Petrol Diesel Price Today | ದೆಹಲಿ: ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗುತ್ತಿದೆ. ಮಾರ್ಚ್ 22ರಂದು ಆರಂಭವಾದ ಬೆಲೆ ಏರಿಕೆ ಓಟ ಇಂದು (ಏಪ್ರಿಲ್ 3, ಭಾನುವಾರ) ಮತ್ತೆ ಮುಂದುವರಿದಿದೆ. ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಲಾ 80 ಪೈಸೆ ಹೆಚ್ಚಿಸಲಾಗಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿದಿನ ಎನ್ನುವಂತೆ ಏರುತ್ತಲೇ ಇದೆ. ಕಳೆದ 12 ದಿನಗಳಲ್ಲಿ ಇಂಧನ ಬೆಲೆ ಪ್ರತಿ ಲೀಟರ್ಗೆ ಸರಾಸರಿ ₹ 8 ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ₹ 108.99 ಮತ್ತು ಡೀಸೆಲ್ ₹ 92.83 ಮುಟ್ಟಿದೆ. ದೆಹಲಿಯಲ್ಲಿಂದು ಲೀಟರ್ ಪೆಟ್ರೋಲ್ ಬೆಲೆ 80 ಪೈಸೆ ಏರಿಕೆಯಾಗಿದ್ದು, ಒಂದು ಲೀಟರ್ಗೆ ₹ 103.41 ಮುಟ್ಟಿದೆ. ಲೀಟರ್ ಡೀಸೆಲ್ ಬೆಲೆಯೂ 80 ಪೈಸೆ ಏರಿಕೆಯಾಗಿದ್ದು, ಬೆಲೆ ₹ 94.67 ತಲುಪಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹ 118.41, ಡೀಸೆಲ್ ₹ 102.64ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್ ₹ 108.21 ಡೀಸೆಲ್ ₹ 99.04, ಕೊಲ್ಕತ್ತಾದಲ್ಲಿ ಪೆಟ್ರೋಲ್ ₹ 113.03, ಡೀಸೆಲ್ ₹ 97.02 ಮುಟ್ಟಿದೆ.
ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ದೇಶಾದ್ಯಂತ ವ್ಯತ್ಯಯಗೊಳ್ಳುತ್ತವೆ. ಇದು ಸತತ 11ನೇ ಬಾರಿಗೆ ಇಂಧನ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನವೆಂಬರ್ 2021ರಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಕಡಿವಾಣ ಬಿದ್ದಿತ್ತು. ವೈಮಾನಿಕ ಇಂಧನವನ್ನು ಸರ್ಕಾರ ಶೇ 2ರಷ್ಟು ಹೆಚ್ಚಿಸಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಕೆಲ ದಿನಗಳು ಬೆಲೆ ಏರಿಕೆಯ ಓಟ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹೆಚ್ಚಾಗುತ್ತಲೇ ಇರುವುದರಿಂದ ಭಾರತದಲ್ಲಿಯೇ ಅದರ ಪರಿಣಾಮಗಳು ಗೋಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ತೈಲ ಕಂಪನಿಗಳು ಪ್ರತಿದಿನ ಬೆಳಗ್ಗೆಯೇ ವಿವಿಧ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಇರುವ ಬೆಲೆ ಆಧಾರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ನಿರ್ಧರಿಸಲಾಗುತ್ತದೆ. ಕಳೆದ ಮಾರ್ಚ್ 22ರಿಂದ ಪೆಟ್ರೋಲ್ ಡೀಸೆಲ್ ಧಾರಣೆ ಸತತ ಏರಿಕೆ ಕಾಣುತ್ತಿದೆ. ಇಂದು ಮತ್ತೆ ಬೆಲೆಗಳು ಏರಿಕೆ ಕಂಡಿದ್ದು, ಇದು 13ನೇ ದಿನದ ಬೆಲೆ ಏರಿಕೆಯಾಗಿದೆ.
ಮೊದಲ ನಾಲ್ಕು ದಿನಗಳಲ್ಲಿ ಇಂಧನ ಬೆಲೆಗಳನ್ನು ದಿನಕ್ಕೆ ಪ್ರತಿ ಲೀಟರ್ಗೆ ತಲಾ 80 ಪೈಸೆಯಂತೆ ಹೆಚ್ಚಿಸಲಾಗಿಯಿತು. ನಂತರದ ದಿನಗಳಲ್ಲಿ ಪೆಟ್ರೋಲ್ ಧಾರಣೆಯನ್ನು ಲೀಟರ್ಗೆ 50 ಮತ್ತು 30 ಪೈಸೆಯಷ್ಟು ಹೆಚ್ಚಿಸಲಾಯಿತು. ಮೊನ್ನೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಈವರೆಗಿನ ಸರಾಸರಿ ಲೆಕ್ಕಹಾಕಿದರೆ ಕಳೆದ 13 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ₹ 8ರಷ್ಟು ಹೆಚ್ಚಾಗಿದೆ.
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾದ ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ: ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು
ಇದನ್ನೂ ಓದಿ: ಶ್ರೀಲಂಕಾದಲ್ಲಿರುವ ತಮಿಳಿಗರಿಗೆ ನಾವು ಸಹಾಯ ಮಾಡುತ್ತೇವೆ, ಅನುಮತಿ ಕೊಡಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಸಿಎಂ ಸ್ಟಾಲಿನ್