ಮೆಚ್ಯೂರಿಟಿಗೆ ಬಂದ 2017-18ರ ಸಾವರಿನ್ ಗೋಲ್ಡ್ ಬಾಂಡ್; 2,971 ರೂನಿಂದ 11,922 ರೂಗೆ ಏರಿಕೆ

Sovereign Gold Bond of 2017 grows from Rs 2,971 to Rs 11,922 in 8 years: 2017-18ರ ಐದನೇ ಸೀರೀಸ್​ನ ಸಾವರೀನ್ ಗೋಲ್ಡ್ ಬಾಂಡ್​ಗಳು ಇದೀಗ ಮೆಚ್ಯೂರಿಟಿಗೆ ಬಂದು, ಅಂತಿಮ ರಿಡೆಂಪ್ಷನ್ ದರವನ್ನು ಪ್ರಕಟಿಸಲಾಗಿದೆ. 2017ರ ಅಕ್ಟೋಬರ್ 30ರಂದು ಎಸ್​ಜಿಬಿಗಳನ್ನು ವಿತರಿಸಿದಾಗ ಗ್ರಾಮ್ ಚಿನ್ನಕ್ಕೆ 2,971 ರೂ ಇಷ್ಯೂ ಪ್ರೈಸ್ ನಿಗದಿ ಮಾಡಲಾಗಿತ್ತು. ಈಗ ಮೆಚ್ಯೂರಿಟಿಗೆ ಬಂದಿದ್ದು, ಫೈನಲ್ ರಿಡೆಂಪ್ಷನ್ ಪ್ರೈಸ್ 11,922 ರೂ ಇದೆ. 8 ವರ್ಷದಲ್ಲಿ ಶೇ. 310ರಷ್ಟು ಹೆಚ್ಚಿದೆ.

ಮೆಚ್ಯೂರಿಟಿಗೆ ಬಂದ 2017-18ರ ಸಾವರಿನ್ ಗೋಲ್ಡ್ ಬಾಂಡ್; 2,971 ರೂನಿಂದ 11,922 ರೂಗೆ ಏರಿಕೆ
ಹೂಡಿಕೆ

Updated on: Oct 30, 2025 | 2:45 PM

ನವದೆಹಲಿ, ಅಕ್ಟೋಬರ್ 30: ಭಾರತೀಯ ರಿಸರ್ವ್ ಬ್ಯಾಂಕ್ 2017ರಲ್ಲಿ ವಿತರಿಸಿದ್ದ ಸಾವರೀನ್ ಗೋಲ್ಡ್ ಬಾಂಡ್​ಗಳ (SGB- Sovereign Gold Bond) ಅಂತಿಮ ರಿಡೆಮ್ಷನ್ ಅನ್ನು ಪ್ರಕಟಿಸಲಾಗಿದೆ. 2017-18ರ ಸೀರೀಸ್-5 ಬಾಂಡ್​ಗಳನ್ನು 2017ರ ಅಕ್ಟೋಬರ್ 30ರಂದು ವಿತರಿಸಲಾಗಿತ್ತು. ಅಂದು ಪ್ರತೀ ಗ್ರಾಮ್​ಗೆ 2,971 ರೂನಂತೆ ಹೂಡಿಕೆಗೆ ಆಹ್ವಾನಿಸಲಾಗಿತ್ತು. ಇದೀಗ ರಿಡೆಮ್ಷನ್ ದರವಾಗಿ (redemption price) ಒಂದು ಗ್ರಾಮ್​ಗೆ 11,992 ರೂ ನಿಗದಿ ಮಾಡಲಾಗಿದೆ. ಈ ಎಂಟು ವರ್ಷದಲ್ಲಿ ಈ ಬಾಂಡ್​ಗಳು ಶೇ. 310ರಷ್ಟು ಲಾಭ ತಂದಿವೆ.

ಇತ್ತೀಚೆಗೆ ಮೆಚ್ಯೂರ್ ಆದ ಬೇರೆ ಬೇರೆ ಸರಣಿಯ ಸಾವರೀನ್ ಗೋಲ್ಡ್ ಬಾಂಡ್​ಗಳೂ ಕೂಡ ಎಂಟು ವರ್ಷದಲ್ಲಿ ಶೇ. 300ಕ್ಕಿಂತಲೂ ಅಧಿಕ ಲಾಭ ತಂದಿವೆ. ಇವತ್ತು ರಿಡೆಂಪ್ಷನ್​ಗೆ ಬಂದಿರುವ ಎಸ್​ಜಿಬಿ ಬಾಂಡ್​ಗಳು ಶೇ. 310.54ರಷ್ಟು ರಿಟರ್ನ್ ತಂದಿವೆ. ಇದು ಎಂಟು ವರ್ಷದಲ್ಲಿ ತಂದಿರುವ ಲಾಭ. ವಾರ್ಷಿಕವಾಗಿ ಶೇ. 19ರ ದರದಲ್ಲಿ ಹೂಡಿಕೆದಾರರು ಲಾಭ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಚಿನ್ನ, ಬೆಳ್ಳಿಗೆ ಸಾಲ; ಎಲ್​ಟಿವಿ ಹೆಚ್ಚಳ ಇತ್ಯಾದಿ ಆರ್​ಬಿಐನ ಹೊಸ ಮಾರ್ಗಸೂಚಿ ಗಮನಿಸಿ…

ಏನಿದು ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್?

ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಜನರು ಚಿನ್ನದ ಬೆಲೆಯ ಮೇಲೆ ಹೂಡಿಕೆ ಮಾಡುವ ಅವಕಾಶ ಸಿಗುತ್ತದೆ. ಗ್ರಾಮ್​ಗಳ ಬೆಲೆ ಲೆಕ್ಕದಲ್ಲಿ ಜನರು ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಗ್ರಾಮ್​ನಿಂದ ಹಿಡಿದು 4 ಕಿಲೋವರೆಗೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಇಲ್ಲಿ ಭೌತಿಕ ಚಿನ್ನ ಲಭ್ಯ ಇರುವುದಿಲ್ಲ. ಚಿನ್ನದ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಹೂಡಿಕೆ ಮೌಲ್ಯ ಹೆಚ್ಚುತ್ತದೆ.

ಎಂಟು ವರ್ಷಕ್ಕೆ ಈ ಬಾಂಡ್​ಗಳು ಮೆಚ್ಯೂರ್ ಆಗುತ್ತವೆ. ಹಿಂದಿನ ಮೂರು ದಿನಗಳಲ್ಲಿ ಚಿನ್ನದ ಸರಾಸರಿ ಬೆಲೆಯನ್ನು ಪರಿಗಣಿಸಲಾಗುತ್ತದೆ. 2017-18ರ ಸರಣಿಯ ಗೋಲ್ಡ್ ಬಾಂಡ್​ನಲ್ಲಿ ಆರಂಭಿಕ ಬೆಲೆ ಗ್ರಾಮ್​ಗೆ 2,921 ರೂ ಇತ್ತು. ಈಗ ರಿಡೆಂಪ್ಷನ್ ದರ 11,992 ರೂ ಇದೆ. 100 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ, 2,92,100 ರೂ ಹೂಡಿಕೆ ಆಗಿರುತ್ತದೆ. ಇವತ್ತು ಆ ಹೂಡಿಕೆಯು 11,99,200 ರೂ ಆಗಿರುತ್ತದೆ. ಅಂದರೆ 3 ಲಕ್ಷ ರೂ ಹೂಡಿಕೆಯು 12 ಲಕ್ಷ ರೂಗಿಂತ ಹೆಚ್ಚಾಗಿರುತ್ತಿತ್ತು.

ಇದನ್ನೂ ಓದಿ: ದಾಖಲೆ ಇಲ್ಲದೆ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಲು ಅವಕಾಶ? ಆಭರಣ ಖರೀದಿಸುವ ಮುನ್ನ ಇದು ತಿಳಿದಿರಿ…

ಇದರ ಜೊತೆಗೆ ಹೂಡಿಕೆಯ ಮೊತ್ತದ ಮೇಲೆ ಆರ್​ಬಿಐ ಶೇ. 2.5ರಷ್ಟು ವಾರ್ಷಿಕ ಬಡ್ಡಿಯನ್ನೂ ನೀಡುತ್ತದೆ. ಒಂದು ಲಕ್ಷ ರೂ ಹೂಡಿಕೆಗೆ ವರ್ಷಕ್ಕೆ 2,500 ರೂ ಬಡ್ಡಿ ಸಿಗುತ್ತಿರುತ್ತದೆ. ಹೂಡಿಕೆದಾರರ ಬ್ಯಾಂಕ್ ಅಕೌಂಟ್​ಗೆ ಈ ಬಡ್ಡಿ ಹಣ ವರ್ಷವಾರು ಜಮೆಯಾಗುತ್ತಿರುತ್ತದೆ.

ಸದ್ಯಕ್ಕೆ ಸರ್ಕಾರವು ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನು ಮುಂದುವರಿಸುತ್ತಿಲ್ಲ. ಸರ್ಕಾರಕ್ಕೆ ಇದು ಹೊರೆಯಾಗುತ್ತಿರಬಹುದು. ಪರ್ಯಾಯವಾಗಿ ಡಿಜಿಟಲ್ ಗೋಲ್ಡ್, ಇಟಿಎಫ್ ಗೋಲ್ಡ್, ಮ್ಯೂಚುವಲ್ ಫಂಡ್ ಗೋಲ್ಡ್ ಯೋಜನೆಗಳು ಚಾಲನೆಯಲ್ಲಿದ್ದು ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆಯ ಲಾಭ ಪಡೆಯಲು ಹಲವು ಮಾರ್ಗೋಪಾಯಗಳಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ