ನವದೆಹಲಿ, ಜನವರಿ 16: ಹಣದುಬ್ಬರದ ಬಿಸಿಗೆ ಒಳಗಾಗಿರುವ ಜನಸಾಮಾನ್ಯರಿಗೆ ಈಗ ಗಾಯದ ಮೇಲೆ ಬರೆ ಎಳೆದಂತೆ ಸಾಲವೂ ದುಬಾರಿಯಾಗುತ್ತಿದೆ. ಪರ್ಸನಲ್ ಲೋನ್ ದರಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರ್ಬಿಐನ ಹೊಸ ರಿಸ್ಕ್ ವೇಟ್ ನಿಯಮದ (RBI’s New Risk Weightage rule) ಪರಿಣಾಮವಾಗಿ ಪರ್ಸನಲ್ ಲೋನ್ ಸೇರಿದಂತೆ ಎಲ್ಲಾ ರೀತಿಯ ಅಡಮಾನರಹಿತ ಸಾಲಗಳ (unsecured loans) ದರ ಹೆಚ್ಚಲಿದೆ. ಅದರಲ್ಲೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (NBFCs) ಕೈ ಸಾಲ ಬಹಳ ದುಬಾರಿ ಆಗಬಹುದು.
ಸಾಲಗಳು ಬ್ಯಾಂಕ್ನ ಆದಾಯಕ್ಕೆ ಪ್ರಮುಖ ಮೂಲ. ಅಡಮಾನ ಇಟ್ಟುಕೊಂಡು ಕೊಡಲಾಗುವ ಸಾಲವು ಸೆಕ್ಯೂರ್ಡ್ ಲೋನ್. ಅಡಮಾನ ಇಲ್ಲದೇ ಕೊಡಲಾಗುವ ಸಾಲ ಅನ್ಸೆಕ್ಯೂರ್ಡ್ ಲೋನ್. ಈ ಎರಡನೇ ವರ್ಗದ ಸಾಲವನ್ನು ಬ್ಯಾಂಕ್ ಒಂದು ನಂಬಿಕೆಯ ಆಧಾರದ ಮೇಲೆ ನೀಡುತ್ತದೆ. ಸಾಲ ಮರುಪಾವತಿ ಆಗುತ್ತದೆ ಎಂದು ಗ್ಯಾರಂಟಿ ಇರುವುದಿಲ್ಲ. ಇಂಥ ಅನ್ಸೆಕ್ಯೂರ್ಡ್ ಲೋನ್ಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಎಂದು ಆರ್ಬಿಐ ಆತಂಕ ವ್ಯಕ್ತಪಡಿಸಿತ್ತು.
ಇಂಥ ಅಭದ್ರತಾ ಸಾಲಗಳ ಪ್ರಮಾಣವನ್ನು ತಗ್ಗಿಸಲು ಆರ್ಬಿಐ ಈ ಸಾಲಗಳಿಗೆ ರಿಸ್ಕ್ ವೇಟೇಜ್ ಹೆಚ್ಚಿಸಿದೆ. ಶೇ. 100ರಷ್ಟು ಇದ್ದ ರಿಸ್ಕ್ ವೇಟ್ ಅನ್ನು ಶೇ. 125ಕ್ಕೆ ಹೆಚ್ಚಿಸಿದೆ.
ಬ್ಯಾಂಕುಗಳು ಸಾಲದ ರಿಸ್ಕ್ ಅನ್ನು ಕಡಿಮೆ ಮಾಡಲು ಒಂದಿಷ್ಟು ಹಣವನ್ನು ಮೀಸಲಿರಿಸಬೇಕು ಎಂದು ಆರ್ಬಿಐ ನಿಯಮ ಹೇಳುತ್ತದೆ. ಇದೆ ಕ್ಯಾಪಿಟಲ್ ಅಡಿಕ್ವಸಿ ರೇಷಿಯೋ ಅಥವಾ ಸಿಎಆರ್. ಒಂಬತ್ತು ಪ್ರತಿಶತದಷ್ಟು ಸಿಎಆರ್ ಎತ್ತಿಟ್ಟಿರಬೇಕು.
ಉದಾಹರಣೆಗೆ, ಈ ಹಿಂದೆ ಪರ್ಸನಲ್ ಲೋನ್ಗೆ ರಿಸ್ಕ್ ವೇಟ್ 100 ಪರ್ಸೆಂಟ್ ಇತ್ತು. ಅಂದರೆ ನೂರು ರುಪಾಯಿಗೆ ನೂರು ರುಪಾಯಿಯೂ ರಿಸ್ಕ್ ಎಂದಾಗುತ್ತದೆ. ಇದಕ್ಕೆ ಶೇ. 9ರಷ್ಟು ಸಿಎಆರ್ ಎಂದರೆ, 9 ರುಪಾಯಿ ಹಣವನ್ನು ತೆಗೆದಿರಿಸಬೇಕು. ಅಂದರೆ ನೂರು ರುಪಾಯಿಯಷ್ಟು ಪರ್ಸನಲ್ ಲೋನ್ ಕೊಟ್ಟರೆ ಬ್ಯಾಂಕ್ 9 ರುಪಾಯಿಯನ್ನು ಹೆಚ್ಚುವರಿಯಾಗಿ ತನ್ನ ಬಳಿ ಇಟ್ಟುಕೊಂಡಿರಬೇಕು.
ಈಗ ರಿಸ್ಕ್ ವೇಟ್ ಅನ್ನು ಶೇ. 100ರಿಂದ 125ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಪ್ರತೀ ನೂರು ರೂ ಸಾಲಕ್ಕೆ ಇದ್ದ ಸಿಎಆರ್ ಪ್ರಮಾಣ 9 ರೂನಿಂದ 11.25 ರುಪಾಯಿಗೆ ಹೆಚ್ಚಾಗುತ್ತದೆ.
ಇದನ್ನೂ ಓದಿ: 40% EMI Rule: ನಿಮ್ಮ ಆದಾಯದಲ್ಲಿ ಸಾಲಕ್ಕೆ ಮಿತಿ ಎಷ್ಟಿರಬೇಕು? ನೆನಪಿರಲಿ 40 ಪರ್ಸೆಂಟ್ ರೂಲ್; ಈ ಗಡಿ ದಾಟದಿರಿ ಜೋಕೆ..!
ಹೆಚ್ಚುವರಿ ರಿಸ್ಕ್ ಅನ್ನು ಸರಿದೂಗಿಸಲು ಬ್ಯಾಂಕ್ ಹೆಚ್ಚು ಮೊತ್ತದ ಸಿಎಆರ್ ಇಟ್ಟುಕೊಳ್ಳಬೇಕಾಗುತ್ತದೆ. ಅಂದರೆ ಬ್ಯಾಂಕು ಹೆಚ್ಚು ಫಂಡ್ಗಳನ್ನು ಪಡೆಯಬೇಕು. ಬಾಂಡ್ಗಳ ಮೂಲಕವೋ ಮತ್ತೊಂದರ ಮೂಲಕವೋ ಅನಿವಾರ್ಯವಾಗಿ ಹೊರಗೆ ಬಂಡವಾಳ ಸಂಗ್ರಹಿಸಬೇಕಾಗುತ್ತದೆ. ಎಲ್ಲಾ ಬ್ಯಾಂಕುಗಳಿಗೂ ಇದೇ ಸ್ಥಿತಿ ಆದಾಗ ಹಣಕ್ಕೆ ಬೇಡಿಕೆ ಹೆಚ್ಚುತ್ತದೆ. ಹೆಚ್ಚು ಬಡ್ಡಿ ತೆತ್ತು ಬಂಡವಾಳ ಪಡೆಯಬೇಕಾಗುತ್ತದೆ. ಆ ಹೆಚ್ಚುವರಿ ಬಡ್ಡಿಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯ. ತತ್ಪರಿಣಾಮವಾಗಿ ಸಾಲದ ದರ, ಅದರಲ್ಲೂ ಕೈಸಾಲದಂತಹ ಅನ್ಸೆಕ್ಯೂರ್ಡ್ ಲೋನ್ಗಳ ದರ ಬಹಳ ಹೆಚ್ಚಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ