ಸೈಬರ್ ಹ್ಯಾಕಿಂಗ್ ಅಂತೆ!; ಪಹಲ್ಗಾಮ್ ದಾಳಿಗೂ ನಮಗೂ ಸಂಬಂಧವಿಲ್ಲವೆಂದು ವರಸೆ ಬದಲಾಯಿಸಿದ ಟಿಆರ್‌ಎಫ್
ಪಹಲ್ಗಾಮ್ ದಾಳಿಯ ಹಿಂದಿನ ಕೈವಾಡವನ್ನು ಎಲ್‌ಇಟಿಯ ಶಾಖೆಯಾದ ಟಿಆರ್‌ಎಫ್ ನಿರಾಕರಿಸಿದೆ. ಸೈಬರ್ ಹ್ಯಾಕಿಂಗ್ನಿಂದ ತಮ್ಮ ಮೇಲೆ ಈ ಆರೋಪ ಹೊರಿಸಲಾಗಿದೆ ಎಂದು ಟಿಆರ್‌ಎಫ್ ಆರೋಪಿಸಿದೆ. ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ತೀವ್ರ ಆಕ್ರೋಶಗೊಂಡಿರುವ ಪಾಕಿಸ್ತಾನ ಮೂಲದ ಎಲ್‌ಇಟಿಯ ಒಂದು ಅಂಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈ ಹತ್ಯಾಕಾಂಡದಿಂದ ದೂರ ಉಳಿಯಲು ನಿರ್ಧರಿಸಿದ್ದು, ಈ ದಾಳಿಯ ಹೊಣೆಯನ್ನು ಹೊತ್ತ ಸಾಮಾಜಿಕ ಮಾಧ್ಯಮ ಪೋಸ್ಟ್ ಸೈಬರ್ ಹ್ಯಾಕಿಂಗ್ನಿಂದ ಬಂದಿದ್ದು ಎಂದು ಹೇಳಿದೆ.

ನವದೆಹಲಿ, ಏಪ್ರಿಲ್ 26: ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದ ಉಗ್ರರ ದಾಳಿಯ ಹಿಂದೆ ತಮ್ಮದೇ ಕೈವಾಡವಿದೆ ಎಂದು ಟಿಆರ್‌ಎಫ್ ಈ ದಾಳಿಯ ಹೊಣೆ ಹೊತ್ತುಕೊಂಡು ಘೋಷಿಸಿತ್ತು. ಇದಾದ ನಂತರ ಟಿಆರ್‌ಎಫ್ (TRF) ಮುಖ್ಯ ಶಾಖೆಯಾದ ಎಲ್‌ಇಟಿ ಪಾಕಿಸ್ತಾನದ್ದಾದ್ದರಿಂದ ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬ ಅನುಮಾನದಲ್ಲಿ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿತ್ತು. ಇದಾದ ನಂತರ ಬೇರೆ ದೇಶಗಳು ಕೂಡ ಉಗ್ರವಾದಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡಿದ್ದರು. ಇದೀಗ ಅದೇ ಟಿಆರ್‌ಎಫ್ ತನಗೂ ಈ ದಾಳಿಗೂ ಸಂಬಂಧವೇ ಇಲ್ಲ, ಸೈಬರ್ ಹ್ಯಾಕಿಂಗ್ ಮಾಡಿ ಯಾರೋ ತಮ್ಮ ಸಂಘಟನೆಯನ್ನು ಈ ದಾಳಿಗೆ ಹೊಣೆ ಮಾಡಿದ್ದಾರೆ ಎಂದು ಆರೋಪಿಸಿದೆ. ದಾಳಿ ನಡೆದ 4 ದಿನಗಳ ನಂತರ ಟಿಆರ್‌ಎಫ್ ಈ ಸ್ಪಷ್ಟನೆ ನೀಡಿರುವುದರಿಂದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಏಪ್ರಿಲ್ 22ರಂದು 26 ಅಮಾಯಕರ ಜೀವವನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ನಿರಾಕರಿಸಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾಗೆ ಸಂಬಂಧಿಸಿದ ಈ ಸಂಘಟನೆಯು, ಮಾರಕ ದಾಳಿಯ ಜವಾಬ್ದಾರಿಯನ್ನು ಮೊದಲು ಒಪ್ಪಿಕೊಂಡಿತ್ತು. ಆದರೆ, ಈ ದಾಳಿಗೆ ಜಗತ್ತಿನಾದ್ಯಂತ ವಿರೋಧ ವ್ಯಕ್ತವಾದ ನಂತರ ಈಗ ನಿರಾಕರಿಸಿದೆ. “ಈ ಕೃತ್ಯವನ್ನು ಟಿಆರ್‌ಎಫ್ ನಡೆಸಿದೆ ಎಂಬ ಆರೋಪ ಸುಳ್ಳು. ಇದು ಕಾಶ್ಮೀರಿ ಪ್ರತಿರೋಧವನ್ನು ಅಪಖ್ಯಾತಿಗೊಳಿಸಲು ಆಯೋಜಿಸಲಾದ ಅಭಿಯಾನದ ಭಾಗವಾಗಿದೆ” ಎಂದು ಅದು ಹೇಳಿದೆ.
Nothing shows the Pakistan Army establishment’s panic (डर का माहौल है) more clearly than this. This humiliating retreat by their military proxy says it all. But the damage is done — far too late. pic.twitter.com/wQ3O1qwiFa
— Amit Malviya (@amitmalviya) April 26, 2025
ಇದನ್ನೂ ಓದಿ: ಪಹಲ್ಗಾಮ್ ದಾಳಿಯ ತಟಸ್ಥ ತನಿಖೆಗೆ ಸಿದ್ಧ; ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭರವಸೆ
ಹೀಗಾಗಿ, ಬಿಜೆಪಿ ಪಾಕಿಸ್ತಾನದ ಸೇನೆಯನ್ನು ಟೀಕಿಸಿದೆ. ಭಾರತದ ಕಠಿಣ ಕ್ರಮಗಳ ನಂತರ ಭಯೋತ್ಪಾದಕ ಸಂಘಟನೆ ಟಿಆರ್‌ಎಫ್ ಭಯದಲ್ಲಿದೆ ಎಂದು ಹೇಳಿದೆ. ತಮ್ಮ ಸುರಕ್ಷತಾ ದೃಷ್ಟಿಯಿಂದ ಇಂದು ಪಾಕಿಸ್ತಾನದ ಪ್ರಧಾನಿ ಕೂಡ ಪಹಲ್ಗಾಮ್ ದಾಳಿ ಕುರಿತ ತಟಸ್ಥ ಮತ್ತು ಪಾರದರ್ಶಕ ತನಿಖೆಗೆ ಸಿದ್ಧ ಎಂದು ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಟಿಆರ್‌ಎಫ್ ಈ ಹೇಳಿಕೆ ನೀಡಿರುವುದು ಅನುಮಾನ ಹೆಚ್ಚಿಸಿದೆ. ಭಾರತ ಸರ್ಕಾರದ ನಿರ್ಧಾರದಿಂದ ಕಂಗೆಟ್ಟ ಪಾಕಿಸ್ತಾನ ಮತ್ತು ಟಿಆರ್‌ಎಫ್ ಈ ರೀತಿ ಜಾರಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ: ದೌರ್ಜನ್ಯ ನಡೆಸುವವರನ್ನು ಕೊಲ್ಲುವುದು ಕೂಡ ಧರ್ಮ; ಪಹಲ್ಗಾಮ್ ದಾಳಿ ಕುರಿತು ಮೋಹನ್ ಭಾಗವತ್ ಪ್ರತಿಕ್ರಿಯೆ
ಏಪ್ರಿಲ್ 22 ರಂದು, ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ಮಾಡಿದರು. ಇದು 26 ಜನರ ಸಾವಿಗೆ ಕಾರಣವಾಯಿತು ಮತ್ತು ಹಲವಾರು ಜನರು ಗಾಯಗೊಂಡರು. ಇದಕ್ಕೆ ಪ್ರತೀಕಾರವಾಗಿ, ಭಾರತವು 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಮತ್ತು ನದಿ ನೀರಿನ ಹರಿವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಹಲವಾರು ಕಠಿಣ ಕ್ರಮಗಳನ್ನು ವಿಧಿಸಿತು. ಭಾರತವು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿತು ಮತ್ತು ಪಾಕಿಸ್ತಾನಿ ರಾಜತಾಂತ್ರಿಕರನ್ನು ಹೊರಹಾಕಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ