ಪಿಎಂ ಕಿಸಾನ್ 21ನೇ ಕಂತಿನ ಹಣ ಯಾಕೆ ವಿಳಂಬವಾಗುತ್ತಿದೆ ಗೊತ್ತಾ? ಇಲ್ಲಿದೆ ಕಾರಣ

PM Kisan 21st installment, know why money release getting delayed: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 21ನೇ ಕಂತಿನ ಹಣ ಬಿಡುಗಡೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. ಹತ್ತಿರಹತ್ತಿರ 10 ಕೋಟಿ ರೈತರು 20ನೇ ಕಂತಿನ ಹಣ ಸ್ವೀಕರಿಸಿದ್ದರು. ಸದ್ಯಕ್ಕೆ ಎಲ್ಲಾ ಫಲಾನುಭವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು ಅನರ್ಹರನ್ನು ಗುರುತಿಸುವ ಕೆಲಸ ಆಗುತ್ತಿದೆ.

ಪಿಎಂ ಕಿಸಾನ್ 21ನೇ ಕಂತಿನ ಹಣ ಯಾಕೆ ವಿಳಂಬವಾಗುತ್ತಿದೆ ಗೊತ್ತಾ? ಇಲ್ಲಿದೆ ಕಾರಣ
ರೈತರು

Updated on: Oct 31, 2025 | 6:15 PM

ನವದೆಹಲಿ, ಅಕ್ಟೋಬರ್ 31: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) ಈವರೆಗೆ ಕೇಂದ್ರ ಸರ್ಕಾರ 2,000 ರೂಗಳ 20 ಕಂತುಗಳ ಹಣವನ್ನು ರೈತರ (Farmers) ಖಾತೆಗಳಿಗೆ ಬಿಡುಗಡೆ ಮಾಡಿದೆ. ವರ್ಷಕ್ಕೆ ಮೂರು ಬಾರಿ ಹಣ ಬಿಡುಗಡೆ ಮಾಡುವ ಸರ್ಕಾರದಿಂದ ಈಗ ರೈತರು 21ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಫೆಬ್ರುವರಿಯಲ್ಲಿ 19ನೇ ಕಂತಿನ ಬಿಡುಗಡೆಯಾಗಿತ್ತು. ಆದರೆ, 20ನೇ ಕಂತಿನ ಹಣ ಬಿಡುಗಡೆ ಆಗಲು ಆಗಸ್ಟ್​ವರೆಗೂ ಕಾಯಬೇಕಾಯಿತು. ಈಗ 21ನೇ ಕಂತಿನ ಹಣವೂ ವಿಳಂಬವಾಗಿ ಸಿಗಬಹುದು ಎನ್ನುವ ಮಾಹಿತಿ ಇದೆ.

ಕೆಲ ವರದಿಗಳ ಪ್ರಕಾರ ಅಕ್ಟೋಬರ್ 31ರೊಳಗೆ ಪಿಎಂ ಕಿಸಾನ್​ನ 21ನೇ ಕಂತು ಬಿಡುಗಡೆ ಆಗಬಹುದು ಎಂದಿತ್ತು. ನವೆಂಬರ್ ಮೊದಲ ವಾರ ಆಗಬಹುದು ಎಂದು ಕೆಲ ವರದಿಗಳು ಹೇಳುತ್ತಿವೆ. ಇನ್ನೂ ಕೆಲ ವರದಿಗಳು ನವೆಂಬರ್ ಅಂತ್ಯದವರೆಗೂ ಕಾಯಬೇಕಾಗಬಹುದು ಎಂದು ತಿಳಿಸಿವೆ. ಸರ್ಕಾರ ಹಣ ಬಿಡುಗಡೆ ಮಾಡಲು ಇಷ್ಟೊಂದು ವಿಳಂಬ ಮಾಡುತ್ತಿರುವುದು ಯಾಕೆ?

ಇದನ್ನೂ ಓದಿ: ಬ್ರಿಟನ್​ನ ಪ್ರಾಕ್ಟೀಸ್ ಪ್ಲಸ್ ಹಾಸ್ಪಿಟಲ್ ಗ್ರೂಪ್ ಖರೀದಿಸಿದ ಡಾ. ದೇವಿಶೆಟ್ಟಿಯ ನಾರಾಯಣ ಹೃದಯಾಲಯ

ಸರ್ಕಾರ ಪಿಎಂ ಕಿಸಾನ್ ಹಣ ಬಿಡುಗಡೆ ಮಾಡಲು ವಿಳಂಬಿಸುತ್ತಿರುವುದು ಯಾಕೆ?

ಪಿಎಂ ಕಿಸಾನ್ ಯೋಜನೆಯನ್ನು ಕೃಷಿಯನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ರೈತರಿಗೆಂದು ರೂಪಿಸಲಾಗಿದೆ. ಬೇರೆ ವೃತ್ತಿಯಲ್ಲಿರುವವರು ತಮ್ಮ ಹೆಸರಲ್ಲಿರುವ ಕೃಷಿಭೂಮಿಯನ್ನು ಬಳಸಿಕೊಂಡು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿ ಹಣ ಪಡೆಯುತ್ತಿರುವ ಹಲವು ಪ್ರಕರಣಗಳಿವೆ. ಸರ್ಕಾರ ಈ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ.

ಅರ್ಹ ಫಲಾನುಭವಿಗಳನ್ನು ಪರಿಶೀಲಿಸಿ ಪರಿಷ್ಕೃತ ಪಟ್ಟಿ ನೀಡುವಂತೆ ರಾಜ್ಯ ಸರ್ಕಾರಗಳನ್ನು ಕೇಂದ್ರ ಕೇಳಿದೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಪ್ರತಿಯೊಬ್ಬ ಫಲಾನುಭವಿಯ ಪರಿಶೀಲನೆ ನಡೆಯುತ್ತಿರುವುದರಿಂದ ಈ ಬಾರಿಯ ಹಣ ಬಿಡುಗಡೆ ವಿಳಂಬವಾಗುತ್ತಿರಬಹುದು ಎಂದು ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: 24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!

ಏನಿದು ಪಿಎಂ ಕಿಸಾನ್ ಯೋಜನೆಗೆ ಅನರ್ಹರು ಯಾರು?

ಸ್ವಂತ ಕೃಷಿ ಜಮೀನು ಹೊಂದಿರುವ ರೈತರು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಬಹುದು. ಆದರೆ ಇದರಲ್ಲಿ ಕೃಷಿ ಜಮೀನು ಹೊಂದಿದ್ದಾಗ್ಯೂ ವೈದ್ಯ, ವಕೀಲಿಕೆ ಇತ್ಯಾದಿ ವೃತ್ತಿಪರರಾಗಿರುವವರು, ಶಾಸಕರು, ಸಂಸದರು, ಸರ್ಕಾರಿ ನೌಕರರಾಗಿರುವವರು ಯೋಜನೆಗೆ ಅರ್ಹರಾಗಿರುವುದಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಪಿಎಂ ಕಿಸಾನ್​ನ ಅಧಿಕೃತ ವೆಬ್​ಸೈಟ್​ ನೋಡಬಹುದು: pmkisan.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ