
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಆರಂಭವಾಗಿ ಇವತ್ತಿಗೆ ಸರಿಯಾಗಿ 11 ವರ್ಷ ಗತಿಸಿವೆ. 2015ರ ಜನವರಿ 22ರಂದು ಬೇಟಿ ಬಚಾವೊ ಬೇಟಿ ಪಡಾವೊ ಅಭಿಯಾನದ ಭಾಗವಾಗಿ ಆರಂಭವಾದ ಎಸ್ಎಸ್ವೈ ಯೋಜನೆ ಲಕ್ಷಾಂತರ ಹೆಣ್ಮಕ್ಕಳ ಬದುಕಿಗೆ ಭರವಸೆಯ ಹೂಡಿಕೆಯಾಗಿದೆ. ಈ ಹನ್ನೊಂದು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 4.53 ಕೋಟಿಗೂ ಅಧಿಕ ಅಕೌಂಟ್ಗಳನ್ನು ತೆರೆಯಲಾಗಿದೆ.
ಸರ್ಕಾರವು ಹಲವು ಸಣ್ಣ ಉಳಿತಾಯ ಯೋಜನೆಗಳನ್ನು ನಡೆಸುತ್ತದೆ. ಈ ಪೈಕಿ ಅತಿಹೆಚ್ಚು ಬಡ್ಡಿ ನೀಡಲಾಗುವ ಎರಡು ಸ್ಕೀಮ್ಗಳಲ್ಲಿ ಸುಕನ್ಯಾ ಸಮೃದ್ಧಿ ಅಕೌಂಟ್ ಒಂದು. ಇದಕ್ಕೆ ಸದ್ಯ ವಾರ್ಷಿಕ ಶೇ. 8.2 ಬಡ್ಡಿ ನಿಗದಿ ಮಾಡಲಾಗಿದೆ. ನಾಲ್ಕೂವರೆ ಕೋಟಿಗೂ ಅಧಿಕ ಖಾತೆಗಳ ರಚನೆಯಾಗಿದ್ದು, ಇವುಗಳಲ್ಲಿ 2025ರ ಡಿಸೆಂಬರ್ವರೆಗೂ ಜಮೆಯಾಗಿರುವ ಠೇವಣಿಗಳ ಮೊತ್ತ 3.33 ಲಕ್ಷ ಕೋಟಿ ರೂ.
ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್ಗಳ ನಡುವೆ ಏನು ವ್ಯತ್ಯಾಸ?
ಇದು ಹೆಣ್ಮಕ್ಕಳ ಭವಿಷ್ಯ ಭದ್ರತೆಗೆಂದೇ ರೂಪಿಸಲಾಗಿರುವ ಯೋಜನೆ. ಹುಟ್ಟಿದ ಮಗುವಿನಿಂದ ಹಿಡಿದು 10 ವರ್ಷದವರೆಗೂ ಯಾವುದೇ ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಎಸ್ಎಸ್ವೈ ಅಕೌಂಟ್ ತೆರೆಯಬಹುದು. ಒಂದು ಮಗುವಿನ ಹೆಸರಿನಲ್ಲಿ ಒಂದೇ ಖಾತೆ ತೆರೆಯಬಹುದು. ಒಂದು ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಅಕೌಂಟ್ ತೆರೆಯಲು ಅವಕಾಶ ಇಲ್ಲ. ಅಕಸ್ಮಾತ್ ಕುಟುಂಬದಲ್ಲಿ ಅವಳಿ ಅಥವಾ ತ್ರಿವಳಿ ಹೆಣ್ಮಕ್ಕಳು ಜನಿಸಿದರೆ ಆಗ ಅವರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಲು ಅವಕಾಶ ಇರುತ್ತದೆ.
ಹೆಣ್ಮಗುವಿನ ವಯಸ್ಸು 18 ವರ್ಷ ತುಂಬುವವರೆಗೂ ಪಾಲಕರೇ ಎಸ್ಎಸ್ವೈ ಖಾತೆಯನ್ನು ನಿರ್ವಹಿಸುತ್ತಾರೆ. ಪ್ರಾಯಕ್ಕೆ ಬಂದ ಬಳಿಕ ಹುಡುಗಿಯೇ ತನ್ನ ಖಾತೆಯನ್ನು ನಿರ್ವಹಿಸಬಹುದು.
ಇದನ್ನೂ ಓದಿ: Gratuity Calculator: ಗ್ರಾಚ್ಯುಟಿ ಎಂದರೇನು? ಕೆಲಸ ಬಿಟ್ಟರೆ ಎಷ್ಟು ಹಣ ಸಿಗಬಹುದು? ಇಲ್ಲಿದೆ ಲೆಕ್ಕಾಚಾರ
ಈ ಸ್ಕೀಮ್ನಲ್ಲಿ 15 ವರ್ಷದವರೆಗೆ ಹೂಡಿಕೆ ಮಾಡಬಹುದು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಮಿತಿ ಇರುತ್ತದೆ. ಕನಿಷ್ಠ ವಾರ್ಷಿಕ ಹೂಡಿಕೆ 250 ರೂ ಇದೆ. ಈ ಅಕೌಂಟ್ 21 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ.
ಅವಧಿಗೆ ಮುನ್ನ ಸ್ವಲ್ಪ ಭಾಗದ ಹಣವನ್ನು ವಿತ್ಡ್ರಾ ಮಾಡಿಕೊಳ್ಳಬಹುದು. ಹುಡುಗಿಯ ವಯಸ್ಸು 18 ದಾಟಿದರೆ ಅಥವಾ 10ನೇ ತರಗತಿ ಪಾಸಾದಾಗ ಶೇ. 50ರಷ್ಟು ಹಣವನ್ನು ಹಿಂಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ