ಸಾವರನ್ ಗೋಲ್ಡ್ ಬಾಂಡ್ ಯೋಜನೆ ನಿರೀಕ್ಷೆಯಂತೆ ಉತ್ತಮ ಲಾಭ ತಂದುಕೊಡುತ್ತಿದೆ. 2015ರಲ್ಲಿ ಶುರುವಾದ ಈ ಸ್ಕೀಮ್ನಲ್ಲಿ ಎರಡು ಸರಣಿಗಳು ಈಗಾಗಲೇ ಮೆಚ್ಯೂರ್ ಆಗಿದ್ದು ತನ್ನ ಹೂಡಿಕೆದಾರರಿಗೆ ವಾರ್ಷಿಕ ಶೇ. 11ಕ್ಕಿಂತಲೂ ಹೆಚ್ಚು ಲಾಭ ತಂದುಕೊಟ್ಟಿವೆ. ಈಗ ನಿನ್ನೆಯಿಂದ (ಫೆ. 12) 2023-24ರ ಸಾಲಿನ ನಾಲ್ಕನೇ ಸರಣಿಯ ಬಾಂಡ್ಗಳನ್ನು ವಿತರಿಸಲಾಗುತ್ತಿದೆ. ಆರ್ಬಿಐ ಮೂಲಕ ಸರ್ಕಾರ ನಿರ್ವಹಿಸುವ ಸಾವರನ್ ಗೋಲ್ಡ್ ಬಾಂಡ್ನಲ್ಲಿ (Sovereign Gold Bond) ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 4 ಕಿಲೋ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಎಂಟು ವರ್ಷಕ್ಕೆ ಬಾಂಡ್ ಮೆಚ್ಯೂರ್ ಆಗುವಾಗ ಚಿನ್ನದ ಬೆಲೆ ಎಷ್ಟಿರುತ್ತದೋ ಅದಕ್ಕೆ ಅನುಗುಣವಾಗಿ ಹೂಡಿಕೆಯ ಮೌಲ್ಯ ಹೆಚ್ಚಿರುತ್ತದೆ. ಚಿನ್ನದ ಬೆಲೆ ಏರಿದಷ್ಟೂ ಲಾಭ ಹೆಚ್ಚುತ್ತದೆ.
ಸಾವರನ್ ಗೋಲ್ಡ್ ಬಾಂಡ್ನ ಈ ಬಾರಿಯ ಸರಣಿಯಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 6,263 ರೂ ಎಂದು ನಿಗದಿ ಮಾಡಲಾಗಿದೆ. ಬಾಂಡ್ ಸಬ್ಸ್ಕ್ರಿಪ್ಷನ್ ಆರಂಭಕ್ಕೆ ಹಿಂದಿನ ವಾರದಲ್ಲಿ ಕೊನೆಯ ಮೂರು ಕಾರ್ಯ ದಿನಗಳಲ್ಲಿನ ಸರಾಸರಿ ಚಿನ್ನದ ಬೆಲೆಯನ್ನು ಆಯ್ಕೆ ಮಾಡಲಾಗುತ್ತದೆ. ಅಂದರೆ ಫೆಬ್ರುವರಿ 7, 8 ಮತ್ತು 9ನೇ ತಾರೀಖಿನಲ್ಲಿದ್ದ 24 ಕ್ಯಾರಟ್ ಚಿನ್ನದ ಬೆಲೆಯ ಸರಾಸರಿ ಗಣಿಸಿ ಬಾಂಡ್ ಬೆಲೆ ನಿಗದಿ ಮಾಡಲಾಗಿದೆ.
ಆಫ್ಲೈನ್ ಮತ್ತು ಆನ್ಲೈನ್ ಎರಡೂ ಕಡೆಯಿಂದ ಗೋಲ್ಡ್ ಬಾಂಡ್ ಖರೀದಿಸುವ ಅವಕಾಶ ಇರುತ್ತದೆ. ಎಲ್ಲಾ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್, ಶೆಡ್ಯೂಲ್ಡ್ ಫಾರೀನ್ ಬ್ಯಾಂಕ್, ಅಂಚೆ ಕಚೇರಿ, ಷೇರು ವಿನಿಮಯ ಕೇಂದ್ರಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್ (ಎಸ್ಎಚ್ಸಿಐಎಲ್) ಮೂಲಕ ಸಾವರನ್ ಗೋಲ್ಡ್ ಬಾಂಡ್ ಖರೀದಿಸಬಹುದು.
ಇದನ್ನೂ ಓದಿ: ಶೇ. 13.6ರಷ್ಟು ರಿಟರ್ನ್; ಈಕ್ವಿಟಿಗಿಂತಲೂ ಹೆಚ್ಚು ಲಾಭ ಕೊಟ್ಟಿದೆ 2016ರ ಸಾವರನ್ ಗೋಲ್ಡ್ ಬಾಂಡ್ ಪ್ಲಾನ್
ಬ್ಯಾಂಕು ಅಥವಾ ಅಂಚೆ ಕಚೇರಿಗೆ ಹೋಗಿ ಇದರ ಒಂದು ಅರ್ಜಿಯನ್ನು ಪಡೆದು ಭರ್ತಿ ಮಾಡಿ ಕೊಡಬೇಕಾಗುತ್ತದೆ. ಆರ್ಬಿಐ ವೆಬ್ಸೈಟ್ನಲ್ಲೂ ಈ ಅರ್ಜಿ ಇದ್ದು ಅದನ್ನು ಡೌನ್ಲೋಡ್ ಮಾಡಿ, ಭರ್ತಿ ಮಾಡಿ ಬ್ಯಾಂಕು ಅಥವಾ ಅಂಚೆ ಕಚೇರಿಯಲ್ಲಿ ಕೊಡಬೇಕು. ಅರ್ಜಿ ಡೌನ್ಲೋಡ್ ಲಿಂಕ್ ಇಲ್ಲಿದೆ: rbidocs.rbi.org.in/rdocs/content/pdfs/INS181213AF.pdf
ಆಧಾರ್ ಮತ್ತು ಪ್ಯಾನ್ ಕಾರ್ಡ್ ಪ್ರತಿಗಳನ್ನು ಜೊತೆಗೆ ನೀಡಬೇಕು. ಅರ್ಜಿಯಲ್ಲಿ ನಾಮಿನಿ ಹೆಸರಿಸುವುದು ಕಡ್ಡಾಯ ಇರುತ್ತದೆ.
ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ
ಇಲ್ಲಿಗೆ ನೀವು ಸಾವರಿನ್ ಗೋಲ್ಡ್ ಬಾಂಡ್ ಚಂದಾರಾಗುತ್ತೀರಿ. ಗಮನಿಸಿ, ನೀವು ಒಂದು ಹಣಕಾಸು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಬಾಂಡ್ ಖರೀದಿಸಬಹುದಾದರೂ ಒಟ್ಟಾರೆ ಹೂಡಿಕೆ 4 ಕಿಲೋ ಮೀರಬಾರದು. ಫೆಬ್ರುವರಿ 16ರವರೆಗೆ, ಅಂದರೆ ಶುಕ್ರವಾರದವರೆಗೆ ಎಸ್ಜಿಬಿ ಬಾಂಡ್ ಪಡೆಯಲು ಅವಕಾಶ ಇದೆ. ಆನ್ಲೈನ್ನಲ್ಲಿ ಹಣ ಪಾವತಿಸಿದರೆ ಗ್ರಾಮ್ಗೆ 50 ರೂನಂತೆ ರಿಯಾಯಿತಿ ಸಿಗುತ್ತದೆ. ಬಾಂಡ್ ಖರೀದಿ ಬಳಿಕ ಫೆಬ್ರುವರಿ 21ಕ್ಕೆ ಹೂಡಿಕೆದಾರರಿಗೆ ಸಾವರನ್ ಗೋಲ್ಡ್ ಬಾಂಡ್ ಪ್ರಮಾಣಪತ್ರ ನೀಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Tue, 13 February 24