Credit Score: ಉತ್ತಮ ಕ್ರೆಡಿಟ್ ಸ್ಕೋರ್ ನಿಮ್ಮದಾಗಬೇಕೇ? ಈ ವಿಚಾರಗಳನ್ನು ತಿಳಿದಿರಿ
ಸಾಲದ ನಿರ್ವಹಣೆ, ಕ್ರೆಡಿಟ್ ಸ್ಕೋರ್ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಮತ್ತು ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸುಧಾರಿಸುವಂತೆ ನೋಡಿಕೊಳ್ಳುವುದು ವೈಯಕ್ತಿಕ ಹಣಕಾಸಿನ ದೃಷ್ಟಿಯಿಂದ ಬಹಳ ಮುಖ್ಯ. ಕ್ರೆಡಿಟ್ ಸ್ಕೋರ್ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಸಾಲದ ನಿರ್ವಹಣೆ (Credit Management), ಕ್ರೆಡಿಟ್ ಸ್ಕೋರ್ (Credit Score) ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಮತ್ತು ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸುಧಾರಿಸುವಂತೆ ನೋಡಿಕೊಳ್ಳುವುದು ವೈಯಕ್ತಿಕ ಹಣಕಾಸಿನ ದೃಷ್ಟಿಯಿಂದ ಬಹಳ ಮುಖ್ಯ. ಸಾಲ ಪಡೆಯುವ ಸಂದರ್ಭದಲ್ಲಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ (CIBIL Score) ಬಹಳ ಮುಖ್ಯ ಮಾನದಂಡವಾಗಿದೆ. ಅನೇಕ ಬಾರಿ ಇದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಸಾಲ ಪಡೆಯುವ ಸಂದರ್ಭದಲ್ಲಿ ಬ್ಯಾಂಕ್ಗಳು ಮೊದಲು ಪರಿಶೀಲಿಸುವುದೇ ಗ್ರಾಹಕರ ಕ್ರೆಡಿಟ್ ಸ್ಕೋರ್ ಹೇಗಿದೆ ಎಂಬುದನ್ನು. ಕ್ರೆಡಿಟ್ ಸ್ಕೋರ್ ಕಳಪೆ ಅಥವಾ ಕಡಿಮೆಯಾಗಿದ್ದರೆ ಸಾಲ ದೊರೆಯುವುದು ಕಷ್ಟ. ಕ್ರೆಡಿಟ್ ಸ್ಕೋರ್ ಅನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಿದ್ದರೆ ನಾವು ಸಾಲದ (Loan) ಕಂತುಗಳನ್ನು ಪಾವತಿಸುವ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸಾಲದ ಮರು ಪಾವತಿಯು ಸಿಬಿಲ್ ಅಥವಾ ಸಿಆರ್ಐಎಫ್ (ಸಾಲದ ವ್ಯವಹಾರವನ್ನು ಟ್ರ್ಯಾಕ್ ಮಾಡುವ ಮತ್ತು ವರದಿ ಮಾಡಿ ಅದಕ್ಕನುಗುಣವಾಗಿ ಅಂಕಗಳನ್ನು ನೀಡುವ ಎರಡು ಸಂಸ್ಥೆಗಳು) ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ. ಕ್ರೆಡಿಟ್ ಸ್ಕೋರ್ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಕ್ರೆಡಿಟ್ ಸ್ಕೋರ್ ಎಂದರೇನು?
ಕ್ರೆಡಿಟ್ ಸ್ಕೋರ್ ಎಂಬುದು ನಮ್ಮ ಸಾಲ ಪಡೆಯುವಿಕೆಯ ಅಭ್ಯಾಸಕ್ಕೆ ಸಂಬಂಧಿಸಿದ 3 ಅಂಕಿಗಳ ಒಂದು ಸಂಖ್ಯೆಯಾಗಿದೆ. ನಾವು ಎಷ್ಟು ಸಾಲ ಪಡೆದಿದ್ದೇವೆ, ಹೀಗೆ ಪಡೆದ ಎಷ್ಟು ಸಾಲಗಳ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿದ್ದೇವೆ ಎಂಬುದರ ಆಧಾರದಲ್ಲಿ ಈ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. 300 ರಿಂದ 900 ರವರೆಗಿನ ಸ್ಕೋರ್ ನೀಡಲಾಗುತ್ತದೆ. 700 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.
ಹೆಚ್ಚು ಸಾಲ ಪಡೆಯುವುದು ಒಳ್ಳೆಯದೇ?
ಒಂದೇ ರೀತಿಯ ಹಲವು ಸಾಲಗಳನ್ನು ಪಡೆಯುವುದು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದುವ ನಿಟ್ಟಿನಲ್ಲಿ ಒಳ್ಳೆಯದಲ್ಲ. ಸಾಲಗಳನ್ನು ಪಡೆಯುವಾಗ ಬಹಳ ಎಚ್ಚರ ವಹಿಸಬೇಕು. ವೈಯಕ್ತಿಕ ಸಾಲಗಳನ್ನು ಪಡೆಯುವ ಬದಲು ಕ್ರೆಡಿಟ್ ಕಾರ್ಡ್ಗಳನ್ನು ಹೊಂದುವುದು ಉತ್ತಮ. ಸಾಲದ ಕಂತುಗಳನ್ನು ಅಥವಾ ಇಎಂಐ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಪರ್ಸನಲ್ ಲೋನ್ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದುವುದು ಒಳ್ಳೆಯದೇ?
ಹೊಸ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅದರ ಅಗತ್ಯಗಳ ಬಗ್ಗೆ ಹೆಚ್ಚು ಯೋಚಿಸಿ ನಿರ್ಧಾರಕ್ಕೆ ಬನ್ನಿ. ಹೊಸ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ತುಸು ಇಳಿಕೆಯಾಗುವ ಸಾಧ್ಯತೆ ಇರುತ್ತದೆ. ಆದರೆ, ನಂತರ ನಿಯಮಿತವಾಗಿ ಅದನ್ನು ಬಳಸಿ ಸರಿಯಾಗಿ ಮರುಪಾವತಿ ಮಾಡುತ್ತಾ ಬಂದರೆ ತೊಂದರೆಯಿಲ್ಲ. ಅಗತ್ಯಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದುವುದರಿಂದ ಅನಾವಶ್ಯಕ ಖರ್ಚು-ವೆಚ್ಚಗಳು ಹೆಚ್ಚಾಗಿ ವೈಯಕ್ತಿಕ ಹಣಕಾಸು ನಿಭಾಯಿಸುವುದು ಕಷ್ಟವಾಗಬಹುದು. ಈ ಬಗ್ಗೆ ಎಚ್ಚರವಿರಲಿ.
ಕ್ರೆಡಿಟ್ ಸ್ಕೋರ್ ಪರಿಶೀಲಿಸುವುದರಿಂದ ತೊಂದರೆ ಇದೆಯೇ?
ನಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಾವೇ ಪರಿಶೀಲಿಸುವುದರಿಂದ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಾಗುವುದಿಲ್ಲ. ನಿಯಮಿತವಾಗಿ ಕ್ರೆಡಿಟ್ ಸ್ಕೋರ್ ಪರಿಶೀಲಿಸುವುದರಿಂದ ಹೆಚ್ಚಿನ ಗಮನ ಇಟ್ಟುಕೊಂಡು, ಅದನ್ನು ಉತ್ತಮಗೊಳಿಸಲು ಅನುಕೂಲವಾಗಲಿದೆ. ಆದರೆ, ಹಣಕಾಸು ಸಂಸ್ಥೆಯೊಂದು ನಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪದೇ ಪದೇ ಪರಿಶೀಲಿಸಿದರೆ ನಾವು ಸಾಲ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಭಾವಿಸಿ ಸಿಬಿಲ್ ಅಥವಾ ಸಿಆರ್ಐಎಫ್ ಪ್ರತಿ ಬಾರಿ ಕೆಲವು ಅಂಕಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Fri, 27 January 23