ನವದೆಹಲಿ, ಆಗಸ್ಟ್ 26: ಈಗ ತಿಂಗಳ ಕೊನೆಯ ವಾರ ಚಾಲ್ತಿಯಲ್ಲಿದೆ. ಐದಾರು ದಿನಗಳಲ್ಲಿ ಸೆಪ್ಟಂಬರ್ ತಿಂಗಳು ಶುರವಾಗಲಿದೆ. ಬೆಲೆಗಳಲ್ಲಿ ಬದಲಾವಣೆ, ಕೆಲ ನಿಯಮಗಳಲ್ಲಿ ಬದಲಾವಣೆ ಇತ್ಯಾದಿಯನ್ನು ಪ್ರತೀ ತಿಂಗಳೂ ನಿರೀಕ್ಷಿಸಬಹುದು. ಮುಂಬರುವ ತಿಂಗಳಿಗೆ ಪ್ಲಾನಿಂಗ್ ಮಾಡಿಕೊಳ್ಳಲು ಈ ಬದಲಾವಣೆಗಳ ಅರಿವಿರುವುದು ಅಗತ್ಯ ಇರಬಹುದು. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ಬರಲಿರುವ ಮತ್ತು ಹಣಕಾಸು ಮೇಲೆ ಪರಿಣಾಮ ಬೀರಲಿರುವ ಕೆಲ ನಿಯಮ ಬದಲಾವಣೆಗಳ ವಿವರ ಇಲ್ಲಿದೆ…
ಐಒಸಿಎಲ್ ಮತ್ತು ಹೆಚ್ಪಿಸಿಎಲ್ ಸಂಸ್ಥೆಗಳು ಪ್ರತೀ ತಿಂಗಳ ಮೊದಲ ದಿನದಂದು ಎಲ್ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತವೆ. ಗೃಹಬಳಕೆ ಅನಿಲ ಮತ್ತು ವಾಣಿಜ್ಯ ಬಳಕೆ ಅನಿಲ ಬೆಲೆಯಲ್ಲಿ ಬದಲಾವಣೆ ಮಾಡಬಹುದು. ಕೆಲವೊಮ್ಮೆ ದರ ವ್ಯತ್ಯಯ ಮಾಡದೇ ಹೋಗಬಹುದು. ಜುಲೈನಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 30 ರೂ ಇಳಿದಿತ್ತು. ಆಗಸ್ಟ್ನಲ್ಲಿ ಎಂಟೂವರೆ ರೂನಷ್ಟು ಹೆಚ್ಚಳ ಆಗಿತ್ತು.
ವಿಮಾನಗಳಿಗೆ ಇಂಧನವಾಗಿ ಬಳಸುವ ಎಟಿಎಫ್ ದರವನ್ನು ಸೆಪ್ಟಂಬರ್ 1ರಂದು ಬದಲಾಯಿಸುವ ಸಾಧ್ಯತೆ ಇದೆ. ಸಿಎನ್ಜಿ-ಪಿಎನ್ಜಿ ಗ್ಯಾಸ್ ಬೆಲೆಯ ಪರಿಷ್ಕರಣೆಯೂ ಆಗಲಿದೆ. ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಇಲ್ಲಿಯೂ ಬೆಲೆ ಏರಿಳಿಕೆ ಆಗಲಿದೆ.
ಎಲ್ಪಿಜಿ, ಎಟಿಎಫ್, ಸಿಎನ್ಜಿ ಇಂಧನಗಳ ಬಳಕೆ ದೇಶವ್ಯಾಪಿ ಆಗುತ್ತದೆ. ಇವುಗಳ ಬೆಲೆ ವ್ಯತ್ಯಯವು ಜನರ ಬಜೆಟ್ ಮೇಲೆ ಪರಿಣಾಮ ಬೀರಬಹುದು, ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು.
ಮೊಬೈಲ್ಗಳಿಗೆ ಅನಪೇಕ್ಷಿತ ಕರೆಗಳು, ವಂಚಕ ಕರೆಗಳು ಬಂದು ಕಿರಿಕಿರಿ ಮಾಡುವುದು ಹೆಚ್ಚಿನ ಮಂದಿಯ ಅನುಭವಕ್ಕೆ ಬಂದಿದೆ. ಸಾಮಾನ್ಯ ನಂಬರ್ಗಳಿಂದಲೇ ಈ ಕರೆಗಳು ಬರುತ್ತವೆ. ಹೀಗಾಗಿ, ಜನರು ಈ ಕರೆ ಸ್ವೀಕರಿಸುವುದುಂಟು. ಸೆಪ್ಟಂಬರ್ 1ರಿಂದ ಟೆಲಿಮಾರ್ಕೆಟಿಂಗ್ ಕರೆಗಳು ಮತ್ತು ಕಮರ್ಷಿಯಲ್ ಮೆಸೇಜಿಂಗ್ ಅನ್ನು ಬ್ಲಾಕ್ಚೇನ್ ಆಧಾರಿತ ಡಿಎಲ್ಡಿ ಪ್ಲಾಟ್ಫಾರ್ಮ್ಗೆ ವರ್ಗಾಯಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಮೊಬೈಲ್ ಬಳಕೆದಾರರಿಗೆ ಈ ಕಿರಿಕಿರಿ ಕರೆಗಳು ಕಡಿಮೆ ಆಗಲಿದೆ.
ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಡಿಎಫ್ಸಿ ಫಸ್ಟ್ ಬ್ಯಾಂಕ್ಗಳು ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ತರುತ್ತಿವೆ. ಎಚ್ಡಿಎಫ್ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ರಿವಾರ್ಡ್ ಪಾಯಿಂಟ್ ಗಳಿಸುವುದಕ್ಕೆ ಮಿತಿ ಹಾಕಿದೆ. ಯುಟಿಲಿಟಿ ಟ್ರಾನ್ಸಾಕ್ಷನ್, ಅಂದರೆ ಮೊಬೈಲ್ ಬಿಲ್ ಪಾವತಿ, ಎಲೆಕ್ಟ್ರಿಸಿಟಿ ಬಿಲ್ ಪಾವತಿ ಇತ್ಯಾದಿಗೆ ಬಳಸಿದಾಗ ರಿವಾರ್ಡ್ ಪಾಯಿಂಟ್ಸ್ ಸಿಗುತ್ತದೆ. ತಿಂಗಳಿಗೆ ಇಂಥ ಪಾಯಿಂಟ್ ಗಳಿಕೆ ಮಿತಿ 2,000 ರೂ ಎಂದು ನಿಗದಿ ಮಾಡಲಾಗಿದೆ.
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಕಹಿ ಸುದ್ದಿ ಕೊಟ್ಟರೆ, ಐಡಿಎಫ್ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ ಕೊಟ್ಟಿದೆ. ಅದರ ಕ್ರೆಡಿಟ್ ಕಾರ್ಡ್ ಬಿಲ್ನಲ್ಲಿ ಕಟ್ಟಬೇಕಾದ ಮಿನಿಮಮ್ ಪೇಮೆಂಟ್ ಅನ್ನು ಇಳಿಸುತ್ತಿದೆ. ಆದರೆ, ಪೇಮೆಂಟ್ ಡೆಡ್ಲೈನ್ ಅನ್ನೂ ಕೂಡ 18 ದಿನದಿಂದ 15 ದಿನಕ್ಕೆ ಇಳಿಸುತ್ತಿದೆ.
ಇದನ್ನೂ ಓದಿ: ಮಕ್ಕಳಿಗೆ ಆಧಾರ್ ಕಾರ್ಡ್; ಯಾವ ವಯಸ್ಸಿನ ಮಕ್ಕಳಿಂದ ಬಯೋಮೆಟ್ರಿಕ್ಸ್ ಪಡೆಯಲಾಗುತ್ತೆ? ಏನಿವೆ ಕ್ರಮ, ಇತ್ಯಾದಿ ಡೀಟೇಲ್ಸ್
ಕೇಂದ್ರ ಸರ್ಕಾರಿ ನೌಕರರಿಗೆ ಈ ಸೆಪ್ಟಂಬರ್ ತಿಂಗಳಲ್ಲಿ ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ ಈ ಬಾರಿ ಶೇ. 3ರಷ್ಟು ಡಿಎ ಹೆಚ್ಚಳ ಆಗಬಹುದು. ಹಾಗೇನಾದರೂ ಆದರೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೆ. 50ರಿಂದ ಶೇ. 51ಕ್ಕೆ ಏರುತ್ತದೆ.
ಆಧಾರ್ ಕಾರ್ಡ್ನಲ್ಲಿ ಈಗ ಆನ್ಲೈನ್ ಮೂಲಕ ಉಚಿತವಾಗಿ ಕೆಲ ಬದಲಾವಣೆಗಳನ್ನು ಮಾಡಬಹುದು. ಈ ಅವಕಾಶ ಸೆಪ್ಟಂಬರ್ 14ರ ಬಳಿಕ ಮುಗಿದ ಹೋಗುತ್ತದೆ. ಆ ಬಳಿಕವೂ ನೀವು ಆಧಾರ್ ಅಪ್ಡೇಟ್ ಮಾಡಬಹುದಾದರೂ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ