PM SVANIdhi: ಸರ್ಕಾರದ ಪಿಎಂ ಸ್ವನಿಧಿ ಯೋಜನೆ ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು

| Updated By: Srinivas Mata

Updated on: Nov 20, 2021 | 4:58 PM

ಪಿಎಂ ಸ್ವನಿಧಿ ಯೋಜನೆ ಬಗ್ಗೆ ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ. ಯೋಜನೆ ಲಾಭವನ್ನು ಪಡೆಯುವುದಕ್ಕೆ ಏನೇನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

PM SVANIdhi: ಸರ್ಕಾರದ ಪಿಎಂ ಸ್ವನಿಧಿ ಯೋಜನೆ ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು
ಸಾಂದರ್ಭಿಕ ಚಿತ್ರ
Follow us on

PM SVANIdhi (ಸ್ವನಿಧಿ) ಅಥವಾ ಪಿಎಂ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಬೀದಿ ವ್ಯಾಪಾರಿಗಳಿಗೆ ವಿಶೇಷ ಕಿರು ಸಾಲ ಸೌಲಭ್ಯವಾಗಿದೆ. ಈ ಯೋಜನೆಯನ್ನು ಜೂನ್ 1, 2020ರಂದು ಪ್ರಾರಂಭಿಸಲಾಗಿದೆ. ಇದರ ಮೂಲಕ ಮಾರಾಟಗಾರರು ಯಾವುದೇ ಆಧಾರ ನೀಡುವ ಅಗತ್ಯ ಇಲ್ಲದೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚುವರಿಯಾಗಿ, ಅರ್ಜಿದಾರರು ಬಡ್ಡಿಯ ಮೇಲೆ ಸಬ್ಸಿಡಿಯನ್ನು ಪಡೆಯುತ್ತಾರೆ. ಈ ಯೋಜನೆಯು ಮಾರ್ಚ್ 31, 2022ರವರೆಗೆ ಮಾನ್ಯವಾಗಿರುತ್ತದೆ.

ಕೊವಿಡ್-19 ಬಿಕ್ಕಟ್ಟು ಮತ್ತು ನಿರ್ಬಂಧಗಳು ಬೀದಿ ವ್ಯಾಪಾರಿಗಳ ಮೇಲೆ ಪ್ರತಿಕೂಲ ಫಲಿತಾಂಶವನ್ನು ನೀಡಿವೆ. ಅನೇಕರು ತಮ್ಮ ಆದಾಯದ ಮೂಲವನ್ನು ಕಳೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವುದು. ಇದರಿಂದ ಅವರು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಬಹುದು ಮತ್ತು ಕೊವಿಡ್​ ಪೂರ್ವ ಸಹಜ ಸ್ಥಿತಿಗೆ ಬರಬಹುದು. ಈ ಯೋಜನೆಯಡಿ ಈಗ ಬೀದಿ ವ್ಯಾಪಾರಿಗಳು ರೂ. 20,000 ವರೆಗೆ ದುಡಿಯುವ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಸಾಲವನ್ನು ಪಡೆಯಬಹುದು. ಬಡ್ಡಿ ಸಬ್ಸಿಡಿಯು ಮಾರ್ಚ್ 31, 2022ರ ವರೆಗೆ ಮಾನ್ಯವಾಗಿರುತ್ತದೆ.

ಪ್ರಯೋಜನಗಳು
ಬೀದಿ ವ್ಯಾಪಾರಿಗಳು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ರೂ. 20,000 ವರೆಗೆ ದುಡಿಯುವ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ಸಾಲವನ್ನು ಪಡೆಯುತ್ತಾರೆ. ಸಮಯೋಚಿತ ಅಥವಾ ಆರಂಭಿಕ ಮರುಪಾವತಿಯ ಮೇಲೆ, ಮಾರಾಟಗಾರರು ಹೆಚ್ಚುವರಿ ಮಿತಿಯೊಂದಿಗೆ ಮತ್ತೊಂದು ವರ್ಕಿಂಗ್ ಕ್ಯಾಪಿಟಲ್ ಸಾಲಕ್ಕೆ ಅರ್ಹರಾಗುತ್ತಾರೆ.

ಬಡ್ಡಿ ದರಗಳು
ಬಡ್ಡಿದರಗಳು ಬ್ಯಾಂಕ್​ನಿಂದ ಬ್ಯಾಂಕ್​ಗೆ ಬದಲಾಗುತ್ತವೆ. ಬ್ಯಾಂಕ್​ಗಳ ದರಗಳು ಅವುಗಳ ಚಾಲ್ತಿಯಲ್ಲಿರುವ ಬಡ್ಡಿದರಗಳಂತೆಯೇ ಇರುತ್ತದೆ.

ಅವಧಿ
ಪಿಎಂ ಸ್ವನಿಧಿ ಅಡಿಯಲ್ಲಿ ವರ್ಕಿಂಗ್ ಕ್ಯಾಪಿಟಲ್ ಸಾಲದ ಅವಧಿಯು ಒಂದು ವರ್ಷ. ಇದನ್ನು 12 ಇಎಂಐ ಆಯ್ಕೆಗಳೊಂದಿಗೆ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬಹುದು. ಯಾವುದೇ ಪ್ರೀ-ಕ್ಲೋಷರ್ ಶುಲ್ಕವಿಲ್ಲ.

ಬಡ್ಡಿ ಸಹಾಯಧನ
ಫಲಾನುಭವಿಗಳಿಗೆ ಶೇ 7ರ ಬಡ್ಡಿ ಸಹಾಯಧನ ಸಿಗುತ್ತದೆ. ಬಡ್ಡಿ ಸಬ್ಸಿಡಿ ಮೊತ್ತವನ್ನು ತ್ರೈಮಾಸಿಕವಾಗಿ ಸಾಲಗಾರರ ಖಾತೆಗೆ ಜಮಾ ಮಾಡಲಾಗುತ್ತದೆ.

ಅರ್ಹತೆಯ ಮಾನದಂಡಗಳು
ಮಾರ್ಚ್ 24, 2020ರಂದು ಅಥವಾ ಅದಕ್ಕೂ ಮೊದಲು ಮಾರಾಟದಲ್ಲಿ ಸಕ್ರಿಯ ಆಗಿರುವ ಎಲ್ಲ ಬೀದಿ ವ್ಯಾಪಾರಿಗಳು ಈ ಯೋಜನೆಯಡಿಯಲ್ಲಿ ವರ್ಕಿಂಗ್ ಕ್ಯಾಪಿಟಲ್ ಸಾಲಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹೇಗೆ ಅರ್ಜಿ ಸಲ್ಲಿಸಬೇಕು?
ಬೀದಿ ವ್ಯಾಪಾರಿಗಳು PM Svanidhi ವೆಬ್‌ಸೈಟ್ pmsvanidhi.mohua.gov.inನಲ್ಲಿ ಈ ಸಾಲಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: PMMVY Scheme: ಗರ್ಭಿಣಿ, ಬಾಣಂತಿಯರಿಗೆ ಸರ್ಕಾರದ ಆಸರೆ; ಮಾತೃ ವಂದನಾ ಯೋಜನೆಗೆ ನೋಂದಣಿ ಹೇಗೆ?