PF Withdrawal Rule Change: ಪಿಎಫ್ ವಿಥ್ ಡ್ರಾ ನಿಯಮದಲ್ಲಿ ಮಾರ್ಪಾಡು; ಇಂಥ ಸನ್ನಿವೇಶದಲ್ಲಿ ತಕ್ಷಣ ರೂ. 1 ಲಕ್ಷ ಪಡೆಯಿರಿ
ಪಿಎಫ್ ಮುಂಗಡವನ್ನು ಆಸ್ಪತ್ರೆ ವೆಚ್ಚಕ್ಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮಾವಳಿ ಬದಲಾವಣೆ ಆಗಿದೆ. ಈಗ ಆರೋಗ್ಯ ತುರ್ತು, ಆಸ್ಪತ್ರೆಯ ದಾಖಲಾದ ಸಂದರ್ಭದಲ್ಲಿ 1 ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಜಾಸ್ತಿ ಹಣವೇ ಸಿಗಲಿದೆ.
ಕಾರ್ಮಿಕರ ಭವಿಷ್ಯ ನಿಧಿ (Employees Provident Fund- ಇಪಿಎಫ್)ಗೆ ನೋಂದಾಯಿಸಿರುವ ಅರ್ಹ ಕಾರ್ಮಿಕರು ವೈದ್ಯಕೀಯ ಉದ್ದೇಶಗಳಿಗೆ ರೂ. 1 ಲಕ್ಷವನ್ನು ಮುಂಗಡವಾಗಿ ಪಡೆಯಬಹುದು. ತುರ್ತು ವೈದ್ಯಕೀಯ ಚಿಕಿತ್ಸೆ ಅಥವಾ ಆಸ್ಪತ್ರೆಯಲ್ಲಿ ದಾಖಲಾದಲ್ಲಿ ಪಿಎಫ್ನಿಂದ ಹಣ ತೆಗೆಯಬಹುದು. ಹಣ ವಿಥ್ಡ್ರಾ ಮಾಡುವುದಕ್ಕೆ ಯಾವುದೇ ಪ್ರಕ್ರಿಯೆಗಳಿಲ್ಲ ಹಾಗೂ ವೆಚ್ಚದ ಅಂದಾಜು ಲೆಕ್ಕ ನೀಡಬೇಕಾದ ಅಗತ್ಯ ಇಲ್ಲ. ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್ಒ)ದಿಂದ ಹೊರಡಿಸಲಾದ ಸುತ್ತೋಲೆಯಿಂದ ಈ ಮಾಹಿತಿ ಬಂದಿದೆ. ಪಿಎಫ್ ಯೋಜನೆ ಅಡಿಯಲ್ಲಿ ಉದ್ಯೋಗಿಗಳಿಗೆ ವೈದ್ಯಕೀಯ ತುರ್ತಿನ ಸಂದರ್ಭದಲ್ಲಿ ಮುಂಗಡವನ್ನು ಪಡೆದುಕೊಳ್ಳಬಹುದು. ಅದನ್ನು ಈಗ ಮತ್ತೊಮ್ಮೆ ಸಿದ್ಧಪಡಿಸಲಾದ ಸುತ್ತೋಲೆಯಲ್ಲಿ ಇನ್ನೊಮ್ಮೆ ತಿಳಿಸಲಾಗಿದೆ.
ಸುತ್ತೋಲೆಯಂತೆ, ಸೆಂಟ್ರಲ್ ಸರ್ವೀಸಸ್ ಮೆಡಿಕಲ್ ಅಟೆಂಡೆಂಟ್ (CS(MA)) ನಿಯಮಗಳಿಗೆ ಒಳಪಡುವ ಸಿಬ್ಬಂದಿಗೆ ಮತ್ತು ಸೆಂಟ್ರಲ್ ಗವರ್ನ್ಮೆಂಟ್ ಹೆಲ್ತ್ ಸ್ಕೀಮ್ (CGHS) ಅಡಿಯಲ್ಲಿ ಬರುವವರಿಗೆ ಈ ಕವರೇಜ್ ಆಗುತ್ತದೆ.
ವೈದ್ಯಕೀಯ ಮುಂಗಡ ಪಡೆಯುವುದಕ್ಕೆ ಹಂತ ಹಂತವಾದ ಪ್ರಕ್ರಿಯೆ ಇಲ್ಲಿದೆ: 1. ನಿಯಮಾವಳಿಯ ಪ್ರಕಾರವಾಗಿ, ರೋಗಿಯು ಸರ್ಕಾರಿ/ಪಿಎಸ್ಯು/ಸಿಜಿಎಚ್ಎಸ್ ಪಟ್ಟಿಯಲ್ಲಿ ಇರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿರಬೇಕು. ಒಂದು ವೇಳೆ ರೋಗಿಯು ತುರ್ತು ಕಾರಣಗಳಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಬೇಕು ಎಂದಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಮ್ಮ ಪ್ರಕರಣದಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಂಡು, ಆ ವೈದ್ಯಕೀಯ ಬಿಲ್ ರೀಎಂಬರ್ಸ್ಮೆಂಟ್ ಪಡೆಯುವುದಕ್ಕೆ ಅರ್ಹರು ಎನಿಸಿದಲ್ಲಿ ಹಣ ಮರುಪಾವತಿ ಆಗಬಹುದು. ಅಂಥ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮುಂಗಡವನ್ನು ನೀಡಲಾಗುತ್ತದೆ.
2. ಉದ್ಯೋಗಿ ಅಥವಾ ಕುಟುಂಬದ ಸದಸ್ಯರು ರೋಗಿಯ ಪರವಾಗಿ ಪತ್ರ ಬರೆದು, ಅಡ್ವಾನ್ಸ್ (ಮುಂಗಡ) ಕೇಳಬಹುದು. ಅಂದಾಜು ವೆಚ್ಚ ಎಷ್ಟಾಗುತ್ತದೆ ಎಂದು ಇರಬೇಕಾದ ಅಗತ್ಯ ಇಲ್ಲ. ಆದರೆ ಆಸ್ಪತ್ರೆ ಮತ್ತು ರೋಗಿಯ ಮತ್ತು ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಬೇಕು.
3. ಸಂಬಂಧಪಟ್ಟ ಅಧಿಕಾರಿಗಳಿಂದ ವೈದ್ಯಕೀಯ ಮುಂಗಡ 1 ಲಕ್ಷ ರೂಪಾಯಿ ತನಕ ಮಂಜೂರು ಮಾಡಬಹುದು. ಅದು ರೋಗಿ ಅಥವಾ ಕುಟುಂಬ ಸದಸ್ಯರು ಅಥವಾ ನೇರವಾಗಿ ಆಸ್ಪತ್ರೆಯ ಖಾತೆಗೆ ಚಿಕಿತ್ಸೆಯ ಆರಂಭದಲ್ಲಿ ಹಣವನ್ನು ಠೇವಣಿ ಮಾಡಬಹುದು. ಈ ಮುಂಗಡವನ್ನು ಚಿಕಿತ್ಸೆ ಶುರುವಾದ ತಕ್ಷಣ ನೀಡಲಾಗುತ್ತದೆ. ಅದರಲ್ಲೂ ಕಾರ್ಯ ನಿರ್ವಹಣೆಯ ಅದೇ ದಿನದಂದು ವಿತರಿಸಲಾಗುತ್ತದೆ. ಒಂದು ವೇಳೆ ಹಾಗಾಗದೆ ಇದ್ದಲ್ಲಿ ಅರ್ಜಿಯನ್ನು ಸ್ವೀಕರಿಸಿದ ಮಾರನೇ ದಿನ ವಿತರಣೆ ಮಾಡಬೇಕು. ಆಸ್ಪತ್ರೆಯಿಂದ ಯಾವುದೇ ವೆಚ್ಚದ ಅಂದಾಜನ್ನು ಸಹ ಸಲ್ಲಿಸುವ ಅಥವಾ ಯಾವುದೇ ದಾಖಲಾತಿಗಳನ್ನು ನೀಡುವ ಅಗತ್ಯ ಇಲ್ಲ. ಈ ಜವಾಬ್ದಾರಿಯು ಸಂಬಂಧಪಟ್ಟ ಕಚೇರಿ ಮೇಲೆ ಬರುತ್ತದೆ(ಮುಖ್ಯ ಕಚೇರಿಗೆ ಎಸಿಸಿ- ಎಎಸ್ಡಿ).
4. ಒಂದು ವೇಳೆ ಮುಂಗಡ ಮೊತ್ತದ 1 ಲಕ್ಷಕ್ಕಿಂತ ಚಿಕಿತ್ಸೆ ವೆಚ್ಚವು ಹೆಚ್ಚಾದಲ್ಲಿ ಇಪಿಎಫ್ಇ ವಿಥ್ಡ್ರಾ ನಿಯಮಾವಳಿ ಅನುಸಾರವಾಗಿಯೇ ಇದ್ದರೆ ಹೆಚ್ಚುವರಿಯಾಗಿ ಮುಂಗಡ ಸಿಗುತ್ತದೆ. ರೋಗಿಯ ಡಿಸ್ಚಾರ್ಜ್ಗೂ ಮುಂಚಿತವಾಗಿ ಆಸ್ಪತ್ರೆಯ ಕಡೆಯಿಂದ ಚಿಕಿತ್ಸೆಗೆ ಅಂದಾಜು ವೆಚ್ಚವನ್ನು ಸಲ್ಲಿಸಬೇಕು. ಹೆಚ್ಚುವರಿ ಮುಂಗಡವನ್ನು ನೀಡಲಾಗುತ್ತದೆ, ಆದರೆ ಆರಂಭದಲ್ಲಿ ನೀಡಿದ ಮುಂಗಡ ಮೊತ್ತವನ್ನು ಕಡಿತ ಮಾಡಲಾಗುತ್ತದೆ.
5. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಉದ್ಯೋಗಿ ಅಥವಾ ಕುಟುಂಬ ಸದಸ್ಯರು 45 ದಿನದೊಳಗಾಗಿ ಆಸ್ಪತ್ರೆ ಬಿಲ್ ಸಲ್ಲಿಸಬೇಕು. ಇಪಿಎಫ್ ನಿಯಮಾವಳಿಯ ಅನುಸಾರವಾಗಿ ವೈದ್ಯಕೀಯ ಮುಂಗಡವನ್ನು ಅಂತಿಮ ಬಿಲ್ ಜತೆಗೆ ಹೊಂದಾಣಿಕೆ ಮಾಡಲಾಗುತ್ತದೆ. ಇನ್ನೇನಾದರೂ ರೀಎಂಬರ್ಸ್ಮೆಂಟ್ ಅಥವಾ ಮುಂಗಡ ರಿಕವರಿ ಇದ್ದಲ್ಲಿ ವೈದ್ಯಕೀಯ ಬಿಲ್ ಪ್ರೊಸೆಸ್ ಮಾಡುವಾಗಲೇ ಆಗುತ್ತದೆ.
ಇಪಿಎಫ್ಒ ವಿಥ್ಡ್ರಾ ಷರತ್ತುಗಳೇನು? ಸದಸ್ಯರ ಕನಿಷ್ಠ 6 ತಿಂಗಳ ಮೂಲ ವೇತನ ಮತ್ತು ತುಟ್ಟಿ ಭತ್ಯೆ ಅಥವಾ ಸದಸ್ಯರ ಕೊಡುಗೆ ಹಾಗೂ ಬಡ್ಡಿ (ನೆನಪಿರಲಿ, ಉದ್ಯೋಗದಾತರ ಕೊಡುಗೆ ವಿಥ್ ಡ್ರಾಗೆ ಅವಕಾಶ ಇಲ್ಲ) ವಿಥ್ ಡ್ರಾ ಮಾಡಬಹುದು.