FD Interest rate: ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 9ರ ವರೆಗೆ ಬಡ್ಡಿ ನೀಡುತ್ತಿದೆ ಈ ಬ್ಯಾಂಕ್

| Updated By: Ganapathi Sharma

Updated on: Nov 18, 2022 | 1:03 PM

FD Interest rate; ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 8.5ರ ವರೆಗೂ ಕೆಲವು ಬ್ಯಾಂಕ್​ಗಳು ಬಡ್ಡಿ ನೀಡುತ್ತಿವೆ. ಆದರೆ, ಈ ಬ್ಯಾಂಕ್ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರವನ್ನು ಶೇಕಡಾ 9ರ ವರೆಗೆ ಹೆಚ್ಚಳ ಮಾಡಿದೆ.

FD Interest rate: ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 9ರ ವರೆಗೆ ಬಡ್ಡಿ ನೀಡುತ್ತಿದೆ ಈ ಬ್ಯಾಂಕ್
ಸಾಂದರ್ಭಿಕ ಚಿತ್ರ
Image Credit source: iStock
Follow us on

ಸ್ಥಿರ ಠೇವಣಿಯ (Fixed Deposit) ಬಡ್ಡಿ ದರವನ್ನು (Interest rate) ಇತ್ತೀಚೆಗಷ್ಟೇ ಅನೇಕ ಬ್ಯಾಂಕ್​ಗಳು ಹೆಚ್ಚಿಸಿವೆ. ಎಲ್ಲ ಬ್ಯಾಂಕ್​ಗಳೂ ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ನೀಡುತ್ತಿವೆ. ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 8.5ರ ವರೆಗೂ ಕೆಲವು ಬ್ಯಾಂಕ್​ಗಳು ಬಡ್ಡಿ ನೀಡುತ್ತಿವೆ. ಆದರೆ, ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರವನ್ನು ಶೇಕಡಾ 9ರ ವರೆಗೆ ಹೆಚ್ಚಳ ಮಾಡಿದೆ. ಇತ್ತೀಚೆಗೆ ಆರಂಭಿಸಿದ್ದ ‘ಶಕುನ್’ ಸ್ಥಿರ ಠೇವಣಿ ಹೂಡಿಕೆ ಯೋಜನೆಯ ಯಶಸ್ಸಿನಿಂದ ಪ್ರೇರಣೆಗೊಂಡು ಬಡ್ಡಿ ದರ ಹೆಚ್ಚಳ ಮಾಡಿದೆ ಎಂದು ಬ್ಯಾಂಕ್​ನ ಮೂಲಗಳು ತಿಳಿಸಿವೆ.

ಒಂದೇ ತಿಂಗಳಲ್ಲಿ ಎರಡನೇ ಬಾರಿ ಬಡ್ಡಿ ಹೆಚ್ಚಳ

ಒಂದು ವರ್ಷದ ವರೆಗೆ ಅಥವಾ 181 ಮತ್ತು 501 ದಿನಗಳ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಈಗ ಶೇಕಡಾ 9ರ ಬಡ್ಡಿ ನೀಡುತ್ತಿದೆ. ಇತರ ಗ್ರಾಹಕರಿಗೆ 181 ಮತ್ತು 501 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 8.50ರ ಬಡ್ಡಿ ದರದ ಕೊಡುಗೆ ನೀಡಿದೆ. ಇದರೊಂದಿಗೆ ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನವೆಂಬರ್​ನಲ್ಲಿ ಎರಡನೇ ಬಾರಿ ಬಡ್ಡಿ ದರದಲ್ಲಿ ಪರಿಷ್ಕರಣೆ ಮಾಡಿದಂತಾಗಿದೆ.

2 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಠೇವಣಿಗಳ ಬಡ್ಡಿ ದರವನ್ನೂ ಬ್ಯಾಂಕ್ ಹೆಚ್ಚಿಸಿದೆ. ಕಾಲೇಬಲ್ ಬಲ್ಕ್ ಡೆಪಾಸಿಟ್​ಗಳಿಗೆ ವರ್ಷದ ಅವಧಿಗೆ ಶೇಕಡಾ 8ರ ಬಡ್ಡಿ ನೀಡುತ್ತಿದೆ. ನಾನ್ ಕಾಲೇಬಲ್ ಬಲ್ಕ ಡೆಪಾಸಿಟ್​​ಗಳಿಗೆ ಶೇಕಡಾ 8.10ರ ಬಡ್ಡಿ ನೀಡುತ್ತಿದೆ.

ಉಳಿತಾಯ ಖಾತೆಗೂ ಹೆಚ್ಚಿನ ಬಡ್ಡಿ

ಉಳಿತಾಯ ಖಾತೆಯಲ್ಲಿರುವ ಹಣಕ್ಕೂ ಈ ಬ್ಯಾಂಕ್ ವಾರ್ಷಿಕ ಶೇಕಡಾ 7ರ ಬಡ್ಡಿ ನೀಡುತ್ತಿದೆ. 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಉಳಿತಾಯಕ್ಕೆ ವಾರ್ಷಿಕ ಶೇಕಡಾ 6ರಷ್ಟು ಬಡ್ಡಿ ನೀಡುತ್ತಿದೆ.

ಅವಧಿಗೂ ಮುನ್ನ ವಿತ್​ಡ್ರಾ ಮಾಡುವುದಾದರೆ…

ಅವಧಿಗೂ ಮುನ್ನ ಎಫ್​ಡಿ ಹಿಂಪಡೆಯುವುದಾದರೆ ಬಡ್ಡಿ ದರದಲ್ಲಿ ಶೇಕಡಾ 1ರಷ್ಟು ಕಡಿತ ಮಾಡಲಾಗುವುದು. ಎಲ್ಲಿಯವರೆಗೆ ಠೇವಣಿ ಇಟ್ಟಿರುತ್ತೇವೆಯೋ ಆ ಅವಧಿಯ ವರೆಗೆ ಲೆಕ್ಕಾಚಾರ ಹಾಕಿ ಬಡ್ಡಿಯಲ್ಲಿ ಶೇಕಡಾ 1ರ ಕಡಿತ ಮಾಡಲಾಗುತ್ತದೆ ಯುನಿಟಿ ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ