
ನ್ಯೂಯಾರ್ಕ್, ಸೆಪ್ಟೆಂಬರ್ 24: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದವನ್ನು (India US trade deal) ಅಂತಿಮಗೊಳಿಸುವ ಸಂಬಂಧ ಮತ್ತೊಂದು ಸುತ್ತಿನ ಮಾತುಕತೆ ಚಾಲನೆಯಲ್ಲಿದೆ. ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ (Piyush Goyal) ಅವರ ನೇತೃತ್ವದ ತಂಡವು ನ್ಯೂಯಾರ್ಕ್ನಲ್ಲಿ ಮಾತುಕತೆಯಲ್ಲಿ ತೊಡಗಿದೆ. ಸೋಮವಾರ ಈಗಾಗಲೇ ಒಂದು ಸುತ್ತಿನ ಮಾತುಕತೆ ಯಶಸ್ವಿಯಾಗಿ ನಡೆದಿದೆ. ಪೀಯೂಶ್ ಗೋಯಲ್ ಅಮೆರಿಕದಲ್ಲಿ ಇನ್ನಷ್ಟು ದಿನ ಇರಲಿದ್ದು, ಸತತವಾಗಿ ಮಾತುಕತೆಗಳು ನಡೆಯುವ ನಿರೀಕ್ಷೆ ಇದೆ.
ಎರಡೂ ದೇಶಗಳಿಗೆ ಸಮ್ಮತವಾಗುವಂತಹ ಒಪ್ಪಂದವನ್ನು ಕುದುರಿಸುವ ಪ್ರಯತ್ನ ಆಗುತ್ತಿದೆ. ಅಮೆರಿಕದ ಸಂಧಾನ ತಂಡದ ನೇತೃತ್ವವನ್ನು ಬ್ರೆಂಡಾನ್ ಲಿಂಚ್ ಅವರು ವಹಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕದ ಈ ತಂಡು ಭಾರತಕ್ಕೆ ಬಂದು ಒಂದು ಸುತ್ತಿನ ಮಾತುಕತೆ ನಡೆಸಿತ್ತು. ಈಗ ಪೀಯೂಶ್ ಗೋಯಲ್ ಅವರ ನೇತೃತ್ವದಲ್ಲಿ ಭಾರತದ ನಿಯೋಗವು ಅಮೆರಿಕದಲ್ಲಿದೆ.
ಇದನ್ನೂ ಓದಿ: ಚ್ಯಾಟ್ಜಿಪಿಟಿ ಭಾರತದ್ದೇ ಆಗುವ ಅವಕಾಶ ತಪ್ಪಿತ್ತಾ? ಇನ್ಫೋಸಿಸ್ ಮೂರ್ತಿ ಯಡವಟ್ಟು ಮಾಡಿದರಾ?
‘ಮುಂಬರುವ ವರ್ಷಗಳಲ್ಲಿ ಅಮೆರಿಕ ಜೊತೆ ಇಂಧನ ಉತ್ಪನ್ನಗಳ ವಹಿವಾಟು ಹೆಚ್ಚಿಸುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಪೀಯೂಶ್ ಗೋಯಲ್ ಹೇಳಿದ್ದಾರೆ.
2025ರಲ್ಲಿ ಅಮೆರಿಕದಿಂದ ಕಚ್ಛಾ ತೈಲದ ಆಮದನ್ನು ಭಾರತ ಗಣನೀಯವಾಗಿ ಹೆಚ್ಚಿಸಿದೆ. ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಅಮೆರಿಕದಿಂದ ಖರೀದಿಸಿದ ತೈಲವು ಶೇ 114ರಷ್ಟು ಹೆಚ್ಚಾಗಿದೆ. ಭಾರತೀಯ ಕಂಪನಿಗಳು ಇನ್ನೂ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳುವ ಯೋಜನೆಯಲ್ಲಿವೆ ಎಂದು ವರದಿಗಳು ಹೇಳುತ್ತಿವೆ.
ರಷ್ಯಾದ ತೈಲವನ್ನು ಭಾರತ ಅತಿಹೆಚ್ಚು ಖರೀದಿ ಮಾಡುತ್ತಿದೆಯಾದರೂ, ಅಮೆರಿಕದ ತೈಲ ಖರೀದಿಯನ್ನೂ ಭಾರತ ಗಣನೀಯವಾಗಿ ಹೆಚ್ಚಿಸಿರುವುದು ಹೌದು.
ಇದನ್ನೂ ಓದಿ: ಲಾಜಿಸ್ಟಿಕ್ಸ್ ಬಲಪಡಿಸಲು 8 ನಗರಗಳಲ್ಲಿ ಏಕೀಕೃತ ಪ್ಲಾನ್ಗಳನ್ನು ಅನಾವರಣಗೊಳಿಸಿದ ಸರ್ಕಾರ
ಅಮೆರಿಕದಲ್ಲಿರುವ ಪೀಯೂಶ್ ಗೋಯಲ್ ಅವರು, ಎಚ್1ಬಿ ವೀಸಾ ನೀತಿ ಸಂಬಂಧ ಅಮೆರಿಕಕ್ಕೆ ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ. ಭಾರತದ ಎಂಜಿನಿಯರುಗಳು, ಪದವೀಧರರು ಅಮೆರಿಕ ಹಾಗೂ ವಿಶ್ವದ ಪ್ರಗತಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ಧಾರೆ.
‘ಭಾರತೀಯ ಎಂಜಿನಿಯರುಗಳು ಪ್ರತಿಭೆ ಮತ್ತು ನಾವೀನ್ಯತೆಗೆ ಹೆಸರುವಾಸಿ. ಅಮೆರಿಕವೂ ಸೇರಿದಂತೆ ವಿಶ್ವಾದ್ಯಂತ ಕಂಪನಿಗಳಿಗೆ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಹಾಗು ಹೊಸ ಐಡಿಯಾಗಳ ಸೃಷ್ಟಿಗೆ ಭಾರತೀಯರು ನೆರವಾಗುತ್ತಾರೆ’ ಎಂದು ಪೀಯೂಶ್ ಗೋಯಲ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ