ಪ್ರಧಾನ ಮಂತ್ರಿ ಕಿಸಾನ್ (PM Kisan) ಯೋಜನೆಯಡಿ ಫಲಾನುಭವಿಗಳು ಇ-ಕೆವೈಸಿ (eKYC) ಪೂರ್ತಿಗೊಳಿಸಲು ನಿಗದಿಪಡಿಸಲಾಗಿದ್ದ ಗಡುವು ಕೊನೆಗೊಳ್ಳಲು ಒಂದು ದಿನ ಮಾತ್ರ ಬಾಕಿಯುಳಿದಿದೆ. ಹೌದು, ನಾಳೆ ಅಂದರೆ ಆಗಸ್ಟ್ 31,2022 ರಂದು ಗಡುವು (deadline) ಕೊನೆಗೊಳ್ಳುತ್ತದೆ. ಪಿಎಮ್ ಕಿಸಾನ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ‘ಪಿಎಮ್ ಕಿಸಾನ್ ಎಲ್ಲ ಫಲಾನುಭವಿಗಳಿಗೆ ಇ-ಕೆವೈಸಿ ಗಡುವನ್ನು 31 ಆಗಸ್ಟ್, 2022 ರವೆರೆಗೆ ವಿಸ್ತರಿಸಲಾಗಿದೆ.’
ಇನ್ನೂ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರದ ಫಲಾನುಭವಿಗಳು ತಮ್ಮ ಮುಂದಿನ ಕಂತನ್ನು ಪಡೆಯಬೇಕಾದರೆ ಕೂಡಲೇ ಅದನ್ನು ಮಾಡಿಕೊಳ್ಳುವ ಜರೂರತ್ತಿದೆ.
ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಮೀನು ಹೊಂದಿರುವ ಅರ್ಹ ರೈತಾಪಿ ಕುಟುಂಬಗಳು ವಾರ್ಷಿಕ 6,000 ರೂ. ಗಳ ಆರ್ಥಿಕ ನೆರವು ಪಡೆಯುತ್ತವೆ. ಹಣವನ್ನು 2,000 ರೂ. ಗಳ ಮೂರು ಕಂತುಗಳಲ್ಲಿ ಪ್ರತಿ 4 ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಯೋಜನೆಯ 12ನೇ ಕಂತು ಸೆಪ್ಟೆಂಬರ್ 1, 2022 ರ ನಂತರ ಯಾವುದೇ ಸಮಯ ಬಿಡುಗಡೆ ಮಾಡಬಹುದಾಗಿದೆ. ಈ ಕಂತನ್ನು ಪಡೆಯಬೇಕಾದರೆ, ಅರ್ಹ ರೈತ ಕುಟುಂಬಗಳು ಕಡ್ಡಾಯವಾಗಿ ಆಗಸ್ಟ್ 31ರೊಳಗೆ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಕೊಳ್ಳಬೇಕು. ಇಲ್ಲದೆ ಹೋದರೆ ಅವರಿಗೆ 12ನೇ ಕಂತು ಸಿಗುವುದಿಲ್ಲ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಂದರೇನು?
ಸಣ್ಣ ಮತ್ತು ನಗಣ್ಯ ಅನಿಸುವಷ್ಟು ಜಮೀನು ಹೊಂದಿರುವ ರೈತರಿಗೆ ಕೃಷಿಗೆ ಸಂಬಂಧಿಸಿದ ಮತ್ತು ಕೌಟುಂಬಿಕ ವ್ಯವಹಾರಗಳಿಗಳನ್ನು ಪೂರೈಸಿಕೊಳ್ಳಲು ಒದಗಿಸಲಾಗುವ ಹಣಕಾಸಿನ ರೂಪದ ಆದಾಯವೇ ಪ್ರಧಾನ ಮಂತ್ರಿ ಸಮ್ಮಾನ ನಿಧಿ (ಪಿಎಮ್-ಕಿಸಾನ್) ಯೋಜನೆಯಾಗಿದೆ.
ಯೋಜನೆ ಅಡಿಯಲ್ಲಿ ಎಲ್ಲ ಅರ್ಹ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ಬಿಡುಗಡೆಯಾಗುತ್ತದೆ.
ಪಿಎಮ್-ಕಿಸಾನ್ ಯೋಜನೆಯ ಪ್ರಯೋಜಗಳೇನು?
ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಮೀನು ಹೊಂದಿರುವ ರೈತಾಪಿ ಕುಟುಂಬಗಳು ವಾರ್ಷಿಕ 6,000 ರೂ. ಗಳ ಆರ್ಥಿಕ ನೆರವು ಪಡೆಯುತ್ತವೆ. ಹಣವನ್ನು 2,000 ರೂ. ಗಳ ಮೂರು ಕಂತುಗಳಲ್ಲಿ ಪ್ರತಿ 4 ತಿಂಗಳಿಗೊಮ್ಮೆ ರೈತರಿಗೆ ನೀಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಗಳು ಈ ಯೋಜನೆಯಡಿ ಫಲಾನುಭವಿಗಳಾಗಬಹುದೇ?
ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ‘ಕೇಂದ್ರ/ರಾಜ್ಯ ಸರ್ಕಾರದ ಸಚಿವಾಲಯಗಳು/ಕಚೇರಿಗಳು/ಇಲಾಖೆಗಳು ಮತ್ತು ಅದರ ಕ್ಷೇತ್ರ ಘಟಕಗಳ ಕೇಂದ್ರ ಅಥವಾ ರಾಜ್ಯ ಪಿಎಸ್‌ಇಗಳು ಮತ್ತು ಸಂಬಂಧಪಟ್ಟ ಕಚೇರಿಗಳು/ಸರಕಾರದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳ ನಿಯಮಿತ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿ ಮತ್ತು ಉದ್ಯೋಗಿಗಳು ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.
ಆದಾಗ್ಯೂ, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾಗಿರುವ ಮಲ್ಟಿ ಟಾಸ್ಕಿಂಗ್ ಸ್ಟಾಫ್ / ಕ್ಲಾಸ್ IV/ಗ್ರೂಪ್ ಡಿ ಉದ್ಯೋಗಿಗಳ ಕುಟುಂಬಗಳು ಅರ್ಹರಾಗಿದ್ದರೆ ಮತ್ತು ಇತರ ಪ್ರತಿಬಂಧಕ ಮಾನದಂಡಗಳ ಅಡಿಯಲ್ಲಿ ಒಳಪಡದೇ ಇದ್ದರೆ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.
ಪಿಮ್ ಕಿಸಾನ್ ಆಧಾರ್ ಒಟಿಪಿ-ಆಧಾರಿತ ಇಕೆವೈಸಿ ಪೂರ್ತಿಗೊಳಿಸಲು ಈ ವಿಧಾನಗಳನ್ನು ಅನುಸರಿಸಿ.
ಮೊದಲ ಹಂತ: ಪಿಮ್ ಕಿಸಾನ್ ವೆಬ್ ಸೈಟ್ ಗೆ ಲಾಗಿನ್ ಆಗಿ.
ಎರಡನೇ ಹಂತ: ರೈತರು ಅಂತ ಉಲ್ಲೇಖಿಸಲಾಗಿರುವ ಮೂಲೆಯಲ್ಲಿ ಇ-ಕೆವೈಸಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಮೂರನೇ ಹಂತ: ಮುಂದಿನ ಪೇಜ್ ಗೆ ಹೋಗಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಸರ್ಚ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಫೋನ್ ಗೆ 4-ಅಂಕಿಗಳ ಒಂದು ಒಟಿಪಿ ಬರುತ್ತದೆ.
ನಾಲ್ಕನೇ ಹಂತ: ಸಬ್ ಮಿಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ.
ಐದನೇ ಹಂತ: ಆಧಾರ್ ನೋಂದಾಯಿತ ಮೊಬೈಲ್ ಒಟಿಪಿಯನ್ನು ನಮೂದಿಸಿ.
ವೆರಿಫಿಕೇಶನ್ ಪ್ರಕ್ರಿಯೆ ಸಫಲಗೊಂಡ ನಂತರ ನಿಮ್ಮ ಇಕೆವೈಸಿ ಪೂರ್ತಿಗೊಳ್ಳುತ್ತದೆ.