ಗೃಹಸಾಲ ಯಾರಿಗೇ ಆದರೂ ಬಹಳ ದೊಡ್ಡ ಹೊರೆ. ಸಾಲದ ಮೊತ್ತ ಹೆಚ್ಚು, ಕಂತು ಅವಧಿ ಸುದೀರ್ಘ ಇರುತ್ತದೆ. ಕೆಲ ಗೃಹಸಾಲಗಳು (Home Loan) 30 ವರ್ಷದವರೆಗೂ ಇರುತ್ತವೆ. ಅಷ್ಟು ವರ್ಷ ಪ್ರತೀ ತಿಂಗಳು ಸಾಲದ ಕಂತುಗಳನ್ನು ಕಟ್ಟುವಷ್ಟರಲ್ಲಿ ನಿತ್ರಾಣಗೊಂಡಿರುತ್ತೇವೆ. ಲೋನ್ ಯಾವಾಗ ಮುಗಿಯುತ್ತಪ್ಪಾ ಎಂದು ಹತಾಶೆಯಿಂದ ಕಾಯುತ್ತಿರುತ್ತೇವೆ. ನಾವು ತೆಗೆದುಕೊಂಡ ಸಾಲಕ್ಕಿಂತ ಬಹಳ ಹೆಚ್ಚು ಮೊತ್ತದ ಹಣವನ್ನು ಬಡ್ಡಿ ರೂಪದಲ್ಲೇ ಕಟ್ಟಿಬಿಡುತ್ತೇವೆ. ಆದ್ದರಿಂದ ಗೃಹ ಸಾಲ ಪಡೆದವರು ತಮ್ಮ ಹೊರೆಯನ್ನು ಸಾಧ್ಯವಾದಷ್ಟೂ ಬೇಗ ಇಳಿಸುವತ್ತ ಗಮನ ಕೊಡಬೇಕು. ಈ ನಿಟ್ಟಿನಲ್ಲಿ ಪ್ರೀಪೇಮೆಂಟ್, ಅಥವಾ ಮುಂಗಡ ಪಾವತಿ ಅವಕಾಶ ಬಳಕೆ ಮಾಡಿಕೊಳ್ಳಬೇಕು.
ನೀವು ಗೃಹ ಸಾಲ ಪಡೆಯುವ ಮುನ್ನ ಪ್ರೀಪೇಮೆಂಟ್ ಬಗ್ಗೆ ವಿಚಾರಿಸಿ ಖಚಿತಪಡಿಸಿಕೊಳ್ಳಿ. ಎಲ್ಲಾ ಬ್ಯಾಂಕ್ಗಳು ಪ್ರೀಪೇಮೆಂಟ್ ಸೌಕರ್ಯ ಒದಗಿಸುವುದಿಲ್ಲ. ನಿಮಗೆ ಆ ಅವಕಾಶ ಇದ್ದರೆ ಖಂಡಿತವಾಗಿ ಉಪಯೋಗಿಸಿಕೊಳ್ಳಿ. ನಿಮ್ಮ ನಿಯಮಿತ ಕಂತಿನ ಜೊತೆ ಹೆಚ್ಚುವರಿಯಾಗಿ ಸಾಧ್ಯವಾದಷ್ಟೂ ಹಣವನ್ನು ಪಾವತಿಸುತ್ತಾ ಹೋಗಿ. ಆಗ ಸಾಲದ ಅವಧಿ ಕಡಿಮೆ ಆಗಿ ನೀವು ಬೇಗ ಸಾಲದಿಂದ ಮುಕ್ತರಾಗಬಹುದು.
ಸಾಲದ ಆರಂಭದಲ್ಲಿ ನೀವು ಕಟ್ಟುವ ಕಂತಿನಲ್ಲಿ ಬಹುಪಾಲು ಮೊತ್ತವು ಬಡ್ಡಿಗೆ ಹೋಗುತ್ತದೆ. ಹೀಗಾಗಿ, ಆರಂಭದಲ್ಲೇ ನೀವು ಹೆಚ್ಚಿನ ಮೊತ್ತವನ್ನು ಕಂತಿನ ಜೊತೆ ಹೆಚ್ಚುವರಿಯಾಗಿ ಕಟ್ಟುವುದು ಸೂಕ್ತ.
ಇದನ್ನೂ ಓದಿ: HDFC: ಎಚ್ಡಿಎಫ್ಸಿ ಬ್ಯಾಂಕ್ ಹೊಸ ಎಫ್ಡಿ ಸ್ಕೀಮ್; ಹೆಚ್ಚು ಬಡ್ಡಿ, ಸೀಮಿತ ಅವಕಾಶ; ಇಲ್ಲಿದೆ ಡೀಟೇಲ್ಸ್
ನೀವು 20 ವರ್ಷದ ಅವಧಿಗೆ ಗೃಹ ಸಾಲ ಪಡೆದಿದ್ದರೆ, ಪ್ರತೀ ವರ್ಷವೂ ಸಾಲದ ಬಾಕಿ ಮೊತ್ತದ ಶೇ. 5ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಿದರೆ ನಿಮ್ಮ 20 ವರ್ಷದ ಸಾಲ 12 ವರ್ಷಕ್ಕೆ ಇಳಿದುಹೋಗುತ್ತದೆ.
ಅಥವಾ ನಿಮ್ಮ 20 ವರ್ಷದ ಸಾಲದಲ್ಲಿ ನೀವು ಪ್ರತೀ ವರ್ಷ ಒಂದು ಮಾಸಿಕ ಕಂತು ಹೆಚ್ಚುವರಿಯಾಗಿ ಪಾವತಿಸುತ್ತಾ ಹೋದರೂ ಸಾಕು ಸಾಲ 17 ವರ್ಷಕ್ಕೆ ಖತಂ ಆಗುತ್ತದೆ. ಅಥವಾ ನೀವು ಪ್ರತೀ ವರ್ಷವೂ ಸಾಲದ ಕಂತಿನ ಮೊತ್ತವನ್ನು ಶೇ. 5ರಷ್ಟು ಹೆಚ್ಚಿಸುತ್ತಾ ಹೋದರೂ ಸಾಕು 13 ವರ್ಷಕ್ಕೆ ಸಾಲ ತೀರಿಸಬಹುದು.
ನೀವು ಜೀವನ ಸವೆಸಿದಂತೆಲ್ಲಾ ಅಗತ್ಯತೆಗಳು ಹೆಚ್ಚುತ್ತಿರುತ್ತವೆ. ಹೀಗಾಗಿ, ನಿಮ್ಮ ಗೃಹಸಾಲವು ಬೇರೆ ಅಗತ್ಯತೆಗಳಿಗೆ ಅಡ್ಡಿಯಾಗದಂತೆ ನಿಭಾಯಿಸಿ, ಸಾಧ್ಯವಾದಷ್ಟು ಸಂಪನ್ಮೂಲ ಬಳಸಿ ಸಾಲವನ್ನು ಬೇಗನೇ ತೀರಿಸುವತ್ತ ಗಮನ ಕೊಡಿ. ಒಂದು ವೇಳೆ ನೀವು ತೆಗೆದುಕೊಂಡಿರುವ ಗೃಹಸಾಲಕ್ಕೆ ಮುಂಗಡ ಪಾವತಿ ಸೌಲಭ್ಯ ಇಲ್ಲದೇ ಇದ್ದರೆ ಆಗ ನೀವು ಪರ್ಯಾಯವಾಗಿ ಇತರ ಹೂಡಿಕೆ ಯೋಜನೆಗಳಲ್ಲಿ ನಿಮ್ಮ ಉಳಿತಾಯ ಹಣವನ್ನು ಬೆಳೆಸುವತ್ತ ಗಮನ ಕೊಡಬೇಕಾಗುತ್ತದೆ. ಇದರಿಂದ ನಿಮ್ಮ ಇತರ ಅಗತ್ಯ ಖರ್ಚುಗಳಿಗೆ ಹಣ ಶೇಖರಿಸಿಡಲು ಸಾಧ್ಯವಾಗುತ್ತದೆ.
Published On - 5:40 pm, Mon, 29 May 23