ಬೆಂಗಳೂರು: ಹೆಣ್ಮಕ್ಕಳ ಅನುಕೂಲಕ್ಕೆಂದು ರೂಪಿಸಲಾಗಿರುವ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಕಳೆದ 3 ವರ್ಷಗಳಿಂದ ಬಡ್ಡಿ ಪರಿಷ್ಕರಣೆ ಕಂಡೇ ಇಲ್ಲ. ಈ ಹಣಕಾಸು ವರ್ಷದಲ್ಲಾದರೂ ಬಡ್ಡಿ ದರ ಹೆಚ್ಚಿಸಿದರೆ (Interest Rate Hike) ಅನುಕೂಲವಾಗುತ್ತದೆ ಎಂದು ಯೋಜನೆಯ ಠೇವಣಿದಾರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಳೆದ 12 ಕ್ವಾರ್ಟರ್ಗಳಿಂದಲೂ ಈ ಯೋಜನೆಯಲ್ಲಿ ಬಡ್ಡಿ ದರ ಶೇ. 7.6ರಷ್ಟರಲ್ಲೇ ಇದೆ. 2022 ಡಿಸೆಂಬರ್ನಲ್ಲಿ ಸರ್ಕಾರ ಕೆಲ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಏರಿಸಿತ್ತು. ಆದರೆ, ಠೇವಣಿದಾರರಿಗೆ ತೆರಿಗೆ ಲಾಭ ತಂದುಕೊಡದ ಯೋಜನೆಗಳ ಬಡ್ಡಿ ದರ ಮಾತ್ರವೇ ಪರಿಷ್ಕರಣೆ ಆಗಿದ್ದು. ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಯಂತಹ ಜನಪ್ರಿಯ ಸ್ಕೀಮ್ಗಳ ಬಡ್ಡಿ ದರ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿಲ್ಲ.
ಫೈನಾನ್ಷಿಯಲ್ ಎಕ್ಸ್ಪ್ರೆಸ್ನ ವರದಿ ಪ್ರಕಾರ 2023-24ರ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲೂ ಬಡ್ಡಿ ದರ ಹೆಚ್ಚಳವಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಬಡ್ಡಿ ದರದಲ್ಲಿ ಯಥಾಸ್ಥಿತಿ ಮುಂದುವರಿಸಲು ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ. ಈ ತಿಂಗಳು, ಅಂದರೆ ಮಾರ್ಚ್ನ ಅಂತ್ಯದಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಪರಿಷ್ಕೃತ ಬಡ್ಡಿ ದರಗಳನ್ನು ಸರ್ಕಾರ ಪ್ರಕಟಿಸುವ ನಿರೀಕ್ಷೆ ಇದೆ.
ಬಡ್ಡಿ ದರ ಕಡಿಮೆ ಆದರೂ ಸುಕನ್ಯಾ ಸಮೃದ್ಧಿ ಯೋಜನೆ ಕೆಲವಾರು ತೆರಿಗೆ ಲಾಭ ತಂದುಕೊಡುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ವರ್ಷಕ್ಕೆ 1.5 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಇದೆ. ಇದರಲ್ಲಿ ಸುಕನ್ಯ ಸಮೃದ್ಧಿ ಯೋಜನೆಯಲ್ಲಿನ ಹೂಡಿಕೆ ಹಣವನ್ನೂ ಸೇರಿಸಿಕೊಳ್ಳಬಹುದು.
ಕುತೂಹಲದ ಸಂಗತಿ ಎಂದರೆ ಸುಕನ್ಯ ಸಮೃದ್ಧಿ ಯೋಜನೆ ಮತ್ತು ಪಿಪಿಎಫ್ ಯೋಜನೆಗಳ ಬಡ್ಡಿ ದರ ಹಿಂದೆ ಇಳಿಕೆಯಾಗಿದ್ದುಂಟು. ಶೇ. 7.9ರಷ್ಟಿದ್ದ ಪಿಪಿಎಫ್ ಬಡ್ಡಿಯನ್ನು ಸರ್ಕಾರ ಇಗ ಶೇ. 7.1ಕ್ಕೆ ತಂದು ನಿಲ್ಲಿಸಿದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ಶೇ. 8.4ರಿಂದ ಶೇ. 7.6ಕ್ಕೆ ಇಳಿದಿದೆ.
ಕೆಲ ಎಫ್ಡಿ ದರಗಳು ಪಿಪಿಎಫ್, ಎಸ್ಎಸ್ವೈ ಸ್ಕೀಮ್ಗಳಿಗಿಂತ ಹೆಚ್ಚು ಬಡ್ಡಿ ದರ ತಂದು ಕೊಡುತ್ತವಾದರೂ ಸುಕನ್ಯಾ ಸಮೃದ್ಧಿ ಯೋಜನೆಯಂಥ ಸ್ಕೀಮ್ಗಳು ಜನಪ್ರಿಯತೆ ಉಳಿಸಿಕೊಂಡಿರುವುದು ಹೆಚ್ಚಾಗಿ ಅದು ಒದಗಿಸುವ ಟ್ಯಾಕ್ಸ್ ಡಿಡಕ್ಷನ್ ಅವಕಾಶದಿಂದಾಗಿ.
ಇದನ್ನೂ ಓದಿ: ELSS: ತೆರಿಗೆ ಉಳಿಸಲು ಎಸ್ಐಪಿಗೆ ಹಣ ಹಾಕುತ್ತಿದ್ದೀರಾ? ಇಎಲ್ಎಸ್ಎಸ್ ಅಂಶದತ್ತ ಗಮನ ಇರಲಿ
ಆದಾಯ ತೆರಿಗೆ ಪಾವತಿದಾರರು ಟ್ಯಾಕ್ಸ್ ಡಿಡಕ್ಷನ್ಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ನಡೆಸುವುದರಿಂದ ಲಾಭ ಉಂಟು. ಕೆಲ ವರ್ಗದ ಟ್ಯಾಕ್ಸ್ ಪಾವತಿದಾರರಿಗೆ ಸುಕನ್ಯಾ ಸಮೃದ್ಧಿ ಯೋಜನೆ ವರ್ಷಕ್ಕೆ ಶೇ. 11ರವರೆಗೂ ಹಣ ಬೆಳೆಸುವ ಅವಕಾಶ ಮಾಡಿಕೊಡುತ್ತದೆ.
ಏನಿದು ಸುಕನ್ಯಾ ಸಮೃದ್ಧಿ ಯೋಜನೆ?
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಮಗುವಿನ ಹೆಸರಿನಲ್ಲಿ ಯಾರು ಬೇಕಾದರೂ ಸುಕನ್ಯಾ ಸಮೃದ್ಧಿ ಯೋಜನೆಯ ಸ್ಕೀಮ್ ಪಡೆಯಬಹುದು. ಒಂದು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂವರೆಗೂ ಈ ಸ್ಕೀಮ್ನಲ್ಲಿ ಹಣ ತೊಡಗಿಸಬಹುದು.
Published On - 4:48 pm, Sun, 12 March 23