ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾದ ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ: ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು
ಭಾರತದೊಂದಿಗೆ 1 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಸಾಲದ ಒಪ್ಪಂದ ಮಾಡಿಕೊಂಡಿರುವ ಶ್ರೀಲಂಕಾ, ಇನ್ನೊಮ್ಮೆ 1 ಶತಕೋಟಿ ಅಮೆರಿಕನ್ ಡಾಲರ್ ನೆರವು ನೀಡಬೇಕು ಎಂದು ಕೋರಿದೆ.
ಕೊಲಂಬೊ: ಶ್ರೀಲಂಕಾದಲ್ಲಿ ಶುಕ್ರವಾರದಿಂದ ತುರ್ತುಪರಿಸ್ಥಿತಿ (Srilanka Economic Crisis) ಜಾರಿಗೆ ಬಂದಿದೆ. ಇದರಿಂದಾಗಿ ಭದ್ರತಾ ಪಡೆಗಳಿಗೆ ದೊಡ್ಡಮಟ್ಟದ ಅಧಿಕಾರ ಲಭ್ಯವಾಗಿದ್ದು, ಪ್ರತಿಭಟನೆಗಳನ್ನು ಮುಂದಿನ ದಿನಗಳಲ್ಲಿ ಹತ್ತಿಕ್ಕಲು ಸರ್ಕಾರಕ್ಕೆ ಹೊಸ ಅಸ್ತ್ರ ಸಿಕ್ಕಂತೆ ಆಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟ ಅನುಭವಿಸುತ್ತಿರುವ ನೂರಾರು ಜನರು ಶುಕ್ರವಾರ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ ಕೆಲವರು ಅಧ್ಯಕ್ಷರ ಮನೆಗೂ ನುಗ್ಗಲು ಯತ್ನಿಸಿದರು. ಪರಿಸ್ಥಿತಿ ಕೈಮೀರುವುದನ್ನು ಗಮನಿಸಿದ ಅಧ್ಯಕ್ಷ ಗೊಟಬಾಯ ರಾಜಪಕ್ಸ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದರು. ಶ್ರೀಲಂಕಾದ ಆರ್ಥಿಕತೆ ಮತ್ತು ಇತರ ಬೆಳವಣಿಗೆಗಳ ಕುರಿತು ನೀವು ತಿಳಿಯಬೇಕಾದ 10 ಅಂಶಗಳಿವು.
- ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತುರ್ತು ಪರಿಸ್ಥಿತಿ ವಿಧಿಸಲಾಗಿದೆ. ಅಗತ್ಯವಸ್ತುಗಳ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳಲು, ಜನರ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲು ಭದ್ರತಾ ಪಡೆಗಳು ಅಗತ್ಯ ಕ್ರಮ ತೆಗೆದುಕೊಳ್ಳಲಿವೆ ಎಂದು ಅಧ್ಯಕ್ಷ ಗೊಟಬಾಯ ರಾಜಪಕ್ಸ ಹೇಳಿದರು. 2 2 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಶ್ರೀಲಂಕಾ ದೇಶವು ಅಗತ್ಯ ವಸ್ತುಗಳ ಕೊರತೆಯಿಂದ ಕಂಗಾಲಾಗಿದೆ. ಹಣದುಬ್ಬರ ಹೆಚ್ಚಾಗಿದ್ದು ಬೆಲೆಗಳು ಗಗನಕ್ಕೇರಿವೆ. 1948ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ ನಂತರ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯವಸ್ತಗೊಂಡಿದೆ.
- ರಾಜಪಕ್ಸ ಕುಟುಂಬ ಅಧಿಕಾರದಿಂದ ದೂರ ಸರಿಯಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ‘ಭ್ರಷ್ಟಾಚಾರ ಸಾಕು, ಮನೆಗೆ ಹೋಗು ಗೋಟ’ ಎಂಬರ್ಥದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ದೇಶಾದ್ಯಂತ ಪ್ರತಿಭಟಿಸುತ್ತಿದ್ದಾರೆ.
- ದಕ್ಷಿಣ ಶ್ರೀಲಂಕಾದ ಗಲ್ಲೆ, ಮತಾರಾ ಮತ್ತು ಮೊರಟುವಾ ಪಟ್ಟಣಗಳಲ್ಲಿಯೂ ಪ್ರತಿಭಟನೆ ತೀವ್ರಗೊಂದಿದೆ. ರಸ್ತೆತಡೆಗಳು ಸಾಮಾನ್ಯ ವಿದ್ಯಮಾನ ಎನಿಸಿದೆ. ಅಧ್ಯಕ್ಷರ ಖಾಸಗಿ ನಿವಾಸದ ಎದುರೂ ಜನರು ದೊಡ್ಡಸಂಖ್ಯೆಯಲ್ಲಿ ನೆರೆದಿದ್ದು, ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಗ್ರಹಿಸುತ್ತಿದ್ದಾರೆ.
- ಪೆಟ್ರೋಲ್ ಬಂಕ್ಗಳ ಎದುರು ಜನರು ದೊಡ್ಡ ಸಂಖ್ಯೆಯಲ್ಲಿ ಪಾಳಿಗಳಲ್ಲಿ ನಿಲ್ಲುತ್ತಿರುವ ಕಾರಣ ಸರ್ಕಾರ ಮಿಲಿಟರಿ ನಿಯೋಜಿಸಿದೆ. ಮಿಲಿಟರಿ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಜನರು ಘರ್ಷಣೆಗೆ ಇಳಿಯುತ್ತಿದ್ದಾರೆ. ಭದ್ರತಾ ಪಡೆಗಳ ವಾಹನಗಳನ್ನು ಸುಟ್ಟುಹಾಕುತ್ತಿದ್ದಾರೆ. ಶ್ರೀಲಂಕಾದ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ ಎಂದು ಬಿಂಬಿಸಲು ಯತ್ನಿಸುತ್ತಿರುವ ಅಲ್ಲಿನ ಪೊಲೀಸರು ಸ್ಥಳೀಯ ಮಾಧ್ಯಮ ಪ್ರತಿನಿಧಿಗಳನ್ನು ಹತ್ತಿಕ್ಕುತ್ತಿದ್ದಾರೆ.
- ಆರ್ಥಿಕ ಬಿಕ್ಕಟ್ಟು ನಿಭಾಯಿಸುವುದು ಹೇಗೆಂದು ತಿಳಿಯದೆ ಕಂಗಾಲಾಗಿರುವ ಶ್ರೀಲಂಕಾ ಇದೀಗ ಚಳವಳಿ ನಡೆಸುತ್ತಿರುವವರಿಗೆ ‘ಭಯೋತ್ಪಾದಕರು’ ಎಂಬ ಹಣೆಪಟ್ಟಿ ಕಟ್ಟುತ್ತಿದೆ. ಅರಬ್ ಚಳವಳಿ ಮಾದರಿಯಲ್ಲಿಯೇ ಶ್ರೀಲಂಕಾದಲ್ಲಿಯೂ ಅಶಾಂತಿ ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಸಚಿವರು ಆರೋಪಿಸುತ್ತಿದ್ದಾರೆ.
- ಅಧ್ಯಕ್ಷರ ತಮ್ಮ ಬಸಿಲ್ ಹಣಕಾಸು ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅಣ್ಣ ಮತ್ತು ಮತ್ತೋರ್ವ ದಾಯಾದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರವಾಸೋದ್ಯಮ ಮತ್ತು ವಿದೇಶಗಳಲ್ಲಿ ನೆಲೆಸಿರುವ ಶ್ರೀಲಂಕನ್ನರು ಕಳಿಸುವ ಹಣ ಶ್ರೀಲಂಕಾದ ಆದಾಯದ ಪ್ರಮುಖ ಮೂಲವಾಗಿತ್ತು. ಈ ಎರಡೂ ಮೂಲಗಳು ಕೊರೊನಾ ಪಿಡುಗಿನ ನಂತರ ಬತ್ತಿ ಹೋಗಿದ್ದವು.
- ಸರ್ಕಾರ ಹಲವು ವರ್ಷಗಳಿಂದ ಸಾಲ ಪಡೆಯುತ್ತಲೇ ಇದೆ. ಹಣಕಾಸು ನಿರ್ವಹಣೆಯಲ್ಲಿ ಹಲವು ವರ್ಷಗಳಿಂದ ಆಗಿರುವ ತಪ್ಪುಗಳ ಫಲ ಈಗ ಗೋಚರವಾಗುತ್ತಿದೆ. ಶ್ರೀಲಂಕಾದಲ್ಲಿ ಆಹಾರ ಪದಾರ್ಥಗಳ ಬೆಲೆ ಶೇ 30.1ರಷ್ಟು ಹೆಚ್ಚಾಗಿದೆ. ಹಣದುಬ್ಬರ ಪ್ರಮಾಣ ಶೇ 18.7ರಷ್ಟು ಏರಿಕೆ ಕಂಡಿದೆ.
- ಒಂದು ದಿನಕ್ಕೆ ಸರಾಸರಿ 13 ಗಂಟೆಗಳ ಲೋಡ್ಶೆಡಿಂಗ್ ಹೇರಲಾಗುತ್ತಿದೆ. ಡೀಸೆಲ್ ಕೊರತೆ ತೀವ್ರವಾಗಿರುವುದರಿಂದ ಜನರೇಟರ್ ಬಳಕೆಯೂ ಸಾಧ್ಯವಾಗುತ್ತಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ಕಳೆದ ಮಾರ್ಚ್ 2020ರಿಂದಲೇ ಆಮದು ನಿರ್ಬಂಧ ಆದೇಶ ಜಾರಿ ಮಾಡಿದೆ.
- ಹಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಜೀವ ರಕ್ಷಕ ಔಷಧಿಗಳ ಕೊರತೆ ಎದುರಿಸುತ್ತಿವೆ. ದೈನಂದಿನ ಶಸ್ತ್ರಚಿಕಿತ್ಸೆಗಳನ್ನೂ ಸ್ಥಗಿತಗೊಳಿಸಿವೆ. ಸಾಲಮನ್ನಾ ಮಾಡಬೇಕು ಎಂದು ವಿಶ್ವ ಹಣಕಾಸು ನಿಧಿಯನ್ನು ಕೋರುತ್ತಿರುವ ಶ್ರೀಲಂಕಾ, ಹೊಸದಾಗಿ ಸಾಲ ನೀಡಬೇಕು ಎಂದು ಭಾರತ ಮತ್ತು ಚೀನಾ ದೇಶಗಳನ್ನು ವಿನಂತಿಸಿದೆ.
- ಭಾರತದೊಂದಿಗೆ 1 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಸಾಲದ ಒಪ್ಪಂದ ಮಾಡಿಕೊಂಡಿರುವ ಶ್ರೀಲಂಕಾ, ಇನ್ನೊಮ್ಮೆ 1 ಶತಕೋಟಿ ಅಮೆರಿಕನ್ ಡಾಲರ್ ನೆರವು ನೀಡಬೇಕು ಎಂದು ಕೋರಿದೆ. 4 ಶತಕೋಟಿ ಡಾಲರ್ ಸಾಲದ ಸುಳಿಯಲ್ಲಿರುವ ಸಿಲುಕಿರುವ ಶ್ರೀಲಂಕಾ ಬಳಿ ಕೇವಲ 2.31 ಶತಕೋಟಿ ಡಾಲರ್ ವಿದೇಶಿ ಮೀಸಲು ನಿಧಿ ಇದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿರುವ ತಮಿಳಿಗರಿಗೆ ನಾವು ಸಹಾಯ ಮಾಡುತ್ತೇವೆ, ಅನುಮತಿ ಕೊಡಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಸಿಎಂ ಸ್ಟಾಲಿನ್
ಇದನ್ನೂ ಓದಿ: ಶ್ರೀಲಂಕಾನಲ್ಲಿ ಅರಾಜಕತೆ, ಅಧ್ಯಕ್ಷ ರಾಜಪಕ್ಸಾ ಮನೆ ಮುಂದೆ ಸಾವಿರಾರು ಜನರಿಂದ ಪ್ರತಿಭಟನೆ
Published On - 8:29 am, Sat, 2 April 22