AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಪರ್ಸನಲ್ ಲೋನ್ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ ಪರ್ಸನಲ್ ಲೋನ್ ಪಡೆಯಬಹುದು. ಅದಕ್ಕೆ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಪರ್ಸನಲ್ ಲೋನ್ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on: Dec 15, 2022 | 5:21 PM

Share

ವೈಯಕ್ತಿಕ ಸಾಲ (Personal Loan) ಪಡೆಯುವಲ್ಲಿ ಕ್ರೆಡಿಟ್ ಸ್ಕೋರ್(Credit Score) ಅಥವಾ ಸಿಬಿಲ್ ಸ್ಕೋರ್ (CIBIL Score) ಬಹಳ ಮುಖ್ಯ ಮಾನದಂಡವಾಗಿದೆ. ಕಡಿಮೆ ಸಿಬಿಲ್ ಅಥವಾ ಸಿಆರ್​ಐಎಫ್​ (ಸಾಲದ ವ್ಯವಹಾರವನ್ನು ಟ್ರ್ಯಾಕ್ ಮಾಡುವ ಮತ್ತು ವರದಿ ಮಾಡಿ ಅದಕ್ಕನುಗುಣವಾಗಿ ಅಂಕಗಳನ್ನು ನೀಡುವ ಎರಡು ಸಂಸ್ಥೆಗಳು) ಸ್ಕೋರ್ ಹೊಂದಿದ್ದರೆ ಪರ್ಸನಲ್ ಲೋನ್ ಸಿಗುವ ಸಾಧ್ಯತೆ ಬಹಳ ಕಡಿಮೆ. ಆದಾಗ್ಯೂ, ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ ಪರ್ಸನಲ್ ಲೋನ್ ಪಡೆಯಬಹುದು. ಅದಕ್ಕೆ ಕೆಲವೊಂದು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

ಸಾಮಾನ್ಯವಾಗಿ 300 ರಿಂದ 900 ರವರೆಗಿನ ಸ್ಕೋರ್ ನೀಡಲಾಗುತ್ತದೆ. 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. 550 ರಿಂದ 750 ಅನ್ನು ಡಿಸೆಂಟ್ ಕ್ರೆಡಿಟ್ ಸ್ಕೋರ್ ಎಂದು ಕರೆಯಬಹುದು. 550ಕ್ಕಿಂತ ಕಡಿಮೆ ಇದ್ದರೆ ಕಳಪೆ ಸ್ಕೋರ್ ಎಂದು ಬ್ಯಾಂಕ್​ಗಳು ಪರಿಗಣಿಸುತ್ತವೆ. ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಪರ್ಸನಲ್ ಲೋನ್ ಪಡೆಯುವುದು ಬಹಳ ಕಷ್ಟ. ಆದರೆ ಈ ಕೆಳಗೆ ನೀಡಲಾದ ವಿಧಾನಗಳನ್ನು ಅನುಸರಿಸುವ ಮೂಲಕ ಪರ್ಸನಲ್ ಲೋನ್ ನಿಮ್ಮದಾಗಿಸಿಕೊಳ್ಳಬಹುದು.

ಇಎಂಐ ಪಾವತಿ ಸಾಮರ್ಥ್ಯ ಸಾಬೀತುಪಡಿಸಿ

ಪರ್ಸನಲ್ ಲೋನ್​ಗೆ ಅರ್ಜಿ ಸಲ್ಲಿಸಿದಾಗ ಕ್ರೆಡಿಟ್ ಸ್ಕೋರ್ ಮಾತ್ರವಲ್ಲದೆ, ಅರ್ಜಿದಾರನ ಆದಾಯವನ್ನು ಕೂಡ ಮೌಲ್ಯಮಾಪನ ಮಾಡಲಾಗುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲದಿದ್ದರೂ ಇಎಂಐ ಪಾವತಿ ಮಾಡುವ ಸಾಮರ್ಥ್ಯ ನಿಮ್ಮ ಬಳಿ ಇದೆ. ಸರಿಯಾಗಿ ಇಎಂಐ ಪಾವತಿ ಮಾಡಬಲ್ಲೆ ಎಂಬುದನ್ನು ಬ್ಯಾಂಕ್​​ಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಕ್ರೆಡಿಟ್ ಸ್ಕೋರ್​ ಕಳಪೆಯಾಗಲು ತಾಂತ್ರಿಕ ಕಾರಣಗಳಿದ್ದರೆ ಆ ಬಗ್ಗೆಯೂ ಬ್ಯಾಂಕ್​ಗೆ ಮನವರಿಕೆ ಮಾಡಿಕೊಡಬಹುದು. ಶಾಶ್ವತ ಉದ್ಯೋಗ ಇದ್ದು, ನಿರ್ದಿಷ್ಟ ಮೊತ್ತದ ವೇತನ ಪಡೆಯುತ್ತಿರುವ ಬಗ್ಗೆ ಬ್ಯಾಂಕ್​ಗೆ ಖಾತರಿಪಡಿಸಿದರೆ ಪರ್ಸನಲ್ ಲೋನ್ ಸಿಗಬಹುದು.

ಇದನ್ನೂ ಓದಿ: Credit Score: ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸುವುದು ಹೇಗೆ? ಇಲ್ಲಿದೆ ಸಲಹೆ

ಗ್ಯಾರಂಟಿದಾರನೊಂದಿಗೆ ಅರ್ಜಿ ಸಲ್ಲಿಸಿ

ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲದ ಸಂದರ್ಭದಲ್ಲಿ ನೀವು ಗ್ಯಾರಂಟಿದಾರನೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನೀವು ಪಡೆದುಕೊಳ್ಳುವ ಸಾಲಕ್ಕೆ ಈ ಗ್ಯಾರಂಟಿದಾರ ಜಾಮೀನುದಾರನಾಗಿರುತ್ತಾನೆ. ಈ ಸಂದರ್ಭದಲ್ಲಿ ಬ್ಯಾಂಕ್ ಅವರ ಕ್ರೆಡಿಟ್ ಸ್ಕೋರ್ ಅನ್ನು ಪರಿಗಣಿಸುವುದರ ಜತೆಗೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ. ಸಾಲ ಡಿಫಾಲ್ಟ್ ಆಗುವುದಿಲ್ಲ ಎನ್ನುವ ವಿಶ್ವಾಸ ಮೂಡಿದರೆ ನಂತರ ಬ್ಯಾಂಕ್ ನಿಮಗೆ ಸಾಲ ನೀಡಬಹುದು.

ಅಡಮಾನ ಸಾಲಕ್ಕೆ ಪ್ರಯತ್ನಿಸಬಹುದು

ಕಳಪೆ ಕ್ರೆಡಿಟ್ ಸ್ಕೋರ್ ನಿಮ್ಮದಾಗಿದ್ದರೆ ಆಸ್ತಿ ಅಥವಾ ಆಭರಣವನ್ನು ಅಡವಿಟ್ಟು ಸಾಲ ಪಡೆಯಲು ಅವಕಾಶ ಇರುತ್ತದೆ. ಇದೂ ಸಹ ಗ್ಯಾರಂಟಿಯಂತೆಯೇ ಕೆಲಸ ಮಾಡುತ್ತದೆ. ಈ ವಿಧಾನದಲ್ಲಿ ಜಾಮೀನುದಾರನ ಬದಲಿಗೆ ಆಸ್ತಿಯನ್ನು ಬ್ಯಾಂಕ್​​ನಲ್ಲಿ ಒತ್ತೆ ಇಡಬೇಕಾಗುತ್ತದೆ. ಹೀಗೆ ಪಡೆದ ಸಾಲವನ್ನು ಮರುಪಾವತಿ ಮಾಡದಿದ್ದರೆ ನಿಮ್ಮ ಆಸ್ತಿಯನ್ನು ಮಾರಾಟ ಮಾಡಿ ಹಣ ಸಂಗ್ರಹಿಸಲು ಬ್ಯಾಂಕ್​ಗೆ ಅವಕಾಶವಿರುತ್ತದೆ.

ಸಣ್ಣ ಮೊತ್ತದ ಸಾಲಕ್ಕಾಗಿ ಅರ್ಜಿ

ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದ ಹೊರತಾಗಿಯೂ ಸಣ್ಣ ಮೊತ್ತದ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಬ್ಯಾಂಕ್​ಗಳು ಪುರಸ್ಕರಿಸುವ ಸಾಧ್ಯತೆ ಇರುತ್ತದೆ. ಯಾಕೆಂದರೆ ಸಣ್ಣ ಮೊತ್ತದ ಸಾಲ ನೀಡುವುದರಿಂದ ಬ್ಯಾಂಕ್​ಗೆ ಹೆಚ್ಚಿನ ರಿಸ್ಕ್ ಇರುವುದಿಲ್ಲ.

ಕ್ರೆಡಿಟ್ ಸ್ಕೋರ್ ರಿಪೋರ್ಟ್​ನಲ್ಲಿ ತಪ್ಪಿದ್ದರೆ ಸರಿಪಡಿಸಿಕೊಳ್ಳಿ

ಕೆಲವೊಮ್ಮೆ, ಕ್ರೆಡಿಟ್ ವರದಿಯಲ್ಲಿನ ತಾಂತ್ರಿಕ ದೋಷಗಳು ಮತ್ತು ಲೋಪಗಳು ಕಳಪೆ ಕ್ರೆಡಿಟ್ ಸ್ಕೋರ್‌ಗೆ ಕಾರಣವಾಗಬಹುದು. ಇದು ಸಾಲವನ್ನು ಪಡೆಯುವ ನಿಮ್ಮ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಕ್ರೆಡಿಟ್ ರಿಪೋರ್ಟ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುತ್ತಿರಿ. ಕ್ರೆಡಿಟ್ ಸ್ಕೋರ್ ವರದಿಯಲ್ಲಿ ಕಂಡುಬರುವ ತಪ್ಪನ್ನು ತಕ್ಷಣವೇ ಸರಿಮಾಡಿಸಿಕೊಳ್ಳಿ. ಇದರಿಂದ ಸಾಲ ಪಡೆಯುವುದು ಸುಲಭವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ