ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಎಂಬುದು ಚಿನ್ನದ ಮೇಲೆ ಹೂಡಿಕೆ ಮಾಡುವ ಯೋಜನೆ. ಭೌತಿಕ ಚಿನ್ನ (Physical gold) ಬೇಕಿಲ್ಲದ, ಆದರೆ ಚಿನ್ನದ ಮೇಲೆ ಹೂಡಿಕೆ ಮಾಡಬಯಸುವವರಿಗೆ ಹೇಳಿ ಮಾಡಿಸಿದ ಸ್ಕೀಮ್ ಇದು. ಆರ್ಬಿಐ ಈ ಗೋಲ್ಡ್ ಬಾಂಡ್ಗಳನ್ನು ವಿತರಿಸುತ್ತದೆ. ಯಾವುದೇ ರಿಸ್ಕ್ ಇಲ್ಲದೇ ಸುರಕ್ಷಿತವಾಗಿ ಈ ಸ್ಕೀಮ್ನಲ್ಲಿ ಹಣ ತೊಡಗಿಸಬಹುದು. ಚಿನ್ನದ ವಾಸ್ತವಿಕ ಬೆಲೆಗೆ ಅನುಗುಣವಾಗಿ ನಿಮ್ಮ ಹೂಡಿಕೆಯ ರಿಟರ್ನ್ ವ್ಯತ್ಯಯವಾಗುತ್ತದೆ. ಭೌತಿಕ ಚಿನ್ನ ಬದಲು ಎಲೆಕ್ಟ್ರಾನಿಕ್ ರೂಪದಲ್ಲಿ ಚಿನ್ನ ಹೊಂದಿರುವುದರಿಂದ ಇದು ಸುರಕ್ಷಿತ ಎನಿಸಿದೆ.
ಸರ್ಕಾರ 2023-24ರ ವರ್ಷದ ಮೂರನೇ ಸರಣಿ ಗೋಲ್ಡ್ ಬಾಂಡ್ಗಳನ್ನು ಡಿಸೆಂಬರ್ 18ರಿಂದ 22ರವರೆಗೂ ಬಿಡುಗಡೆ ಮಾಡುತ್ತಿದೆ. ಡಿಸೆಂಬರ್ 28ಕ್ಕೆ ಬಾಂಡ್ ವಿತರಣೆ ಆಗುತ್ತದೆ. ಬಾಂಡ್ನಲ್ಲಿ ಚಿನ್ನದ ಬೆಲೆ ಎಷ್ಟು ಎಂಬುದು ಇವತ್ತು ಸಂಜೆ ಅಥವಾ ನಾಳೆ ನಿಗದಿಯಾಗಬಹುದು. ಬಾಂಡ್ ಬಿಡುಗಡೆ ದಿನಕ್ಕೆ ಮುಂಚಿನ ನಿರ್ದಿಷ್ಟ ದಿನದಂದು ಇರುವ ಚಿನ್ನದ ಬೆಲೆಯನ್ನು ನಿಗದಿ ಮಾಡುವುದು ಸಂಪ್ರದಾಯ.
ಸಾವರಿನ್ ಗೋಲ್ಡ್ ಬಾಂಡ್ಗಳನ್ನು ಆರ್ಬಿಐ ಒಂದು ವರ್ಷದಲ್ಲಿ ಸರಣಿಯಾಗಿ ಹಲವು ಬಾರಿ ವಿತರಿಸುತ್ತದೆ. ಒಂದೊಂದು ಸರಣಿಯೂ ಐದು ದಿನದ ಅವಧಿಯವರೆಗೆ ಲಭ್ಯ ಇರುತ್ತದೆ.
ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?
ಈ ಸ್ಕೀಮ್ನಲ್ಲಿ ಕನಿಷ್ಠ ಹೂಡಿಕೆ 1 ಗ್ರಾಮ್ ಚಿನ್ನವಾಗಿರುತ್ತದೆ. ಸಾಮಾನ್ಯ ವ್ಯಕ್ತಿ ಗರಿಷ್ಠ 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಬಹುದು. ಇಲ್ಲಿ ಚಿನ್ನವು 24 ಕ್ಯಾರಟ್ನದ್ದಾಗಿರುತ್ತದೆ. 1 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಎಂದರೆ 24 ಕ್ಯಾರಟ್ನ 1 ಗ್ರಾಮ್ ಚಿನ್ನದ ಬೆಲೆಯಷ್ಟು ಹಣವನ್ನು ಹೂಡಿಕೆಯಾಗಿ ಪಡೆಯಲಾಗುತ್ತದೆ. ಆ ಮೊತ್ತಕ್ಕೆ ಬಾಂಡ್ ಬಿಡುಗಡೆ ಮಾಡಲಾಗುತ್ತದೆ.
ಎಂಟು ವರ್ಷಕ್ಕೆ ಬಾಂಡ್ ಮೆಚ್ಯೂರ್ ಆಗುತ್ತದೆ. ಮೆಚ್ಯೂರ್ ಆದಾಗ ಅಂದು ಚಿನ್ನದ ಬೆಲೆ ಎಷ್ಟಿದೆ ಅಷ್ಟು ಮೊತ್ತ ನಿಮಗೆ ರಿಟರ್ನ್ ಆಗಿ ಸಿಗುತ್ತದೆ. ಉದಾಹರಣೆಗೆ ನೀವು ಇವತ್ತು 1 ಗ್ರಾಮ್ ಚಿನ್ನದ ದರವಾದ 6,300 ರೂಗೆ ಬಾಂಡ್ ಪಡೆಯುತ್ತೀರಿ. ಎಂಟು ವರ್ಷದ ಬಳಕ 1 ಗ್ರಾಮ್ ಚಿನ್ನದ ಬೆಲೆ 12,000 ಆಗಿದ್ದರೆ ನಿಮಗೆ 12,000 ರೂ ರಿಟರ್ನ್ ಸಿಗುತ್ತದೆ. ಗಮನಿಸಿ, ಇಲ್ಲಿ ನಿಮಗೆ ಚಿನ್ನ ಸಿಗುವುದಿಲ್ಲ, ಆದರೆ ಚಿನ್ನದ ಬೆಲೆಯಷ್ಟು ಹಣ ಸಿಗುತ್ತದೆ.
ಎಸ್ಜಿಬಿಯಲ್ಲಿ ನೀವು 100 ಗ್ರಾಮ್ ಚಿನ್ನದ ಮೇಲೆ ಒಟ್ಟು 6,30,000 ರೂ ಹೂಡಿಕೆ ಮಾಡುತ್ತೀರಿ. ಅದಕ್ಕೆ ನಿಮಗೆ ವಾರ್ಷಿಕ ಶೇ 2.50ರಷ್ಟು ಬಡ್ಡಿ ಕೂಡ ಹೆಚ್ಚುವರಿಯಾಗಿ ಸಿಗುತ್ತದೆ. ಅಂದರೆ, ಒಂದು ವರ್ಷದಲ್ಲಿ 15,750 ರೂ ಬಡ್ಡಿ ಸಿಗುತ್ತದೆ. ಪ್ರತೀ ಆರು ತಿಂಗಳಿಗೊಮ್ಮೆ ಬಡ್ಡಿ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಸಲ್ಲುತ್ತದೆ.
ಇದನ್ನೂ ಓದಿ: Sovereign Gold Bond Scheme: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್, 3ನೇ ಮತ್ತು 4ನೇ ಸರಣಿ ಬಾಂಡ್ಗಳ ಬಿಡುಗಡೆ ದಿನಾಂಕ ಪ್ರಕಟ
ಎಸ್ಜಿಬಿಗಳನ್ನು ಶ್ಕೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಪಡೆಯಬಹುದು. ಆಯ್ದ ಅಂಚೆ ಕಚೇರಿಗಳು, ಷೇರು ವಿನಿಮಯ ಕೇಂದ್ರಗಳೂ ಕೂಡ ಸಾವರೀನ್ ಗೋಲ್ಡ್ ಬಾಂಡ್ಗಳನ್ನು ವಿತರಿಸುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ