Home Loan Tricks: ಗೃಹಸಾಲ ಕಟ್ಟಿಕಟ್ಟಿ ಸಾಕಾಗಿದೆಯಾ? ಹೋಲ್ ಲೋನ್ ಬೇಗ ತೀರಿಸುವ ಟ್ರಿಕ್ಸ್ ಇಲ್ಲಿದೆ
Repayment strategy: ಲೋನ್ ಪಡೆಯುವುದು ಸುಲಭ, ಆದರೆ ತೀರಿಸುವುದು ಕಷ್ಟ. ಗೃಹಸಾಲವಾದರೂ ಸರಿ ಇದು ನಿಜ. ಕಡಿಮೆ ಬಡ್ಡಿಯ ಸಾಲ ಆಯ್ದುಕೊಳ್ಳುವುದರಿಂದ ಹಿಡಿದು ಅಧಿಕ ಡೌನ್ಪೇಮೆಂಟ್, ಹೆಚ್ಚುವರಿ ಇಎಂಐ ಇತ್ಯಾದಿ ವಿವಿಧ ಕ್ರಮಗಳ ಮೂಲಕ ಸಾಲ ಬೇಗನೇ ತೀರುವಂತೆ ನೋಡಿಕೊಳ್ಳಬಹುದು. ಈ ಬಗ್ಗೆ ಒಂದಷ್ಟು ಟಿಪ್ಸ್ ಇಲ್ಲಿದೆ...
ಸ್ವಂತ ಮನೆ ಹೊಂದುವುದು ನಮ್ಮೆಲ್ಲರ ಜೀವನದ ಮುಖ್ಯ ಗುರಿ ಮತ್ತು ಆಸೆಗಳಲ್ಲೊಂದು. ನಮ್ಮ ಆಸೆಗೆ ತಕ್ಕಂತ ಮನೆ ಗಳಿಸಬೇಕಾದರೆ ಇಡೀ ಜೀವನದ ದುಡಿಮೆಯಲ್ಲಿ ಉಳಿಸಿದ ದುಡ್ಡು ಬೇಕಾದೀತು. ಸ್ವಂತ ಮನೆಯ ಕನಸು ಸಾಕಾರಗೊಳಿಸಲು ಬಹುತೇಕರಿಗೆ ಸಾಲ ಅನಿವಾರ್ಯ. ಈಗಂತೂ ಗೃಹಸಾಲ (Home Loan) ಸುಲಭವಾಗಿ ಸಿಗುತ್ತದೆ. ನಿಮ್ಮ ಮನೆಯ ಆಸ್ತಿಪತ್ರವನ್ನು ಅಡವಾಗಿ ಇಟ್ಟುಕೊಂಡು ಬ್ಯಾಂಕ್ ನಿಮಗೆ ಗೃಹಸಾಲ ಒದಗಿಸುತ್ತದೆ. ಸಾಮಾನ್ಯವಾಗಿ ಗೃಹಸಾಲಗಳ ಅವಧಿ 5 ವರ್ಷಗಳಿಂದ ಹಿಡಿದು 30 ವರ್ಷದವರೆಗೂ ಇರುತ್ತವೆ. ಮೂರ್ನಾಲ್ಕು ವರ್ಷವಾದರೆ ಸಾಲ ಕಟ್ಟಿಕೊಂಡು ಹೋದಂತೆ ಅನಿಸುವುದಿಲ್ಲ. ಆದರೆ ಹತ್ತು, ಇಪ್ಪತ್ತು ವರ್ಷಗಳ ಬಳಿಕವೂ ಸಾಲ ಕಟ್ಟುತ್ತಲೇ ಇರಬೇಕೆಂದರೆ ಸಂಯಮದ ಕಟ್ಟೆ ಒಡೆದಂತೆ ಅನಿಸಬಹುದು. ಹಾಗಾದರೆ, ಗೃಹಸಾಲ ಹೆಚ್ಚು ಹೊರೆಯಾಗದಂತೆ, ಸಂಯಮದ ಕಟ್ಟೆ ಹೊಡೆಯದಂತೆ ನೋಡಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಕೆಲ ಟಿಪ್ಸ್ ಇಲ್ಲಿವೆ…
ನಿಮ್ಮ ಹಣಕಾಸು ಸ್ಥಿತಿ ಅವಲೋಕಿಸಿ
ಅತಿಯಾಗಿ ಸಾಲವಾದರೆ ನಿನ್ನ ಹಣಾಕಾಸು ಪರಿಸ್ಥಿತಿ ಅಸಮತೋಲನದಲ್ಲಿರುತ್ತದೆ. ನಿಮ್ಮ ಆದಾಯದಲ್ಲಿ ಶೇ. 25ರಷ್ಟರವರೆಗಿನ ಮೊತ್ತವನ್ನು ಮಾತ್ರವೇ ಸಾಲ ಮರುಪಾವತಿ ಅಥವಾ ಇಎಂಐಗಳಿಗೆ ಉಪಯೋಗಿಸುವುದು ಸರಿ ಎಂದು ಬಹಳಷ್ಟು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ. ಈ ಸೂತ್ರಕ್ಕೆ ತಕ್ಕಂತೆ ನಿಮ್ಮ ಗೃಹಸಾಲದ ಇಎಂಐ ಇರುವಂತೆ ನೋಡಿಕೊಳ್ಳಿ.
ಗೃಹಸಾಲದ ಅವಧಿ ಚಿಕ್ಕದಿದ್ದರೆ ಚೆನ್ನ
ಸಾಲ ಮರುಪಾವತಿ ಅವಧಿ ಬಹಳ ದೀರ್ಘ ಇದ್ದರೆ ಆಗಲೇ ಹೇಳಿದಂತೆ ಸಂಯಮದ ಅಗ್ನಿಪರೀಕ್ಷೆ ಎದುರಾಗಬಹುದು. ಆದ್ದರಿಂದ ಸಾಲದ ಅವಧಿ ಆದಷ್ಟೂ ಚಿಕ್ಕದಿರುವಂತೆ ನೋಡಿಕೊಳ್ಳಿ. ಹಾಗಂತ, ನಿಮಗೆ ಕಟ್ಟಲಾಗದಷ್ಟು ಮೊತ್ತದ ಇಎಂಐ ಕೂಡ ಬೇಡ. ನೀವು ಎಷ್ಟು ಬೇಗ ಸಾಲ ತೀರಿಸುತ್ತೀರೋ ಅಷ್ಟು ನಿಮಗೆ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ.
ಡೌನ್ ಪೇಮೆಂಟ್ ಸಾಧ್ಯವಿದ್ದರೆ ಹೆಚ್ಚಿರಲಿ
ನೀವು ಗೃಹಸಾಲ ಪಡೆಯುವಾಗ ಒಂದಿಷ್ಟು ಮೊತ್ತವನ್ನು ಡೌನ್ಪೇಮೆಂಟ್ ಆಗಿ ಪಾವತಿಸಬೇಕಾಗುತ್ತದೆ. ನಿಮ್ಮಲ್ಲಿ ಹೆಚ್ಚು ಹಣ ಇದ್ದರೆ ಅಷ್ಟನ್ನೂ ಡೌನ್ಪೇಮೆಂಟ್ ಮಾಡಿ. ಇದರಿಂದ ಸಾಲದ ಮೊತ್ತ ಕಡಿಮೆ ಆಗುತ್ತದೆ.
ಇದನ್ನೂ ಓದಿ: ಹೊಸ ಮನೆ ಖರೀದಿಸುವ ಮುನ್ನ ಈ ಏಳು ಅಂಶಗಳನ್ನು ಪರಿಗಣಿಸಿ; ಇದು ಜೀವಮಾನದ ಸಾಧನೆ ಎಂಬುದು ನೆನಪಿರಲಿ
ಬಡ್ಡಿದರ ಕಡಿಮೆ ಇರುವ ಕಡೆ ಸಾಲ ಪಡೆಯಿರಿ…
ಗೃಹಸಾಲದಲ್ಲಿ ಬಡ್ಡಿದರ ಬಹಳ ಮುಖ್ಯ. ಒಂದು ಪ್ರತಿಶತದಷ್ಟು ಬಡ್ಡಿ ಹೆಚ್ಚಾದರೂ ಬಡ್ಡಿಹೊರೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆದ್ದರಿಂದ ಸಾಲ ಪಡೆಯುವಾಗ ವಿವಿಧ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿದರಗಳನ್ನು ವಿಚಾರಿಸಿ. ಎಲ್ಲಿ ಕಡಿಮೆ ಬಡ್ಡಿ ಇರುತ್ತದೋ ಅಲ್ಲಿ ಸಾಲ ಪಡೆಯಬಹುದು.
ಹೆಚ್ಚುವರಿ ಹಣ ಇದ್ದರೆ ಸಾಲಕ್ಕೆ ಉಪಯೋಗಿಸಿ
ಇದು ಬಹಳ ಮುಖ್ಯ. ನಾವು ಸಾಲ ಪಡೆಯುವಾಗ ಅಂದಿನ ಹಣಕಾಸು ಪರಿಸ್ಥಿತಿಯಂತೆ ಇಎಂಐ ಅನ್ನು ಆಯ್ಕೆ ಮಾಡಿಕೊಂಡಿರುತ್ತೇವೆ. ಮುಂದೆ ನಮ್ಮ ಆದಾಯ ಹೆಚ್ಚಬಹುದು. ಈ ಹೆಚ್ಚುವರಿ ಆದಾಯವನ್ನು ಸಾಲ ತೀರಿಸಲು ಉಪಯೋಗಿಸುವುದು ಸೂಕ್ತ. ಹೀಗೆ ಮಾಡಿದರೆ ಸಾಲ ಬೇಗ ತೀರುತ್ತದೆ, ಬಡ್ಡಿ ಮೊತ್ತ ಕಡಿಮೆ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ