ಭಾರತದ ಆರ್ಥಿಕತೆ ಅಂದುಕೊಂಡಿದ್ದಕ್ಕಿಂತ ಉತ್ತಮ ಬೆಳವಣಿಗೆ ಹೊಂದಬಹುದು: ಐಎಂಎಫ್ ಅಂದಾಜು
IMF Projection On GDP and Inflation For India: ಈ ವರ್ಷ ಮತ್ತು ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಉತ್ತಮವಾಗಿರಬಹುದು ಎಂದು ಐಎಂಎಫ್ ಹೇಳಿದೆ. ಈ ಎರಡೂ ವರ್ಷ ಜಿಡಿಪಿ ಶೇ. 6.3ರಷ್ಟು ಬೆಳೆಯಬಹುದು. ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ ಅವಧಿಯಲ್ಲಿ ಭಾರತದಲ್ಲಿ ಅನುಭೋಗ ಪ್ರಮಾಣ ನಿರೀಕ್ಷೆಗಿಂತ ಹೆಚ್ಚೇ ಇತ್ತು. ಇದು ಜಿಡಿಪಿ ಬೆಳವಣಿಗೆಗೆ ಅನುವು ಮಾಡಿಕೊಟ್ಟಿದೆ ಎಂಬುದು ಅದರ ಅನಿಸಿಕೆ.
ನವದೆಹಲಿ, ಅಕ್ಟೋಬರ್ 10: ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಬಗ್ಗೆ ಐಎಂಎಫ್ (IMF- International Monetary Fund) ನಿರೀಕ್ಷೆ ಹೆಚ್ಚಿದೆ. ಈ ಹಿಂದೆ ಭಾರತದ ಜಿಡಿಪಿ ಶೇ. 6.1ರಷ್ಟು ಬೆಳೆಯಬಹುದು ಎಂದು ಅಂದಾಜಿಸಿದ್ದ ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಇದೀಗ ಅದನ್ನು ಶೇ 6.3ಕ್ಕೆ ಹೆಚ್ಚಿಸಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.3ರಷ್ಟು ಬೆಳೆಯಬಹುದು ಎಂದು ಐಎಂಎಫ್ ತನ್ನ ವರ್ಲ್ಡ್ ಎಕನಾಮಿಕ್ ಔಟ್ಲುಕ್ (WEO) ವರದಿಯಲ್ಲಿ ತಿಳಿಸಿದೆ. ಆರ್ಬಿಐ ಕಳೆದ ವಾರದ ಎಂಪಿಸಿ ಸಭೆಯಲ್ಲಿ ಮಾಡಿದ ಅಂದಾಜು ಪ್ರಕಾರ ಈ ಹಣಕಾಸು ವರ್ಷ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದಿದೆ.
ಹಣದುಬ್ಬರ ಶೇ. 5.5ರಷ್ಟಿರಬಹುದು ಎಂದು ಐಎಂಎಫ್ ಅಂದಾಜು
ಅಕ್ಟೋಬರ್ 10, ಮಂಗಳವಾರ ಬಿಡುಗಡೆಯಾದ ಐಎಂಎಫ್ನ ಈ ವರದಿ ಭಾರತದ ಹಣದುಬ್ಬರ ಪರಿಸ್ಥಿತಿ ಬಗ್ಗೆ ಸಕಾರಾತ್ಮಕವಾಗಿದೆ. ಈ ಹಣಕಾಸು ವರ್ಷದಲ್ಲಿ (2023-24) ಭಾರತದ ಹಣದುಬ್ಬರ ಶೇ. 5.5ಕ್ಕೆ ಹೆಚ್ಚಬಹುದು. ಆದರೆ, 2024-25ರ ಹಣಕಾಸು ವರ್ಷದಲ್ಲಿ ಈ ಹಣದುಬ್ಬರ ಶೇ. 4.6ಕ್ಕೆ ಇಳಿಯಬಹುದು ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಹೇಳಿದೆ. ಆರ್ಬಿಐ ಅಂದಾಜು ಪ್ರಕಾರ ಈ ಹಣಕಾಸು ವರ್ಷ ಹಣದುಬ್ಬರ ಶೇ. 5.4ರಷ್ಟಿರಬಹುದು. ಐಎಂಎಫ್ ಅಭಿಪ್ರಾಯವೂ ಸಮೀಪವೇ ಇದೆ.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಠೇವಣಿ ದರ ಹೆಚ್ಚಳ; ಬೇರೆ ಬ್ಯಾಂಕುಗಳಲ್ಲಿ ಎಷ್ಟಿವೆ ಎಫ್ಡಿ ಬಡ್ಡಿದರಗಳು?
ಭಾರತದಲ್ಲಿ ಜುಲೈ ತಿಂಗಳಲ್ಲಿ ಶೇ. 7.44ರಷ್ಟಿದ್ದ ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 6.83ಕ್ಕೆ ಇಳಿದಿದೆ. 2022ರ ಕ್ಯಾಲಂಡರ್ ವರ್ಷದಲ್ಲಿ ಭಾರತದಲ್ಲಿ ಸರಾಸರಿ ಹಣದುಬ್ಬರ ಶೇ. 6.7ರಷ್ಟಿತ್ತು.
ಜಿಡಿಪಿ ಬೆಳವಣಿಗೆ ಬಗ್ಗೆ ಆಶಾದಾಯಕ
ಈ ವರ್ಷ ಮತ್ತು ಮುಂದಿನ ವರ್ಷ ಭಾರತದ ಆರ್ಥಿಕ ಪ್ರಗತಿ ಉತ್ತಮವಾಗಿರಬಹುದು ಎಂದು ಐಎಂಎಫ್ ಹೇಳಿದೆ. ಈ ಎರಡೂ ವರ್ಷ ಜಿಡಿಪಿ ಶೇ. 6.3ರಷ್ಟು ಬೆಳೆಯಬಹುದು. ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ ಅವಧಿಯಲ್ಲಿ ಭಾರತದಲ್ಲಿ ಅನುಭೋಗ ಪ್ರಮಾಣ ನಿರೀಕ್ಷೆಗಿಂತ ಹೆಚ್ಚೇ ಇತ್ತು. ಇದು ಜಿಡಿಪಿ ಬೆಳವಣಿಗೆಗೆ ಅನುವು ಮಾಡಿಕೊಟ್ಟಿದೆ ಎಂಬುದು ಅದರ ಅನಿಸಿಕೆ.
ಇದನ್ನೂ ಓದಿ: ಬೆಂಗಳೂರಿನಷ್ಟೇ ದುಬಾರಿಯಾಗುತ್ತಿದೆ ಹೈದರಾಬಾದ್; ಪ್ರಮುಖ ನಗರಗಳಲ್ಲಿ ಐಷಾರಾಮಿ ಮನೆಗಳಿಗೆ ಬಲು ಬೇಡಿಕೆ
ಬೇರೆ ದೇಶಗಳಲ್ಲಿ ಜಿಡಿಪಿ ಹೇಗೆ?
ಭಾರತದ ಆರ್ಥಿಕತೆ ಬಗ್ಗೆ ನಿರೀಕ್ಷೆ ಹೆಚ್ಚಿಸಿರುವ ಐಎಂಎಫ್ ಚೀನಾ ಸೇರಿದಂತೆ ವಿವಿಧ ದೇಶಗಳ ಬಗ್ಗೆ ಆಶಾದಾಯಕವಾಗಿಲ್ಲ. ಚೀನಾದ ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆ ಇರಲಿದೆ ಎಂದು ಹೇಳಿದೆ.
ಇನ್ನು, ಜಾಗತಿಕ ಜಿಡಿಪಿ 2023ರ ಕ್ಯಾಲಂಡರ್ ವರ್ಷದಲ್ಲಿ ಶೇ. 3ರಷ್ಟು ಬೆಳೆಯಬಹುದು ಎಂಬ ತನ್ನ ಅಂದಾಜನ್ನು ಐಎಂಎಫ್ ಮುಂದುವರಿಸಿದೆ. ಆದರೆ, 2024ರ ವರ್ಷದಲ್ಲಿ ಶೇ. 2.9ರಷ್ಟು ಮಾತ್ರವೇ ಜಾಗತಿಕ ಆರ್ಥಿಕತೆ ಬೆಳೆಯಬಹುದು ಎಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ