ಚಿನ್ನದ ಬೆಲೆಯೊಂದಿಗೆ ಜೋಡಿತವಾದ ಸಾವರಿನ್ ಅಥವಾ ಸವರನ್ ಗೋಲ್ಡ್ ಬಾಂಡ್ ಸ್ಕೀಮ್ (Sovereign Gold Bond) ಅನ್ನು ಕೇಂದ್ರ ಸರ್ಕಾರ ಮತ್ತೆ ಬಿಡುಗಡೆ ಮಾಡುತ್ತಿದೆ. ಈ ಹಣಕಾಸು ವರ್ಷದಲ್ಲಿ ಎರಡು ಹಂತಗಳಲ್ಲಿ (Tranches) ಬಾಂಡ್ಗಳನ್ನು ಸರ್ಕಾರ ವಿತರಿಸುತ್ತಿದೆ. ಇದೇ ತಿಂಗಳು ಮೊದಲ ಹಂತ, ಹಾಗೂ ಸೆಪ್ಟೆಂಬರ್ನಲ್ಲಿ ಎರಡನೇ ಹಂತದಲ್ಲಿ ಗೋಲ್ಡ್ ಬಾಂಡ್ಗಳನ್ನು ನೀಡಲಾಗುತ್ತದೆ. ಯಾವತ್ತಿದ್ದರೂ ಬೇಡಿಕೆ ಕುಗ್ಗದ ಚಿನ್ನದ ಮೇಲೆ ಹೂಡಿಕೆ ಮಾಡಬೇಕೆಂದರಿಗೆ ಗೋಲ್ಡ್ ಬಾಂಡ್ ಸ್ಕೀಮ್ ಅತ್ಯುತ್ತಮ ಆಯ್ಕೆ. ನೀವು ಭೌತಿಕ ಚಿನ್ನ ಖರೀದಿಸುವುದಕ್ಕಿಂತ ಇದು ಉತ್ತಮ. ಚಿನ್ನದ ಬೆಲೆಗೆ ಅನುಗುಣವಾಗಿ ನಿಮ್ಮ ಬಾಂಡ್ ಮೌಲ್ಯವೂ ಹೆಚ್ಚುತ್ತದೆ. ಜೊತೆಗೆ ನಿಮಗೆ ಬಡ್ಡಿಯಿಂದ ಹೆಚ್ಚುವರಿ ಆದಾಯವೂ ಬರುತ್ತದೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಹೇಗೆ ಪಡೆಯುವುದು, ಎಷ್ಟು ಅವಧಿ ಇತ್ಯಾದಿ ಅಗತ್ಯ ಮಾಹಿತಿ ಇಲ್ಲಿದೆ.
2023-24ರ ಹಣಕಾಸು ವರ್ಷದ ಮೊದಲಾದರ್ಧದಲ್ಲಿ ಎರಡು ಸರಣಿಯಲ್ಲಿ ಸಾವರಿನ್ ಗೋಲ್ಡ್ ಬಾಂಡ್ಗೆ ಸಬ್ಸ್ಕ್ರಿಪ್ಷನ್ ಅವಕಾಶ ಕೊಡಲಾಗುತ್ತಿದೆ. ಮೊದಲ ಸರಣಿಯು 2023 ಜೂನ್ 19ರಿಂದ 23ರವರೆಗೂ ಇದೆ. ಜೂನ್ 17ಕ್ಕೆ ಈ ಬಾಂಡ್ಗಳ ನೀಡಿಕೆ ಇರುವುದು. ಎರಡನೇ ಸರಣಿಯಲ್ಲಿ 2023 ಸೆಪ್ಟಂಬರ್ 11-15ರವರೆಗೂ ಬಾಂಡ್ಗಳನ್ನು ನೀಡಲಾಗುತ್ತದೆ. ಇದರ ಇಷ್ಯೂ ದಿನಾಂಕ ಸೆಪ್ಟೆಂಬರ್ 20. ಆರ್ಬಿಐ ಈ ಮಾಹಿತಿ ಪ್ರಕಟಿಸಿದೆ.
ಇದನ್ನೂ ಓದಿ: EPF: ಇಪಿಎಫ್ ಖಾತೆಗಳನ್ನು ವಿಲೀನಗೊಳಿಸದಿದ್ದರೆ ಏನಾಗುತ್ತದೆ? ಮರ್ಜ್ ಮಾಡುವ ಪ್ರಕ್ರಿಯೆ ಹೇಗೆ? ವಿವರ ತಿಳಿದಿರಿ
ಇದು ಒಂದು ರೀತಿಯಲ್ಲಿ ಎಲೆಕ್ಟ್ರಾನಿಕ್ ರೂಪದ ಚಿನ್ನ. ನೀವು ಭೌತಿಕ ಚಿನ್ನ ಖರೀದಿಸುವ ಬದಲು ಬಾಂಡ್ಗಳ ರೂಪದಲ್ಲಿ ಚಿನ್ನ ಖರೀದಿಸಬಹುದು. ಭೌತಿಕ ಚಿನ್ನ ಇದ್ದರೆ ಕಳ್ಳತನ, ದರೋಡೆಯಾಗುವ ಭಯ ಇರುತ್ತದೆ. ಬಹಳ ಸುರಕ್ಷಿತವಾದ ಹೂಡಿಕೆ. ಈಗಿರುವ ಚಿನ್ನದ ಮಾರುಕಟ್ಟೆ ದರದಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಅನ್ನು ಖರೀದಿಸಬಹುದು. ನಿರ್ದಿಷ್ಟ ಅವಧಿಯ ಬಳಿಕ ಇದನ್ನು ನೀವು ರೆಡೆಂಪ್ಷನ್ ಮಾಡಿಕೊಳ್ಳುವಾಗ ಹಾಲಿ ಮಾರುಕಟ್ಟೆ ದರದಲ್ಲಿ ನಿಮಗೆ ಹಣ ಕೊಡಲಾಗುತ್ತದೆ. ಚಿನ್ನದ ಬೆಲೆ ಎಷ್ಟು ಏರಿಕೆ ಆಗುತ್ತದೆಯೋ ಅಷ್ಟು ಲಾಭ ನಿಮಗೆ ಸಿಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸಾವರಿನ್ ಗೋಲ್ಡ್ ಬಾಂಡ್ಗಳನ್ನು ನೀಡುತ್ತದೆ. ಎಸ್ಬಿಐ ಇತ್ಯಾದಿ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಇದನ್ನು ಪಡೆಯಬಹುದು. ಬಿಎಸ್ಇ, ಎನ್ಎಸ್ಇ ಇತ್ಯಾದಿ ಷೇರುವಿನಿಮಯ ಕೇಂದ್ರಗಳು, ಅಂಚೆ ಕಚೇರಿ ಮೊದಲಾವಲ್ಲಿ ಈ ಚಿನ್ನ ಪ್ರಮಾಣಪತ್ರಗಳು ಸಿಗುತ್ತವೆ.
ಸವರನ್ ಗೋಲ್ಡ್ ಬಾಂಡ್ 8 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ನೀವು ಒಂದು ಗ್ರಾಮ್ನಿಂದ ಹಿಡಿದು 4 ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು. ಟ್ರಸ್ಟ್ ಇತ್ಯಾದಿ ಸಂಘ ಸಂಸ್ಥೆಗಳಿಗೆ ಒಂದು ಹಣಕಾಸು ವರ್ಷದಲ್ಲಿ 20 ಕಿಲೋದಷ್ಟು ಚಿನ್ನ ಮೌಲ್ಯದ ಬಾಂಡ್ಗಳನ್ನು ಪಡೆಯಬಹುದು. ಒಂದು ಬಾಂಡ್ ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದೆಯಾದರೂ ಐದು ವರ್ಷದ ಬಳಿಕ ನೀವು ಯಾವಾಗ ಬೇಕಾದರೂ ಹಿಂಪಡೆಯಬಹುದು.
ನಿಮ್ಮ ಗೋಲ್ಡ್ ಬಾಂಡ್ನಲ್ಲಿರುವ ಹೂಡಿಕೆಗೆ ಬ್ಯಾಂಕುಗಳಿಂದ ವಾರ್ಷಿಕವಾಗಿ ಶೇ. 2.50ರಷ್ಟು ಬಡ್ಡಿಯೂ ಸಿಗುತ್ತದೆ. 6 ತಿಂಗಳಿಗೊಮ್ಮೆ ನಿಮ್ಮ ಮೂಲ ಹೂಡಿಕೆ ಮೊತ್ತಕ್ಕೆ ಬಡ್ಡಿ ಪ್ರಾಪ್ತವಾಗುತ್ತದೆ. ಅಂದರೆ ನೀವು 1,00,000 ರೂನಷ್ಟು ಹಣವನ್ನು ಎಸ್ಜಿಬಿ ಮೇಲೆ ಹೂಡಿಕೆ ಮಾಡಿದ್ದರೆ ವರ್ಷಕ್ಕೆ 2,500 ರೂ ಬಡ್ಡಿ ಸಿಗುತ್ತದೆ. 6 ತಿಂಗಳಿಗೊಮ್ಮೆ 1,250 ರೂನಂತೆ ಬಡ್ಡಿ ಹಣ ನಿಮಗೆ ದಕ್ಕುತ್ತದೆ. ಚಿನ್ನದ ಬೆಲೆ ಏರಿಕೆಗೂ ಇಳಿಕೆಗೂ ಈ ಬಡ್ಡಿಗೂ ಸಂಬಂಧ ಇರುವುದಿಲ್ಲ.
ಇದನ್ನೂ ಓದಿ: Insurance: ಸಿಂಗಲ್ ಪ್ರೀಮಿಯಮ್ ಇನ್ಷೂರೆನ್ಸ್ ಪಾಲಿಸಿ ಜನಪ್ರಿಯವಾಗುತ್ತಿರುವುದು ಯಾಕೆ? ಅದರ ಅನುಕೂಲತೆಗಳೇನು?
ಇನ್ನು, ಈ ಸಾವರಿನ್ ಗೋಲ್ಡ್ ಬಾಂಡ್ ಆಧಾರದ ಮೇಲೆ ನೀವು ಸಾಲ ಕೂಡ ಪಡೆಯಬಹುದು.
ಸಾವರಿನ್ ಗೋಲ್ಡ್ ಬಾಂಡ್ ಅನ್ನು ನೀವು ರೆಡೆಂಪ್ಷನ್ ಮಾಡುವಾಗ ಹಾಲಿ ಮಾರುಕಟ್ಟೆಯ ಚಿನ್ನದ ಬೆಲೆಯಷ್ಟು ನಿಮಗೆ ರಿಟರ್ನ್ ಸಿಗುತ್ತದೆ. ಇವತ್ತು 10 ಗ್ರಾಮ್ಗೆ 55,000 ರೂ ಬೆಲೆ ಇದ್ದಾಗ 100 ಗ್ರಾಮ್ ಚಿನ್ನಕ್ಕೆ 5,55,000 ರೂ ಹೂಡಿಕೆ ಮಾಡಿರುತ್ತೀರಿ. 8 ವರ್ಷದ ಬಳಿಕ ಚಿನ್ನದ ಬೆಲೆ 10 ಗ್ರಾಮ್ಗೆ 1 ಲಕ್ಷ ರೂ ಆಗಿದ್ದರೆ ಆಗ ನಿಮಗೆ 10 ಲಕ್ಷ ರೂ ಸಿಗುತ್ತದೆ. ಭೌತಿಕ ಚಿನ್ನ ಸಿಗುವುದಿಲ್ಲ. ಇದಕ್ಕೆ ಯಾವುದೇ ಲಾಭ ತೆರಿಗೆ ಅಥವಾ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅನ್ವಯ ಆಗುವುದಿಲ್ಲ.
ಆದರೆ, ವರ್ಷಕ್ಕೆ ನೀವು ಪಡೆಯುವ ಶೇ. 2.5ರಷ್ಟು ಬಡ್ಡಿ ಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ ಎಂಬುದು ಗಮನದಲ್ಲಿರಲಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ