ಆರ್ಸಿಬಿ ಮಿಸ್ಟರ್ ನಾಗ್ಸ್ ಅವರ ಮನಿ ಸೀಕ್ರೆಟ್; ಅಮ್ಮ ಹೇಳಿಕೊಟ್ಟ ಪಾಠ ಸ್ಮರಿಸಿದ ಸೇಠ್
RCB Mr Nags Danish Sait's financial awareness: ಆರ್ಸಿಬಿಯ ಮಿಸ್ಟರ್ ನಾಗ್ಸ್ ಎಂದು ಖ್ಯಾತರಾದ ನಟ ದಾನಿಶ್ ಸೇಠ್ ಅವರು ತಮ್ಮ ಹಣಕಾಸು ತಿಳಿವಳಿಕೆಯನ್ನು ಹಂಚಿಕೊಂಡಿದ್ದಾರೆ. ತಮ್ಮ 19ರ ವಯಸ್ಸಿನಿಂದಲೇ ಹೂಡಿಕೆ ಮಾಡಲು ಆರಂಭಿಸಿದ್ದಾಗಿ ಸೇಠ್ ಹೇಳಿಕೊಂಡಿದ್ದಾರೆ. ಹಣ ಎಷ್ಟು ಮಹತ್ವ, ಯಾವ ವೆಚ್ಚಕ್ಕೆ ಮಹತ್ವ ಕೊಡಬೇಕು ಎಂಬುದನ್ನು ತಮ್ಮ ತಾಯಿ ಕಲಿಸಿದ್ದರು ಎಂದು ದಾನಿಶ್ ಹೇಳಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 24: ಕಲಾವಿದರ ಆರ್ಥಿಕ ಬದುಕು ಯಾವಾಗಲೂ ಅನಿಶ್ಚಿತ ಸ್ಥಿತಿಯಲ್ಲೇ ಇರುತ್ತದೆ. ಸಂಬಳದ ಕೆಲಸದಲ್ಲಿರುವವರಿಗೆ ತಿಂಗಳಿಗೆ ಇಂತಿಷ್ಟು ವರಮಾನ ಇರುತ್ತದೆ. ಆದರೆ, ಕಲಾವಿದರಿಗೆ ಹೀಗೇ ಎಂದು ಹೇಳಲು ಆಗುವುದಿಲ್ಲ. ನಟ, ಹಾಸ್ಯ ಕಲಾವಿದ, ಹಾಗೂ ಆರ್ಸಿಬಿಯ ಮಿಸ್ಟರ್ ನಾಗ್ಸ್ (Mr Nags) ಎಂದೇ ಖ್ಯಾತರಾದ ದಾನಿಶ್ ಸೇಟ್ ಹಣದ ವಿಚಾರ ಬಂದಾಗ ತಮ್ಮ ನಟನೆಯ ಪ್ರತಿಭೆಯಂತೆಯೇ ಸ್ಮಾರ್ಟ್ ಆಗಿರುತ್ತಾರೆ. ಎಕನಾಮಿಕ್ ಟೈಮ್ಸ್ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ದಾನಿಶ್ ಸೇಟ್ (Danish Sait) ತಮ್ಮ ಹಣಕಾಸು ತಿಳಿವಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಮ್ಮನಿಂದ ಕಲಿತ ಸೇವಿಂಗ್ಸ್ ಪಾಠ
ದಾನಿಶ್ ಸೇಠ್ ಪ್ರಕಾರ ಬಹಳ ಚಿಕ್ಕ ವಯಸ್ಸಿನಿಂದಲೇ ಹಣ ಉಳಿತಾಯ ಮತ್ತು ಹೂಡಿಕೆ ಮಾಡಲು ತೊಡಗಬೇಕು. ಅವರು 19-20ನೇ ವಯಸ್ಸಿನಿಂದಲೇ ಹಣವನ್ನು ಉಳಿಸಲು ಆರಂಭಿಸಿದ್ದರಂತೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಈ ಸ್ಕೀಮ್ನಿಂದ ತಿಂಗಳಿಗೆ 9,250 ರೂವರೆಗೂ ನಿಯಮಿತ ಆದಾಯ ಸೃಷ್ಟಿಸಿ
ದಾನಿಶ್ ಸೇಠ್ ಅವರಿಗೆ ಈ ಹಣದ ಅರಿವು ಮೂಡಿಸಿದ್ದು ಸ್ವತಃ ಅವರ ತಾಯಿಯೇ. ನಟರು ಮತ್ತು ಸೆಲಬ್ರಿಟಿಗಳ ಬದುಕಿನಲ್ಲಿ ಹಣವೇ ಅತ್ಯಂತ ಮಹತ್ವವಾದ ಅಂಶ ಎಂಬುದು ಆ ತಾಯಿಗೆ ಮನವರಿಕೆಯಾಗಿತ್ತು. ಹೀಗಾಗಿ, ತಮ್ಮ ಮಗನಿಗೆ ಹಣದ ಮಹತ್ವವನ್ನು ಯೌವ್ವನದ ಆರಂಭಿಕ ಹಂತದಲ್ಲೇ ತಿಳಿಸಿಕೊಟ್ಟಿದ್ದರು.
ವೆಚ್ಚ ಮಾಡಲು ಯಾವುದು ಅಗತ್ಯ ಮತ್ತು ಯಾವುದು ಆಸೆ, ಇವುಗಳ ವ್ಯತ್ಯಾಸವನ್ನು ಗುರುತಿಸುವುದು ಹೇಗೆ ಎಂಬುದನ್ನು ದಾನಿಶ್ ಸೇಠ್ಗೆ ಅವರಿಗೆ ತಾಯಿ ಕಲಿಸಿದ್ದರು. ಅದೇ ಸ್ಫೂರ್ತಿಯಲ್ಲಿ ದಾನಿಶ್ ಸಣ್ಣ ವಯಸ್ಸಿನಲ್ಲೇ ತಿಂಗಳಿಗೆ 3,000 ರೂ ಹೂಡಿಕೆ ಮಾಡಲು ಆರಂಭಿಸಿದ್ದರು.
ಹಣವು ಕಾಂಪೌಂಡಿಂಗ್ ಗುಣ ಪಡೆಯಲು ಬಿಡಬೇಕು…
ಜನರು ದೀರ್ಘಾವಧಿ ಹೂಡಿಕೆ ಮಾಡಬೇಕು ಎಂದು ದಾನಿಶ್ ಸೇಠ್ ಸಲಹೆ ನೀಡುತ್ತಾರೆ. ಮಾರುಕಟ್ಟೆ ಬಿದ್ದಾಗ ಜನರು ಗಾಬರಿಯಾಗಬಾರದು. ಇಂಥ ಸಂದರ್ಭಗಳು ಬರುತ್ತವೆ ಹೋಗುತ್ತವೆ. ಆರ್ಥಿಕ ವ್ಯವಸ್ಥೆಯಲ್ಲಿ ಈ ಏರಿಳಿತ ಸಾಮಾನ್ಯ. ಆದರೆ, ದೇಶ ಹಾಗೂ ನೀವು ಹೂಡಿಕೆ ಮಾಡಿದ ಬ್ಯುಸಿನೆಸ್ ಬಗ್ಗೆ ನಂಬಿಕೆ ಇದ್ದರೆ ಆರಾಮವಾಗಿ ಇದ್ದುಬಿಡಿ. ದೀರ್ಘಾವಧಿಯಲ್ಲಿ ನಿಮ್ಮ ಹೂಡಿಕೆ ನೋಡನೋಡುತ್ತಿದ್ದಂತೆಯೇ ಜಿಗಿದು ಬೆಳೆಯುತ್ತಿರುತ್ತದೆ ಎಂದು ದಾನಿಶ್ ಸೇಠ್ ಹೇಳುತ್ತಾರೆ.
ಇದನ್ನೂ ಓದಿ: ಚಿನ್ನವನ್ನೂ ಮೀರಿಸಿದ ಬೆಳ್ಳಿ; ಒಂದು ವರ್ಷದಲ್ಲಿ ವಿವಿಧ ಹೂಡಿಕೆಗಳು ತಂದ ಲಾಭ ಎಷ್ಟು ಗೊತ್ತಾ?
ದಾನಿಶ್ ಸೇಠ್ ಮೂರು ಅತ್ಯುತ್ತಮ ಹಣಕಾಸು ಗುಣವನ್ನು ಅಳವಡಿಸಿಕೊಳ್ಳುವಂತೆ ತಿಳಿಸುತ್ತಾರೆ. ಒಂದು, ಸರಿಯಾದ ಹೂಡಿಕೆ ಆಯ್ಕೆ ಮಾಡಿ. ಎರಡು, ಮಾರುಕಟ್ಟೆಯಿಂದ ನಿರ್ಗಮಿಸಬೇಡಿ. ಮೂರನೆಯದು, ಹಣವು ಬೆಳೆಯುತ್ತಲೇ ಇರಲು ಬಿಡಿ. ಇದು ದಾನಿಶ್ ಅವರು ಯುವಜನರಿಗೆ ಮಾಡುವ ಶಿಫಾರಸು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




