Mutual Funds: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್ಗಳ ನಡುವೆ ಏನು ವ್ಯತ್ಯಾಸ?
Difference between Multi Cap Funds, Flexi Cap Funds and Multi Asset Funds: ಮ್ಯೂಚುವಲ್ ಫಂಡ್ಗಳಲ್ಲಿ ವೈವಿಧ್ಯತೆ ಇದೆ. ವಿವಿಧ ರೀತಿಯ ಫಂಡ್ಗಳಲ್ಲಿ ಮಲ್ಟಿ ಕ್ಯಾಪ್, ಫ್ಲೆಕ್ಸಿ ಕ್ಯಾಪ್, ಮಲ್ಟಿ ಅಸೆಟ್ ಫಂಡ್ಗಳೂ ಇವೆ. ಮಲ್ಟಿಕ್ಯಾಪ್ ಫಂಡ್ಗಳು ಎಲ್ಲಾ ರೀತಿಯ ಸ್ಟಾಕುಗಳಿಗೆ ಸಮಾನ ಆದ್ಯತೆ ಕೊಡುತ್ತವೆ. ಫ್ಲೆಕ್ಸಿ ಕ್ಯಾಪ್ ಫಂಡ್ಗಳು ಸೂಕ್ತವೆನಿಸುವ ಸ್ಟಾಕ್ಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಹೊಂದಿವೆ. ಮಲ್ಟಿ ಅಸೆಟ್ ಫಂಡ್ಗಳು ಬೇರೆ ಬೇರೆ ರೀತಿಯ ಸ್ವತ್ತುಗಳ ಮೇಲೆ ಹೂಡಿಕೆ ಮಾಡಲು ಸ್ವತಂತ್ರವಿರುತ್ತವೆ.

ನವದೆಹಲಿ, ಜನವರಿ 20: ಷೇರು ಮಾರುಕಟ್ಟೆ (Stock Market) ಕಳೆದ ಒಂದು ವರ್ಷದಿಂದ ಸಿಕ್ಕಾಪಟ್ಟೆ ಅಲುಗಾಡುತ್ತಿದೆ. ಜಾಗತಿಕ ವಿದ್ಯಮಾನಗಳು ಬಜಾರನ್ನು ಕಂಗೆಡಿಸಿವೆ. ಇದೇ ವೇಳೆ ಗೊಂದಲಕ್ಕೊಳಗಾಗಿರುವ ಹೂಡಿಕೆದಾರರು, ಸುರಕ್ಷತೆಗೆ ಬೇರೆ ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಮಲ್ಟಿಕ್ಯಾಪ್ ಫಂಡ್ಗಳು, ಫ್ಲೆಕ್ಸಿಕ್ಯಾಪ್ ಫಂಡ್ಗಳು ಹಾಗೂ ಮಲ್ಟಿ ಅಸೆಟ್ ಫಂಡ್ಗಳ ಜನಪ್ರಿಯತೆ ಹೆಚ್ಚುತ್ತಿದೆ. ಈ ಮೂರೂ ಫಂಡ್ಗಳು ಮ್ಯೂಚುವಲ್ ಫಂಡ್ನ (Mutual Funds) ಪ್ರಾಕಾರಗಳೇ ಆಗಿವೆ. ಆದರೆ, ಯಾವುದರಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂಬುದು ವ್ಯತ್ಯಾಸ ಇರುತ್ತದೆ.
ಮಲ್ಟಿಕ್ಯಾಪ್ ಫಂಡ್ ಎಂದರೇನು?
ಮಲ್ಟಿ ಕ್ಯಾಪ್ ಫಂಡ್ ಎಂದರೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಈ ಮೂರು ವಿಭಾಗಗಳಲ್ಲಿ ಕನಿಷ್ಠ ಶೇ. 25ರಷ್ಟು ಹೂಡಿಕೆ ಮಾಡಬೇಕು. ಅಂದರೆ ಮಲ್ಟಿಕ್ಯಾಪ್ ಮ್ಯೂಚುವಲ್ ಫಂಡ್ಗಳು ಈಕ್ವಿಟಿಯಲ್ಲಿ ಕನಿಷ್ಠ 75ರಷ್ಟಾದರೂ ಹೂಡಿಕೆ ಮಾಡಬೇಕು.
ಇಲ್ಲಿ ಲಾರ್ಜ್ ಕ್ಯಾಪ್ ಎಂದರೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಷೇರುಗಳಲ್ಲಿ ಟಾಪ್-100 ಷೇರುಗಳನ್ನು ಲಾರ್ಜ್ ಕ್ಯಾಪ್ ಎನ್ನಲಾಗುತ್ತದೆ. 101ರಿಂದ 250ನೇ ಸ್ಥಾನದಲ್ಲಿರುವ ಷೇರುಗಳನ್ನು ಮಿಡ್ಕ್ಯಾಪ್ ಎನ್ನಲಾಗುತ್ತದೆ. ಅದಕ್ಕಿಂತ ಕೆಳಗಿರುವಂಥವು ಸ್ಮಾಲ್ ಕ್ಯಾಪ್ ಎನಿಸುತ್ತವೆ. ಇಲ್ಲಿ ಮಲ್ಟಿಕ್ಯಾಪ್ ಫಂಡ್ಗಳು ಲಾರ್ಜ್ ಕ್ಯಾಪ್ ಸ್ಟಾಕ್ಗಳಲ್ಲಿ ಶೇ. 25ರಷ್ಟಾದರೂ ಹೂಡಿಕೆ ಮಾಡಬೇಕು. ಮಿಡ್ಕ್ಯಾಪ್ ಹಾಗೂ ಸ್ಮಾಲ್ಕ್ಯಾಪ್ ಸ್ಟಾಕ್ಗಳ ಮೇಲೂ ತಲಾ ಶೇ. 25ರಷ್ಟಾದರೂ ಹೂಡಿಕೆ ಮಾಡಬೇಕು.
ಇದನ್ನೂ ಓದಿ: 1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್ನಿಂದ ಭರ್ಜರಿ ಆದಾಯ
ಫ್ಲೆಕ್ಸಿ ಕ್ಯಾಪ್ ಫಂಡ್ಗಳೆಂದರೆ?
ಇಲ್ಲಿ ಮ್ಯೂಚುವಲ್ ಫಂಡ್ಗಳು ಲಾರ್ಜ್ ಇರಲಿ, ಮಿಡ್ ಇರಲಿ, ಸ್ಮಾಲ್ ಇರಲಿ ಯಾವುದೇ ಸ್ಟಾಕ್ನಲ್ಲಿ ಹೂಡಿಕೆ ಮಾಡಲು ಸ್ವತಂತ್ರವಾಗಿರುತ್ತವೆ. ಆದರೆ, ಈಕ್ವಿಟಿಗಳಲ್ಲಿ ಒಟ್ಟಾರೆ ಶೇ. 65ರಷ್ಟಾದರೂ ಹೂಡಿಕೆ ಮಾಡಬೇಕು. ಮಲ್ಟಿಕ್ಯಾಪ್ಗೆ ಹೋಲಿಸಿದರೆ ಫ್ಲೆಕ್ಸಿ ಕ್ಯಾಪ್ ಫಂಡ್ಗಳಲ್ಲಿ ಮ್ಯಾನೇಜರ್ಗಳಿಗೆ ಹೆಚ್ಚು ಸ್ವಾತಂತ್ರ್ಯ ಇರುತ್ತದೆ.
ಮಲ್ಟಿ ಅಸೆಟ್ ಫಂಡ್ಗಳೆಂದರೆ ಏನು?
ಮಲ್ಟಿ ಅಸೆಟ್ ಫಂಡ್ಗಳು ಈಕ್ವಿಟಿಯೂ ಸೇರಿದಂತೆ ಬೇರೆ ಬೇರೆ ಅಸೆಟ್ ಕ್ಲಾಸ್ಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿ, ಡೆಟ್, ಚಿನ್ನ, REITs (ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್), InvITs (ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಟ್ರಸ್ಟ್), ಅಂತಾರಾಷ್ಟ್ರೀಯ ಸ್ವತ್ತುಗಳು ಹೀಗೆ ಬೇರೆ ಬೇರೆ ರೀತಿಯ ಸ್ವತ್ತುಗಳ ಮೇಲೆ ಹೂಡಿಕೆ ಮಾಡಬಹುದು. ಕನಿಷ್ಠ ಮೂರು ಸ್ವತ್ತುಗಳಲ್ಲಿ ಒಂದೊಂದರಲ್ಲೂ ಕನಿಷ್ಠ ಶೇ. 10ರಷ್ಟಾದರೂ ಹೂಡಿಕೆ ಮಾಡಬೇಕು ಎನ್ನುವ ನಿಯಮ ಇರುತ್ತದೆ.
ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ
ಉದಾಹರಣೆಗೆ, ಈಕ್ವಿಟಿಗಳಲ್ಲಿ ಕನಿಷ್ಠ ಶೇ. 10, ಚಿನ್ನದ ಮೇಲೆ ಶೇ. 10, ಬಾಂಡ್ಗಳ ಮೇಲೆ ಶೇ. 10 ಹೀಗೆ ಹೂಡಿಕೆಗಳನ್ನು ಹಂಚಬಹುದು. ಅನಿಶ್ಚಿತ ಸಂದರ್ಭಗಳಲ್ಲಿ ಸುರಕ್ಷಿತ ಹೂಡಿಕೆ ಬಯಸುವವರಿಗೆ ಮಲ್ಟಿ ಅಸೆಟ್ ಫಂಡ್ ಬಹಳ ಅನುಕೂಲ ಕೊಡುತ್ತದೆ.
ಫ್ಲೆಕ್ಸಿಕ್ಯಾಪ್ ಫಂಡ್ಗಳು ಹಾಗೂ ಮಲ್ಟಿ ಅಸೆಟ್ ಫಂಡ್ಗಳು ಬಹಳ ಜನಪ್ರಿಯತೆ ಪಡೆಯುತ್ತಿವೆ. ಎರಡೂ ರೀತಿಯ ಫಂಡ್ಗಳು ಪ್ರಸಕ್ತ ಸಂದರ್ಭಗಳಿಗೆ ಹೇಳಿ ಮಾಡಿಸಿದ್ದಂತಿವೆ ಎನ್ನುವುದು ತಜ್ಞರ ಅನಿಸಿಕೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




