ಎಚ್1ಬಿ ವೀಸಾ ಸಿಸ್ಟಂ ರದ್ದುಗೊಳಿಸಿ, ಹೊಸ ನಿಯಮ ತರಲಿರುವ ಅಮೆರಿಕ
US H-1B visa programme updates: ಎಚ್1ಬಿ ವೀಸಾ ಸಿಸ್ಟಂನಲ್ಲಿ ಅಮೂಲಾಗ್ರವಾಗಿ ಬದಲಾವಣೆ ಮಾಡಲು ಅಮೆರಿಕ ಮುಂದಾಗಿದೆ. ಎಚ್1ಬಿ ವೀಸಾಗೆ ಶುಲ್ಕವನ್ನು ಒಂದು ಲಕ್ಷ ಡಾಲರ್ಗೆ ಏರಿಸಿದ್ದ ಸರ್ಕಾರ ಇದೀಗ ಹೊಸ ನಿಯಮ ಮಾಡಹೊರಟಿದೆ. ವೀಸಾ ನೀಡಲು ಸಂಪೂರ್ಣ ಲಾಟರಿ ವ್ಯವಸ್ಥೆ ಬದಲು ವೇತನ ಆಧಾರಿತವಾದ ಆಯ್ಕೆ ಇರುವ ನಿಯಮ ಜಾರಿಗೊಳಿಸಲು ಪ್ರಸ್ತಾಪಿಸಿದೆ.

ವಾಷಿಂಗ್ಟನ್, ಸೆಪ್ಟೆಂಬರ್ 24: ಇತ್ತೀಚೆಗಷ್ಟೇ ಎಚ್1ಬಿ ವೀಸಾಗೆ (H-1B visa) ಪಾವತಿಸುವ ಶುಲ್ಕವನ್ನು 1,00,000 ಡಾಲರ್ಗೆ ಏರಿಸಿದ್ದ ಅಮೆರಿಕ ಸರ್ಕಾರ ಇದೀಗ ಎಚ್1ಬಿ ವೀಸಾ ಯೋಜನೆಯಲ್ಲಿ ಮತ್ತಷ್ಟು ಬದಲಾವಣೆ ತರಲು ಯೋಜಿಸುತ್ತಿರುವುದು ತಿಳಿದುಬಂದಿದೆ. ಎಚ್1ಬಿ ವೀಸಾ ನೀಡಲು ಪ್ರಸಕ್ತ ಇರುವ ಲಾಟರಿ ಸಿಸ್ಟಂ ಬದಲು ಕೌಶಲ್ಯ ಮತ್ತು ಸಂಬಳ ಆಧಾರಿತವಾಗಿ ವೀಸಾ ಕೊಡುವ ಒಂದು ವ್ಯವಸ್ಥೆ ರೂಪಿಸಲು ಹೊರಟಿದೆ.
‘ಹೆಚ್ಚು ಕೌಶಲ್ಯದ ಮತ್ತು ಅಧಿಕ ಸಂಬಳದ ವಿದೇಶಿಗರಿಗೆ ಎಚ್1ಬಿ ವೀಸಾ ಸಿಗಲು ಆದ್ಯತೆ ನೀಡುವ ಉದ್ದೇಶ ಇದೆ’ ಎಂದು ಅಮೆರಿಕದ ಗೃಹ ಇಲಾಖೆ ಹೇಳಿದೆ.
ಉದ್ಯೋಗಿಗಳನ್ನು ನಾಲ್ಕು ಸಂಬಳ ಸ್ತರದಲ್ಲಿ ವರ್ಗೀಕರಿಸಲಾಗುತ್ತದೆ. ಅತ್ಯಧಿಕ ಸಂಬಳದ ಪ್ರತಿಯೊಬ್ಬರಿಗೂ ವೀಸಾ ಆಯ್ಕೆ ಲಿಸ್ಟ್ನಲ್ಲಿ ನಾಲ್ಕು ಎಂಟ್ರಿ ಸಿಗುತ್ತದೆ. ಅತ್ಯಂತ ಕಡಿಮೆ ಸ್ತರದ ಸಂಬಳದವರಿಗೆ ಒಂದೇ ಎಂಟ್ರಿ ಸಿಗುತ್ತದೆ. ಇದರಿಂದ ಅಧಿಕ ಸಂಬಳದವರಿಗೆ ಎಚ್1ಬಿ ವೀಸಾ ಸಿಗುವ ಅವಕಾಶ ಹೆಚ್ಚು ಇರುತ್ತದೆ.
ಇದನ್ನೂ ಓದಿ: ಹನುಮಂತನನ್ನು ನಕಲಿ ದೇವರು ಎಂದ ಟ್ರಂಪ್ ಪಕ್ಷದ ನಾಯಕ
ಸ್ಟಾರ್ಟಪ್ವೊಂದರಲ್ಲಿ ವರ್ಷಕ್ಕೆ 50,000 ಡಾಲರ್ ಸಂಬಳದ ಆಫರ್ ಪಡೆದಿರುವ ವ್ಯಕ್ತಿಗಿಂತ ಗೂಗಲ್ನಂತಹ ದೊಡ್ಡ ಕಂಪನಿಗಳಲ್ಲಿ 1,50,000 ಡಾಲರ್ ಸಂಬಳದ ಆಫರ್ ಪಡೆದ ವ್ಯಕ್ತಿಗೆ ವೀಸಾ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚು ಸಂಬಳ ಕೊಡಬಲ್ಲ ಕಂಪನಿಗಳು ವಿದೇಶಗಳಿಂದ ಅತ್ಯುತ್ತಮ ಪ್ರತಿಭೆಗಳನ್ನು ತರಲು ಸಾಧ್ಯವಾಗುತ್ತದೆ. ಸಣ್ಣ ಕಂಪನಿಗಳಿಗೆ ಇದು ಸಾಧ್ಯವಾಗದೇ ಹೋಗಬಹುದು.
ಹೊಸ ಎಚ್1ಬಿ ನಿಯಮಗಳಿಂದ ಅಮೆರಿಕಕ್ಕೆ ಏನು ಪ್ರಯೋಜನ?
- ವಿದೇಶಗಳಿಂದ ಅನುಭವಿಗಳು ಹಾಗೂ ಅಧಿಕ ಸಂಬಳದ ತಜ್ಞರು ಅಮೆರಿಕಕ್ಕೆ ಬರುತ್ತಾರೆ.
- ಕಡಿಮೆ ಸಂಬಳದ ಉದ್ಯೋಗಿಗಳು ಅಮೆರಿಕಕ್ಕೆ ಬಂದು ತುಂಬುವುದು ಕಡಿಮೆ ಆಗುತ್ತದೆ.
- ಅಮೆರಿಕದಲ್ಲಿ ಸಂಬಳದ ಮಟ್ಟ ಕುಸಿಯದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ.
- ಅಮೆರಿಕನ್ನರಿಗೆ ಉದ್ಯೋಗಾವಕಾಶ ಹೆಚ್ಚಲು ನೆರವಾಗುತ್ತದೆ.
ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್ ಬೇಗ ಕುದುರುತ್ತಾ? ಪೀಯೂಶ್ ಗೋಯಲ್ ಭೇಟಿ ಬಳಿಕ ಗರಿಗೆದರಿದ ಆಶಯ
ಭಾರತೀಯ ಕಂಪನಿಗಳಿಗೆ ಹಿನ್ನಡೆ ಆಗುತ್ತದಾ?
ಪ್ರಸ್ತಾವಿತ ಎಚ್1ಬಿ ವೀಸಾ ನಿಯಮ ಬದಲಾವಣೆಯಿಂದ ಮೆಟಾ, ಅಮೇಜಾನ್, ಓಪನ್ಎಐ, ಎನ್ವಿಡಿಯಾ ಇತ್ಯಾದಿ ಟೆಕ್ನಾಲಜಿ ಕಂಪನಿಗಳಿಗೆ ತುಸು ಹಿನ್ನಡೆಯಾಗಬಹುದು. ಈ ಕಂಪನಿಗಳು ಜಾಗತಿಕವಾಗಿ ಇರುವ ತಮ್ಮ ಕೆಪಾಸಿಟಿ ಸೆಂಟರ್ಗಳ ಮೂಲಕ ಕೆಲಸಗಳನ್ನು ಔಟ್ಸೋರ್ಸ್ ಮಾಡಬಹುದು. ಇನ್ಫೋಸಿಸ್, ವಿಪ್ರೋದಂತಹ ಭಾರತೀಯ ಐಟಿ ಕಂಪನಿಗಳಿಗೆ ಸೀಮಿತ ಮಟ್ಟದಲ್ಲಿ ಪರಿಣಾಮ ಬೀರುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




