ಪಿಎಲ್​ಐ ಸ್ಕೀಮ್; 84 ಎಸಿ ಮತ್ತು ಎಲ್​ಇಡಿ ತಯಾರಕ ಕಂಪನಿಗಳಿಂದ 10,478 ಕೋಟಿ ರೂ ಹೂಡಿಕೆ ನಿರೀಕ್ಷೆ

|

Updated on: Jan 20, 2025 | 2:52 PM

PLI scheme for White Goods (AC and LED companies): ಉತ್ಪಾದನಾ ಆಧಾರಿತ ಉತ್ತೇಜಕ ಯೋಜನೆಯಾದ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಮೂರನೇ ಸುತ್ತಿನಲ್ಲಿ 24 ಎಸಿ ಮತ್ತು ಎಲ್​ಇಡಿ ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟಾರೆ ಈ ಎರಡು ಉತ್ಪಾದನೆಗಳ ಪಿಎಲ್​ಐನಲ್ಲಿ 84 ಕಂಪನಿಗಳಿವೆ. ಒಟ್ಟಾರೆ ಹೂಡಿಕೆ 10,000 ಕೋಟಿ ರೂಗಿಂತಲೂ ಅಧಿಕ ಬರಲಿದೆ. 1.72 ಲಕ್ಷ ಕೋಟಿ ರೂ ಮೌಲ್ಯ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ.

ಪಿಎಲ್​ಐ ಸ್ಕೀಮ್; 84 ಎಸಿ ಮತ್ತು ಎಲ್​ಇಡಿ ತಯಾರಕ ಕಂಪನಿಗಳಿಂದ 10,478 ಕೋಟಿ ರೂ ಹೂಡಿಕೆ ನಿರೀಕ್ಷೆ
ಮ್ಯಾನುಫ್ಯಾಕ್ಚರಿಂಗ್
Follow us on

ನವದೆಹಲಿ, ಜನವರಿ 29: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಲ್​ಐ ಸ್ಕೀಮ್​ಗೆ ಉತ್ತಮ ಸ್ಪಂದನೆ ಸಿಗುವುದು ಮುಂದುವರಿದಿದೆ. 13 ಸೆಕ್ಟರ್​ಗಳಲ್ಲಿ ಪಿಎಲ್​ಐ ಸ್ಕೀಮ್ ಇದ್ದು ಬಹುತೇಕ ಎಲ್ಲವೂ ಕೂಡ ಸಕಾರಾತ್ಮಕ ಸ್ಪಂದನೆ ಪಡೆದಿವೆ. ವೈಟ್ ಗೂಡ್ಸ್ ಎಂದು ಪರಿಗಣಿಸಲಾದ ಎಸಿ ಮತ್ತು ಎಲ್​ಇಡಿ ಲೈಟ್​ಗಳನ್ನು ತಯಾರಿಸುವ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಪಿಎಲ್​ಐ ಸ್ಕೀಮ್​ನಲ್ಲಿ ಪಾಲ್ಗೊಂಡಿವೆ. ಮೂರನೇ ಸುತ್ತಿನಲ್ಲಿ 24 ಎಸಿ ಮತ್ತು ಎಲ್​ಇಡಿ ಲೈಟ್ ಕಂಪನಿಗಳು ಪಿಎಲ್​ಐ ಸ್ಕೀಮ್​ಗೆ ಆಯ್ಕೆಯಾಗಿವೆ.

ಈ 24 ಕಂಪನಿಗಳು ಒಟ್ಟಾರೆ ಹೂಡಿಕೆ ಮಾಡಲಿರುವ ಮೊತ್ತ 3,516 ಕೋಟಿ ರೂ. ಮೂರನೇ ಸುತ್ತಿನಲ್ಲಿ ಆಯ್ಕೆಯಾದ 24 ಕಂಪನಿಗಳಲ್ಲಿ 18 ಕಂಪನಿಗಳು ಹೊಸದಾಗಿ ಈ ಸ್ಕೀಮ್​ಗೆ ಬಂದಿವೆ. ಉಳಿದ ಆರು ಕಂಪನಿಗಳು ಈ ಹಿಂದೆಯೇ ಪಿಎಲ್​ಐ ಸ್ಕೀಮ್ ಹೊಂದಿದ್ದವು.

24 ಕಂಪನಿಗಳಲ್ಲಿ 15 ಎಸಿ ಕಂಪನಿಗಳಾಗಿದ್ದು, 9 ಎಲ್​ಇಡಿ ಕಂಪನಿಗಳಾಗಿವೆ. 15 ಎಸಿ ಕಂಪನಿಗಳಿಂದ 3,260 ಕೋಟಿ ರೂ, 9 ಎಲ್​ಇಡಿ ಕಂಪನಿಗಳಿಂದ 256 ಕೋಟಿ ರೂ ಹೂಡಿಕೆ ಆಗಲಿದೆ.

ಇದನ್ನೂ ಓದಿ: ಕೆಲ ಸುಧಾರಣಾ ಕ್ರಮ ತಂದರೆ ಭಾರತಕ್ಕೆ ಶೇ. 8ರ ದರದಲ್ಲಿ ಬೆಳೆಯಲು ಸಾಧ್ಯ: ಡಬ್ಲ್ಯುಇಎಫ್ ಮುಖ್ಯಸ್ಥರ ಅನಿಸಿಕೆ

ಈ ಮೂರನೇ ಸುತ್ತಿನಲ್ಲಿ 24 ಕಂಪನಿಗಳೂ ಸೇರಿದಂತೆ ಎಸಿ ಮತ್ತು ಎಲ್​ಇಡಿ ತಯಾರಕಾ ಕ್ಷೇತ್ರದಲ್ಲಿ ಒಟ್ಟು 84 ಕಂಪನಿಗಳು ಪಿಎಲ್​ಐ ಸ್ಕೀಮ್ ವ್ಯಾಪ್ತಿಯಲ್ಲಿವೆ. ಇವುಗಳಿಂದ ಒಟ್ಟು ಹೂಡಿಕೆ 10,478 ಕೋಟಿ ರೂ ಹರಿದುಬರಲಿದೆ. ಈ ಎಲ್ಲಾ ಕಂಪನಿಗಳಿಂದ ಆಗಲಿರುವ ಉತ್ಪಾದನೆಯ ಒಟ್ಟು ಮೌಲ್ಯ 1,72,663 ಕೋಟಿ ರೂ ಎಂದು ನಿರೀಕ್ಷಿಸಲಾಗಿದೆ.

ಏರ್ ಕಂಡೀಷನರ್ ಸೆಕ್ಟರ್​ನಲ್ಲಿ ಕಂಪನಿಗಳು ಕಂಪ್ರೆಸರ್, ಕಾಪರ್ ಟ್ಯೂಬ್, ಐಡಿಯು ಕಂಟ್ರೋಲ್ ಅಸೆಂಬ್ಲಿ, ಹೀಟ್ ಎಕ್ಸ್​ಚೇಂಜರ್ಸ್, ಬಿಎಸ್​ಡಿಸಿ ಮೋಟಾರ್ಸ್ ಮೊದಲಾದ ಎಸಿ ಭಾಗಗಳನ್ನು ತಯಾರಿಸುತ್ತವೆ.

ಇನ್ನು ಎಲ್​ಇಡಿ ಲೈಟ್​ಗಳ ಸೆಕ್ಟರ್​ನಲ್ಲಿ ಎಲ್​ಇಡಿ ಚಿಪ್ ಪ್ಯಾಕೇಜಿಂಗ್, ಎಲ್​ಇಡಿ ಡ್ರೈವರ್ಸ್, ಎಲ್​ಇಡಿ ಎಂಜಿನ್ಸ್, ಎಲ್​ಇಡಿ ಲೈಟ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್, ಕ್ಯಾಪಿಸಟರ್​ಗಳ ಫಿಲಮ್ಸ್ ಇತ್ಯಾದಿ ಭಾಗಗಳನ್ನು ಆ ಕಂಪನಿಗಳು ತಯಾರಿಸುತ್ತವೆ.

ಇದನ್ನೂ ಓದಿ: ಯುವಕರ ಕೈಗೆ ಕೆಲಸ ನೀಡುವುದು ಸರ್ಕಾರಕ್ಕೆ ದೊಡ್ಡ ಸವಾಲು; ಬಜೆಟ್​ನಲ್ಲಿ ದೊಡ್ಡ ನಿರೀಕ್ಷೆ

ಕೇಂದ್ರ ಸರ್ಕಾರ 2021-22ರಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ ಬಲಪಡಿಸಲು ಪಿಎಲ್​ಐ ಸ್ಕೀಮ್ ಜಾರಿಗೆ ತಂದಿತು. ಮೊದಲಿಗೆ ಎಲೆಕ್ಟ್ರಾನಿಕ್ಸ್ ತಯಾರಿಕೆಗೆ ಒತ್ತು ಕೊಡಲಾಯಿತು. ಇದೀಗ ಒಟ್ಟು 13 ವಲಯಗಳಲ್ಲಿ ಪಿಎಲ್​ಐ ಸ್ಕೀಮ್ ಇದೆ. ಸರ್ಕಾರ ಐದು ವರ್ಷದಲ್ಲಿ 1.97 ಲಕ್ಷ ಕೋಟಿ ರೂ ಸಹಾಯಧನಕ್ಕೆ ಬದ್ಧವಾಗಿದೆ.

ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್​ನ ಪಿಎಲ್​ಐ ಸ್ಕೀಮ್​ನಲ್ಲಿ ಒಟ್ಟಾರೆ 9,349 ಕೋಟಿ ರೂ ಹೂಡಿಕೆ ಬಂದಿದೆ. ಇವುಗಳಿಂದ ಉತ್ಪಾದನೆಯಾಗುವ ಮೌಲ್ಯ 6,14,115 ಕೋಟಿ ರೂ. 3.12 ಲಕ್ಷ ಕೋಟಿ ರೂ ಮೌಲ್ಯದಷ್ಟು ರಫ್ತು ಆಗಿದೆ. ಸ್ಮಾರ್ಟ್​​ಫೋನ್ ಇತ್ಯಾದಿ ತಯಾರಿಕೆಯು ಎಲೆಕ್ಟ್ರಾನಿಕ್ ಪಿಎಲ್​ಐ ವಿಭಾಗಕ್ಕೆ ಸೇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Mon, 20 January 25