ನವದೆಹಲಿ: ಎಸ್ಬಿಐನ ನಿಶ್ಚಿತ ಠೇವಣಿ ಯೋಜನೆಗಳಲ್ಲಿ ಜನಪ್ರಿಯ ಎನಿಸಿರುವ ವೀ ಕೇರ್ ಸ್ಕೀಮ್ನ (SBI We Care FD Scheme) ಅಂತಿಮ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. 2020 ಮೇ ತಿಂಗಳಲ್ಲಿ ಶುರುವಾದ ಈ ವಿಶೇಷ ಎಫ್ಡಿ ಸ್ಕೀಮ್ ಹೊಂದಲು 2023 ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು. ಈಗ ಅದನ್ನು ಜೂನ್ 30ರವರೆಗೂ ವಿಸ್ತರಿಸಲಾಗಿದೆ. ಸತತವಾಗಿ ಗಡುವು ವಿಸ್ತರಣೆ ಆಗುತ್ತಾ ಬಂದಿರುವ ಅಪರೂಪದ ವಿಶೇಷ ಸ್ಕೀಮ್ಗಳಲ್ಲಿ ಎಸ್ಬಿಐನ ವೀಕೇರ್ ಯೋಜನೆಯೂ ಒಂದು. ಹೆಚ್ಚುವರಿ ಬಡ್ಡಿ ಕೊಡುವ ಎಸ್ಬಿಐ ವೀ ಕೇರ್ ಎಫ್ಡಿ ಡೆಪಾಸಿಟ್ಗಳಿಗೆ ಬೇಡಿಕೆ ಹೆಚ್ಚಿದೆ. ಹಿರಿಯ ನಾಗರಿಕರಿಗೆಂದು ರೂಪಿಸಿರುವ ಸ್ಪೆಷಲ್ ಡೆಪಾಸಿಟ್ ಸ್ಕೀಮ್ ಇದು. ಇದೇ ವೇಳೆ ಐಸಿಐಸಿಐ ಬ್ಯಾಂಕ್ ತನ್ನ ಹಿರಿಯ ನಾಗರಿಕ ಗ್ರಾಹಕರಿಗೆ ರೂಪಿಸಿರುವ ವಿಶೇಷ ಎಫ್ಡಿ ಸ್ಕೀಮ್ನ ಗಡುವು ಏಪ್ರಿಲ್ 6ಕ್ಕೆ ಮುಗಿಯುತ್ತದೆ.
ಹಿರಿಯ ನಾಗರಿಕರಿಗೆಂದು ಎಸ್ಬಿಐ ಬ್ಯಾಂಕ್ ರೂಪಿಸಿರುವ ವಿಶೇಷ ಸ್ಕೀಮ್ ಇದು. ಗರಿಷ್ಠ 2 ಕೋಟಿ ರೂ ವರೆಗೂ ಹಣವನ್ನು ನಿಶ್ಚಿತ ಠೇವಣಿಯಾಗಿ ಈ ಸ್ಕೀಮ್ ಅಡಿಯಲ್ಲಿ ಇಡಬಹುದು. 7 ದಿನಗಳಿಂದ ಆರಂಭವಾಗಿ 10 ವರ್ಷಗಳವರೆಗೂ ವಿವಿಧ ಅವಧಿಯ ಸ್ಕೀಮ್ಗಳು ಲಭ್ಯ ಇವೆ. 2-3 ವರ್ಷ ಮತ್ತು 5ರಿಂದ 10 ವರ್ಷದವರೆಗಿನ ಅವಧಿಯ ಠೇವಣಿಗಳಿಗೆ ಶೇ. 7.5ರಷ್ಟು ಬಡ್ಡಿ ನೀಡಲಾಗುತ್ತದೆ. ಇತರ ಅವಧಿಯ ಠೇವಣಿಗಳಿಗೆ ಕಡಿಮೆ ಬಡ್ಡಿ ದೊರಕುತ್ತದೆ.
7ರಿಂದ 45 ದಿನಗಳ ಎಫ್ಡಿ ದರ: ಶೇ. 3.5
46ದಿನದಿಂದ 179 ದಿನಗಳ ಅವಧಿಯ ಎಫ್ಡಿ ದರ: ಶೇ. 5
180 ದಿನದಿಂದ 210 ದಿನಗಳ ಅವಧಿಯ ಎಫ್ಡಿ ದರ: ಶೇ. 5.75
211 ದಿನದಿಂದ 1 ವರ್ಷ ಅವಧಿಯ ಎಫ್ಡಿ ದರ: ಶೇ. 6.25
1 ವರ್ಷದಿಂದ 2 ವರ್ಷ ಅವಧಿಯ ಎಫ್ಡಿ ದರ: ಶೇ. 7.3
2 ರಿಂದ 3 ವರ್ಷ ಅವಧಿಯ ಎಫ್ಡಿ ದರ: ಶೇ. 7.5
3ರಿಂದ 5 ವರ್ಷ ಅವಧಿಯ ಎಫ್ಡಿ ದರ: ಶೇ. 7
5ರಿಂದ 10 ವರ್ಷ ಅವಧಿಯ ಎಫ್ಡಿ ದರ: ಶೇ. 7.50
ಎಸ್ಬಿಐನ ವೀ ಕೇರ್ ಯೋಜನೆಯ ವಿಶೇಷತೆ ಇರುವುದು ಇದು ಕೊಡುವ ಹೆಚ್ಚುವರಿ ಬಡ್ಡಿಯಲ್ಲಿ. ಹಿರಿಯ ನಾಗರಿಕರ ನಿಶ್ಚಿತ ಅವಧಿ ಠೇವಣಿ ಹಣಕ್ಕೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಕೊಡುವುದಾಗಿ ಎಸ್ಬಿಐ ಹೇಳಿದೆ. ಈಗಾಗಲೇ 50 ಮೂಲಾಂಕಗಳಷ್ಟು ಹೆಚ್ಚುವರಿ ಬಡ್ಡಿ ಇದೆ. ಈಗ ಮತ್ತಷ್ಟು 50 ಬಿಪಿಎಸ್ ನೀಡಲಾಗುತ್ತದೆ. ಒಟ್ಟು ಶೇ. 1ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: Bank FD Vs Small Savings: ಬ್ಯಾಂಕ್ FD Vs ಸಣ್ಣ ಉಳಿತಾಯ ಯೋಜನೆ: ಯಾವುದು ಹೆಚ್ಚು ಆದಾಯವನ್ನು ನೀಡುತ್ತದೆ?
ಈ ಎಫ್ಡಿ ಸ್ಕೀಮ್ ಅನ್ನು ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ನಲ್ಲೇ ಪಡೆಯಬಹುದು. ಎಸ್ಬಿಐನ ಯೋನೋ ಆ್ಯಪ್ನಲ್ಲೂ ಎಫ್ಡಿ ಪಡೆಯಬಹುದು. ಅಥವಾ ಎಸ್ಬಿಐನ ಶಾಖಾ ಕಚೇರಿಗೆ ಹೋಗಿಯೂ ವೀಕೇರ್ ಎಫ್ಡಿ ಸ್ಕೀಮ್ ಪಡೆಯಬಹುದು.
ಇನ್ನು, ಎಸ್ಬಿಐನ ವೀ ಕೇರ್ ಎಫ್ಡಿ ಸ್ಕೀಮ್ನಲ್ಲಿ ನೀವು ಇಟ್ಟಿರುವ ಠೇವಣಿಯನ್ನು ಅವಧಿಗೆ ಮುನ್ನ ಹಿಂಪಡೆಯಬಹುದು. ಆದರೆ, ಅದಕ್ಕೆ ಇಂತಿಷ್ಟು ಶುಲ್ಕ ತೆರಬೇಕಾಗುತ್ತದೆ. ಒಂದು ವೇಳೆ ಠೇವಣಿದಾರರಿಗೆ ತುರ್ತಾಗಿ ಹಣ ಬೇಕಾದರೆ ಠೇವಣಿ ಮೊತ್ತದ ಆಧಾರವಾಗಿ ಸಾಲ ಪಡೆಯುವ ಅವಕಾಶ ಇದೆ.
Published On - 1:55 pm, Wed, 5 April 23