ನವದೆಹಲಿ, ಅಕ್ಟೋಬರ್ 11: ಜಾಗತಿಕ ಆರ್ಥಿಕ ಹಿನ್ನಡೆಯಲ್ಲಿಯೂ ಭಾರತದ ಆರ್ಥಿಕತೆ (Indian Economy) ಬಗ್ಗೆ ಸಕಾರಾತ್ಮಕ ಅಭಿಪ್ರಾಯ ತಳೆದಿರುವ ಐಎಂಎಫ್ ವರದಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸ್ಪಂದಿಸಿದ್ದಾರೆ. ಭಾರತ ಜಾಗತಿಕವಾಗಿ ಬೆಳ್ಳಿ ಚುಕ್ಕೆ ಎಂದು ಅವರು ಬಣ್ಣಿಸಿದ್ದಾರೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.1ರಷ್ಟು ಬೆಳೆಯಬಹುದು ಎಂದು ಈ ಮುಂಚೆ ಹೇಳಿದ್ದ ಐಎಂಎಫ್, ನಿನ್ನೆಯ ವರದಿಯಲ್ಲಿ ಅಂದಾಜು ಬದಲಿಸಿತ್ತು. ಈ ಹಣಕಾಸು ವರ್ಷದಲ್ಲಿ ಶೇ. 6.3ರಷ್ಟು ಬೆಳವಣಿಗೆ ಹೊಂದಬಹುದು ಎಂದು ತನ್ನ ನಿರೀಕ್ಷೆ ಹೆಚ್ಚಿಸಿತ್ತು. ಈ ಬಗ್ಗೆ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಐಎಂಎಫ್ ವಿವಿಧ ದೇಶಗಳ ಜಿಡಿಪಿ ಬೆಳವಣಿಗೆಯ ಅಂದಾಜಿರುವ ಪಟ್ಟಿಯನ್ನು ಟ್ವೀಟ್ ಮಾಡಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಂದಿಸಿದ್ದಾರೆ.
‘ನಮ್ಮ ಜನರ ಶಕ್ತಿ ಮತ್ತು ಕೌಶಲ್ಯಗಳಿಂದ ಭಾರತ ಜಾಗತಿಕ ಬೆಳ್ಳಿ ಚುಕ್ಕೆಯಾಗಿದೆ. ಪ್ರಗತಿ ಮತ್ತು ಕ್ರಿಯಾಶೀಲತೆಗೆ ಅಡ್ಡೆಯಾಗಿದೆ. ನಮ್ಮ ಸುಧಾರಣೆಗಳನ್ನು ಮತ್ತಷ್ಟು ತೀವ್ರಗೊಳಿಸುತ್ತಾ, ಸಮೃದ್ಧ ಭಾರತದತ್ತ ನಮ್ಮ ಪ್ರಯಾಣದ ವೇಗವನ್ನು ಇನ್ನಷ್ಟು ಹೆಚ್ಚಿಸುತ್ತೇವೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
Powered by the strength and skills of our people, India is a global bright spot, a powerhouse of growth and innovation. We will continue to strengthen our journey towards a prosperous India, further boosting our reforms trajectory. https://t.co/CvHw4epjoZ
— Narendra Modi (@narendramodi) October 10, 2023
ಇದನ್ನೂ ಓದಿ: ಭಾರತದ ಆರ್ಥಿಕತೆ ಅಂದುಕೊಂಡಿದ್ದಕ್ಕಿಂತ ಉತ್ತಮ ಬೆಳವಣಿಗೆ ಹೊಂದಬಹುದು: ಐಎಂಎಫ್ ಅಂದಾಜು
ಐಎಂಎಫ್ ಪ್ರಕಾರ 2023ರ ವರ್ಷದಲ್ಲಿ ಅತಿಹೆಚ್ಚು ಜಿಡಿಪಿ ಬೆಳವಣಿಗೆ ಹೊಂದುವ ದೇಶಗಳ ಸಾಲಿನಲ್ಲಿ ಭಾರತ ಇದೆ. ಉದಯೋನ್ಮುಖ ಆರ್ಥಿಕತೆಗಳು ಮತ್ತು ಅಭಿವೃದ್ಧಿಶೀಲ ದೇಶಗಳ ಪೈಕಿ ಭಾರತವೇ ಅತಿಹೆಚ್ಚು ಆರ್ಥಿಕವೃದ್ಧಿ ಕಾಣುವ ಸಾಧ್ಯತೆ ಇದೆ.
ಐಎಂಎಫ್ ವಿಶ್ವದ ಎಲ್ಲಾ ದೇಶಗಳ ಆರ್ಥಿಕ ಬೆಳವಣಿಗೆ ಬಗ್ಗೆ ತನ್ನ ಅಂದಾಜನ್ನು ಪ್ರಕಟಿಸಿದೆ. ಅದರಂತೆ 2023ರಲ್ಲಿ ಇಡೀ ವಿಶ್ವದ ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 3ರಷ್ಟು ಇರಬಹುದು. ಮುಂದುವರಿದ ದೇಶಗಳು ಶೇ. 1.5ರಷ್ಟು ಮಾತ್ರ ಬೆಳೆಯಬಹುದು ಎನ್ನಲಾಗಿದೆ.
ಇನ್ನು, ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಯ ದೇಶಗಳು ಸರಾಸರಿಯಾಗಿ 2023ರಲ್ಲಿ ಶೇ. 4ರಷ್ಟು ಬೆಳೆಯುವ ಸಾಧ್ಯತೆ ಇದೆ. ಈ ಪೈಕಿ ಭಾರತ ಮತ್ತು ಚೀನಾ ಉತ್ತಮ ಅಭಿವೃದ್ಧಿ ಸಾಧಿಸಬಹುದು.
2023ರಲ್ಲಿ ಭಾರತದ ಜಿಡಿಪಿ ಶೇ. 6.3ರಷ್ಟು ಬೆಳೆಯಬಹುದು ಎಂದು ಐಎಂಎಫ್ ಹೇಳಿದೆ. ಆದರೆ, ಭಾರತಕ್ಕಿಂತ ಹೆಚ್ಚು ವೃದ್ಧಿ ಕಾಣುವ ದೇಶಗಳು 10 ಇವೆ. ಆದರೆ, ಪ್ರಮುಖ ಆರ್ಥಿಕತೆಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಭಾರತಕ್ಕಿಂತ ಹೆಚ್ಚು ವೃದ್ಧಿ ಕಾಣುವ ದೇಶಗಳಲ್ಲಿ ಮಾಲ್ಡೀವ್ಸ್ ಕೂಡ ಒಂದು. ಬಾಂಗ್ಲಾದೇಶ ಭಾರತದ ಸಮೀಪವೇ ಇದೆ. ಮಕಾವೋ ಮತ್ತು ಗಯಾನ ದೇಶಗಳಂತೂ ಭಾರೀ ಪ್ರಮಾಣದಲ್ಲಿ ಬೆಳವಣಿಗೆ ಹೊಂದಲಿವೆ. ಆದರೆ, ಇವೆಲ್ಲವೂ ಪುಟ್ಟ ದೇಶಗಳು.
ಇದನ್ನೂ ಓದಿ: ಹುರೂನ್ಸ್ ಶ್ರೀಮಂತರು: ಅದಾನಿಯನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ; ಇಲ್ಲಿ ಭಾರತೀಯ ಸಿರಿವಂತರ ಪಟ್ಟಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Wed, 11 October 23