಚ್ಯುರಿಟಿ ಡೇಟ್ ಇರುತ್ತದೆ.

ಇದನ್ನೂ ಓದಿ: RBI Monetary Policy: ಕೆವೈಸಿಯಿಂದ ಹಿಡಿದು ರೀಟೇಲ್ ಡೈರೆಕ್ಟ್​ವರೆಗೆ ಆರ್​ಬಿಐನಿಂದ ಮೂರು ಮಹತ್ವದ ಗ್ರಾಹಕಕೇಂದ್ರಿತ ಕ್ರಮಗಳ ಘೋಷಣೆ

ಟಿ-ಬಿಲ್​ಗಳಿಂದ ಎಷ್ಟು ಲಾಭ ಸಿಗುತ್ತದೆ?

ಟ್ರೆಷರಿ ಬಿಲ್​ಗಳು ನೂರಕ್ಕೆ ನೂರು ಸುರಕ್ಷಿತ ಹೂಡಿಕೆ ಆಗಿದೆ. ಆದರೆ, ಗವರ್ನ್ಮೆಂಟ್ ಬಾಂಡ್, ಎಫ್​ಡಿ ಇತ್ಯಾದಿಯಂತೆ ಬಡ್ಡಿ ಇರುವುದಿಲ್ಲ. ಡಿಸ್ಕೌಂಟ್ ದರದಲ್ಲಿ ನೀವು ಟಿ-ಬಿಲ್ ಖರೀದಿಸಬಹುದು.

ಉದಾಹರಣೆಗೆ, 91 ದಿನಗಳಿಗೆ ಮೆಚ್ಯೂರ್ ಆಗುವ 130 ಫೇಸ್ ವ್ಯಾಲ್ಯೂ ಇರುವ ಟ್ರೆಷರಿ ಬಿಲ್ ಅನ್ನು ಸರ್ಕಾರ 2 ರೂ ಡಿಸ್ಕೌಂಟ್​ಗೆ ನಿಮಗೆ ಆಫರ್ ಮಾಡಲಾಗುತ್ತದೆ ಎಂದಿಟ್ಟುಕೊಳ್ಳಿ. ಆಗ ನೀವು 130 ರೂ ಮೌಲ್ಯದ ಟಿ-ಬಿಲ್ ಅನ್ನು 128 ರೂಗೆ ಪಡೆಯುತ್ತೀರಿ. 91 ದಿನಗಳಾದ ಮೇಲೆ ನಿಮಗೆ 130 ರೂ ಸಿಗುತ್ತದೆ. ನಿಮ್ಮ 128 ರೂ ಹೂಡಿಕೆಯು ಮೂರು ತಿಂಗಳಲ್ಲಿ 130 ರೂ ಆಗುತ್ತದೆ. ಇದು ಉದಾಹರಣೆ ಮಾತ್ರ.

ಟಿ-ಬಿಲ್​ಗಳಲ್ಲಿ ಕನಿಷ್ಠ ಹೂಡಿಕೆ 25,000 ರೂ ಇದೆ. ಈಗ ಎಸ್​ಐಪಿ ಮೂಲಕ ಹೂಡಿಕೆಗೆ ಅವಕಾಶ ಕೊಡಲಾಗಿದೆ. ನಿಯಮಿತವಾಗಿ ಹೂಡಿಕೆ ಮಾಡಬಹುದು. ಆರ್​ಬಿಐ ರೀಟೇಲ್ ಡೈರೆಕ್ಟ್ ಪ್ಲಾಟ್​ಫಾರ್ಮ್​ನಲ್ಲಿ ಈ ಅವಕಾಶ ಇದೆ.

ಇದನ್ನೂ ಓದಿ: RBI Repo Rate: ಆರ್​ಬಿಐ ರಿಪೋ ದರದಲ್ಲಿ ಬದಲಾವಣೆ ಇಲ್ಲ; ಶೇ. 5.5 ಬಡ್ಡಿದರ ಮುಂದುವರಿಸಿದ ರಿಸರ್ವ್ ಬ್ಯಾಂಕ್

ಆರ್​ಬಿಐ ರೀಟೇಲ್ ಡೈರೆಕ್ಟ್​ನಲ್ಲಿ ಇನ್ನೂ ಏನೇನಿದೆ?

ಆರ್​ಬಿಐನ ರೀಟೇಲ್ ಡೈರೆಕ್ಟ್ ವೆಬ್​ಸೈಟ್​ನಲ್ಲಿ ಸರ್ಕಾರದ ವಿವಿಧ ಸೆಕ್ಯುರಿಟಿಗಳು ಅಥವಾ ಸಾಲಪತ್ರಗಳನ್ನು ಖರೀದಿಸಲು ಅವಕಾಶ ಇದೆ. ಯಾವ ಬ್ರೋಕರ್​ಗಳ ಅಗತ್ಯ ಇಲ್ಲದೇ ನೇರವಾಗಿ ಹೂಡಿಕೆ ಮಾಡಬಹುದು. ಸರ್ಕಾರಿ ಬಾಂಡ್, ಸಾವರಿನ್ ಗೋಲ್ಡ್ ಬಾಂಡ್, ಟ್ರೆಷರಿ ಬಿಲ್, ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಇತ್ಯಾದಿ ಸೆಕ್ಯೂರಿಟಿಗಳನ್ನು ಈ ಪ್ಲಾಟ್​ಫಾರ್ಮ್​ನಲ್ಲಿ ಖರೀದಿಸಬಹುದು.

ಟ್ರೆಷರಿ ಬಿಲ್​ಗಳಿಂದ ಸಾಮಾನ್ಯವಾಗಿ ವರ್ಷಕ್ಕೆ ಶೇ. 5.50ರ ದರದಲ್ಲಿ ರಿಟರ್ನ್ ನಿರೀಕ್ಷಿಸಬಹುದು. ಇದರ ಹಣ ಹಿಂಪಡೆಯಲು ಮೆಚ್ಯೂರಿಟಿ ಡೇಟ್​ವರೆಗೂ ಕಾಯಬೇಕಾಗುತ್ತದೆ. ಸೆಕೆಂಡರಿ ಮಾರುಕಟ್ಟೆ ಅಥವಾ ಷೇರು ವಿನಿಮಯ ಕೇಂದ್ರದಲ್ಲಿ ಈ ಟಿ-ಬಿಲ್​ಗಳನ್ನು ಮಾರಲು ಅವಕಾಶ ಇರುತ್ತದೆ. ಅಲ್ಲಿ ಮಾರಲು ಸಾಧ್ಯವಾದರೆ ಮೆಚ್ಯೂರಿಟಿಗಿಂತ ಮುನ್ನವೇ ಹಣ ಮರಳಿ ಪಡೆಯಲು ಸಾಧ್ಯವಾಗುತ್ತದೆ. ಒಟ್ಟಾರೆ, ಎಫ್​ಡಿಗೆ ಹೋಲಿಸಿದರೆ ಟಿ ಬಿಲ್​ಗಳು ಕಡಿಮೆ ಲಾಭ ನೀಡುತ್ತವಾದರೂ ನೂರಕ್ಕೆ ನೂರು ಸುರಕ್ಷಿತ ಹೂಡಿಕೆ ಎನಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ